English
A A A A A
×

ಕನ್ನಡ ಬೈಬಲ್ (KNCL) 2016

ನೆಹೆಮೀಯಾ ೯
ಅದೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನ, ಇಸ್ರಯೇಲರು ಉಪವಾಸವಾಗಿದ್ದು ಗೋಣೀ ತಟ್ಟನ್ನು ಕಟ್ಟಿಕೊಂಡು, ತಲೆಯ ಮೇಲೆ ಮಣ್ಣುಸುರಿದುಕೊಂಡು, ನೆರೆದುಬಂದರು.
ಇಸ್ರಯೇಲ್ ಸಂತಾನದವರು, ಎಲ್ಲ ಅನ್ಯಕುಲದವರಿಂದ ತಮ್ಮನ್ನು ಬೇರ್ಪಡಿಸಿಕೊಂಡು ನಿಂತು, ತಮ್ಮ ಪಾಪಗಳನ್ನೂ ತಮ್ಮ ಪಿತೃಗಳ ಪಾಪಗಳನ್ನೂ ಅರಿಕೆಮಾಡಿದರು.
ಅವರು ಮೂರು ತಾಸುಗಳವರೆಗೂ ತಮ್ಮ ತಮ್ಮ ಸ್ಥಳದಲ್ಲೇ ನಿಂತು, ತಮ್ಮ ದೇವರಾದ ಸರ್ವೇಶ್ವರನ ಧರ್ಮಶಾಸ್ತ್ರಗ್ರಂಥವನ್ನು ಪಾರಾಯಣ ಮಾಡಿಸಿದರು. ತರುವಾಯ ಇನ್ನೂ ಮೂರು ತಾಸು ತಮ್ಮ ದೇವರಾದ ಸರ್ವೇಶ್ವರನಿಗೆ ಅಡ್ಡಬಿದ್ದು ಪಾಪಗಳನ್ನು ಅರಿಕೆಮಾಡಿದರು.
ಯೇಷೂವ, ಬಾನೀ, ಕದ್ಮೀಯೇಲ್, ಶೆಬನ್ಯ, ಬುನ್ನೀ, ಶೇರೇಬ್ಯ, ಬಾನೀ, ಕೆನಾನೀ ಎಂಬವರು ಲೇವಿಯರ ಮೆಟ್ಟಲುಗಳ ಮೇಲೆ ನಿಂತು, ಸ್ವರವೆತ್ತಿ ತಮ್ಮ ದೇವರಾದ ಸರ್ವೇಶ್ವರನಿಗೆ ಮೊರೆಯಿಟ್ಟರು.
ಆಮೇಲೆ ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಪೆತಹ್ಯ ಎಂಬವರು, “ಏಳಿ, ನಮ್ಮ ದೇವರಾದ ಸರ್ವೇಶ್ವರನಿಗೆ ಯುಗಯುಗಕ್ಕೂ ಸ್ತುತಿಸ್ತೋತ್ರ ಎನ್ನಿ,” ಎಂದು ಹೇಳಿ ಹೀಗೆ ಪ್ರಾರ್ಥಿಸಿದರು: “ಸರ್ವೇಶ್ವರಾ, ಸ್ತುತಿಸ್ತೋತ್ರ ನಿಮ್ಮ ಮಹಿಮಾಮಯ ನಾಮಕೆ ಮಿಗಿಲಾದುದು ಆ ಶ್ರೀ ನಾಮ ಸರ್ವಸ್ತುತಿ ಕೀರ್ತನೆಗೆ.
ಹೇ ಸರ್ವೇಶ್ವರಾ, ನೀವೊಬ್ಬರೇ ದೇವರು; ಉನ್ನತೋನ್ನತ ಆಕಾಶವನು, ಅದರ ಪರಿವಾರಗಳನು ಬುವಿಯನು, ಕಡಲನು, ಅದರ ಸರ್ವಜಲಚರಗಳನು ಸೃಷ್ಟಿಸಿದಾತ ನೀವು; ಸಮಸ್ತ ಪ್ರಾಣಿಗಳಿಗು ಜೀವಾಧಾರ ನೀವು; ಆರಾಧಿಸುತ್ತವೆ ನಿಮ್ಮನು ಆಕಾಶದ ಪರಿವಾರಗಳು.
