A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಯೋಬನ ೧೫ಆಗ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದು ಹೇಳಿದನು:
“ಬುದ್ಧಿವಂತನು ಗಾಳಿಮಾತನ್ನಾಡುವುದು ಸರಿಯೆ? ಸುಡುಗಾಳಿಯಿಂದ ಹೊಟ್ಟೆ ತುಂಬಿಸಿಕೊಳ್ಳಬಹುದೇ?
ಅಂಥವನು ನಿಷ್ಪ್ರಯೋಜಕವಾಗಿ ವಾದಿಸುತ್ತಾನೆಯೆ? ನಿರರ್ಥಕವಾಗಿ ವ್ಯಾಜ್ಯವಾಡುತ್ತಾನೆಯೆ?
ನೀನಾದರೋ ದೇವರ ಭಯಭಕ್ತಿಯನ್ನು ಕೆಡಿಸುತ್ತಿರುವೆ ದೇವರ ಧ್ಯಾನಕ್ಕೆ ಅಡ್ಡಿಬರುತ್ತಿರುವೆ.
ನಿನ್ನ ಪಾಪವೆ ನಿನಗೆ ಮಾತನು ಕಲಿಸಿಕೊಟ್ಟಿದೆ ಕಪಟಿಗಳಾಡುವ ನುಡಿಯನೆ ನೀನು ಆರಿಸಿಕೊಂಡಿರುವೆ.
ನಾನಲ್ಲ, ನಿನ್ನ ಬಾಯೇ, ನಿನ್ನನು ಅಪರಾಧಿಯನ್ನಾಗಿಸುತ್ತಿದೆ ನಿನ್ನ ತುಟಿಗಳೇ ನಿನಗೆ ವಿರುದ್ಧ ಸಾಕ್ಷಿಕೊಡುತ್ತಿವೆ.
ನೀನು ಮನುಜರಿಗೆಲ್ಲ ಆದಿಪುರುಷನೋ? ಬೆಟ್ಟಗಳಿಗಿಂತ ಮುಂಚಿತವಾಗಿ ಹುಟ್ಟಿದವನೋ?
ದೇವರ ಆಲೋಚನಾಸಭೆಯಲಿ ನೀನು ಭಾಗವಹಿಸಿದ್ದೆಯೋ? ಜ್ಞಾನವೆಂಬುದು ನಿನಗೆ ಮಾತ್ರ ಮೀಸಲೋ?
ನಮಗೆ ತಿಳಿಯದಿರುವುದು ನಿನಗೆ ತಿಳಿದಿದೆಯೆ? ನಮಗೆ ಅರ್ಥವಾಗದಿರುವುದು ನಿನಗೆ ಅರ್ಥವಾಗಿದೆಯೆ?
೧೦
ನಮ್ಮಲ್ಲಿದ್ದಾರೆ ತಲೆ ನರೆತವರು, ವಯೋವೃದ್ಧರು ನಿಮ್ಮಪ್ಪನಿಗಿಂತಲೂ ಹೆಚ್ಚು ಮುದುಕರಾದವರು.
೧೧
ಕೇವಲವಾಯಿತೋ ನಿನಗೆ ದೇವರಿತ್ತ ಸಾಂತ್ವನ? ನಿನಗೆ ದೊರೆತ ಮೃದುವಾದ ಹಿತವಚನ?
೧೨
ನಿನ್ನ ಹೃದಯ ನಿನ್ನನ್ನು ದೂರ ಒಯ್ದಿದೆ, ಏಕೆ? ನಿನ್ನ ಕಣ್ಣು ಕಿಡಿಕಾರುತ್ತಿದೆ ಏಕೆ?
೧೩
ದೇವರಿಗೆ ವಿರುದ್ಧ ಕುದಿಯುತ್ತಿರುವೆ ಏಕೆ? ಬಾಯಿಂದ ಮಾತು ಹರಿಯುತ್ತಿವೆ ಏಕೆ?
