A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಯೋಬನ ೨೨ಆಮೇಲೆ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದನು:
“ನರಮಾನವನಿಂದ ದೇವರಿಗೇನು ಪ್ರಯೋಜನ? ಬುದ್ಧಿವಂತನಾಗಿ ನಡೆದುಕೊಂಡರೆ ಅದು ಅವನಿಗೇ ಪ್ರಯೋಜನ.
ನೀನು ಸಜ್ಜನನಾಗಿದ್ದರೆ ಅದರಿಂದ ಸರ್ವಶಕ್ತನಿಗೆ ಸುಖವೇ? ನಿನ್ನ ನಿರ್ದೋಷ ನಡತೆಯಿಂದ ಆತನಿಗೆ ಲಾಭವೇ?
ನಿನ್ನ ಭಯಭಕ್ತಿಗಾಗಿ ಆತ ನಿನ್ನನ್ನು ಶಿಕ್ಷಿಸುತ್ತಾನೆಯೇ? ಅದಕ್ಕಾಗಿ ನಿನ್ನನು ನ್ಯಾಯತೀರ್ಪಿಗೆ ಗುರಿಪಡಿಸುತ್ತಾನೆಯೆ?
ಇಲ್ಲ,ಹಾಗೆಮಾಡುವುದು ನಿನ್ನ ಕೆಟ್ಟತನ ಹೆಚ್ಚಿದುದಕ್ಕಾಗಿ. ನಿನ್ನ ಪಾಪಗಳಿಗೆ ಮಿತಿಯಿಲ್ಲದುದಕ್ಕಾಗಿ.
ನೀನು ನಿನ್ನ ಸೋದರನಿಂದ ಬಟ್ಟೆಯನು ಒತ್ತೆಯಾಗಿ ಪಡೆದೆ ಬಟ್ಟೆಕಿತ್ತುಕೊಂಡು ಅವನನ್ನು ಬೆತ್ತಲೆಯಾಗಿಸಿದೆ.
ದಣಿದವನಿಗೆ ನೀ ಕೊಡಲಿಲ್ಲ ಪಾನ ಹಸಿದವನಿಗೆ ಬಡಿಸಲಿಲ್ಲ ಅನ್ನ.
ನಿನ್ನನಿಸಿಕೆಯಂತೆ ಬಲಿಷ್ಠನಿಗೆ ನಾಡಿನೊಡೆತನ ಘನವಂತನಿಗೇ ಅಲ್ಲಿ ಮನೆತನ
ವಿಧವೆಯರನ್ನು ಬರಿಗೈಯಲ್ಲಿ ಕಳಿಸಿಬಿಟ್ಟೆ ತಬ್ಬಲಿಯ ಕೈಗಳನು ನೀನು ಮುರಿದುಬಿಟ್ಟೆ.
೧೦
ನಿನ್ನ ಸುತ್ತಲು ಉರುಲುಗಳು ಕಾದಿವೆ ಈ ಕಾರಣ ನಿನ್ನನು ತಲ್ಲಣಗೊಳಿಸಲಿದೆ ಭಯಭ್ರಾಂತಿ ತಟ್ಟನೆ.
೧೧
ನಿನಗೆ ದಾರಿಕಾಣದಿರಲು ಬೆಳಕೇ ಕತ್ತಲಾಗಿದೆ ನಿನ್ನನು ಮುಳುಗಿಸಲು ಜಲಪ್ರವಾಹವಿದೆ.
೧೨
ದೇವರು ಉನ್ನತ ಆಕಾಶದಲ್ಲಿ ಇದ್ದಾನಲ್ಲವೇ? ನಕ್ಷತ್ರಗಳನ್ನು ನೋಡು, ಎಷ್ಟು ಗಹನವಾಗಿವೆ!
೧೩
ಈ ನಿಮಿತ್ತ ನೀನು, ‘ದೇವರಿಗೇನು ಗೊತ್ತು? ನ್ಯಾಯ ತೀರಿಸಬಲ್ಲನೆ ಕಾರ್ಗತ್ತಲು ಅಡ್ಡವಿರಲು?
೧೪
ಆತ ನೋಡಲಾಗದಂತೆ ದಟ್ಟವಾದ ಮೋಡಗಳ ಪರದೆ ಇದೆ ಆತನ ನಡೆದಾಟವೆಲ್ಲ ಆಕಾಶದ ಮೇಲ್ಗಡೆಯಲ್ಲವೆ?’ ಎಂದೆ.
೧೫
ನೀನು ಹಿಡಿದಿರುವುದು ಪುರಾತನ ಹಾದಿಯನೇ ದುರ್ಜನರು ನಡೆದುಬಂದ ಆ ಬೀದಿಯನೇ.
