English
A A A A A
×

ಕನ್ನಡ ಬೈಬಲ್ (KNCL) 2016

ಎಜ್ರನು ೯
ಇದಾದನಂತರ ಮುಖ್ಯಸ್ಥರು ನನ್ನ ಬಳಿಗೆ ಬಂದು, “ಕಾನಾನ್ಯರು, ಹಿತ್ತಿಯರು, ಪೆರಿಜ್ಜೀಯರು, ಯೆಬೂಸಿಯರು, ಅಮ್ಮೋನಿಯರು, ಮೋವಾಬ್ಯರು, ಈಜಿಪ್ಟರು, ಅಮೋರಿಯರು ಎಂಬ ಅನ್ಯದೇಶಗಳವರ ಪದ್ಧತಿಯನ್ನು ತೊರೆಯದೆ, ಅವರ ಅಸಹ್ಯಕಾರ್ಯಗಳನ್ನು ಅನುಸರಿಸಿ,
ಇಸ್ರಯೇಲರಲ್ಲಿ ಸಾಧಾರಣಜನರು, ಯಾಜಕರು, ಲೇವಿಯರು ತಮಗೆ ಹಾಗು ತಮ್ಮ ಗಂಡುಮಕ್ಕಳಿಗೆ ಅವರಿಂದ ಹೆಣ್ಣುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ದೇವಕುಲವು ಅನ್ಯದೇಶಗಳವರೊಡನೆ ಮಿಶ್ರವಾಗುತ್ತಿದೆ; ನಾಯಕರೇ, ಮುಖ್ಯಸ್ಥರೇ, ಈ ದ್ರೋಹಕ್ಕೆ ಮುಂದಾಳುಗಳಾಗುತ್ತಿದ್ದಾರೆ,” ಎಂದು ತಿಳಿಸಿದರು.
ಈ ಸಮಾಚಾರವನ್ನು ಕೇಳಿದೊಡನೆ ನಾನು ಸಿಟ್ಟಿನಿಂದ ಬಟ್ಟೆಗಳನ್ನೂ ಮೇಲಂಗಿಯನ್ನೂ ಹರಿದುಕೊಂಡು, ಸ್ತಬ್ಧನಾಗಿ ಕುಳಿತುಕೊಂಡೆ.
ಇಸ್ರಯೇಲ್ ದೇವರ ವಿಧಿಗಳ ಬಗ್ಗೆ ಗೌರವವಿದ್ದವರೆಲ್ಲರು ಸೆರೆಯಿಂದ ಬಂದವರ ದ್ರೋಹದ ಸಲುವಾಗಿ ಕಳವಳಗೊಂಡು, ನನ್ನನ್ನು ಕೂಡಿಕೊಂಡರು. ನಾನು ಸಂಧ್ಯಾನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಸ್ತಬ್ಧವಾಗಿ ಕುಳಿತುಕೊಂಡಿದ್ದೆ;
ಆಮೇಲೆ ದೇಹದಂಡನೆ ಮಾಡುವುದನ್ನು ಬಿಟ್ಟು, ಹರಿದ ಬಟ್ಟೆವಸ್ತ್ರಗಳಿಂದ ಕೂಡಿದವನಾಗಿಯೇ ಮೊಣಕಾಲೂರಿ, ನನ್ನ ದೇವರಾದ ಸರ್ವೇಶ್ವರನ ಕಡೆಗೆ ಕೈಗಳನ್ನೆತ್ತಿ ಹೀಗೆಂದು ಪ್ರಾರ್ಥಿಸಿದೆ:
“ನನ್ನ ದೇವರೇ, ನಾನು ಮನಗುಂದಿದವನು ಆಗಿದ್ದೇನೆ; ನಿಮ್ಮ ಕಡೆಗೆ ಮುಖವನ್ನು ಎತ್ತುವುದಕ್ಕೆ ನಾಚಿಕೊಳ್ಳುತ್ತೇನೆ. ನನ್ನ ದೇವರೇ, ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದಿವೆ; ನಮ್ಮ ಅಪರಾಧ ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ!