ಸರ್ವೇಶ್ವರಾ, ಅಬ್ರಾಮನನು ನೀವು ಆರಿಸಿಕೊಂಡಿರಿ ಬಾಬಿಲೋನಿನ ‘ಊರ್’ ನಗರದಿಂದ ಆತನನು ಬರಮಾಡಿದಿರಿ ದೇವರಾದ ನೀವೇ ಆತನಿಗೆ ‘ಅಬ್ರಹಾಮ’ ಎಂದು ಹೆಸರಿಟ್ಟಿರಿ.
ಆತ ಪ್ರಾಮಾಣಿಕ ವ್ಯಕ್ತಿಯೆಂದು ಗುರುತಿಸಿದಿರಿ ಕಾನಾನ್ಯರ, ಹಿತ್ತಿಯರ, ಅಮೋರಿಯರ, ಪೆರಿಜ್ಜೀಯರ, ಯೆಬೂಸಿಯರ, ಗಿರ್ಗಾಷಿಯರ ನಾಡನು ಆತನ ಸಂತಾನದವರಿಗೆ ವಾಗ್ದಾನ ಮಾಡಿದಿರಿ. ಅಂತೆಯೇ ಸತ್ವ ಸ್ವರೂಪರಾದ ನೀವು ಅದನು ಈಡೇರಿಸಿದಿರಿ.
ನೋಡಿದಿರಿ ಈಜಿಪ್ಟಿನಲಿ ನಮ್ಮ ಪಿತೃಗಳು ಪಟ್ಟ ಕಷ್ಟವನು ಆಲಿಸಿದಿರಿ ಕೆಂಪುಸಮುದ್ರದ ಬಳಿ ಅವರಿಟ್ಟ ಮೊರೆಯನು.
೧೦
ಈಜಿಪ್ಟಿನವರು ಅವರನು ದರ್ಪದಿಂದ ದಮನಮಾಡುವಲ್ಲಿ ಎಸಗಿದಿರಿ ಅದ್ಭುತಕಾರ್ಯಗಳನು ಸೂಚಕಕಾರ್ಯಗಳನು ಫರೋಹನಲಿ, ಅವನ ಸೇವಕರಲಿ, ಆ ನಾಡಿನ ಜನರಲಿ. ಉಳಿಸಿಕೊಂಡಿರಿ ಇಂದಿಗೂ ಅಂದು ಸಾಧಿಸಿದ ಕೀರ್ತಿಯನು.
೧೧
ಕಡಲನು ಸೀಳಿ, ಆ ಪಿತೃಗಳ ನಡೆಸಿದಿರಿ ಒಣನೆಲದಲೋ ಎಂಬಂತೆ ಅವರ ಬೆನ್ನಟ್ಟಿ ಬಂದವರನು ಜಲರಾಶಿಯ ತಳಮುಟ್ಟಿಸಿದಿರಿ ಕಲ್ಲಂತೆ.
೧೨
ಹಗಲಲಿ ಅವರ ಮುಂದೆ ಸಾಗಿದಿರಿ ಮೇಘಸ್ತಂಭದಂತೆ ಇರುಳಲಿ ದಾರಿತೋರಿದಿರಿ ಬೆಳಕನೀವ ಅಗ್ನಿಸ್ತಂಭದಂತೆ.
೧೩
ಸೀನಾಯಿ ಬೆಟ್ಟದ ಮೇಲೆ ಇಳಿದುಬಂದು ಆಕಾಶದ ಕಡೆಯಿಂದ ಅವರೊಡನೆ ಮಾತಾಡಬಂದು ಅವರಿಗನುಗ್ರಹಿಸಿದಿರಿ ನೀತಿನಿಯಮಗಳನು ಸತ್ಯಧರ್ಮೋಪದೇಶವನು, ಶ್ರೇಷ್ಠ ಆಜ್ಞಾವಿಧಿಗಳನು.
