೧ |
ಆಗ ಪ್ರವಾದಿಗಳಾದ ಹಗ್ಗಾಯ ಮತ್ತು ಇದ್ದೋವಿನ ಮಗ ಜೆಕರ್ಯ ಎಂಬವರು ಇಸ್ರಯೇಲ್ ದೇವರಿಂದ ಪ್ರೇರಿತರಾಗಿ, ಅವರ ಹೆಸರಿನಲ್ಲಿ ಜುದೇಯದ ಮತ್ತು ಜೆರುಸಲೇಮಿನ ಯೆಹೂದ್ಯರನ್ನು ಪ್ರಬೋಧಿಸಿದರು. |
೨ |
ಅದನ್ನು ಕೇಳಿದ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲ್ ಯೋಚಾದಾಕನ ಮಗ ಯೇಷೂವ ಇವರು ಜೆರುಸಲೇಮಿನ ದೇವಾಲಯವನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿದರು. ದೇವಪ್ರವಾದಿಗಳು ಅವರೊಡನೆ ಇದ್ದು ಅವರಿಗೆ ಸಹಾಯಮಾಡುತ್ತ ಇದ್ದರು. |
೩ |
ಅದೇ ಸಮಯಕ್ಕೆ, ನದಿಯ ಈಚೆಯ ಪ್ರದೇಶಗಳ ಅಧಿಪತಿಯಾಗಿದ್ದ ತತ್ತನೈಯು ಹಾಗು ಶತರ್ಬೋಜೆನೈಯು ಮತ್ತು ಇವರ ಜೊತೆಗಾರರು ಅವರ ಬಳಿಗೆ ಬಂದು, “ಈ ಅಸ್ತಿವಾರವನ್ನು ಸರಿಪಡಿಸಿ ಈ ಆಲಯವನ್ನು ಕಟ್ಟುವುದಕ್ಕೆ ನಿಮಗೆ ಅಪ್ಪಣೆಕೊಟ್ಟವರು ಯಾರು?” ಎಂದು ಕೇಳಿದರು. |
೪ |
ಅಲ್ಲದೆ, ಕಟ್ಟಡವನ್ನು ಕಟ್ಟಿಸುವವರ ಹೆಸರುಗಳಾವುದೆಂದು ವಿಚಾರಿಸಿದರು. |
೫ |
ಆದರೆ ದೇವರ ಕೃಪಾಹಸ್ತವು ಯೆಹೂದ್ಯರ ಹಿರಿಯರ ಮೇಲೆ ಇತ್ತು. ಆದುದರಿಂದ ವಿಚಾರಿಸುವುದಕ್ಕೆ ಬಂದವರು, ಅವರಿಗೆ ಅಡ್ಡಮಾಡದೆ, “ತಾವು ಇದರ ವಿಷಯವಾಗಿ ದಾರ್ಯಾವೆಷನಿಗೆ ಸಮಾಚಾರ ಮುಟ್ಟಿಸಿ ಅನಂತರ ಉತ್ತರವನ್ನು ಬರೆದು ಕಳುಹಿಸುತ್ತೇವೆ,” ಎಂದು ಹೇಳಿ ಹೊರಟುಹೋದರು. |
೬ |
ನದಿಯ ಈಚೆಯ ಪ್ರದೇಶಗಳ ಅಧಿಪತಿಯಾದ ತತ್ತೆನೈಯ ಮತ್ತು ಶೆತರ್ಬೋಜೆನೈಯ ಹಾಗು ನದಿಯ ಈಚೆಯಲ್ಲಿ ಅವನ ಜೊತೆಗಾರರಾದ ಅಪರ್ಸತ್ಕಾಯರು ಅರಸ ದಾರ್ಯಾವೆಷನಿಗೆ ಪತ್ರ ಕಳುಹಿಸಿದರು. |
೭ |
ಅವರು ಅರಸನಿಗೆ ಕಳುಹಿಸಿದ ಪತ್ರದ ಪ್ರತಿ ಹೀಗಿದೆ: |
೮ |
“ದಾರ್ಯಾವೆಷ ರಾಜರಿಗೆ ಸರ್ವಥಾ ಕ್ಷೇಮ! ನಾವು ಜುದೇಯ ನಾಡಿಗೆ ಹೋಗಿ ಮಹೋನ್ನತ ದೇವರ ಆಲಯವನ್ನು ನೋಡಿದೆವು. ಇದನ್ನು ರಾಜರಿಗೆ ಈ ಮೂಲಕ ಅರಿಕೆಮಾಡುತ್ತಿದ್ದೇವೆ: ಆ ಆಲಯವನ್ನು ದೊಡ್ಡ ಕಲ್ಲುಗಳಿಂದ ಕಟ್ಟುತ್ತಿದ್ದಾರೆ. ಗೋಡೆಗಳ ಮೇಲೆ ತೊಲೆಗಳನ್ನಿಡುತ್ತಿದ್ದಾರೆ. ಈ ಕೆಲಸ ಜಾಗರೂಕತೆಯಿಂದ ಮುಂದುವರೆದಿದೆ; ಅವರ ಶ್ರಮೆಯಿಂದ ವೇಗವಾಗಿ ಬೆಳೆಯುತ್ತಿದೆ. |
೯ |
ಅಲ್ಲಿನ ಹಿರಿಯರನ್ನು, ‘ಈ ಅಸ್ತಿವಾರವನ್ನು ಹಾಕಿ ಈ ಆಲಯವನ್ನು ಕಟ್ಟುವುದಕ್ಕೆ ನಿಮಗೆ ಅಪ್ಪಣೆ ಕೊಟ್ಟವರು ಯಾರು?’ ಎಂದು ವಿಚಾರ ಮಾಡಿದೆವು. |
