೧ |
ನಾಡಿನ ಜನರು ಯೋಷೀಯನ ಮಗ ಯೆಹೋವಾಹಾಜನನ್ನು ಅವನ ತಂದೆಗೆ ಬದಲಾಗಿ, ಜೆರುಸಲೇಮಿನಲ್ಲಿ ಅರಸನನ್ನಾಗಿ ಮಾಡಿದರು. |
೨ |
ಯೆಹೋವಾಹಾಜನು ಪಟ್ಟಕ್ಕೆ ಬಂದಾಗ ಇಪ್ಪತ್ತಮೂರು ವರ್ಷದವನಾಗಿದ್ದನು; ಅವನು ಜೆರುಸಲೇಮಿನಲ್ಲಿ ಮೂರು ತಿಂಗಳು ಆಳಿದನು. |
೩ |
ಈಜಿಪ್ಟಿನ ರಾಜನು ಜೆರುಸಲೇಮಿಗೆ ಬಂದು ಅವನನ್ನು ಪಟ್ಟದಿಂದ ತೆಗೆದುಹಾಕಿ, ಯೆಹೂದ್ಯರು ತನಗೆ 3400 ಕಿಲೋಗ್ರಾಂ ಬೆಳ್ಳಿಯನ್ನೂ 34 ಕಿಲೋಗ್ರಾಂ ಬಂಗಾರವನ್ನೂ ದಂಡ ತೆರುವಂತೆ ಮಾಡಿದನು. |
೪ |
ಈಜಿಪ್ಟಿನ ರಾಜ ನೆಕೋವನು ಯೆಹೋವಾಹಾಜನ ಸಹೋದರನಾದ ಎಲ್ಯಾಕೀಮನನ್ನು ಜುದೇಯದ ಮತ್ತು ಜೆರುಸಲೇಮಿನ ಅರಸನನ್ನಾಗಿ ನೇಮಿಸಿ ಅವನಿಗೆ ಯೆಹೋಯಾಕೀಮನೆಂಬ ಹೆಸರಿಟ್ಟನು; ಮತ್ತು ಅವನ ಸಹೋದರನಾದ ಯೆಹೋವಾಹಾಜನನ್ನು ಈಜಿಪ್ಟ್ ದೇಶಕ್ಕೆ ಕರೆದುಕೊಂಡು ಹೋದನು. |
೫ |
ಯೆಹೋಯಾಕೀಮನು ಅರಸನಾದಾಗ ಅವನಿಗೆ ಇಪ್ಪತ್ತೈದು ವರ್ಷ ವಯಸ್ಸು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನು ತನ್ನ ದೇವರಾದ ಸರ್ವೇಶ್ವರನ ಚಿತ್ತಕ್ಕೆ ವಿರುದ್ಧ ನಡೆದನು. |
೬ |
ಬಾಬಿಲೋನಿನ ರಾಜ ನೆಬೂಕದ್ನೆಚ್ಚರನು ಅವನ ಮೇಲೆ ಯುದ್ಧಕ್ಕೆ ಬಂದು ಬಾಬಿಲೋನಿಗೆ ಕೊಂಡೊಯ್ಯುವುದಕ್ಕಾಗಿ ಅವನಿಗೆ ಬೇಡಿಹಾಕಿದನು. |
೭ |
ಸರ್ವೇಶ್ವರನ ಆಲಯದ ಹಲವು ಸಾಮಾಗ್ರಿಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗಿ ತನ್ನ ದೇವಾಲಯದಲ್ಲಿಟ್ಟನು. |
೮ |
ಯೆಹೋಯಾಕೀಮನ ಉಳಿದ ಚರಿತ್ರೆ ಅವನು ನಡಿಸಿದ ಅಸಹ್ಯಕೃತ್ಯಗಳು ಹಾಗು ಅವನಲ್ಲಿ ಕಂಡುಬಂದದ್ದೆಲ್ಲವು ಇಸ್ರಯೇಲರ ಮತ್ತು ಯೆಹೂದ್ಯರ ರಾಜಗ್ರಂಥದಲ್ಲಿ ಬರೆದಿರುತ್ತವೆ. ಅವನಿಗೆ ಬದಲಾಗಿ ಅವನ ಮಗ ಯೆಹೋಯಾಕೀನನು ಅರಸನಾದನು. |
೯ |
ಯೆಹೋಯಾಕೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸ ಆಳಿದನು. ಅವನು ಸರ್ವೇಶ್ವರನ ಚಿತ್ತಕ್ಕೆ ವಿರುದ್ಧವಾಗಿ ನಡೆದನು. |
೧೦ |