೧೬
ಅವರನ್ನು ಅಕಾಲ ಮರಣ ಅಪಹರಿಸಿತು ಅವರಿಗಿದ್ದ ಅಡಿಪಾಯ ನೀರುಪಾಲಾಯಿತು.
೧೭
ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದ್ದರೂ ಅವರು ಆತನಿಗೆ, ‘ತೊಲಗಿಹೋಗು ನಮ್ಮಿಂದ’ ಎಂದರು.
೧೮
ಅಲ್ಲದೆ, ‘ಸರ್ವಶಕ್ತ ನಮಗೇನು ಮಾಡಬಲ್ಲ?’ ಎಂದುಕೊಂಡರು ಅಕಟ, ನನ್ನಿಂದ ದೂರ ಇರಲಿ! ದುರುಳರ ಈ ಮಾತು.
೧೯
ದುರುಳರ ದುರ್ಗತಿಯನು ನೋಡಿ ಸಜ್ಜನರು ಹಿಗ್ಗುವರು ನಿರ್ದೋಷಿಗಳು ಅವರನು ಈ ಪರಿ ಅಣಕಿಸಿ ಹಾಸ್ಯಮಾಡುವರು:
೨೦
‘ನೋಡಿ, ನಮ್ಮ ವೈರಿಗಳು ಹೇಗೆ ಹಾಳಾಗಿಹೋದರು! ಅವರು ಬಿಟ್ಟುಹೋದ ಆಸ್ತಿ ಬೆಂಕಿಯಿಂದ ಭಸ್ಮವಾಯಿತು!’
೨೧
ದೇವರ ಚಿತ್ತಕ್ಕೆ ಮಣಿದು ಸಮಾಧಾನದಿಂದಿರು ಇದರಿಂದ ನಿನಗೆ ಶುಭವಾಗುವುದು.
೨೨
ಆತನ ಬಾಯಿಂದ ಬುದ್ಧಿ ಕಲಿತುಕೊ ಆತನ ಮಾತನು ಹೃದಯದಲ್ಲಿಟ್ಟುಕೊ.
೨೩
ಸರ್ವಶಕ್ತನ ಕಡೆಗೆ ಹಿಂದಿರುಗಿದೆಯಾದರೆ ನಿನ್ನ ಗುಡಾರಗಳಿಂದ ಅನ್ಯಾಯವನು ತೊರೆದೆಯಾದರೆ, ನೀನು ಉದ್ಧಾರವಾಗುವೆ.
೨೪
ಎಸೆದುಬಿಡು ನಿನ್ನ ಬಂಗಾರವನು ಧೂಳಿಗೆ ಓಫಿರ್ ನಾಡಿನ ಅಪರಂಜಿಯನು ನದಿತೀರದ ಕಲ್ಲುಗಳಿಗೆ.
೨೫
ಸರ್ವಶಕ್ತನಾದ ಸ್ವಾಮಿಯೇ ನಿನಗೆ ಬಂಗಾರವಾಗಿರಲಿ ಆತನೇ ನಿನಗೆ ಬೆಳ್ಳಿಯ ರಾಶಿಯಾಗಿರಲಿ.
೨೬
ಆಗ ನೀನು ಸರ್ವಶಕ್ತನಲಿ ಆನಂದಿಸುವೆ ತಲೆಯೆತ್ತಿ ದೇವರಿಗೆ ಅಭಿಮುಖಿಯಾಗುವೆ.
೨೭
ಆತನನು ಪ್ರಾರ್ಥಿಸುವೆ, ಆತ ಆಲಿಸುವನು ತೀರಿಸುವೆ ಆತನಿಗೆ ನೀ ಹೊತ್ತ ಹರಕೆಗಳನು.
೨೮
ನಿನ್ನ ಯೋಜನೆಗಳು ಸಫಲವಾಗುವುವು ನಿನ್ನ ಮಾರ್ಗಗಳು ಪ್ರಜ್ವಲಿಸುವುವು.
೨೯
ದೇವರು ಕೆಳಕ್ಕೆ ದಬ್ಬುತ್ತಾನೆ ಗರ್ವಿಗಳನು ಉದ್ಧರಿಸುತ್ತಾನೆ ದೀನಮನಸ್ಕರನು.
೩೦
ಆತ ವಿಮೋಚಿಸುತ್ತಾನೆ ನಿರ್ದೋಷಿಗಳನು ನಿನ್ನ ಕೈ ಶುದ್ಧವಿರಲಿ ವಿಮೋಚಿಸುವನು ನಿನ್ನನು.