೧೪
ಕಲಿಸಿದಿರಿ ಅವರಿಗೆ ಆಜ್ಞಾವಿಧಿ ಧರ್ಮಗಳನು ಪ್ರಕಟಿಸಿದಿರಿ ನಿಮಗೆ ಮೀಸಲಾದ ವಿಶ್ರಾಂತಿ ದಿನವನು; ನಿಮ್ಮ ದಾಸ ಮೋಶೆಯ ಮುಖಾಂತರ ಸಾಧಿಸಿದಿರಿದನು.
೧೫
ಹಸಿದಿದ್ದಾಗ ಅವರಿಗಿತ್ತಿರಿ ಉಣವನು ಆಗಸದಿಂದ ಬಾಯಾರಿದ್ದಾಗ ನೀರ ಬರಮಾಡಿದಿರಿ ಬಂಡೆಯೊಳಗಿಂದ ವಾಗ್ದತ್ತ ನಾಡ ಸೇರಿ ಸ್ವಾಧೀನಪಡಿಸಿಕೊಂಡರು ನಿಮ್ಮಾಜ್ಞೆಯಿಂದ.
೧೬
ಇಷ್ಟಾದರೂ ಗರ್ವಿಗಳಾದರು, ನಮ್ಮೀ ಪಿತೃಗಳು ಹಟಹಿಡಿದು ಅವಿಧೇಯರಾದರು ಉಲ್ಲಂಘಿಸಿ ನಿಮ್ಮಾಜ್ಞಾವಿಧಿಗಳನು.
೧೭
ಮರೆತುಬಿಟ್ಟರು ನೀವೆಸಗಿದ ಮಹಾತ್ಕಾರ್ಯಗಳನು ಹಟಹಿಡಿದರು ತಮಗೊಬ್ಬ ನಾಯಕನ ನೇಮಿಸಿಕೊಳ್ಳಲು; ಈಜಿಪ್ಟಿಗೆ ತೆರಳಲಿದ್ದರು ಮರಳಿ ಗುಲಾಮರಾಗಲು. ನೀವಾದರೋ ಪಾಪಿಗಳನು ಕ್ಷಮಿಸುವವರು ದಯಾಪೂರಿತರು, ದೀರ್ಘಶಾಂತರು, ಕೃಪಾಳು ದೇವರು, ಅವರನು ಕೈಬಿಡದೆ ಕಾಪಾಡಿ ನಡೆಸಿದವರು.
೧೮
ಅವರಾದರೋ ಎರಕದ ಹೋರಿಕರುವನು ಮಾಡಿಕೊಂಡರು ತಮ್ಮನು ಈಜಿಪ್ಟಿನಿಂದ ಕರೆತಂದುದು ಅದೇ ಎಂದುಕೊಂಡರು. ಈ ಪರಿಯ ವರ್ತನೆಯಿಂದ ನಿಮ್ಮನ್ನೇ ಅಸಡ್ಡೆಮಾಡಿಬಿಟ್ಟರು.
೧೯
ಹೀಗಿದ್ದರು ನೀವಾದಿರಿ ಅವರಿಗೆ ಕರುಣಾನಿಧಿ ತೊರೆದುಬಿಡಲಿಲ್ಲ ನೀವವರನು ಮರುಭೂಮಿಯಲಿ. ಬಿಟ್ಟುಹೋಗಲಿಲ್ಲ ದಾರಿತೋರಿದಾ ಮೇಘಸ್ತಂಭ ಹಗಲಲಿ ಮುನ್ನಡೆಯಿತು ಬೆಳಕನೀಯುತಾ ಅಗ್ನಿಸ್ತಂಭ ಇರುಳಲಿ.
೨೦
ಅವರಿಗಿತ್ತಿರಿ ಉಪದೇಶಿಸಲು ಸತ್ಯಾತ್ಮವನು ಅವರ ಬಾಯಿಂದ ಹಿಂದೆಗೆಯಲಿಲ್ಲ ಮನ್ನವನು ಬಾಯಾರಿದ್ದಾಗ ಕುಡಿಯಲಿತ್ತಿರಿ ಅವರಿಗೆ ನೀರನು.
