೧ |
ಯೋಬನು ಮತ್ತೆ ಪ್ರಸ್ತಾಪವೆತ್ತಿ ಇಂತೆಂದನು: |
೨ |
ಕಳೆದುಹೋದ ದಿನಗಳಲಿ ಇದ್ದಂತೆ ಈಗಲೂ ಇದ್ದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತಲ್ಲವೆ! ಆಗ ದೇವರು ನನ್ನನ್ನು ಕಾಪಾಡುತ್ತಿದ್ದನಲ್ಲವೆ? |
೩ |
ಆಗ ಬೆಳಗುತ್ತಿತ್ತು ಆತನ ದೀಪ ತಲೆಯ ಮೇಲೆ ಇರುಳಲ್ಲೂ ಸಂಚರಿಸುತ್ತಿದ್ದೆ ಆತನ ಬೆಳಕಿನಲೇ. |
೪ |
ಆ ದಿನಗಳು ನನ್ನ ಜೀವಮಾನದ ಸುಗ್ಗಿಕಾಲವಾಗಿತ್ತು ದೇವರ ಪ್ರೀತಿ ನನ್ನ ಗುಡಾರವನ್ನು ಆವರಿಸಿತ್ತು. |
೫ |
ಸರ್ವಶಕ್ತನು ಆಗ ನನ್ನ ಸಂಗಡವಿದ್ದನು ನನ್ನ ಸುತ್ತಲೂ ನನ್ನ ಮಕ್ಕಳು ಇರುತ್ತಿದ್ದರು. |
೬ |
ಹಾಲುತುಪ್ಪದಲ್ಲಿ ಪಾದ ತೊಳೆಯುತ್ತಿದ್ದೆ ಎಣ್ಣೆಯನು ನದಿಯಂತೆ ಹರಿಸುತ್ತಿತ್ತಾ ದಿಣ್ಣೆ. |
೭ |
ನಾನು ಊರ ಮುಂದಿನ ಚಾವಡಿಗೆ ಹೋದಾಗ ಚೌಕದ ಪೀಠದಲ್ಲಿ ಕುಳಿತುಕೊಂಡಾಗ, |
೮ |
ಯುವಕರು ಸರಿಯುತ್ತಿದ್ದರು ಪಕ್ಕಕ್ಕೆ ಮುದುಕರು ಎದ್ದು ನಿಲ್ಲುತ್ತಿದ್ದರು ತಟ್ಟನೆ; |
೯ |
ಮಂತ್ರಿಗಳೂ ಕೈಯಿಟ್ಟು ಬಾಯ ಮೇಲೆ ಮೌನತಾಳುತ್ತಿದ್ದರು ಮಾತೆತ್ತದೆ; |
೧೦ |
ಗಣ್ಯ ವ್ಯಕ್ತಿಗಳೂ ನಿಶ್ಯಬ್ದವಾಗುತ್ತಿದ್ದರು ಅವರ ನಾಲಿಗೆ ಅಂಗುಳಕ್ಕೆ ಅಂಟಿರುತ್ತಿತ್ತು. |
೧೧ |
ಕೇಳಿದ ಕಿವಿ ನನ್ನನು ಧನ್ಯನೆನ್ನುತ್ತಿತ್ತು ನೋಡಿದ ಕಣ್ಣು ನನ್ನನು ಗೌರವಿಸುತ್ತಿತ್ತು. |
೧೨ |
ಏಕೆಂದರೆ ಮೊರೆಯಿಡುತ್ತಿದ್ದ ಬಡವನನು ಗತಿಯಿಲ್ಲದ ಅನಾಥನನು ಆದರಿಸುತ್ತಿದ್ದೆ ನಾನು. |
೧೩ |
ಸಾಯುತ್ತಿದ್ದವನು ಹರಸುತ್ತಿದ್ದುದು ನನ್ನನೇ ವಿಧವೆಯ ಹೃದಯ ನಲಿಯುವಂತೆ ಮಾಡುತ್ತಿದ್ದುದು ನಾನೇ. |
೧೪ |
