೧ |
ಮಹಾಯಾಜಕನಾದ ಎಲ್ಯಾಷೀಬನೂ ಅವನ ಕುಟುಂಬದ ಯಾಜಕರೂ ಕುರಿಬಾಗಿಲನ್ನು ಕಟ್ಟಿ ಅದನ್ನು ಪ್ರತಿಷ್ಠಿಸಿ ಅದಕ್ಕೆ ಕದಗಳನ್ನು ಇಟ್ಟರು. ಅಲ್ಲಿಂದ ಹಮ್ಮೆಯಾ ಬುರುಜಿನವರೆಗೆ ಗೋಡೆಕಟ್ಟಿ ಅದನ್ನೂ ಪ್ರತಿಷ್ಠಿಸಿದರು. ಅಲ್ಲಿಂದ ಹನನೇಲ್ ಬುರುಜಿನವರೆಗೂ ಕಟ್ಟಿದರು. |
೨ |
ಅಲ್ಲಿಂದ ಆಚೆಗೆ ಕಟ್ಟುತ್ತಿದ್ದವರು ಜೆರಿಕೋವಿನವರು; ಆಚೆಗೆ ಇಮ್ರಿಯ ಮಗನಾದ ಜಕ್ಕೂರನು. |
೩ |
ಮೀನುಬಾಗಿಲನ್ನು ಕಟ್ಟಿದವರು ಹಸ್ಸೆನಾಹನ ಮನೆಯವರು. ಇವರು ಅದರ ಮೇಲೆ ತೊಲೆಗಳನ್ನಿಟ್ಟು ಅದಕ್ಕೆ ಕದ, ತಿರುಗಣಿ, ಅಗುಳಿಗಳನ್ನು ಹಚ್ಚಿದರು. |
೪ |
ಅಲ್ಲಿಂದ ಮುಂದಕ್ಕೆ ಗೋಡೆಯನ್ನು ದುರಸ್ತಿಮಾಡಿಸಿದವನು ಊರೀಯನ ಮಗನೂ ಹಕ್ಕೋಚನ ಮೊಮ್ಮಗನೂ ಆಗಿರುವ ಮೆರೇಮೋತ್; ಆಮೇಲೆ ಬೆರೆಕ್ಯನ ಮಗನೂ ಮೆಷೇಜಬೇಲನ ಮೊಮ್ಮಗನೂ ಆಗಿರುವ ಮೆಷುಲ್ಲಾಮ್; ಆಚೆಗೆ ಬಾನನ ಮಗ ಚಾದೋಕ್; ಮುಂದಕ್ಕೆ ತೆಕೋವದವರು. |
೫ |
ತೆಕೋವದ ಶ್ರೀಮಂತರಾದರೋ ತಮ್ಮ ಒಡೆಯರ ಸೇವೆಗಾಗಿ ಹೆಗಲನ್ನು ಕೊಡಲಿಲ್ಲ. |
೬ |
ಹಳೆಯದು ಎಂಬ ಬಾಗಿಲನ್ನು ದುರಸ್ತಿಮಾಡಿದವರು ಪಾಸೇಹನ ಮಗ ಯೋಯಾದನು ಹಾಗು ಬೆಸೋದ್ಯನ ಮಗ ಮೆಷುಲ್ಲಾಮನು. ಇವರು ಅದರ ಮೇಲೆ ತೊಲೆಗಳನ್ನಿಟ್ಟು ಅದಕ್ಕೆ ಕದ, ತಿರುಗಣಿ, ಅಗುಳಿಗಳನ್ನು ಹಚ್ಚಿದರು. |
೭ |
ಅಲ್ಲಿಂದ ನದಿಯಾಚೆಯ ರಾಜ್ಯಪಾಲನ ನ್ಯಾಯಸ್ಥಾನದವರೆಗೆ ಗಿಬ್ಯೋನಿನವನಾದ ಮೆಲೆಟ್ಯ, ಮೇರೋನೋತಿನವನಾದ ಯಾದೋನ್ ಇವರೂ ಗಿಬ್ಯೋನ್ ಮತ್ತು ಮಿಚ್ಚ ಊರುಗಳವರು ದುರಸ್ತಿಮಾಡಿದರು. |
೮ |
ಇವರ ಆಚೆಗೆ ಹರ್ಹಯನ ಮಗನಾದ ಅಕ್ಕಸಾಲಿಗರ ಉಜ್ಜೀಯೇಲ್; ಆಮೇಲೆ ಬುಕ್ಕಿಟ್ಟುಗಾರರ ಹನನ್ಯ; ಇವರು ಅಗಲಗೋಡೆಯೆನಿಸಿಕೊಳ್ಳುವ ಗೋಡೆಯ ಆಚೆಗಿರುವ ಜೆರುಸಲೇಮಿನ ಭಾಗವನ್ನು ಗೋಡೆಯೊಳಗೆ ಸೇರಿಸಲಿಲ್ಲ. |