೨೧
ಈ ಪರಿ ಸಲಹಿದಿರಿ ಮರುಭೂಮಿಯಲಿ ನಾಲ್ವತ್ತು ವರ್ಷ ಅಲ್ಲವರಿಗಿರಲಿಲ್ಲ ಯಾವುದೊಂದು ಸಂಕಷ್ಟ. ಊದಿಹೋಗಲಿಲ್ಲ ಕಾಲು, ಹರಿದುಹೋಗಲಿಲ್ಲ ಅವರ ವಸ್ತ್ರ.
೨೨
ರಾಜ್ಯಗಳನು, ಜನಾಂಗಗಳನು ವಶಪಡಿಸಿದಿರಿ ಅವರಿಗೆ ಹಂಚಿಕೊಟ್ಟಿರಿ ಆ ರಾಷ್ಟ್ರಗಳ ಸೊತ್ತುಗಳನೆ ಹೆಷ್ಬೋನಿನ ಅರಸ ಸೀಹೋನನಿಗೆ, ಬಾಷಾನಿನ ಅರಸ ಓಗನಿಗೆ, ಸೇರಿದ ಪ್ರಾಂತ್ಯಗಳಿಗೆ ಸ್ವಾಧೀನಪಡಿಸಿಕೊಂಡರಲ್ಲವೆ?
೨೩
ಹೆಚ್ಚಿಸಿದಿರಿ ಅವರ ಮಕ್ಕಳನು ಆಗಸದ ನಕ್ಷತ್ರಗಳಷ್ಟೆ; ಬರಮಾಡಿದಿರಿ ಆ ಮಕ್ಕಳನು ವಾಗ್ದತ್ತ ನಾಡಿಗೆ ‘ಅದ ಸೇರಿ, ವಶಮಾಡಿಕೊಳ್ಳಿ’ ಎಂದು ಹೇಳಿದಿರಾ ಪಿತೃಗಳಿಗೆ.
೨೪
ಅಂತೆಯೇ ಸೇರಿ ಸ್ವಾಧೀನಮಾಡಿಕೊಂಡರು ಆ ನಾಡನು ಅವರಿಗಧೀನಪಡಿಸಿದಿರಿ ಅದರ ರಾಜರನು, ಪ್ರಜೆಗಳನು, ನಿವಾಸಿಗಳನು, ಆ ಕಾನಾನ್ಯರನು, ತಮಗಿಷ್ಟಾನುಸಾರ ನಡೆಸಲು.
೨೫
ವಶಮಾಡಿಕೊಂಡರು ಕೋಟೆಕೊತ್ತಲುಗಳುಳ್ಳ ಪಟ್ಟಣಗಳನು ಸಾರವತ್ತಾದ ಹೊಲಗಳನು, ಧಾನ್ಯ ತುಂಬಿದ ಮನೆಗಳನು, ತೋಡಿದ ಬಾವಿಗಳನು ದ್ರಾಕ್ಷೀತೋಟಗಳನು, ಎಣ್ಣೇಮರ ತೋಪುಗಳನು, ನಾನಾಫಲವೃಕ್ಷಗಳನು. ತಿಂದು ತೃಪ್ತರಾದರು, ಕೊಬ್ಬಿದರು, ನೀವಿತ್ತ ಸಮೃದ್ಧಿಯಲಿ ನಲಿದಾಡಿದರು.
೨೬
ಬಳಿಕ ಅವಿಧೇಯರಾದರು, ನಿಮಗೆ ವಿರುದ್ಧ ದಂಗೆ ಎದ್ದರು; ನಿಮ್ಮ ಉಪದೇಶವನು ಉಲ್ಲಂಘಿಸಿದರು, ನಿಮ್ಮ ಪ್ರವಾದಿಗಳನು ಕೊಂದರು; ಹೌದು, ನಿಮಗೆ ಅಭಿಮುಖರಾಗಲು ಎಚ್ಚರಿಸಿದವರನೆ ಕೊಂದರು. ಕಡೆಗೆ ನಿಮ್ಮನ್ನೇ ಅಸಡ್ಡೆಮಾಡಿ, ಘೋರ ಅಪರಾಧಿಗಳಾದರು.
