A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಯೋಬನ ೨೧ಅದಕ್ಕೆ ಯೋಬನು ಕೊಟ್ಟ ಉತ್ತರ ಇದು:
“ಗಮನಕೊಡಿ ನನ್ನ ಮಾತುಗಳಿಗೆ ನಾನು ನಿಮ್ಮಿಂದ ಬಯಸುವ ಉಪಶಮನ ಇದುವೆ:
ನಾನು ಮಾತಾಡುವಾಗ ತಾಳ್ಮೆಯಿಂದಿರಿ ಬಳಿಕ ಬೇಕಾದರೆ ಪರಿಹಾಸ್ಯ ಮಾಡಿ.
ನನ್ನ ದೂರು ಮನುಷ್ಯನ ವಿರುದ್ಧವೆ? ಸಾಕಷ್ಟು ಕಾರಣವಿರಲು, ನಾನು ಬೇಸರಗೊಳ್ಳಬಾರದೆ?
ನನ್ನ ಕಡೆಗೆ ಗಮನ ಕೊಡಿ ಬಾಯಿಯ ಮೇಲೆ ಕೈಯಿಟ್ಟು ನಿಬ್ಬೆರಗಾಗಿರಿ.
ಇದನು ನೆನೆದಾಗ ನನಗೆ ತಲ್ಲಣವಾಗುತ್ತದೆ ನನ್ನ ದೇಹಕ್ಕೆ ನಡುಕ ಬರುತ್ತದೆ:
ದುರುಳರು ಮುದುಕರಾಗುವವರೆಗೂ ಬದುಕುವುದೇಕೆ? ಅಂಥವರು ಪ್ರಬಲರು, ಬಲಿಷ್ಠರು ಆಗುವುದೇಕೆ?
ಅವರ ಸಂತಾನ ಅವರ ಸಮ್ಮುಖದಲ್ಲಿ ಸುಸ್ಥಿರವಾಗಿದೆ ಅವರ ಕುಟುಂಬ ಅವರ ಕಣ್ಮುಂದೆಯೇ ಅಚಲವಾಗಿದೆ.
ಅವರ ಮನೆ ನಿರ್ಭೀತ, ಹಾಗೂ ಸುರಕ್ಷಿತ ಅವರ ಮೇಲೆ ಬೀಳದು ದೇವರ ದಂಡ.
೧೦
ಅವರ ಹೋರಿ ತಪ್ಪದೆ ಫಲವತ್ತಾಗಿಸುತ್ತದೆ ಅವರ ಗೋವು ಕಂದುಹಾಕದೆ ಈಯುತ್ತದೆ.
೧೧
ಅವರ ಮಕ್ಕಳು ಮುನ್ನಡೆಯುತ್ತಾರೆ ಮಂದೆಯಂತೆ ಅವರ ಬಾಲಬಾಲೆಯರು ಕುಣಿದಾಡುತ್ತಾರೆ ಜಿಂಕೆಯಂತೆ.
೧೨
ಹಾಡುತ್ತಾರೆ ತಂಬೂರಿ ವೀಣೆಗಳನು ನುಡಿಸುತ್ತಾ ಉಲ್ಲಾಸಿಸುತ್ತಾರೆ ಕೊಳಲಿನ ಸ್ವರ ಕೇಳುತ್ತಾ.
೧೩
ದಿನಗಳನು ಕಳೆಯುತ್ತಾರೆ ಸುಖಸಂತೋಷದಿಂದ ಸಮಾಧಿ ಸೇರುತ್ತಾರೆ ಸಮಾಧಾನದಿಂದ.
೧೪
ಆದರೆ ಈ ದುರುಳರೇ, ದೇವರಿಗೆ, ‘ನಮ್ಮನ್ನು ಬಿಟ್ಟು ತೊಲಗು, ನಮಗೆ ಬೇಡವಾಗಿದೆ ನಿನ್ನ ಮಾರ್ಗದ ಅರಿವು’.
೧೫
‘ಈ ಸರ್ವಶಕ್ತ ಎಷ್ಟರವನು: ಆತನ ಸೇವೆ ನಮಗೇಕೆ? ಆತನಿಗೆ ಪ್ರಾರ್ಥನೆಮಾಡಿ ಪ್ರಯೋಜನವೇನು?’ ಎಂದಿದ್ದಾರೆ.
೧೬
ಆಹಾ! ಸದ್ಯಕ್ಕೆ ಸುಖಶಾಂತಿ ನೆಲಸಿಲ್ಲ ಅವರ ಕೈಯಲಿ ಆ ದುರುಳರ ಆಲೋಚನೆ ನನ್ನಿಂದ ದೂರವಿರಲಿ.
೧೭
ಆ ದುರುಳರ ದೀಪ ಆರಿಹೋದದ್ದು ಎಷ್ಟುಸಾರಿ? ಅವರಿಗೆ ವಿಪತ್ತು ಸಂಭವಿಸಿದ್ದು ಎಷ್ಟುಸಾರಿ? ಅವರ ಕೋಪ ಅವರಿಗೆ ಸಂಕಟ ತಂದದ್ದು ಎಷ್ಟುಬಾರಿ?
೧೮
ಅವರು ಗಾಳಿಗೆ ತೂರಿಹೋದ ಹುಲ್ಲಾದುದು ಎಷ್ಟು ಸಲ? ಬಿರುಗಾಳಿ ಕೊಚ್ಚಿಕೊಂಡುಹೋದ ಹೊಟ್ಟಾದುದು ಎಷ್ಟು ಸಲ?
