A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಯೋಬನ ೧‘ಊಚ್’ ಎಂಬ ನಾಡಿನಲ್ಲಿ ‘ಯೋಬ’ ಎಂಬ ಒಬ್ಬ ವ್ಯಕ್ತಿಯಿದ್ದ. ಆತನು ದೋಷರಹಿತ, ಸತ್ಯವಂತ, ದೇವರಲ್ಲಿ ಭಯಭಕ್ತಿ ಉಳ್ಳವನು, ಕೆಟ್ಟದ್ದನ್ನು ತೊರೆದು ಬಾಳಿದವನು.
ಆತನಿಗೆ ಏಳು ಗಂಡು, ಮೂರು ಹೆಣ್ಣು ಮಕ್ಕಳು ಇದ್ದರು.
ಏಳು ಸಾವಿರ ಕುರಿಗಳು, ಮೂರು ಸಾವಿರ ಒಂಟೆಗಳು, ಐನೂರು ಜೋಡಿ ಎತ್ತುಗಳು, ಮತ್ತು ಐನೂರು ಕತ್ತೆಗಳು ಅವನಿಗಿದ್ದವು. ಜೊತೆಗೆ, ಆತನಿಗಿದ್ದ ಸೇವಕರೋ ಹಲವಾರು. ಮೂಡಣ ನಾಡಿನವರಲ್ಲಿ ಆತನೇ ದೊಡ್ಡ ಐಶ್ವರ್ಯವಂತ.
ಆತನ ಗಂಡು ಮಕ್ಕಳು ಒಂದೊಂದು ದಿನ ಒಬ್ಬೊಬ್ಬನ ಮನೆಯಲ್ಲಿ ಔತಣವನ್ನು ಏರ್ಪಡಿಸುತ್ತಿದ್ದರು. ತಮ್ಮ ಮೂವರು ತಂಗಿಯರನ್ನೂ ಆ ಭೋಜನಕ್ಕೆ ಆಹ್ವಾನಿಸುತ್ತಿದ್ದರು.
ಔತಣದ ಸರದಿ ತೀರಿದ ಬಳಿಕ, ಯೋಬನು ತನ್ನ ಮಕ್ಕಳು ಒಂದು ವೇಳೆ ಪಾಪಮಾಡಿ ಮನದಲ್ಲೇ ದೇವರನ್ನು ದೂಷಿಸಿರಬಹುದೆಂದುಕೊಂಡು, ಅವರನ್ನು ಕರೆಸಿ ಶುದ್ಧೀಕರಣ ಮಾಡಿಸುತ್ತಿದ್ದನು. ಬೆಳಿಗ್ಗೆ ಎದ್ದು ಅವರೊಬ್ಬೊಬ್ಬರಿಗಾಗಿ ದಹನಬಲಿಗಳನ್ನು ಅರ್ಪಿಸುತ್ತಿದ್ದನು; ಇದು ಯೋಬನ ದೈನಂದಿನ ವಾಡಿಕೆಯಾಗಿತ್ತು.
ಒಮ್ಮೆ ಸ್ವರ್ಗನಿವಾಸಿಗಳು ಸರ್ವೇಶ್ವರಸ್ವಾಮಿಯ ಸನ್ನಿಧಿಯಲ್ಲಿ ಓಲಗಿಸಿದ್ದರು. ಸೈತಾನನೂ ಅಲ್ಲಿಗೆ ಬಂದನು.
ಸರ್ವೇಶ್ವರ ಸೈತಾನನನ್ನು ನೋಡಿ, “ಎಲ್ಲಿಂದ ಬಂದೆ?” ಎಂದು ಕೇಳಿದರು. ಅದಕ್ಕೆ ಅವನು, “ಭೂಲೋಕದಲ್ಲಿ ಗಸ್ತುತಿರುಗಿ ಬಂದಿದ್ದೇನೆ” ಎಂದನು.