೨೭
ಎಂದೇ ನೀವಿತ್ತಿರಿ ಅವರನು ಕ್ರೂರ ಶತ್ರುಗಳ ವಶಕೆ ಆದರೆ ಸಂಕಟದಲಿ ಮೊರೆಯಿಡಲು, ಪರದಿಂದ ಕಿವಿಗೊಟ್ಟಿರವರಿಗೆ! ರಕ್ಷಕರನು ಕಳುಹಿಸಿದಿರಿ ಕರುಣಾತಿಶಯದಿಂದ ಈ ಪರಿ ಬಿಡಿಸಿದಿರಿ ವಿರೋಧಿಗಳ ಕೈಯಿಂದ.
೨೮
ಶಾಂತಿ ಸವಿದದ್ದೇ ದ್ರೋಹಿಗಳಾಗಿ ನಡೆದರು ಮತ್ತೆ ನೀವಿತ್ತಿರವರನು ದೊರೆತನ ನಡೆಸುವ ವೈರಿಗಳ ಕೈಗೆ. ಪಶ್ಚಾತ್ತಾಪಪಟ್ಟು ಕೂಗಿಕೊಳ್ಳಲು, ಆಲಿಸಿದಿರಿ ಪರದಿಂದ ರಕ್ಷಿಸಿದಿರಿ ಪದೇ ಪದೇ ಅಪರಿಮಿತ ಕರುಣೆಯಿಂದ.
೨೯
‘ಧರ್ಮೋಪದೇಶಕೆ ಮರಳಿ ಮನವೊಲಿದು ಬನ್ನಿ’ ಎಂದು ನೀವೆಷ್ಟೋ ಸಾರಿ ಅವರನ್ನೆಚ್ಚರಿಸಿದಿರಿ ಖಚಿತವಾಗಿ ಆದರೂ ಆಲಿಸಲಿಲ್ಲಾ ಗರ್ವಿಗಳು, ಅವಿಧೇಯರು, ಪಾಪಿಗಳು. ಜೀವಾಧಾರವಾದ ನಿಮ್ಮಾ ವಿಧಿನಿಯಮಗಳನು ಮೀರಿದರು ಮೊಂಡುಬಿದ್ದು ನಿಮ್ಮ ನೊಗಕೆ ಕೊರಳೊಡ್ಡದೆ ಹೋದರು.
೩೦
ತಾಳಿಕೊಂಡಿರಿ ಅವರನು ನೀವೆಷ್ಟೋ ವರ್ಷಗಳ ತನಕ ಎಚ್ಚರಿಸಿದಿರಿ ನಿಮ್ಮಾತ್ಮ ಪ್ರೇರಣೆಯಿಂದ, ಪ್ರವಾದಿಗಳ ಮೂಲಕ ಕಿವಿಗೊಡದಾ ಜನರನು ಹೊರದೂಡಿದಿರಿ ಅನ್ಯದೇಶದ ಪರಿಯಂತ.
೩೧
ಆದರೆ, ನೀವು ದಯಾಪೂರಿತರು, ಕರುಣಾಮಯ ದೇವರು! ನಿಮ್ಮ ಮಹಾಕೃಪಾನುಸಾರ, ಕೈಬಿಡಲಿಲ್ಲ, ನಾಶಮಾಡಲಿಲ್ಲ ಅವರನು.