೧೯
ದುಷ್ಟ ತಂದೆಯ ಪಾಪಫಲವನು ಮಕ್ಕಳಿಗೆ ಕಾದಿಟ್ಟಿದ್ದಾರೆಯೇ ದೇವರು? ಅವನಿಗೇ ಆ ದಂಡನೆ ಆಗಲಿ ಆ ದುಷ್ಟನೇ ಅದನ್ನು ಅನುಭವಿಸಲಿ.
೨೦
ಅವನೇ ತನ್ನ ವಿನಾಶವನು ಕಣ್ಣಾರೆ ಕಾಣಲಿ ಅವನೇ ಸರ್ವಶಕ್ತನಾ ರೌದ್ರರಸವನು ಸವಿಯಲಿ.
೨೧
ಅವನ ಆಯುಸ್ಸೇ ಕತ್ತರಿಸಿಹೋದ ಮೇಲೆ ಅವನಿಗೆಲ್ಲಿಯದು ತನ್ನಾನಂತರ ಬರುವ ಸಂತತಿಯ ಚಿಂತೆ?
೨೨
ದೇವರಿಗೆ ಜ್ಞಾನಬೋಧೆ ಮಾಡಬಲ್ಲವನು ಇದ್ದಾನೆಯೇ? ಉನ್ನತರಿಗೂ ನ್ಯಾಯತೀರಿಸುವಂಥವನು ಆತನೇ ಅಲ್ಲವೇ?
೨೩
ಒಬ್ಬ ಸಾಯುತ್ತಾನೆ ಸಮೃದ್ಧನಾಗಿರುವಾಗ ಸುಖಶಾಂತಿಯಿಂದ ನೆಮ್ಮದಿಯಾಗಿರುವಾಗ.
೨೪
ಅವನ ದೇಹ ಬೆಳೆದು ಕೊಬ್ಬೇರಿರುತ್ತದೆ ಅವನ ಅಸ್ತಿಗಳ ಮಜ್ಜೆ ಸಾರವತ್ತಾಗಿರುತ್ತದೆ.
೨೫
ಮತ್ತೊಬ್ಬ ಕಿಂಚಿತ್ತೂ ಸುಖಾನುಭವವಿಲ್ಲದೆ ಮನೋವ್ಯಥೆಪಡುತ್ತಾ ಪ್ರಾಣಬಿಡುತ್ತಾನೆ.
೨೬
ಇವರಿಬ್ಬರೂ ಮಣ್ಣಿನಲ್ಲಿ ಹೂಣಲ್ಪಡುತ್ತಾರೆ ಹುಳುಗಳು ಅವರನು ಮುತ್ತಿಕೊಳ್ಳುತ್ತವೆ.
೨೭
ಕೇಳಿ, ನಿಮ್ಮ ಆಲೋಚನೆಗಳನು ನಾನು ಬಲ್ಲೆ ನನಗೆ ವಿರುದ್ಧ ನೀವು ಮಾಡುವ ಕುಯುಕ್ತಿ ನನಗೆ ತಿಳಿದಿದೆ.
೨೮
ನಿಮ್ಮ ಪ್ರಶ್ನೆ ಇದು: “ಆ ಖದೀಮನ ಮನೆ ಏನಾಯಿತು? ಆ ದುರುಳರು ನಿವಾಸಿಸುತ್ತಿದ್ದ ಗುಡಾರ ಏನಾಯಿತು?”
೨೯
ದಾರಿಹೋಕರನ್ನು ನೀವು ವಿಚಾರಿಸಿಲ್ಲವೆ? ಅವರು ಕೊಟ್ಟ ದೃಷ್ಟಾಂತ ನಿಮಗೆ ಹಿಡಿಸಲಿಲ್ಲವೆ?
೩೦
ದುರುಳನು ಆಪತ್ತಿನಾ ದಿನ ಸುರಕ್ಷಿತನಾಗಿರುತ್ತಾನೆ ದೇವರ ಆ ಕೋಪೋದ್ರೇಕದ ದಿನ ಆಶ್ರಯ ಪಡೆಯುತ್ತಾನೆ.
೩೧
ಅವನಿಗೆ ‘ನೀನು ದುರ್ಮಾರ್ಗಿ’ ಎಂದು ಮುಖಾಮುಖಿಯಾಗಿ ಹೇಳಿದವರಾರು? ಅವನು ಮಾಡಿದ ದುಷ್ಕೃತ್ಯಗಳಿಗೆ ಮುಯ್ಯಿತೀರಿಸುವವರಾರು?
೩೨
ಮೆರವಣಿಗೆಯಾಗಿ ಅವನನ್ನು ಸಮಾಧಿಗೆ ಒಯ್ಯುತ್ತಾರೆ ಅವನ ಗೋರಿಗೆ ಕಾವಲು ಕೂಡ ಇಡುತ್ತಾರೆ.
೩೩
ಅವನಿಗೆ ಹಿಡಿಸುತ್ತದೆ ತಗ್ಗಿನಾ ಹೆಂಟೆಮಣ್ಣು ಅವನನು ಹಿಂಬಾಲಿಸುತ್ತಾರೆ ಅಸಂಖ್ಯಾತ ಜನರು ಮುಂದಕ್ಕೂ ಹಿಂಬಾಲಿಸುತ್ತಾರೆ ಲೆಕ್ಕವಿಲ್ಲದ ಜನರು.
೩೪
ಇಂತಿರಲು ನಿಮ್ಮ ಉಪಶಮನದ ಮಾತು ವ್ಯರ್ಥ ನಿಮ್ಮ ಮಾತುಗಳ ಸಾರಾಂಶ ಮಿತ್ರದ್ರೋಹ.”