ನೆಬೂಕದ್ನೆಚ್ಚರನು ವರ್ಷಾರಂಭದಲ್ಲಿ ಅವನನ್ನೂ ದೇವಾಲಯದ ಮೌಲ್ಯವಸ್ತುಗಳನ್ನು ಬಾಬಿಲೋನಿಗೆ ತರಿಸಿಕೊಂಡು, ಅವನ ಸಹೋದರನಾದ ಚಿದ್ಕೀಯನನ್ನು ಜುದೇಯದ ಮತ್ತು ಜೆರುಸಲೇಮಿನ ಅರಸನನ್ನಾಗಿ ಮಾಡಿದನು. |
೧೧ |
ಚಿದ್ಕೀಯನು ಅರಸನಾದಾಗ ಅವನಿಗೆ ಇಪ್ಪತ್ತೊಂದು ವರ್ಷ ವಯಸ್ಸು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. |
೧೨ |
ಅವನು ತನ್ನ ದೇವರಾದ ಸರ್ವೇಶ್ವರನ ಚಿತ್ತಕ್ಕೆ ವಿರುದ್ಧ ನಡೆದನು; ಸರ್ವೇಶ್ವರನ ನುಡಿಗಳನ್ನು ತನಗೆ ತಿಳಿಸುತ್ತಿದ್ದ ಪ್ರವಾದಿ ಯೆರೆಮೀಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳಲಿಲ್ಲ. |
೧೩ |
ಇದಲ್ಲದೆ, ನೆಬೂಕದ್ನೆಚ್ಚರನಿಗೆ ಒಳಗಾಗುತ್ತೇನೆಂದು, ದೇವರ ಮೇಲೆ ಆಣೆಯಿಟ್ಟು ಪ್ರಮಾಣಮಾಡಿದ್ದರೂ, ಅವನಿಗೆ ವಿರುದ್ಧ ದಂಗೆ ಎದ್ದನು. ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ ಅಭಿಮುಖನಾಗಲೊಲ್ಲದೆ, ಹಟಹಿಡಿದು ಮನಸ್ಸನ್ನು ಕಠಿಣಮಾಡಿಕೊಂಡನು. |
೧೪ |
ಪ್ರಧಾನ ಯಾಜಕರೂ ಪ್ರಜೆಗಳೂ ಕೂಡ ಮಹಾದ್ರೋಹಿಗಳಾಗಿ, ಅನ್ಯಜನಾಂಗಗಳ ಅಸಹ್ಯಕೃತ್ಯಗಳನ್ನು ಅನುಸರಿಸಿ, ಸರ್ವೇಶ್ವರ ತಮಗೆ ಪ್ರತಿಷ್ಠಿಸಿಕೊಂಡಿದ್ದ ಜೆರುಸಲೇಮಿನ ದೇವಾಲಯವನ್ನು ಹೊಲೆಮಾಡಿದರು. |
೧೫ |
ಅವರ ಪಿತೃಗಳ ದೇವರಾದ ಸರ್ವೇಶ್ವರ ತಮ್ಮ ಪ್ರಜೆಯನ್ನೂ ನಿವಾಸಸ್ಥಾನವನ್ನೂ ಕನಿಕರಿಸಿ, ಸಾವಕಾಶ ಮಾಡದೆ, ತಮ್ಮ ದೂತರ ಮುಖಾಂತರ ಅವರನ್ನು ಎಚ್ಚರಿಸುತ್ತಾ ಬಂದರು. |
೧೬ |
ಆದರೂ ಅವರು ದೇವಸಂದೇಶಕರನ್ನು ಗೇಲಿಮಾಡಿದರು. ದೇವರ ಮಾತುಗಳನ್ನು ತುಚ್ಛೀಕರಿಸಿ ಅವರ ಪ್ರವಾದಿಗಳನ್ನು ಹೀಯಾಳಿಸಿದರು. ಆದ್ದರಿಂದ ದೇವಕೋಪಾಗ್ನಿ ಅವರ ಪ್ರಜೆಯ ಮೇಲೆ ಉರಿಯತೊಡಗಿತು. ಅದರ ತಾಪ ಆರಿಹೋಗಲೇ ಇಲ್ಲ. |
೧೭ |
ಸರ್ವೇಶ್ವರಸ್ವಾಮಿ ಬಾಬಿಲೋನಿಯದ ಅರಸನನ್ನು ಅವರ ಮೇಲೆ ಬರಮಾಡಿ ಎಲ್ಲರನ್ನೂ ಅವನ ಕೈಗೊಪ್ಪಿಸಿದರು. ಅವನು ಅವರ ಯುವ ಯೋಧರನ್ನು ಅವರ ಪವಿತ್ರಾಲಯದಲ್ಲೇ ಕತ್ತಿಯಿಂದ ಸಂಹರಿಸಿದನು. ಯುವಕರನ್ನು, ಕನ್ಯೆಯರನ್ನು, ವೃದ್ಧರನ್ನು ಹಾಗು ಅತಿವೃದ್ಧರನ್ನು ಕನಿಕರಿಸದೆ ಎಲ್ಲರನ್ನು ಕೊಲ್ಲಿಸಿದನು. |