೩೨
ಓ ನಮ್ಮ ದೇವರೇ, ನೀವು ಮಹೋನ್ನತರು, ಶಕ್ತಿಸಾಮರ್ಥ್ಯರು, ಭಯಭಕ್ತಿಗೆ ಪಾತ್ರರು, ಕೃಪಾವಾಗ್ದಾನಗಳ ನೆರವೇರಿಸುವವರು. ಅಲ್ಪವೆಂದೆಣಿಸಬೇಡಿ - ನಮ್ಮ ರಾಜರು, ರಾಜ್ಯಪಾಲರು. ಯಾಜಕರು, ಪ್ರವಾದಿಗಳು, ಹಿರಿಯರು, ಪ್ರಜೆಗಳು ಸಹಿಸಬೇಕಾಗಿಬಂದಿರುವ ಈ ಕಷ್ಟಕಾರ್ಪಣ್ಯಗಳನು.
೩೩
ನಮ್ಮ ಮೇಲೆ ನೀವೆಷ್ಟೇ ಕೇಡನು ಬರಮಾಡಿದರೂ ನೀವು ನ್ಯಾಯವಂತರು, ಸತ್ಯಸ್ವರೂಪಿ, ನಾವೋ ದುಷ್ಟರು!
೩೪
ನಮ್ಮ ಅರಸರು, ರಾಜ್ಯಪಾಲರು, ಯಾಜಕರು, ಹಿರಿಯರು ಅನುಸರಿಸಲಿಲ್ಲ, ನಿಮ್ಮಾಜ್ಞೆಯನು, ಧರ್ಮೋಪದೇಶವನು. ಲಕ್ಷಿಸಲಿಲ್ಲ ನೀವಿತ್ತ ಎಚ್ಚರಿಕೆಯ ಮಾತುಗಳನು.
೩೫
ಅವರಿದ್ದರು ನೀವೇ ಅನುಗ್ರಹಿಸಿದ ಸ್ವರಾಜ್ಯದಲಿ ನಲಿದಾಡಿದರು ನೀವು ಕರುಣಿಸದ ಸಮೃದ್ಧಿಯಲಿ ವಾಸಿಸಿದರು ಸಾರವತ್ತಾದ ಸವಿಸ್ತಾರ ನಾಡಿನಲಿ. ಆದರೂ ಮಾಡಲಿಲ್ಲ ನಿಮ್ಮ ಸೇವೆ, ಬಿಡಲಿಲ್ಲ ತಮ್ಮ ದುರ್ನಡತೆ ನಮಗೊದಗಿರುವ ಗುಲಾಮಗಿರಿ, ಇದರ ಪರಿಣಾಮವಲ್ಲವೆ?
೩೬
ನಮ್ಮ ಪಿತೃಗಳಿಗೆ ನೀವೆಂದಿರಿ ‘ಸವಿಯಿರಿ ನಾಡಿನ ಫಲವನು, ಸಮೃದ್ಧಿಯನು’. ಆದರಿದೋ ಅನುಭವಿಸುತ್ತಿರುವೆವು ಈ ನಾಡಿನಲಿ ಗುಲಾಮಗಿರಿಯನು!
೩೭
ನಮ್ಮ ಪಾಪದ ನಿಮಿತ್ತ ಅಧೀನರಾಗಿಸಿದಿರಿ ಅನ್ಯರಾಜರಿಗೆ ಈ ನಾಡಿನ ಸಿರಿಸಂಪತ್ತು ಹರಿದುಹೋಗುತ್ತಿದೆ ಆ ಅರಸರಿಗೆ ನಮ್ಮೊಡಲು, ದನಕರುಗಳು, ಈಡಾಗಿವೆ ಅವರ ದಬ್ಬಾಳಿಕೆಗೆ ಅಕಟಕಟ, ನಾವು ಸಿಕ್ಕಿಕೊಂಡಿದ್ದೇವೆ, ಮಹಾಸಂಕಟಕೆ!”
೩೮
ಈ ಎಲ್ಲ ಕಾರಣಗಳಿಂದ ನಾವು ಲೇಖನ ರೂಪವಾದ ಪ್ರತಿಜ್ಞೆಯನ್ನು ಮಾಡಿದೆವು. ಅದಕ್ಕೆ ನಮ್ಮ ಮುಖಂಡರು, ಲೇವಿಯರು ಹಾಗು ಯಾಜಕರು ಸಹಿಮಾಡಿ, ಮುದ್ರೆಹಾಕಿದರು.