೧ |
ಆಗ ಶೂಹ್ಯನಾದ ಬಿಲ್ದದನು ಹೀಗೆಂದು ಉತ್ತರಿಸಿದ: |
೨ |
“ಯೋಬನೇ, ಇನ್ನೆಷ್ಟರವರೆಗೆ ಮಾತುಗಳಿಗಾಗಿ ಹೊಂಚುಹಾಕುತ್ತಿರುವೆ? ಮೊದಲು ಆಲೋಚಿಸಿನೋಡು, ಆಮೇಲೆ ಬಾ ಮಾತುಕತೆಗೆ. |
೩ |
ನಮ್ಮನ್ನು ಮೃಗಗಳೆಂದು ಎಣಿಸಿರುವೆಯಾ? ನಿನ್ನ ದೃಷ್ಟಿಯಲಿ ನಾವೇನು ಅಷ್ಟು ದಡ್ಡರೆ? |
೪ |
ಸಿಟ್ಟಿನಿಂದ ನಿನ್ನನ್ನೆ ಸೀಳಿಕೊಳ್ಳುತ್ತಿರುವವನೇ, ನಿನ್ನ ನಿಮಿತ್ತ ಇಡೀಲೋಕ ಬಿಕೋ ಎನ್ನಬೇಕೆ? ಬೆಟ್ಟಗುಡ್ಡಗಳು ಸ್ಥಳಬಿಟ್ಟು ಜರುಗಬೇಕೆ? |
೫ |
ಹೌದು, ದುರುಳನ ದೀಪ ಆರಿಹೋಗುವುದು ಅವನ ಒಲೆಯು ಉರಿಯದೆ ಹೋಗುವುದು. |
೬ |
ಅವನ ಗುಡಾರದ ಬೆಳಕು ಕತ್ತಲಾಗುವುದು ಅವನ ಮೇಲಣ ಸೊಡರು ನಂದಿಹೋಗುವುದು. |
೭ |
ಅವನ ಬಿರುಸಾದ ಹೆಜ್ಜೆಗಳು ಜಡವಾಗುವುವು ಅವನು ಹಾಕಿದ ಯೋಜನೆಗಳು ಅವನನ್ನೆ ಕೆಡವಿಹಾಕುವುವು. |
೮ |
ಅವನನ್ನು ಅವನ ಕಾಲುಗಳೆ ಬಲೆಗೆ ಬೀಳಿಸುವುವು ಅವನನ್ನು ಪಾಳುಗುಂಡಿಯ ಮೇಲೆ ನಡೆಸುವುವು. |
೯ |
ಕತ್ತರಿಬೋನು ಅವನ ಹಿಮ್ಮಡಿಯನ್ನು ಕಚ್ಚುವುದು ಆ ಕಳ್ಳ ಉರುಲು ಅವನನ್ನು ಸಿಕ್ಕಿಸಿಕೊಳ್ಳುವುದು. |
೧೦ |
ಅವನಿಗಾಗಿ ಜಾಲವನ್ನು ಅವಿತಿಡಲಾಗಿದೆ ದಾರಿಯಲಿ ಅವನಿಗಾಗಿ ಪಾಶವನ್ನು ಹೂತಿಡಲಾಗಿದೆ ನೆಲದಲಿ. |
೧೧ |
ಸುತ್ತಲಿನ ಅಪಾಯಗಳು ಅವನನ್ನು ಹೆದರಿಸುತ್ತವೆ ಅವನ ಹಿಮ್ಮಡಿ ತುಳಿಯುತ್ತಾ ಅವು ಬೆನ್ನು ಹತ್ತುತ್ತವೆ. |
೧೨ |
ಕುಂದಿಹೋಗುವುದು ಅವನ ಕಿಮ್ಮತ್ತು ಅವನು ಬೀಳುವುದನ್ನೇ ಕಾದಿದೆ ಆಪತ್ತು. |
೧೩ |
ರೋಗರುಜಿನಗಳು ಅವನ ಚರ್ಮವನು ಚೂರುಚೂರಾಗಿ ತಿಂದುಬಿಡುವುವು ಅಂಗಾಂಗವಾಗಿ ಮೃತ್ಯುಕಾರಕ ರೋಗವು ಅವನನ್ನು ನುಂಗಿಬಿಡುವುದು. |
೧೪ |
ನೆಮ್ಮದಿಯ ಗುಡಾರದಿಂದ ಅವನನ್ನು ಎಳೆದು ಹಾಕುವುದು ಹೊರಗೆ ಸಾಗಿಸಿಕೊಂಡು ಹೋಗುವುದವನನ್ನು ಅತಿಭಯಂಕರ ರಾಜನೆಡೆಗೆ. |
೧೫ |
ಅನ್ಯಜನರು ವಾಸಮಾಡುವರು ಅವನ ಗುಡಾರದೊಳಗೆ ಗಂಧಕವನ್ನು ಸುರಿಸಲಾಗುವುದು ಅವನ ಮನೆಯ ಮೇಲೆ. |
೧೬ |
ಒಣಗುವುದು ಅವನ ಬುಡ ಕೆಳಗಡೆ ಬಾಡುವುದು ಅವನ ರೆಂಬೆ ಮೇಲ್ಗಡೆ. |
೧೭ |
ಅವನ ಸ್ಮರಣೆ ಅಳಿದುಹೋಗುವುದು ಜಗದಲಿ ಇಲ್ಲವಾಗುವುದು ಅವನ ಹೆಸರು ನಾಡಿನಲಿ. |
೧೮ |
ಅವನನ್ನು ಬೆಳಕಿನಿಂದ ತಳ್ಳುವರು ಕತ್ತಲಿಗೆ ಅಟ್ಟಿಬಿಡುವರು ಅವನನ್ನು ಲೋಕದಿಂದಲೆ. |
೧೯ |
ಅವನ ಮಗ, ಮೊಮ್ಮಗರಾರೂ ಇರರು ಸ್ವಜನರಲಿ ಯಾರೂ ಉಳಿಯರು ಅವನು ವಾಸಿಸಿದ ಸ್ಥಳದಲಿ. |
೨೦ |
ಅವನ ಗತಿಯನು ಕೇಳಿ ಚಕಿತಗೊಳ್ವರು ಪಡುವಣದವರು ಅಂತೆಯೇ ಭಯಭ್ರಾಂತರಾಗುವರು ಮೂಡಣದವರು. |
೨೧ |
ಕೇಡಿಗರ ನಿವಾಸಗಳ ಗತಿ ಹೀಗೆಯೇ ದೇವರನು ಅಲಕ್ಷಿಸುವವನ ಸ್ಥಿತಿ ಇದುವೇ.”
|
Kannada Bible (KNCL) 2016 |
No Data |