೧೮ |
ದೇವಾಲಯದ ಎಲ್ಲ ಚಿಕ್ಕ ದೊಡ್ಡ ಸಾಮಗ್ರಿಗಳನ್ನು ಮಾತ್ರವಲ್ಲದೆ,ಸರ್ವೇಶ್ವರನ ಮಂದಿರಕ್ಕೆ ಸೇರಿದ ಭಂಡಾರದ ಹಾಗು ಅರಸನ ಮತ್ತು ಅವನ ಪದಾಧಿಕಾರಿಗಳ ಭಂಡಾರದ ದ್ರವ್ಯವನ್ನೂ ಬಾಬಿಲೋನಿಗೆ ಒಯ್ದನು. |
೧೯ |
ಅವನ ಜನರು ಜೆರುಸಲೇಮಿನ ಪೌಳಿಗೋಡೆಗಳನ್ನು ಕೆಡವಿದರು. ಅದರ ಎಲ್ಲ ರಾಜಮಂದಿರಗಳನ್ನೂ ದೇವಾಲಯವನ್ನೂ ಸುಟ್ಟು ನೆಲಸಮ ಮಾಡಿದರು; ಅಮೂಲ್ಯವಾದ ವಸ್ತುಗಳನ್ನು ನಾಶಮಾಡಿದರು. |
೨೦ |
ಕತ್ತಿಗೆ ತಪ್ಪಿಸಿಕೊಂಡವರನ್ನು ಅರಸನು ಬಾಬಿಲೋನಿಗೆ ಸೆರೆ ಒಯ್ದನು. ಪರ್ಷಿಯದ ಪ್ರಭುತ್ವ ಅಲ್ಲಿ ಸ್ಥಾಪಿತವಾಗುವವರೆಗೆ ಅವರು ಅವನಿಗೂ ಅವನ ಮಕ್ಕಳಿಗೂ ಗುಲಾಮರಾಗಿದ್ದರು. |
೨೧ |
ಈ ಪ್ರಕಾರ ಸರ್ವೇಶ್ವರ ಯೆರೆಮೀಯನ ಮುಖಾಂತರ ಹೇಳಿಸಿದ ಮಾತು ನೆರವೇರಿತು; ನಾಡು ತನ್ನ ಸಬ್ಬತ್ಕಾಲವನ್ನು ಅನುಭವಿಸುವುದಕ್ಕೆ ಮಾರ್ಗವಾಯಿತು. ಅದು ಎಪ್ಪತ್ತು ವರ್ಷ ಹಾಳುಬಿದ್ದು ಆ ಕಾಲಾವಧಿಯಲ್ಲಿ ವಿಶ್ರಾಂತಿಯನ್ನು ಅನುಭವಿಸುತ್ತಿತ್ತು. |
೨೨ |
ಪರ್ಷಿಯದ ಅರಸ ಸೈರಸನ ಮೊದಲನೆಯ ವರ್ಷದಲ್ಲಿ ಸರ್ವೇಶ್ವರಸ್ವಾಮಿ ತಾವು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ಕಾರ್ಯಗತ ಮಾಡಿದರು: ಆ ಪರ್ಷಿಯದ ರಾಜ ಕೋರೆಷನ ಮನಸ್ಸನ್ನು ಪ್ರೇರಿಸಿದರು; ಅವನು ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದಲೂ ಪತ್ರಗಳಿಂದಲೂ, |
೨೩ |
\ಪರ್ಷಿಯದ ರಾಜ ಸೈರಸ್ ಎಂಬ ನನ್ನ ಮಾತಿಗೆ ಕಿವಿಗೊಡಿ; ಪರಲೋಕ ದೇವರಾದ ಸರ್ವೇಶ್ವರ ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನು ಒಪ್ಪಿಸಿದ್ದಾರೆ; ತಮಗಾಗಿ ಜುದೇಯ ನಾಡಿನ ಜೆರುಸಲೇಮಿನಲ್ಲಿ ಆಲಯವನ್ನು ಕಟ್ಟಬೇಕೆಂದು ಆಜ್ಞಾಪಿಸಿದ್ದಾರೆ; ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತಾರೋ ಅವರು ಸ್ವಂತನಾಡಿಗೆ ಹೋಗಬಹುದು; ಅವರ ದೇವರಾದ ಸರ್ವೇಶ್ವರ ಅವರೊಂದಿಗೆ ಇರುತ್ತಾರೆ!” ಎಂದು ಪ್ರಕಟಿಸಿದನು.
|
Kannada Bible (KNCL) 2016 |
No Data |