೧ |
ಹಕಲ್ಯನ ಮಗ ನೆಹೆಮೀಯನ ಮಾತುಗಳು: ಇಪ್ಪತ್ತನೆಯ ವರ್ಷದ ಮಾರ್ಗಶಿರ ಮಾಸದಲ್ಲಿ ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದೆ. |
೨ |
ಆಗ ನನ್ನ ಸಹೋದರರಲ್ಲಿ ಒಬ್ಬನಾದ ಹನಾನೀಯನು ಹಾಗೂ ಬೇರೆ ಕೆಲವು ಜನರು ಜುದೇಯದಿಂದ ನನ್ನ ಬಳಿಗೆ ಬಂದರು. ಸೆರೆಹೋದವರಿಂದ ತಪ್ಪಿಸಿಕೊಂಡ ಯೆಹೂದ್ಯರ ಮತ್ತು ಜೆರುಸಲೇಮಿನ ಸಮಾಚಾರವನ್ನು ನಾನು ಅವರಲ್ಲಿ ವಿಚಾರಿಸಿದೆ. |
೩ |
ಅವರು ನನಗೆ, “ಸೆರೆಯಿಂದ ತಪ್ಪಿಸಿಕೊಂಡು ಈಗ ಆ ನಾಡಿನಲ್ಲಿ ವಾಸಿಸುತ್ತಿರುವವರು ಮಹಾಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ. ಜೆರುಸಲೇಮಿನ ಪೌಳಿಗೋಡೆಯನ್ನು ಕೆಡವಲಾಗಿದೆ. ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ,” ಎಂದು ಹೇಳಿದರು. |
೪ |
ನಾನು ಈ ಸಮಾಚಾರವನ್ನು ಕೇಳಿದಾಗ ನೆಲಕಚ್ಚಿ ಕುಳಿತು ಅತ್ತೆ; ಹಲವಾರು ದಿನಗಳವರೆಗೆ ಶೋಕಿಸಿದೆ, ಉಪವಾಸವಿದ್ದೆ, ಪರಲೋಕ ದೇವರ ಮುಂದೆ ಪ್ರಾರ್ಥನೆ ಮಾಡುತ್ತಾ ಇದ್ದೆ. |
೫ |
ನನ್ನ ಪ್ರಾರ್ಥನೆಯಲ್ಲಿ, “ಹೇ ಸರ್ವೇಶ್ವರಾ, ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆಗಿರುವ ಪರಲೋಕದೇವರೇ, ನಿಮ್ಮನ್ನು ಪ್ರೀತಿಸಿ, ನಿಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ನೀವು ಮಾಡಿದ ಕೃಪಾವಾಗ್ದಾನಗಳನ್ನು ನೆರವೇರಿಸುವವರೇ, |
೬ |
ಕೃಪೆಮಾಡಿ ನನಗೆ ಕಿವಿಗೊಡಿ, ಕಟಾಕ್ಷಿಸಿ ನೋಡಿ; ನಿಮ್ಮ ದಾಸನ ಪ್ರಾರ್ಥನೆಯನ್ನು ಆಲಿಸಿ, ನಾನು ಈಗ ಹಗಲಿರುಳೂ ನಿಮ್ಮ ಸನ್ನಿಧಿಯಲ್ಲಿ ನಿಮ್ಮ ದಾಸರಾದ ಇಸ್ರಯೇಲರ ಪರವಾಗಿ ಪ್ರಾರ್ಥಿಸುತ್ತಾ ಇದ್ದೇನೆ; ಅವರು ನಿಮಗೆ ವಿರುದ್ಧ ಮಾಡಿದ ಪಾಪಗಳನ್ನು ಅರಿಕೆಮಡುತ್ತಾ ಇದ್ದೇನೆ; ನಾನೂ ನನ್ನ ಪೂರ್ವಜರೂ ಆ ಪಾಪಗಳಲ್ಲಿ ಪಾಲುಗಾರರು. |
೭ |
ನಾವು ನಿಮಗೆ ದ್ರೋಹಿಗಳಾಗಿ ನಡೆಯುತ್ತಾ ಬಂದೆವು; ನೀವು ನಿಮ್ಮ ದಾಸ ಮೋಶೆಯ ಮುಖಾಂತರ ಕೊಟ್ಟ ಆಜ್ಞಾವಿಧಿನ್ಯಾಯಗಳನ್ನು ನಾವು ಕೈಗೊಳ್ಳಲಿಲ್ಲ. |
೮ |
ನೀವು ಅವನ ಮುಖಾಂತರ, ‘ನೀವು ಅವಿಧೇಯರಾದರೆ ನಿಮ್ಮನ್ನು ಜನಾಂಗಗಳೊಳಗೆ ಚದರಿಸಿಬಿಡುವೆನು; |
೯ |
ನನಗೆ ಅಭಿಮುಖರಾಗಿ ನನ್ನ ಆಜ್ಞೆಗಳನ್ನು ಅನುಸರಿಸಿ ನಡೆದರೆ, ನಿಮ್ಮವರು ಆಕಾಶದ ಕೊನೆಯವರೆಗೆ ಒಯ್ಯಲ್ಪಟ್ಟರೂ ನಾನು ಅವರನ್ನು ಅಲ್ಲಿಂದ ಕೂಡಿಸಿ ನನ್ನ ನಾಮಸ್ಥಾಪನೆಗಾಗಿ ಆರಿಸಿದ ಸ್ಥಳಕ್ಕೆ ಮತ್ತೆ ಬರಮಾಡುವೆನು; ಎಂದು ಹೇಳಿದಿರಲ್ಲವೆ? ಆ ಮಾತನ್ನು ನೆನಪುಮಾಡಿಕೊಳ್ಳಿ. ಸ್ವಾಮೀ, |
೧೦ |
ಅವರು ನಿಮ್ಮ ದಾಸರು ಹಾಗೂ ನೀವು ನಿಮ್ಮ ಮಹಾಶಕ್ತಿ, ಭುಜಪರಾಕ್ರಮಗಳಿಂದ ವಿಮೋಚಿಸಿದ ನಿಮ್ಮ ಪ್ರಜೆಗಳೂ ಆಗಿರುತ್ತಾರಲ್ಲವೆ? |
೧೧ |
ಸ್ವಾಮೀ, ಕೃಪೆಮಾಡಿ; ನಿಮ್ಮ ದಾಸನಾದ ನನ್ನ ಪ್ರಾರ್ಥನೆಗೂ ನಿಮ್ಮ ನಾಮಸ್ಮರಣೆಯಲ್ಲಿ ಆನಂದಿಸುವ ನಿಮ್ಮ ಭಕ್ತರ ಪ್ರಾರ್ಥನೆಗೂ ಕಿವಿಗೊಡಿ. ನಿಮ್ಮ ದಾಸನಾದ ನಾನು ಈ ದಿನ ಈ ಮನುಷ್ಯನ ದಯೆಗೆ ಪಾತ್ರನಾಗಿ ಕೃತಾರ್ಥನಾಗುವಂತೆ ಅನುಗ್ರಹಿಸಿ,” ಎಂದು ಬೇಡಿಕೊಂಡೆನು.
|
Kannada Bible (KNCL) 2016 |
No Data |