ಆಗ ಸರ್ವೇಶ್ವರ, “ನನ್ನ ದಾಸ ಯೋಬನನ್ನು ಗಮನಿಸಿದೆಯಾ? ಆತನು ದೋಷರಹಿತ, ಸತ್ಯವಂತ, ದೇವರಲ್ಲಿ ಭಯಭಕ್ತಿಯುಳ್ಳವನು, ಕೆಟ್ಟದ್ದನ್ನು ತೊರೆದು ಬಾಳುವವನು. ಆತನಿಗೆ ಸರಿಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಗನು,” ಎಂದು ಹೇಳಿದರು.
ಅದಕ್ಕೆ ಸೈತಾನನು ಹೀಗೆ ಎಂದನು: “ಲಾಭವಿಲ್ಲದೆ ಯೋಬನು ನಿಮ್ಮಲ್ಲಿ ಭಯಭಕ್ತಿ ಇಟ್ಟಿದ್ದಾನೆಯೇ?
೧೦
ನೀವು ಆತನಿಗೂ ಆತನ ಎಲ್ಲ ಆಸ್ತಿಪಾಸ್ತಿಗೂ ಬೇಲಿ ಹಾಕಿ ಭದ್ರಪಡಿಸಿದ್ದೀರಲ್ಲವೇ? ಆತನು ಕೈ ಹಾಕಿದ ಕೆಲಸ ಸಫಲವಾಗುವಂತೆ ಮಾಡಿದ್ದೀರಲ್ಲವೆ? ಎಂದೇ ಆತನ ಸಿರಿಸಂಪತ್ತು ಈ ನಾಡಿನಲ್ಲಿ ಬೆಳೆಯುತ್ತಾ ಬಂದಿದೆ.
೧೧
ಆದರೆ ನೀವು ಕೈಹಾಕಿ ಆತನ ಸೊತ್ತನ್ನೆಲ್ಲಾ ಅಳಿಸಿಬಿಡಿ. ಆಗ ಆತನು ನಿಮ್ಮನ್ನು ಮುಖಾಮುಖಿಯಾಗಿ ನಿಂದಿಸುತ್ತಾನೋ ಇಲ್ಲವೋ ಎಂದು ನೋಡುವಿರಂತೆ!” ಎಂದನು.
೧೨
ಸರ್ವೇಶ್ವರ ಸೈತಾನನಿಗೆ, “ನೋಡು, ಆತನ ಆಸ್ತಿಪಾಸ್ತಿಯೆಲ್ಲ ನಿನ್ನ ಕೈವಶಕ್ಕೆ ಬಿಟ್ಟಿದ್ದೇನೆ. ಆತನ ಮೈಮೇಲೆ ಮಾತ್ರ ಕೈಹಾಕಬೇಡ,” ಎಂದು ಅಪ್ಪಣೆಕೊಟ್ಟರು. ಕೂಡಲೆ ಸೈತಾನನು ಸರ್ವೇಶ್ವರರ ಸನ್ನಿಧಾನದಿಂದ ಹೊರಟುಹೋದನು.
೧೩
ಇದಾದ ಬಳಿಕ ಯೋಬನ ಪುತ್ರಪುತ್ರಿಯರು ತಮ್ಮ ಹಿರಿಯಣ್ಣನ ಮನೆಯಲ್ಲಿ ಔತಣಮಾಡುತ್ತಿದ್ದರು.
೧೪
ಆಗ ದೇವದೂತನೊಬ್ಬನು ಯೋಬನ ಬಳಿಗೆ ಬಂದು, “ನಿಮ್ಮ ಎತ್ತುಗಳು ಉಳುತ್ತಾ ಇದ್ದವು; ಕತ್ತೆಗಳು ಹತ್ತಿರದಲ್ಲೆ ಮೇಯುತ್ತಾ ಇದ್ದವು.
೧೫
ಅಷ್ಟರಲ್ಲಿ, ಶೆಬದವರು ಬಂದು, ಮೇಲೆ ಬಿದ್ದು, ಅವುಗಳನ್ನು ಹೊಡೆದುಕೊಂಡು ಹೋದರು. ಕೂಲಿ ಆಳುಗಳನ್ನು ಕತ್ತಿಯಿಂದ ಕೊಂದುಹಾಕಿದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ಮುಟ್ಟಿಸಲು ಓಡಿಬಂದೆ,” ಎಂದನು.
