English
A A A A A
×

ಕನ್ನಡ ಬೈಬಲ್ (KNCL) 2016

ನೆಹೆಮೀಯಾ ೪
ನಾವು ಪೌಳಿಗೋಡೆಯನ್ನು ಕಟ್ಟುತ್ತಿದ್ದ ಸುದ್ದಿ ಸನ್ಬಲ್ಲಟನಿಗೆ ಮುಟ್ಟಿತು. ಅವನು ಬಹಳ ಹೊಟ್ಟೆಕಿಚ್ಚಿನ ಹಾಗು ಸಿಡುಕಿನ ವ್ಯಕ್ತಿ.
“ನನ್ನ ಸಹೋದರರ ಮುಂದೆ ಹಾಗು ಸಮಾರಿಯದ ದಂಡಿನವರ ಮುಂದೆ ಅಶಕ್ತರಾದ ಈ ಯೆಹೂದ್ಯರು ಮಾಡುವುದಾದರೂ ಏನು? ಇವರು ತಮ್ಮನ್ನೇ ಬಲಪಡಿಸಿಕೊಳ್ಳಬೇಕೆಂದು ಇರುವರೋ? ಬಲಿಯರ್ಪಿಸುವರೋ? ಈ ದಿನವೇ ಈ ಕೆಲಸವನ್ನು ಮಾಡಿಮುಗಿಸುವರೋ? ಸುಟ್ಟುಹೋದ ಪಟ್ಟಣದ ಬೂದಿಯ ರಾಶಿಯೊಳಗೆ ಹುದುಗಿಹೋದ ಕಲ್ಲುಗಳನ್ನು ಬದುಕಿಸುವರೋ?’ ಎಂದು ಹೇಳಿ ಯೆಹೂದ್ಯರನ್ನು ಪರಿಹಾಸ್ಯ ಮಾಡಿದನು.
ಅವನ ಬಳಿಯಲ್ಲೇ ನಿಂತಿದ್ದ ಅಮ್ಮೋನಿಯನಾದ ಟೋಬೀಯನು, “ಅವರು ಕಟ್ಟುವ ಕಲ್ಲು ಗೋಡೆಯ ಮೇಲೆ ನರಿ ಹಾರಿದರೆ ಅದು ಬಿದ್ದುಹೋಗುವುದು!” ಎಂದು ಅಣಕಿಸಿದನು.
“ನಮ್ಮ ದೇವರೇ ಆಲಿಸಿ: ಅವರು ನಮ್ಮನ್ನು ಎಷ್ಟು ಹೀಯಾಳಿಸುತ್ತಾರೆ! ಈ ನಿಂದೆಯನ್ನು ಅವರ ತಲೆಯ ಮೇಲೆಯೇ ಬರಮಾಡಿ. ಅವರು ದೇಶಭ್ರಷ್ಟರಾಗಿ ಸೂರೆಹೋಗುವಂತೆ ಮಾಡಿ.
ಅವರ ಅಪರಾಧವನ್ನು ಕ್ಷಮಿಸಬೇಡಿ. ನಿಮ್ಮೆದುರಿಗಿರುವ ಅವರ ಪಾಪವನ್ನು ಅಳಿಸಿಬಿಡಬೇಡಿ. ಏಕೆಂದರೆ ಕಟ್ಟುವವರ ಮುಂದೆಯೇ ಅವರು ನಿಮ್ಮನ್ನು ಕೆಣಕಿದ್ದಾರೆ,” ಎಂದು ನಾನು ಪ್ರಾರ್ಥಿಸಿದೆ.
ಇದಾದ ಮೇಲೆ ನಾವು ಕಟ್ಟುವ ಕೆಲಸವನ್ನು ಮುಂದುವರಿಸಿದೆವು. ಜನರು ಮನಸ್ಸುಮಾಡಿ ಅರ್ಧಗೋಡೆಯನ್ನು ಕಟ್ಟಿದರು.
ಸನ್ಬಲ್ಲಟನು, ಟೋಬೀಯನು, ಅರೇಬಿಯರು, ಅಮ್ಮೋನಿಯರು ಹಾಗು ಅಷ್ಡೋದಿನವರು ಜೆರುಸಲೇಮಿನ ಗೋಡೆಯ ದುರಸ್ತಿಕಾರ್ಯ ಮುಂದುವರಿದಿದೆ ಹಾಗು ಅದರ ಸಂದುಗಳು ಮತ್ತೆ ಮುಚ್ಚಿಕೊಳ್ಳುತ್ತಿವೆ ಎಂಬುದನ್ನು ಕೇಳಿದರು.
