೧ |
ಇದಲ್ಲದೆ, ಸೊಲೊಮೋನನು ತಾಮ್ರದ ಬಲಿಪೀಠವನ್ನು ಮಾಡಿಸಿದನು. ಅದರ ಉದ್ದ ಒಂಬತ್ತು ಮೀಟರ್, ಅಗಲ ಒಂಬತ್ತು ಮೀಟರ್, ಎತ್ತರ 4:5 ಮೀಟರ್, |
೨ |
ಅನಂತರ ಅವನು ‘ಕಂಚಿನ ಕಡಲು’ ಎನಿಸಿಕೊಳ್ಳುವ ಎರಕದ ಒಂದು ದೊಡ್ಡ ಪಾತ್ರೆಯನ್ನು ಮಾಡಿಸಿದನು. ಅದರ ಬಾಯಿ ಚಕ್ರಾಕಾರವಾಗಿಯೂ ಅಂಚಿನಿಂದ ಅಂಚಿಗೆ 4:4 ಮೀಟರ್ ಇತ್ತು. ಅದರ ಎತ್ತರ 2:2 ಮೀಟರ್, ಸುತ್ತಳತೆ 13:2 ಮೀಟರ್, |
೩ |
ಅದನ್ನು ಎರಕಹೊಯ್ಯುವಾಗ ಅದರ (ಅಂಚಿನ) ಕೆಳಗೆ ಸುತ್ತಲೂ ಮೊಳಕ್ಕೆ ಹತ್ತರಂತೆ ಹೋರಿಗಳ ಚಿತ್ರಗಳನ್ನು ಎರಡು ಸಾಲಾಗಿ ಎರಕ ಹೊಯ್ಸಿದನು. |
೪ |
ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ ಮೂರು ಪಶ್ಚಿಮ ದಿಕ್ಕಿಗೂ ಮೂರು ದಕ್ಷಿಣ ದಿಕ್ಕಿಗೂ ಮೂರು ಪೂರ್ವ ದಿಕ್ಕಿಗೂ ಮುಖ ಮಾಡಿಕೊಂಡಿದ್ದವು. ಕಂಚಿನ ಕಡಲು ಅವುಗಳ ಬೆನ್ನಿನ ಮೇಲಿತ್ತು. ಅವುಗಳ ಹಿಂಭಾಗವು ಒಳಗಡೆಗಿತ್ತು. |
೫ |
ಆ ಪಾತ್ರೆಯ ತಗಡು ನಾಲ್ಕು ಬೆರಳು ದಪ್ಪವಾಗಿತ್ತು. ಅದರ ಅಂಚು ಕಮಲಾಕಾರದ ಬಟ್ಟಲನ್ನು ಹೋಲುತ್ತಿತ್ತು. ಅದು ಅರವತ್ತು ಸಾವಿರ ಲೀಟರ್ ನೀರನ್ನು ಹಿಡಿಯುತ್ತಿತ್ತು. |
೬ |
ಇದಲ್ಲದೆ ಅವನು ಹತ್ತು ನೀರಿನ ಬಾನೆಗಳನ್ನು ಮಾಡಿಸಿ ದಹನಬಲಿ ಸಮರ್ಪಣೆಯ ಸಾಮಾನುಗಳನ್ನು ತೊಳೆದು ಶುದ್ಧಮಾಡುವುದಕ್ಕಾಗಿ ಐದನ್ನು ಬಲಗಡೆಯಲ್ಲಿಯೂ ಐದನ್ನು ಎಡಗಡೆಯಲ್ಲಿಯೂ ಇಡಿಸಿದನು; ಕಡಲು ಎನಿಸಿಕೊಳ್ಳುವ ಪಾತ್ರೆ ಯಾಜಕರ ಸ್ನಾನಕ್ಕಾಗಿ ಇತ್ತು. |
೭ |
ಅದೂ ಅಲ್ಲದೆ ನೇಮಕವಾದ ಮಾದರಿಯಂತೆ ಬಂಗಾರದ ಹತ್ತು ದೀಪಸ್ತಂಭಗಳನ್ನು ಮಾಡಿಸಿ, ಐದನ್ನು ದೇವಾಲಯದೊಳಗೆ ಬಲಗಡೆಯಲ್ಲೂ ಐದನ್ನು ಎಡಗಡೆಯಲ್ಲೂ ಇಡಿಸಿದನು. |
೮ |
ಹತ್ತು ಮೇಜುಗಳನ್ನು ಮಾಡಿಸಿ ದೇವಾಲಯದೊಳಗೆ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇಡಿಸಿ ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು. |
೯ |
ಮತ್ತೆ, ಯಾಜಕರ ಪ್ರಾಕಾರವನ್ನೂ ಮಹಾಪ್ರಾಕಾರವನ್ನೂ ಮಾಡಿಸಿ ಮಹಾಪ್ರಾಕಾರಕ್ಕೆ ಬಾಗಿಲುಗಳನ್ನೂ ಇಟ್ಟನು. ಅವುಗಳ ಕದಗಳನ್ನು ಕಂಚಿನ ತಗಡಿನಿಂದ ಹೊದಿಸಿದನು. |