೧೬
ಅವನು ಮಾತಾಡಿ ಮುಗಿಸುವಷ್ಟರಲ್ಲೇ ಮತ್ತೊಬ್ಬನು ಬಂದು, “ದೇವರು ಆಕಾಶದಿಂದ ಬೆಂಕಿ ಸುರಿಸಿದರು. ಅದು ಕುರಿಗಳನ್ನೂ, ಕೂಲಿ ಆಳುಗಳನ್ನೂ ಸುಟ್ಟು ಭಸ್ಮಮಾಡಿತು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ಮುಟ್ಟಿಸಲು ಓಡಿಬಂದೆ,” ಎಂದನು.
೧೭
ಅಷ್ಟರಲ್ಲಿ ಇನ್ನೊಬ್ಬನು ಬಂದು, “ಕಸ್ದೀಯರು ಮೂರು ಗುಂಪುಗಳಾಗಿ ಬಂದು, ಮೇಲೆ ಬಿದ್ದು, ಒಂಟೆಗಳನ್ನು ಹೊಡೆದುಕೊಂಡುಹೋದರು. ಅಲ್ಲದೆ ಆ ಕೂಲಿ ಆಳುಗಳನ್ನು ಕತ್ತಿಯಿಂದ ಸಂಹರಿಸಿದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯೊಂದಿಗೆ ನಿಮ್ಮ ಬಳಿಗೆ ಓಡಿಬಂದೆ,” ಎಂದನು.
೧೮
ಅವನು ವರದಿಮಾಡುತ್ತಿದ್ದಾಗಲೇ ಬೇರೊಬ್ಬನು ಬಂದು, “ನಿಮ್ಮ ಪುತ್ರಪುತ್ರಿಯರು ಹಿರಿಯಣ್ಣನ ಮನೆಯಲ್ಲಿ ಔತಣದಲ್ಲಿದ್ದರು.
೧೯
ಆಗ ತಟ್ಟನೆ ಅರಣ್ಯ ಕಡೆಯಿಂದ ಬಿರುಗಾಳಿ ಎದ್ದಿತು; ನಾಲ್ಕು ಕಡೆಯಿಂದಲೂ ಮನೆಗೆ ಬಡಿಯಿತು. ಮನೆ ಕುಸಿದುಬಿತ್ತು. ಯುವಕಯುವತಿಯರೆಲ್ಲ ಸತ್ತುಹೋದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ತಂದಿದ್ದೇನೆ,” ಎಂದು ತಿಳಿಸಿದನು.
೨೦
ಆಗ ಯೋಬನು ಎದ್ದು ನಿಂತು, ದುಃಖವನ್ನು ತಾಳಲಾರದೆ ತನ್ನ ಮೇಲಂಗಿಯನ್ನು ಹರಿದುಬಿಟ್ಟ, ತಲೆಯನ್ನು ಬೋಳಿಸಿಕೊಂಡ, ನೆಲದ ಮೇಲೆ ಬಿದ್ದು, ದೇವರಿಗೆ ಸಾಷ್ಟಾಂಗವೆರಗಿ:
೨೧
ಬರಿಗೈಯಲ್ಲಿ ಬಂದೆ ನಾನು ತಾಯಗರ್ಭದಿಂದ ಬರಿಗೈಯಲ್ಲಿ ಹಿಂತಿರುಗುವೆ ನಾನು ಇಲ್ಲಿಂದ ಸರ್ವೇಶ್ವರ ಕೊಟ್ಟ ಸರ್ವೇಶ್ವರ ತೆಗೆದುಕೊಂಡ ಆತನ ನಾಮಕ್ಕೆ ಸ್ತುತಿಸ್ತೋತ್ರ! ಎಂದನು.
೨೨
ಈ ಎಲ್ಲ ವಿಪತ್ತು ಬಂದೊದಗಿದರೂ ಯೋಬನು ಪಾಪಮಾಡಲಿಲ್ಲ. ದೇವರ ಮೇಲೆ ತಪ್ಪುಹೊರಿಸಲಿಲ್ಲ.