೯ |
ಇದರ ಆಚೆಗೆ ಜೆರುಸಲೇಮಿನ ಅರೆನಾಡೊಡೆಯನೂ ಹೂರನ ಮಗನೂ ಆದ ರೆಫಾಯ. |
೧೦ |
ಇವನ ಮುಂದಕ್ಕೆ ಹರೂಮಫನ ಮಗ ಯೆದಾಯ; ಇವನು ತನ್ನ ಮನೆಯ ಎದುರಿಗಿರುವ ಗೋಡೆಯನ್ನು ದುರಸ್ತಿಮಾಡಿದನು. ಇವನ ಆಚೆಗೆ ಹಷಬ್ನೇಯನ ಮಗ ಹಟ್ಟೂಷ್, |
೧೧ |
ಗೋಡೆಯ ಇನ್ನೊಂದು ಭಾಗವನ್ನೂ ಒಲೆಬುರುಜನ್ನೂ ಸರಿಪಡಿಸಿದವರು ಹಾರೀಮನ ಮಗ ಮಲ್ಕೀಯನು ಹಾಗು ಪಹತ್ ಮೋವಾಬ್ಯನಾದ ಹಷೂಬನು. |
೧೨ |
ಇವನ ಸಮೀಪದಲ್ಲಿ ಗೋಡೆಯನ್ನು ದುರಸ್ತುಮಾಡಿದವರು ಜೆರುಸಲೇಮಿನ ಅರೆನಾಡೊಡೆಯನೂ ಹಲ್ಲೊಹೇಷನ ಮಗನೂ ಆದ ಶಲ್ಲೂಮನು ಹಾಗು ಅವನ ಕುಮಾರಿಯರು. |
೧೩ |
ಕಣಿವೆಯ ಬಾಗಿಲನ್ನು ಸರಿಪಡಿಸಿದವರು ಹಾನೂನನು ಹಾಗು ಜಾನೋಹ ಊರಿನವರು. ಇವರು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಕದ, ತಿರುಗಣಿ, ಅಗುಳಿಗಳನ್ನು ಹಚ್ಚಿ ಅಲ್ಲಿಂದ ತಿಪ್ಪೆಬಾಗಿಲಿನವರೆಗೂ ಸಾವಿರ ಮೊಳದ ಗೋಡೆಯನ್ನು ಕಟ್ಟಿದರು. |
೧೪ |
ತಿಪ್ಪೆಬಾಗಿಲನ್ನು ಸರಿಪಡಿಸಿದವನು ಬೇತಹಕ್ಕೆರೆಮಿನ ನಾಡೊಡೆಯನೂ ರೇಕಾಬನ ಮಗನೂ ಆದ ಮಲ್ಕೀಯನು; ಇವನು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಕದ, ತಿರುಗಣಿ, ಅಗುಳಿಗಳನ್ನು ಹಚ್ಚಿದನು. |
೧೫ |
ಬುಗ್ಗೆಬಾಗಿಲನ್ನು ದುರಸ್ತಿಪಡಿಸಿದವನು ಮಿಚ್ಪದ ನಾಡೊಡೆಯನೂ ಕೊಲ್ಹೋಜೆಯ ಮಗನೂ ಆದ ಶಲ್ಲೂನ್; ಇವನು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಮಾಳಿಗೆಯನ್ನು ಹಾಕಿ, ಕದ, ತಿರುಗಣಿ, ಅಗುಳಿಗಳನ್ನು ಹಚ್ಚಿ ದಾವೀದನಗರದಿಂದಿಳಿದು ಬರುವ ಸೋಪಾನಗಳ ಈಚೆ, ಅರಸನ ತೋಟದ ಬಳಿಯಲ್ಲಿರುವ ಶಿಲೋವ ಕೊಳದ ಗೋಡೆಯನ್ನು ಕಟ್ಟಿದನು. |
೧೬ |