ಧರ್ಮವನ್ನು ನಾನು ಧರಿಸಿಕೊಂಡೆ; ಅದು ನನಗೆ ಅಂಬರವಾಗಿತ್ತು ನ್ಯಾಯನೀತಿ ನನಗೆ ನಿಲುವಂಗಿಯೂ ಪೇಟವೂ ಆಗಿತ್ತು. |
೧೫ |
ಕುರುಡನಿಗೆ ನಾನು ಕಣ್ಣಾಗಿದ್ದೆ ಕುಂಟನಿಗೆ ನಾನು ಕಾಲಾಗಿದ್ದೆ. |
೧೬ |
ದರಿದ್ರನಿಗೆ ತಂದೆಯಾಗಿದ್ದೆ ಅಪರಿಚಿತರ ವ್ಯಾಜ್ಯವನು ತೀರಿಸುತ್ತಿದ್ದೆ. |
೧೭ |
ದುರ್ಜನರ ದವಡೆಯನು ಮುರಿಯುತ್ತಿದ್ದೆ. ಅವರ ಹಲ್ಲುಗಳಿಂದಲೂ ಬೇಟೆಯನು ಬಿಡಿಸುತ್ತಿದ್ದೆ. |
೧೮ |
ಆಗ ನಾನಿಂತೆಂದೆ: ‘ನನ್ನ ಗೂಡಿನಲ್ಲೇ ಹಾಯಾಗಿ ಸಾಯುವೆ ನನ್ನ ದಿನಗಳು ಮರಳಿನಂತೆ ಅಸಂಖ್ಯಾತವಾಗಿರುತ್ತವೆ.’ |
೧೯ |
ನನ್ನ ಬೇರುಗಳು ನೀರಿನವರೆಗೆ ವ್ಯಾಪಿಸಿಕೊಂಡಿವೆ ನನ್ನ ರೆಂಬೆಗಳ ಮೇಲೆ ರಾತ್ರಿಯೆಲ್ಲ ಇಬ್ಬನಿ ಬಿದ್ದಿರುತ್ತದೆ. |
೨೦ |
‘ನನ್ನ ಪ್ರತಿಷ್ಠತೆ ಹೊಸಹೊಸದಾಗಿ ಇರುತ್ತದೆ ನನ್ನ ಕೈಯಲ್ಲಿ ಬಿಲ್ಲು ಬಲಗೊಳ್ಳುತ್ತಾ ಇರುತ್ತದೆ’ |
೨೧ |
ಜನರು ನನ್ನ ಮಾತಿಗೆ ಕಿವಿಗೊಡಲು ಕಾದಿರುತ್ತಿದ್ದರು ನನ್ನಾಲೋಚನೆಯನು ಅರಿಯಲು ನಿಶ್ಯಬ್ದವಾಗಿರುತ್ತಿದ್ದರು. |
೨೨ |
ನಾನು ಮಾತಾಡಿದ ಮೇಲೆ ಅವರು ಮಾತೆತ್ತುತ್ತಿರಲಿಲ್ಲ ನನ್ನ ಮಾತು ಹನಿಹನಿಯಾಗಿ ಅವರ ಕಿವಿಗೆ ಬೀಳುತ್ತಿತ್ತು. |
೨೩ |
ನನ್ನನ್ನು ಮಳೆಯಂತೆ ಎದುರುನೋಡುತ್ತಿದ್ದರು ಮುಂಗಾರಿಗೋ ಎಂಬಂತೆ ಬಾಯ್ದೆರೆಯುತ್ತಿದ್ದರು. |
೨೪ |
ಅವರು ಎದೆಗೆಟ್ಟಾಗ ನಾನು ನಗೆಬೀರುತ್ತಿದ್ದೆ ನನ್ನ ಮುಖಕಾಂತಿಯಿಂದ ಹುರಿದುಂಬಿಸುತ್ತಿದ್ದೆ. |
೨೫ |
ನಾನು ಅವರಿಗೆ ಮಾರ್ಗದರ್ಶಕನಾಗಿದ್ದೆ ಸೇನೆಗಳ ಮಧ್ಯೆ ರಾಜನಂತೆ ಮಂಡಿಸಿದ್ದೆ ದುಃಖಿತರನು ಸುಧಾರಕನಂತೆ ಸಂತೈಸುತ್ತಿದ್ದೆ.
|
Kannada Bible (KNCL) 2016 |
No Data |