ಅವರಿಗೆ ಬಹುಕೋಪ ಬಂದಿತು. “ನಾವು ಒಟ್ಟಾಗಿ ಜೆರುಸಲೇಮಿನವರ ವಿರುದ್ಧ ಯುದ್ಧಕ್ಕೆ ಹೋಗಿ ಅವರನ್ನು ತಳಮಳಗೊಳಿಸೋಣ,” ಎಂದು ಒಳಸಂಚು ಮಾಡಿಕೊಂಡರು.
ನಾವಾದರೋ ನಮ್ಮ ದೇವರಿಗೆ ಮೊರೆಯಿಟ್ಟು ಆ ಜನರು ಬರುವ ದಾರಿಯಲ್ಲಿ ಹಗಲಿರುಳು ಕಾವಲಿಟ್ಟೆವು.
೧೦
ಇತ್ತ ಯೆಹೂದ್ಯರೇ, “ಹೊರೆಹೊರುವವರ ಬಲ ಕುಂದಿಹೋಯಿತು. ಧೂಳಿನ ರಾಶಿ ವಿಪರೀತ ಆಗಿದೆ; ಈ ಗೋಡೆಯನ್ನು ಕಟ್ಟುವುದು ನಮ್ಮಿಂದಾಗದು,” ಎಂದರು.
೧೧
ಅತ್ತ ನಮ್ಮ ವಿರೋಧಿಗಳು, “ಅವರಿಗೆ ತಿಳಿಯದೆ, ಗೋಚರವಾಗದೆ, ಫಕ್ಕನೆ ಅವರೊಳಗೆ ನುಗ್ಗಿ ಅವರನ್ನು ಕೊಂದು ಕೆಲಸವನ್ನು ನಿಲ್ಲಿಸಿಬಿಡೋಣ,” ಎಂದುಕೊಳ್ಳುತ್ತಿದ್ದರು.
೧೨
ಅವರ ನೆರೆಯೂರುಗಳಲ್ಲಿ ವಾಸಿಸುತ್ತಿದ್ದ ಯೆಹೂದ್ಯರು ಬಂದು, “ನೀವು ಯಾವ ಕಡೆಗೆ ತಿರುಗಿಕೊಂಡರೂ ಆ ಎಲ್ಲಾ ಕಡೆಗಳಿಂದ ನಮಗೆ ವಿರೋಧವಾಗಿ ಯುದ್ಧಕ್ಕೆ ಬರುತ್ತಾರೆ,” ಎಂದು ಪದೇ ಪದೇ ತಿಳಿಸುತ್ತಿದ್ದರು.
೧೩
ಆಗ ನಾನು ಜನರಿಗೆ, “ಕತ್ತಿ, ಬಿಲ್ಲು, ಬರ್ಜಿಗಳನ್ನು ಹಿಡಿದುಕೊಂಡು ಗೋಡೆಯ ಹಿಂದಣ ತಗ್ಗಾದ ಬಯಲುಗಳಲ್ಲಿ ಗೋತ್ರಗೋತ್ರಗಳಾಗಿ ನಿಲ್ಲಿ,” ಎಂದು ಆಜ್ಞಾಪಿಸಿದೆ.
೧೪
ಅವರನ್ನು ಸಂದರ್ಶಿಸಿ, ಅವರ ಮುಂದೆ ನಿಂತು, ಶ್ರೀಮಂತರನ್ನೂ ಅಧಿಕಾರಿಗಳನ್ನೂ ಉಳಿದ ಜನರನ್ನೂ ಸಂಬೋಧಿಸಿ, “ನಿಮ್ಮ ಹಗೆಗಳಿಗೆ ಹೆದರಬೇಡಿ; ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆದ ಸರ್ವೇಶ್ವರಸ್ವಾಮಿಯನ್ನು ಸ್ಮರಿಸಿಕೊಂಡು, ನಿಮ್ಮ ಸಹೋದರರಿಗಾಗಿ, ಮಡದಿಮಕ್ಕಳಿಗಾಗಿ ಹಾಗು ನಿಮ್ಮ ಮನೆಮಠಗಳಿಗಾಗಿ ಕಾದಾಡಿರಿ,” ಎಂದು ಹುರಿದುಂಬಿಸಿದೆ.
೧೫
ನಮ್ಮ ಶತ್ರುಗಳು ತಮ್ಮ ಹಂಚಿಕೆ ನಮಗೆ ಗೊತ್ತಾಯಿತೆಂದೂ ದೇವರು ಅದನ್ನು ವ್ಯರ್ಥಮಾಡಿದರೆಂದೂ ತಿಳಿದುಕೊಂಡರು. ನಮ್ಮನ್ನು ಬಿಟ್ಟುಹೋದರು; ನಾವೆಲ್ಲರು ನಮ್ಮ ನಮ್ಮ ಗೋಡೆಯ ಕೆಲಸಕ್ಕೆ ಮತ್ತೆ ಕೈಹಾಕಿದೆವು.