೧೦ |
ಮತ್ತು ಅವರಲ್ಲಿ ಮುಖ್ಯಸ್ಥರು ಇಂಥಿಂಥವರೆಂದು ತಮಗೆ ಬರೆದು ತಿಳಿಸುವುದಕ್ಕಾಗಿ ಅವರ ಹೆಸರುಗಳನ್ನು ಕೇಳಿದೆವು. |
೧೧ |
ಅವರು ನಮಗೆ, ನಾವು ಪರಲೋಕ ಭೂಲೋಕಗಳ ದೇವರ ದಾಸರು. ಅನೇಕಾನೇಕ ವರ್ಷಗಳ ಹಿಂದೆ ಕಟ್ಟಿದ್ದ ಆಲಯವನ್ನು ತಿರುಗಿ ಕಟ್ಟುತ್ತಿದ್ದೇವೆ. ಇಸ್ರಯೇಲರ ಒಬ್ಬ ಮಹಾರಾಜನು ಇದನ್ನು ಕಟ್ಟಿಮುಗಿಸಿದ್ದನು. |
೧೨ |
ಆದರೆ ನಮ್ಮ ಪೂರ್ವಿಕರು ಪರಲೋಕ ದೇವರನ್ನು ರೇಗಿಸಿದ್ದರಿಂದ ಆ ದೇವರು ಅವರನ್ನು ಬಾಬಿಲೋನಿನ ಕಸ್ದೀಯ ರಾಜನಾದ ನೆಬೂಕದ್ನೆಚ್ಚರನ ಕೈಗೆ ಒಪ್ಪಿಸಿಕೊಟ್ಟರು. ಅವನು ಈ ಆಲಯವನ್ನು ಹಾಳುಮಾಡಿ, ಜನರನ್ನು ಸೆರೆಹಿಡಿದು ಬಾಬಿಲೋನಿಗೆ ಒಯ್ದನು. |
೧೩ |
ಆದರೆ ಬಾಬಿಲೋನಿನ ಅರಸ ಸೈರಸನು ತನ್ನ ಆಳ್ವಿಕೆಯ ಮೊದಲನೆಯ ವರ್ಷದಲ್ಲೆ ಈ ದೇವಾಲಯವನ್ನು ಕಟ್ಟುವುದಕ್ಕೆ ಅಪ್ಪಣೆಕೊಟ್ಟನು. |
೧೪ |
ಅದು ಮಾತ್ರವಲ್ಲ, ನೆಬೂಕದ್ನೆಚ್ಚರನು ಜೆರುಸಲೇಮಿನ ದೇವಾಲಯದಿಂದ ತೆಗೆದುಕೊಂಡು ಹೋಗಿ ಬಾಬಿಲೋನಿನ ದೇವಾಲಯದಲ್ಲಿಟ್ಟಿದ್ದ ಬೆಳ್ಳಿಬಂಗಾರದ ದೇವಸ್ಥಾನ ಪಾತ್ರೆಗಳನ್ನು ಅಲ್ಲಿಂದ ತೆಗೆಯಿಸಿ, ತಾನು ರಾಜ್ಯಪಾಲನೆಗಾಗಿ ನೇಮಿಸಿದ್ದ ಶೆಷ್ಬಚ್ಚರನೆಂಬವನ ವಶಕ್ಕೆ ಕೊಟ್ಟನು. |
೧೫ |
ಅವನಿಗೆ, ‘ಈ ಸಾಮಗ್ರಿಗಳನ್ನು ಜೆರುಸಲೇಮಿನ ದೇವಾಲಯದಲ್ಲಿಡುವುದಕ್ಕಾಗಿ ತೆಗೆದುಕೊಂಡು ಹೋಗಿ ಆ ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟಿಸು,’ ಎಂದು ಆಜ್ಞಾಪಿಸಿದನು. |
೧೬ |
ಆಗ ಆ ಶೆಷ್ಬಚ್ಚರನು ಬಂದು ಜೆರುಸಲೇಮಿನ ದೇವಾಲಯದ ಅಸ್ತಿವಾರವನ್ನು ಹಾಕಿದನು. ಅಂದಿನಿಂದ ಇಂದಿನವರೆಗೂ ಕಟ್ಟುವ ಕೆಲಸ ನಡೆಯುತ್ತಾ ಇದೆ. ಇನ್ನೂ ಮುಗಿಯಲಿಲ್ಲ. |
೧೭ |
“ಅರಸರಿಗೆ ಸರಿತೋರುವುದಾದರೆ, ಜೆರುಸಲೇಮಿನ ಈ ದೇವಾಲಯವನ್ನು ಮರಳಿ ಕಟ್ಟುವುದಕ್ಕೆ ಅರಸ ಸೈರಸನ ಅಪ್ಪಣೆ ದೊರಕಿದ್ದು ಸತ್ಯವೋ ಎಂಬುದರ ಬಗ್ಗೆ ಬಾಬಿಲೋನಿನ ರಾಜಭಂಡಾರದಲ್ಲಿ ಹುಡುಕಿನೋಡಬೇಕು. ಈ ಸಂಗತಿಯನ್ನು ಕುರಿತು ರಾಜರ ಚಿತ್ತವೇನೆಂಬುದು ನಮಗೆ ತಿಳಿಸೋಣವಾಗಲಿ,” ಎಂಬುದಾಗಿ ಉತ್ತರಕೊಟ್ಟರು.
|
Kannada Bible (KNCL) 2016 |
No Data |