೧೪
ನರನು ಎಷ್ಟರವನು? ಅವನು ಪರಿಶುದ್ಧನಿರಲು ಸಾಧ್ಯವೆ? ಸ್ತ್ರೀಯರಲ್ಲಿ ಹುಟ್ಟಿದವನು ನೀತಿವಂತನಾಗಿರಬಹುದೆ?
೧೫
ದೇವರಿಗೋ, ತನ್ನ ದೂತರಲ್ಲೂ ನಂಬಿಕೆಯಿಲ್ಲ ಆಕಾಶವೂ ಆತನ ದೃಷ್ಟಿಯಲ್ಲಿ ನಿರ್ಮಲವಲ್ಲ.
೧೬
ಇಂತಿರಲು, ಮತ್ತಷ್ಟೂ ಮಲಿನನಲ್ಲವೆ ನರಮಾನವನು? ಅಸಹ್ಯನು, ಅಕ್ರಮಿಯು, ಕೇಡನ್ನು ನೀರಿನಂತೆ ಕುಡಿಯುವವನು?
೧೭
ಕೇಳು ನಾನು ತಿಳಿಸುವ ಈ ಸಂಗತಿಯನು ನಾನು ಕಂಡದ್ದನ್ನೇ ನಿನಗೆ ವಿವರಿಸುವೆನು:
೧೮
ಜ್ಞಾನಿಗಳು ತಮ್ಮ ಪೂರ್ವಜರಿಂದ ಕಲಿತಿದ್ದನು ಮುಚ್ಚುಮರೆಯಿಲ್ಲದೆ ಪ್ರಕಟಿಸಿದವುಗಳನು ಕೇಳು - ನಾನು ನಿನಗೆ ತಿಳಿಸುವೆನು:
೧೯
ಅವರು ತಮ್ಮ ನಾಡಿನ ಬಾಧ್ಯತೆಯನ್ನು ಕಳೆದುಕೊಂಡವರಲ್ಲ ಪರದೇಶೀಯರು ಅವರ ಮಧ್ಯೆ ಹಾದುಹೋಗುವಂತಿರಲಿಲ್ಲ.
೨೦
ಹಿಂಸಾತ್ಮಕನ ವರುಷಗಳು ಎಣಿಸಲಾಗಿವೆ ಆ ದುಷ್ಟನು ಜೀವಮಾನವೆಲ್ಲ ಬಾಧೆಪೀಡಿತನೆ.
೨೧
ಭಯಹುಟ್ಟಿಸುವ ಅಪಾಯಗಳ ಸಪ್ಪಳ ಅವನ ಕಿವಿಯಲ್ಲಿ ಸೂರೆಗಾರನ ಧಾಳಿಯ ದಿಗಿಲು ಅವನು ಸುಖವಿರುವಲ್ಲಿ.
೨೨
ಕತ್ತಲಿಂದ ಹಿಂದಿರುಗುವ ನಂಬಿಕೆ ಅವನಿಗಿಲ್ಲ ಕತ್ತಿ ತನಗಾಗಿ ಕಾದಿದೆಯೆಂಬುದರಲ್ಲಿ ಸಂದೇಹವಿಲ್ಲ.
೨೩
ಹೊಟ್ಟೆಪಾಡಿಗಾಗಿ ಹುಡುಕುತ್ತಾ ಅಲೆದಾಡುತ್ತಾನೆ ಆ ಕತ್ತಲ ದಿನ ಹತ್ತಿರವಿದೆಯೆಂದು ಅರಿತಿದ್ದಾನೆ.
೨೪
ಸಂಕಟ - ಪೇಚಾಟ ಅವನನ್ನು ಕಾಡುತ್ತಿರುತ್ತವೆ ಯುದ್ಧಸನ್ನದ್ಧ ರಾಜರಂತೆ ಅವನಿಗೆ ಸೋಲನು ತರುತ್ತವೆ.