ನಾವು ನಮ್ಮ ಪಿತೃಗಳ ಕಾಲದಿಂದ ಇಂದಿನವರೆಗೂ ಮಹಾಪರಾಧಿಗಳೇ; ನಮ್ಮ ಪಾಪಗಳ ನಿಮಿತ್ತ ನಾವೂ ನಮ್ಮ ಅರಸರೂ ಯಾಜಕರೂ ಅನ್ಯದೇಶಗಳ ರಾಜರ ಕೈಗೆ ಸಿಕ್ಕಿಬಿದ್ದೆವು. ಈಗಿರುವಂತೆ, ಕತ್ತಿಗೂ ಸೆರೆಗೂ ಸುಲಿಗೆಗೂ ಅಪಮಾನಕ್ಕೂ ಗುರಿ ಆದೆವು.
ಆದರೂ ನಮ್ಮ ದೇವರಾದ ಸರ್ವೇಶ್ವರಾ, ಒಂದು ಕ್ಷಣ ನಮಗೆ ನೀವು ಪ್ರಸನ್ನರಾಗಿ ನಮ್ಮಲ್ಲಿ ಸ್ವಲ್ಪ ಜನರನ್ನಾದರೂ ರಕ್ಷಣೆಗಾಗಿ ಉಳಿಸಿ, ತಮ್ಮ ಪರಿಶುದ್ಧಸ್ಥಳದಲ್ಲಿ ಮೊಳೆಯುವಂತೆ, ನಮ್ಮನ್ನು ನೆಲೆಗೊಳಿಸಿ, ನಮ್ಮ ಕಣ್ಣುಗಳನ್ನು ಬೆಳಗಿಸಿ‌, ನಮ್ಮ ದಾಸತ್ವದಲ್ಲಿ ನಮಗೆ ಸ್ವಲ್ಪಮಟ್ಟಿಗೆ ನವಜೀವವನ್ನು ಅನುಗ್ರಹಿಸಿದಿರಿ.
ನಾವು ಗುಲಾಮರಾದರೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮನ್ನು ಕೈಬಿಡಲಿಲ್ಲ; ಹಾಳುಬಿದ್ದ ನಮ್ಮ ದೇವಾಲಯವನ್ನು ಪುನಃ ಕಟ್ಟಿ ಭದ್ರಪಡಿಸುವುದಕ್ಕಾಗಿ, ನಮಗೆ ನವಜೀವನ ಪ್ರಾಪ್ತವಾಗುವಂತೆ ಹಾಗು ಜುದೇಯದಲ್ಲೂ ಜೆರುಸಲೇಮಿನಲ್ಲೂ ನಮಗೆ ಅಭಯಾಶ್ರಯ ಸಿಕ್ಕುವಂತೆ, ಪರ್ಷಿಯ ರಾಜರ ಮುಂದೆ ನಮಗೆ ಕೃಪೆಯನ್ನು ಅನುಗ್ರಹಿಸಿದ್ದೀರಿ.
೧೦
ಇಷ್ಟು ಉಪಕಾರವನ್ನು ಪಡೆದ ನಾವು ಬೇರೆ ಏನನ್ನು ತಾನೆ ಅರಿಕೆಮಾಡಿಕೊಳ್ಳೋಣ! ನಮ್ಮ ದೇವರೇ, ನಿಮ್ಮ ಆಜ್ಞೆಗಳನ್ನು ಉಲ್ಲಂಘಿಸಿದ್ದೇವೆ, ಅಕಟಾ!
೧೧
ನೀವು ನಿಮ್ಮ ಸೇವಕರಾದ ಪ್ರವಾದಿಗಳ ಮುಖಾಂತರ ನಮಗೆ, ‘ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ನಾಡು ಅನ್ಯದೇಶಗಳವರ ಅಶುದ್ಧತ್ವದಿಂದಲೂ ಅವರ ವಿಗ್ರಹಗಳಿಂದಲೂ ಮಲಿನವಾಗಿದೆ. ಅದು ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಆ ವಿಗ್ರಹಗಳ ಅಸಹ್ಯತೆಯಿಂದ ತುಂಬಿದೆ.