ಇವನ ಆಚೆ ಅಂದರೆ, ದಾವೀದನ ಸಮಾಧಿಯ ಎದುರಿನಲ್ಲಿರುವ ಕೊಳ, ಸಿಪಾಯಿಗಳ ಠಾಣ, ಇವುಗಳವರೆಗೂ ದುರಸ್ತುಮಾಡಿದವನು ಬೇತ್ಚೂರಿನ ಅರೆನಾಡೊಡೆಯನೂ ಅಜ್ಬೂಕನ ಮಗನೂ ಆದ ನೆಹೆಮೀಯನು. |
೧೭ |
ಇವನ ಆಚೆ ದುರಸ್ತಿಕಾರ್ಯವನ್ನು ಕೈಗೊಂಡವರು ಲೇವಿಯರು. ಅವರಲ್ಲಿ ಮೊದಲು ಬಾನಿಯ ಮಗನಾದ ರೆಹೂಮ್, ಇವನ ಸಮೀಪದಲ್ಲಿ ತನ್ನ ನಾಡಿನವರೊಡನೆ ಕಟ್ಟುತ್ತಿದ್ದ ಕೆಯೀಲದ ಅರೆನಾಡೊಡೆಯನಾದ ಹಷಬ್ಯ ಇವರು. |
೧೮ |
ಇವರ ಆಚೆ, ಇವರ ಬಂಧುಗಳಲ್ಲಿ ಕೆಯೀಲದ ಎರಡನೆಯ ಅರೆನಾಡೊಡೆಯನೂ ಹೇನಾದಾದನ ಮಗನೂ ಆದ ಬಲ್ವೈ. |
೧೯ |
ಇವನ ಸಮೀಪದಲ್ಲಿ ಗೋಡೆಯ ಇನ್ನೊಂದು ಭಾಗವನ್ನು ಅಂದರೆ, ಗೋಡೆಯ ಮೂಲೆಯಲ್ಲಿರುವ ಆಯುಧಶಾಲೆಗೆ ಹೋಗುವ ಮೆಟ್ಟಲುಗಳ ಎದುರಿಗಿರುವ ಭಾಗವನ್ನು ಮಿಚ್ಪದ ಅಧಿಕಾರಿಯೂ ಯೇಷೂವನ ಮಗನೂ ಆದ ಏಜೆರನು ಸರಿಪಡಿಸಿದನು. |
೨೦ |
ಇವನ ಆಚೆ, ಗೋಡೆಯ ಇನ್ನೊಂದು ಭಾಗವನ್ನು ಅಂದರೆ, ಮೂಲೆಯಿಂದ ಮಹಾಯಾಜಕನಾದ ಎಲ್ಯಾಷೀಬನ ಮನೆಯ ಬಾಗಿಲಿನವರೆಗೆ, ಜಕ್ಕೈಯ ಮಗನಾದ ಬಾರೂಕನು ಆಸಕ್ತಿ ಇಂದ ಭದ್ರಪಡಿಸಿದನು. |
೨೧ |
ಇವನ ಆಚೆ, ಗೋಡೆಯ ಇನ್ನೊಂದು ಭಾಗವನ್ನು ಅಂದರೆ, ಎಲ್ಯಾಷೀಬನ ಮನೆಯ ಬಾಗಿಲಿನಿಂದ ಅದೇ ಮನೆಯ ಕೊನೆಯವರೆಗೆ, ಹಕ್ಕೋಚನ ಮೊಮ್ಮಗನೂ ಊರೀಯನ ಮಗನೂ ಆದ ಮೆರೇಮೋತನು ದುರಸ್ತಿಮಾಡಿಸಿದನು. |
೨೨ |
ಮುಂದಿನ ಭಾಗವನ್ನು ಕಟ್ಟಿದವರು ಜೋರ್ಡನ್ ನದಿಯ ಕಣಿವೆಯಲ್ಲಿ ವಾಸಿಸುತ್ತಿದ್ದ ಯಾಜಕರು. |
೨೩ |
ಇವರ ಆಚೆ, ಬೆನ್ಯಾಮೀನ್ ಹಷೂಬರು; ಇವರು ತಮ್ಮ ತಮ್ಮ ಮನೆಗಳಿಗೆ ಎದುರಾಗಿರುವ ಗೋಡೆಯನ್ನು ದುರಸ್ತಿಮಾಡಿಸಿದರು. ಇವರ ಆಚೆ, ಅನನ್ಯನ ಮೊಮ್ಮಗನೂ ಮಾಸೇಯನ ಮಗನೂ ಆದ ಅಜರ್ಯ: ಇವನು ತನ್ನ ಮನೆಯ ಹತ್ತಿರದಲ್ಲಿರುವ ಗೋಡೆಯನ್ನು ಸರಿಪಡಿಸಿದನು. |
೨೪ |