೧೬
ಅಂದಿನಿಂದ ನನ್ನ ಸ್ವಂತ ಆಳುಗಳಲ್ಲಿ ಅರ್ಧಮಂದಿ ಕಟ್ಟಡ ಕೆಲಸದಲ್ಲಿ ನಿರತರಾದರು. ಅರ್ಧಮಂದಿ ಕವಚವನ್ನು ಧರಿಸಿಕೊಂಡು ಬರ್ಜಿ, ಗುರಾಣಿ, ಬಿಲ್ಲುಗಳನ್ನು ಹಿಡಿದುಕೊಂಡು ನಿಂತರು. ಅದೇ ಪ್ರಕಾರ ಅಧಿಕಾರಿಗಳೂ ಗೋಡೆ ಕಟ್ಟುವ ಯೆಹೂದ್ಯರ ಹಿಂದೆ ನಿಂತರು.
೧೭
ಹೊರೆಹೊರುವವರೂ ಒಂದು ಕೈಯಿಂದ ಹೊರೆಹೊತ್ತು ಇನ್ನೊಂದು ಕೈಯಿಂದ ಈಟಿ ಹಿಡಿದುಕೊಳ್ಳುತ್ತ ಇದ್ದರು.
೧೮
ಕಟ್ಟುವವರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಕತ್ತಿಯನ್ನು ಸೊಂಟಕ್ಕೆ ಬಿಗಿದುಕೊಳ್ಳುತ್ತ ಇದ್ದನು. ನಾನಂತೂ ಕಹಳೆ ಊದುವವನೊಬ್ಬನನ್ನು ನನ್ನ ಬಳಿಯಲ್ಲೇ ಇರಿಸಿಕೊಂಡಿದ್ದೆ.
೧೯
ಶ್ರೀಮಂತರಿಗು, ಅಧಿಕಾರಿಗಳಿಗು ಹಾಗು ಉಳಿದ ಜನರಿಗು, “ನಾವು ಮಾಡುವ ಕೆಲಸ ದೊಡ್ಡದು, ಹಲವಾರು ಎಡೆಗಳಲ್ಲಿ ನಡೆಯುವಂಥದ್ದು; ನಾವು ಗೋಡೆಯ ನಿಮಿತ್ತ ಒಬ್ಬರಿಂದ ಒಬ್ಬರು ದೂರವಾಗಿರುತ್ತೇವೆ.
೨೦
ನಿಮಗೆ ಕಹಳೆಯ ಧ್ವನಿ ಕೇಳಿದಕೂಡಲೆ, ನಮ್ಮ ಬಳಿಗೆ ಕೂಡಿಬನ್ನಿರಿ. ನಮ್ಮ ದೇವರು ನಮ್ಮ ಪರವಾಗಿ ಯುದ್ಧಮಾಡುವರು,” ಎಂದು ಹೇಳಿದ್ದೆ.
೨೧
ಹೀಗೆ ನಾವು ಅರುಣೋದಯದಿಂದ ನಕ್ಷತ್ರಗಳು ಮೂಡುವವರೆಗೂ ಕೆಲಸಮಾಡುತ್ತಿದ್ದೆವು; ನನ್ನ ಸೇವಕರಲ್ಲಿ ಅರ್ಧಮಂದಿ ಬರ್ಜಿ ಹಿಡಿದುಕೊಂಡಿದ್ದರು.
೨೨
ಇದಲ್ಲದೆ, ನಾನು ಮೇಸ್ತ್ರಿಗಳಿಗೆ, “ನಿಮ್ಮ ಆಳುಗಳು ರಾತ್ರಿಯಲ್ಲಿ ನಮಗೆ ಕಾವಲಾಗಿರಲು ಹಾಗು ಹಗಲಿನಲ್ಲಿ ಕೆಲಸಮಾಡಲು ಸಾಧ್ಯವಾಗುವಂತೆ, ನೀವು ನಿಮ್ಮ ನಿಮ್ಮ ಆಳುಗಳೊಡನೆ ಜೆರುಸಲೇಮಿನಲ್ಲೇ ವಾಸಮಾಡಬೇಕು,” ಎಂದು ಅಪ್ಪಣೆಮಾಡಿದ್ದೆ.
೨೩
ನಾನು, ನನ್ನ ಸಹೋದರರು, ಸೇವಕರು ಹಾಗು ಮೈಗಾವಲಿನವರು ಸ್ನಾನ ಸಮಯದಲ್ಲಿ ಹೊರತು, ಬೇರೆ ಸಮಯದಲ್ಲಿ ನಮ್ಮ ಬಟ್ಟೆಗಳನ್ನು ತೆಗೆದುಹಾಕುತ್ತಿರಲಿಲ್ಲ.