೧೦ |
ಕಡಲು ಎನಿಸಿಕೊಳ್ಳುವ ಪಾತ್ರೆಯನ್ನು ದೇವಾಲಯದ ಬಲಗಡೆಯಲ್ಲಿ ಅಂದರೆ, ಪ್ರಾಕಾರದ ಆಗ್ನೇಯ ದಿಕ್ಕಿನಲ್ಲಿ ಇರಿಸಿದನು. |
೧೧ |
ಇದಲ್ಲದೆ, ಹೂರಾಮನು ಹಂಡೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಈ ಹೂರಾಮನು ಸೊಲೊಮೋನನ ಅಪ್ಪಣೆಯಂತೆ ದೇವಾಲಯಕ್ಕಾಗಿ ಮಾಡಿದ ಸಾಮಾನುಗಳು ಇವು: |
೧೨ |
ಎರಡು ಕಂಬಗಳು, ಅವುಗಳ ಮೇಲಣ ಕುಂಭಾಕಾರದ ಎರಡು ತಲೆಗಳು, ಕುಂಭಗಳ ಮೇಲೆ ಹಾಕುವುದಕ್ಕಾಗಿ ಎರಡು ಜಾಲರಿಗಳು, |
೧೩ |
ಕಂಬಗಳ ತುದಿಯಲ್ಲಿರುವ ಕುಂಭಗಳ ಜಾಲರಿಗಳ ಮೇಲೆ ಎರಡೆರಡು ಸಾಲಾಗಿ ಸಿಕ್ಕಿಸುವುದಕ್ಕಾಗಿ ತಾಮ್ರದ ನಾನೂರು ದಾಳಿಂಬೆ ಹಣ್ಣುಗಳು, ಪೀಠಗಳು, |
೧೪ |
ಅವುಗಳ ಮೇಲಣ ಬಾನೆಗಳು, ಕಡಲಕೊಳ ಎನಿಸಿಕೊಳ್ಳುವ ಎರಕದ ಪಾತ್ರೆ, |
೧೫ |
ಅದನ್ನು ಹೊರುವ ಹನ್ನೆರಡು ಎರಕದ ಹೋರಿಗಳು, |
೧೬ |
ಹಂಡೆ, ಸಲಿಕೆ ಹಾಗೂ ಮುಳ್ಳು, ಹೀಗೆ ಹೂರಾಮಾಬೀಮನು ಅರಸ ಸೊಲೊಮೋನನ ಅಪ್ಪಣೆಯ ಮೇರೆಗೆ ಸರ್ವೇಶ್ವರನ ಆಲಯಕ್ಕಾಗಿ ಅದರ ಎಲ್ಲಾ ಸಾಮಾನುಗಳನ್ನು ಒಪ್ಪಹಾಕಿದ ಕಂಚಿನಿಂದ ಮಾಡಿ ಮುಗಿಸಿದನು. |
೧೭ |
ಅರಸನು ಜೋರ್ಡನ್ ತಗ್ಗಿನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ಮಧ್ಯದಲ್ಲಿರುವ ಕುಲುಮೆಯಲ್ಲಿ ಎರಕ ಹೊಯ್ಸಿದನು. |
೧೮ |
ಸೊಲೊಮೋನನು ಮಾಡಿಸಿದ ಸಾಮಾನುಗಳು ಅನೇಕವಾಗಿದ್ದರಿಂದ ಅವುಗಳ ತಾಮ್ರದ ತೂಕ ಎಷ್ಟೆಂಬುದು ಗೊತ್ತಾಗದೆ ಹೋಯಿತು. |
೧೯ |
ಅವನು ದೇವಾಲಯಕ್ಕಾಗಿ ಮಾಡಿಸಿದ ಒಳಗಿನ ಸಾಮಗ್ರಿ ಇವು: ಬಂಗಾರದ ಧೂಪವೇದಿ, ನೈವೇದ್ಯವಾದ ರೊಟ್ಟಿಗಳನ್ನಿಡತಕ್ಕ ಮೇಜುಗಳು, |
೨೦ |
ನಿಯಮದ ಪ್ರಕಾರ ಮಹಾಪರಿಶುದ್ಧ ಸ್ಥಳದ ಮುಂದೆ ಉರಿಯುತ್ತಿರುವುದಕ್ಕಾಗಿ ಪುಷ್ಪಾಲಂಕಾರವುಳ್ಳ ಬಂಗಾರದ ದೀಪಸ್ತಂಭಗಳು, |
೨೧ |
ಉತ್ಕೃಷ್ಟವಾದ ಬಂಗಾರದಿಂದ ಮಾಡಿದ ಅವುಗಳ ಹಣತೆ, ತಂಡಸ, |
೨೨ |
ಚೊಕ್ಕ ಬಂಗಾರದ ಕತ್ತರಿ, ಬೋಗುಣಿ, ಧೂಪಾರತಿ, ಅಗ್ಗಿಷ್ಟಿಕೆ, ದೇವಾಲಯದ ಮಹಾಪರಿಶುದ್ಧ ಸ್ಥಳದೊಳಗಿನ ಬಾಗಿಲಿನ ಬಂಗಾರದ ಕದಗಳು, ಪರಿಶುದ್ಧ ಸ್ಥಳದ ಬಂಗಾರದ ಕದಗಳು.
|
Kannada Bible (KNCL) 2016 |
No Data |