ಇವನ ಆಚೆ, ಅಜರ್ಯನ ಮನೆಯಿಂದ ಮೂಲೆಯವರೆಗಿರುವ ಗೋಡೆಯ ಇನ್ನೊಂದು ಭಾಗವನ್ನು ದುರಸ್ತಿಮಾಡಿದವನು ಹೇನಾದಾದನ ಮಗನಾದ ಬಿನ್ನೂಯ್. |
೨೫ |
ಸೆರೆಮನೆಯ ಅಂಗಳದ ಹತ್ತಿರ ಮೇಲಣ ಅರಮನೆಯ ಗೋಡೆಯನ್ನು ಮೀರಿ ಬರುವ ಮೂಲೆಬುರುಜಿನ ಎದುರಿನ ಭಾಗವನ್ನು ಊಜೈಯ ಮಗ ಪಾಲಾಲನೂ ಇವನ ಆಚೆಯಲ್ಲಿ ಪರೋಷನ ಮಗ ಪೆದಾಯನೂ ಸರಿಪಡಿಸಿದರು. |
೨೬ |
ಆ ಮೂಲೆಬುರುಜಿನ ಮತ್ತು ನೀರುಬಾಗಿಲಿನ ಪೂರ್ವದಿಕ್ಕಿಗಿರುವ ಓಫೇಲ್ ಗುಡ್ಡವು ದೇವಸ್ಥಾನ ಪರಿಚಾರಕರ ನಿವಾಸಸ್ಥಾನ. |
೨೭ |
ಆ ದೊಡ್ಡ ಮೂಲೆಬುರುಜಿನ ಎದುರಿನಿಂದ ಓಫೇಲ್ ಗೋಡೆಯವರೆಗಿರುವ ಗೋಡೆಯ ಇನ್ನೊಂದು ಭಾಗವನ್ನು ತೆಕೋವದವರು ದುರಸ್ತಿಮಾಡಿದರು. |
೨೮ |
ಯಾಜಕರು ಕುದುರೆಬಾಗಿಲಿನ ಆಚೆ ದಿಣ್ಣೆಯ ಮೇಲಿರುವ ಗೋಡೆಯಲ್ಲಿ ತಮ್ಮ ತಮ್ಮ ಮನೆಗಳ ಎದುರಿನ ಭಾಗಗಳನ್ನು ಸರಿಮಾಡಿದರು. |
೨೯ |
ಇವರ ಆಚೆ, ಇಮ್ಮೇರನ ಮಗ ಚಾದೋಕನು ತನ್ನ ಮನೆಯ ಎದುರಿಗಿರುವ ಗೋಡೆಯನ್ನು ದುರಸ್ತಿಮಾಡಿದನು. ಇವನ ಆಚೆ, ಪೂರ್ವದಿಕ್ಕಿನ ದ್ವಾರಪಾಲಕನಾದ ಶೆಕನ್ಯನ ಮಗ ಶೆಮಾಯನು. |
೩೦ |
ಇವನ ಆಚೆ ಶೆಲೆಮ್ಯನ ಮಗನಾದ ಹನನ್ಯ; ಗೋಡೆಯ ಇನ್ನೊಂದು ಭಾಗವನ್ನು ಸರಿಮಾಡಿದವನು ಚಾಲಫನ ಆರನೆಯ ಮಗನಾದ ಹಾನೂನ್; ಇವನ ಆಚೆ, ಅಂದರೆ ತನ್ನ ಸ್ವಂತ ಕೊಠಡಿಯ ಮುಂದೆ ಬೆರೆಕ್ಯನ ಮಗನಾದ ಮೆಷುಲ್ಲಾಮ್. |
೩೧ |
ಇನ್ನೂ ಮುಂದಕ್ಕೆ ಅಕ್ಕಸಾಲಿಗರ ಮಲ್ಕೀಯ; ಇವನು ದಂಡುಕೂಡುವ ಬಾಗಿಲಿನ ಎದುರಿನಲ್ಲಿರುವ ದೇವಸ್ಥಾನ ಪರಿಚಾರಕರ ಮತ್ತು ವರ್ತಕರ ಕೇರಿಯವರೆಗೂ ಮೂಲೆಯುಪ್ಪರಿಗೆಯವರೆಗೂ ದುರಸ್ತಿಮಾಡಿದನು. |
೩೨ |
ಈ ಮೂಲೆಯುಪ್ಪರಿಗೆಗೂ ಕುರಿಬಾಗಿಲಿಗೂ ನಡುವೆಯಿದ್ದ ಗೋಡೆಯನ್ನು ಸರಿಮಾಡಿದವರು ಅಕ್ಕಸಾಲಿಗರು ಹಾಗು ವರ್ತಕರು.
|
Kannada Bible (KNCL) 2016 |
No Data |