೧ |
“ಹೆಣ್ಣಿನಿಂದ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನು, ದುಃಖಭರಿತನು. |
೨ |
ಅರಳಿ ಬಾಡುವನು ಹೂವಿನಂತೆ ನಿಲ್ಲದೆ ಓಡುವನು ನೆರಳಿನಂತೆ. |
೩ |
ಇಂಥವನಾದ ನನ್ನ ಮೇಲೆ ಕಣ್ಣಿಟ್ಟು ಬರಮಾಡುವೆಯಾ ನನ್ನನು ನಿನ್ನ ನ್ಯಾಯಸ್ಥಾನಕ್ಕೆ? |
೪ |
ಅಶುದ್ಧತೆಯಿಂದ ಬಂದೀತೆ ಶುದ್ಧತೆ? ಇಲ್ಲ, ಎಂದಿಗೂ ಅದು ಅಸಾಧ್ಯವೆ. |
೫ |
ಮಾನವನ ದಿನಗಳೆಷ್ಟೆಂದು ತೀರ್ಮಾನವಾಗಿದೆ ಅವನ ತಿಂಗಳುಗಳ ಲೆಕ್ಕ ನಿನಗೆ ಗೊತ್ತಿದೆ ನೀ ನೇಮಿಸಿರುವೆ ಅವನಿಗೆ ದಾಟಲಾಗದ ಗಡಿಗಳನೆ. |
೬ |
ಇಂತಿರಲು ತಿರುಗಿಸಿಬಿಡು ಅವನಿಂದ ನಿನ್ನ ದೃಷ್ಟಿಯನು ಸವಿಯಲು ಬಿಡು ಕೂಲಿಯಾಳಂತೆ ದಿನಾಂತ್ಯದ ನಲಿವನು. |
೭ |
ಮತ್ತೆ ಮೊಳೆಯುವೆನೆಂಬ, ಮರಳಿ ಚಿಗುರುವೆನೆಂಬ ನಂಬಿಕೆಯಿಂದಿದೆ ಅಲ್ಲವೆ ಕಡಿದ ವಟವೃಕ್ಷ? |
೮ |
ಮರದ ಬೇರು ನೆಲದಲ್ಲಿ ಮುದಿಯಾಗಿದ್ದರೂ ಅದರ ಬುಡ ಮಣ್ಣಿನಲ್ಲಿ ಸತ್ತಿದ್ದರೂ |
೯ |
ಮಳೆ ವಾಸನೆಯಿಂದಲೆ ಅದು ಮೊಳೆಯುವುದು ಗಿಡದ ಹಾಗೆ ಅದು ಕವಲೊಡೆದುಕೊಳ್ಳುವುದು. |
೧೦ |
ಮನುಜನೋ ಬಿದ್ದಿರುತ್ತಾನೆ ಸತ್ತು ಕೊನೆಯುಸಿರೆಳೆದಾಗ ಎಲ್ಲವು ಮುಗಿಯಿತು. |
೧೧ |
ಸರೋವರದ ನೀರು ಆರಿಹೋಗುವಂತೆ ನದಿಗಳು ಬತ್ತಿಹೋಗುವಂತೆ |
೧೨ |
ಸತ್ತು ಮಲಗಿದ ಮನುಜ ಏಳುವಂತಿಲ್ಲ. ಅಳಿದುಹೋದರೂ ಆಕಾಶಮಂಡಲ ಅವನು ಎಚ್ಚರಗೊಳ್ಳುವುದಿಲ್ಲ, ಎಬ್ಬಿಸಲ್ಪಡುವುದಿಲ್ಲ. |
೧೩ |
ಆಹಾ! ಬಚ್ಚಿಡಲಾರೆಯಾ ನನ್ನನ್ನು ಪಾತಾಳದೊಳಗೆ? ಅಲ್ಲಿ ಮರೆಮಾಚಿಡಲಾರೆಯಾ ನಿನ್ನ ಕೋಪ ಇಳಿಯುವವರೆಗೆ? ಕಾಲವನ್ನು ಗೊತ್ತುಮಾಡಲಾರೆಯಾ ನನ್ನನು ನೆನೆಯುವುದಕೆ? |
೧೪ |
ಸತ್ತಮೇಲೆ ಮನುಜ ಮರಳಿ ಬದುಕುತ್ತಾನೆಯೇ? ಬದುಕುವುದಾದರೆ ಮುಕ್ತಿಹೊಂದುವವರೆಗೆ ನನ್ನ ವಾಯಿದೆಯ ದಿನವೆಲ್ಲ ನಾ ಕಾದಿರುವೆ. |
೧೫ |
ಆಗ ನೀನು ಕರೆದರೆ ನಾನು ಉತ್ತರಕೊಡುವೆ ನಿನ್ನ ಈ ಸೃಷ್ಟಿಯ ಮೇಲೆ ಹುಟ್ಟೀತು ನಿನಗೆ ಮಮತೆ! |
೧೬ |
ಆಗ ನನ್ನ ಹೆಜ್ಜೆಹೆಜ್ಜೆಗಳನು ನೀ ಲೆಕ್ಕಿಸುವೆ ನನ್ನ ಪಾಪ ಹುಡುಕಲು ನೀ ಕಾವಲು ಇಡಲಾರೆ. |
೧೭ |
ಆಗ ನನ್ನ ದ್ರೋಹವನ್ನೆಲ್ಲ ಮೂಟೆಕಟ್ಟಿ ಮೂಲೆಗೆ ಹಾಕುವೆ ನನ್ನ ದೋಷವನ್ನು ಮುಚ್ಚಿ, ನೀ ಮರೆಮಾಡುವೆ. |
೧೮ |
ಆದರೆ ಬೆಟ್ಟ ಕದಡಿ ಕರಗುವಂತೆ ಬಂಡೆ ತನ್ನ ಸ್ಥಳದಿಂದ ಜಾರುವಂತೆ. |
೧೯ |
ಕಲ್ಲುಗಳನ್ನು ನೀರು ಸವೆಸುವಂತೆ ನೆಲದ ಮಣ್ಣನು ಪ್ರವಾಹ ಕೊಚ್ಚುವಂತೆ ಭಂಗವಾಗುವುದು ಮಾನವನ ನಿರೀಕ್ಷೆ. |
೨೦ |
ನೀನು ಅವನನ್ನು ಶಾಶ್ವತವಾಗಿ ಸೋಲಿಸಿಬಿಡುವೆ ಅವನು ಗತಿಸಿಹೋಗುವನು. ಅವನನ್ನು ವಿಕಾರಗೊಳಿಸಿ ತೊಲಗಿಸಿಬಿಡುವೆ. |
೨೧ |
ಅವನ ಮಕ್ಕಳು ಪ್ರಗತಿಹೊಂದಿದರೂ ಅವನಿಗೆ ತಿಳಿಯದು ಅವರು ಅಧೋಗತಿಗೆ ಇಳಿದರೂ ಅವನಿಗೆ ಗೋಚರವಾಗದು. |
೨೨ |
ಅವನು ಅನುಭವಿಸುವುದು ತನ್ನ ದೇಹದ ನೋವನ್ನೇ ಅವನು ಅತ್ತು ಪ್ರಲಾಪಿಸುವುದು ತನಗಾಗಿಯೇ.”
|
Kannada Bible (KNCL) 2016 |
No Data |