೧೨
ಹೀಗಿರಲಾಗಿ, ನೀವು ನಿಮ್ಮ ಹೆಣ್ಣುಮಕ್ಕಳನ್ನು ಅವರ ಗಂಡುಮಕ್ಕಳಿಗೆ ಕೊಡಲೂಬಾರದು, ನಿಮ್ಮ ಗಂಡುಮಕ್ಕಳಿಗಾಗಿ ಅವರ ಹೆಣ್ಣುಮಕ್ಕಳನ್ನು ತೆಗೆದುಕೊಳ್ಳಲೂಬಾರದು. ಅವರಿಗೆ ಸುಖಕ್ಷೇಮಗಳನ್ನು ಎಂದಿಗೂ ಬಯಸಬಾರದು. ಈ ಪ್ರಕಾರ ನಡೆದರೆ, ನೀವು ಬಲಗೊಂಡು, ಆ ನಾಡಿನ ಸಮೃದ್ಧಿಯನ್ನು ಅನುಭವಿಸಿ ಅದನ್ನು ನಿಮ್ಮ ಸಂತಾನದವರಿಗೆ ಶಾಶ್ವತ ಸೊತ್ತನ್ನಾಗಿ ಬಿಡುವಿರಿ’ ಎಂದು ಹೇಳಿದಿರಲ್ಲವೆ?
೧೩
ನಮ್ಮ ದುಷ್ಕರ್ಮ ಹಾಗು ಮಹಾಪರಾಧಗಳ ನಿಮಿತ್ತ ಇಷ್ಟೆಲ್ಲಾ ಕೇಡು ಬಂದಿದ್ದರೂ, ನಮ್ಮ ದೇವರಾದ ನೀವು ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನ್ನು ದಂಡಿಸದೆ, ನಮ್ಮಲ್ಲಿ ಇಷ್ಟುಮಂದಿಯನ್ನು ಉಳಿಸಿದ್ದೀರಿ;
೧೪
ಹೀಗಿರುವಲ್ಲಿ, ನಾವು ಪುನಃ ನಿಮ್ಮ ಆಜ್ಞೆಗಳನ್ನು ಮೀರಿ ವಿಗ್ರಹಾರಾಧಕರಾದ ಈ ಜನರ ಸಂಗಡ ವಿವಾಹ ಸಂಬಂಧ ಬೆಳೆಸುವುದು ಯೋಗ್ಯವೇ? ಹಾಗೆ ಮಾಡಿದರೆ, ನೀವು ನಮ್ಮ ಮೇಲೆ ರೌದ್ರಾವೇಶವುಳ್ಳವರಾಗಿ, ಯಾರೂ ತಪ್ಪಿಸಿಕೊಳ್ಳದಂತೆ ನಮ್ಮನ್ನು ಮುಗಿಸಿಬಿಡುವಿರಲ್ಲವೇ?
೧೫
ಸರ್ವೇಶ್ವರಾ, ಇಸ್ರಯೇಲ್ ದೇವರೇ, ಈಗಿರುವಷ್ಟು ಜನರನ್ನು ನಮ್ಮಲ್ಲಿ ಉಳಿಸಿದ್ದರಿಂದ ನೀವು ಧರ್ಮಸ್ವರೂಪರೆಂದು ಸ್ಪಷ್ಟವಾಯಿತು. ನಾವಾದರೋ ನಿಮ್ಮ ದೃಷ್ಟಿಯಲ್ಲಿ ಅಪರಾಧಿಗಳು, ಈ ನಮ್ಮ ದುಷ್ಕೃತ್ಯದ ಸಲುವಾಗಿ ನಿಮ್ಮೆದುರಿನಲ್ಲಿ ನಿಲ್ಲಲಾರೆವು.”