೨೫
ದೇವರಿಗೆ ವಿರುದ್ಧ ಅವನು ಮುಷ್ಠಿ ತೋರಿದನಲ್ಲವೆ? ಸರ್ವಶಕ್ತನನು ಧಿಕ್ಕರಿಸುತಾ ಶೂರನಂತೆ ಮೆರೆದನಲ್ಲವೆ?
೨೬
ಗಟ್ಟಿಮುಟ್ಟಾದ ಗುರಾಣಿಯನ್ನು ಹಿಡಿದುಕೊಂಡೇ ಆತನ ಮೇಲೆ ಬೀಳಲು ತಲೆ ನಿಮಿರಿ ಓಡಿದನಲ್ಲವೆ?
೨೭
ಕೊಬ್ಬೇರಿತ್ತು ಅವನ ಮೋರೆಯಲಿ ಬೊಜ್ಜು ಬೆಳೆದಿತ್ತು ಅವನ ಸೊಂಟದಲಿ.
೨೮
ಹಾಳುಮಾಡಿದ್ದ ಪಟ್ಟಣಗಳಲ್ಲೆ ಅವನು ಸೇರಿಕೊಂಡಿದ್ದ ಯಾರೂ ವಾಸಮಾಡದೆ ದಿಬ್ಬವಾಗಿ ಮಾರ್ಪಟ್ಟಿದ್ದ ಶಾಪಗ್ರಸ್ತ ಮನೆಗಳಲ್ಲಿ ವಾಸಮಾಡಿಕೊಂಡಿದ್ದ.
೨೯
ಇಂಥವನು ಸಿರಿವಂತನಾಗಿ ಉಳಿಯನು ಅವನ ಆಸ್ತಿ ಸ್ಥಿರವಾಗಿ ನಿಲ್ಲದು ಅವನು ಧರೆಯಲ್ಲಿ ಬೇರೂರಿ ಬೆಳೆಯನು.
೩೦
ಕತ್ತಲೊಳಗಿಂದ ಪಾರಾಗನವನು ಸುಡುವುದು ಕಿಚ್ಚು ಅವನ ಕೊಂಬೆಯನು ಬಡಿದೊಯ್ಯುವುದು ಗಾಳಿ ಅದರ ಫಲವನು.
೩೧
ವ್ಯರ್ಥವಾದುದನು ನಂಬಿ ಅವನು ಮೋಸಹೋಗದಿರಲಿ ಇಲ್ಲವಾದರೆ ಅವನಿಗೆ ಸಿಗುವ ಪ್ರತಿಫಲ ವ್ಯರ್ಥವೇ ಸರಿ.
೩೨
ಅವನ ಬುಡ ಒಣಗುವುದು ಕಾಲಕ್ಕೆ ಮುಂಚೆ ಪಚ್ಚೆಪಸಿರಾಗದು ಅವನ ಕೊಂಬೆ.
೩೩
ಅವನಾಗುವನು ಮಾಗದ ಹಣ್ಣನ್ನು ಕಳೆದುಕೊಂಡ ದ್ರಾಕ್ಷಿಬಳ್ಳಿಯಂತೆ ಹೂಗಳನ್ನು ಉದುರಿಸಿಕೊಂಡ ಓಲಿವ್ ಎಣ್ಣೆ ಮರದಂತೆ.
೩೪
ದುರುಳರ ಸಂಘವದು ಬರಡಾದುದು ಸುಡುವುದು ಬೆಂಕಿ ಲಂಚಕೋರರ ಗುಡಾರವನು.
೩೫
ಉದರದಲ್ಲಿ ವಂಚನೆಯನ್ನು ಗರ್ಭಧರಿಸುವರು ಕೇಡನು ಹಡೆವೆನೆಂದೆಣಿಸಿ ಶೂನ್ಯವ ಹೆರುವುದ ನೋಡು.