A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಕ್ರಾನಿಕಲ್ಸ್ ೨ ೨೦ಸ್ವಲ್ಪಕಾಲವಾದ ಮೇಲೆ ಮೋವಾಬ್ಯರು, ಅಮ್ಮೋನಿಯರು ಹಾಗು ಮೆಗೂನ್ಯರಲ್ಲಿ ಕೆಲವರು ಯೆಹೋಷಾಫಾಟನಿಗೆ ವಿರುದ್ಧ ಯುದ್ಧಕ್ಕೆ ಬಂದರು.
ದೂತರು ಬಂದು ಯೆಹೋಷಾಫಾಟನಿಗೆ, “ಮಹಾಸೈನ್ಯ ಸಮೂಹವೊಂದು ನಿನಗೆ ವಿರೋಧವಾಗಿ ಲವಣಸಮುದ್ರದ ಆಚೆಯಲ್ಲಿರುವ ಆರಾಮ್ ಪ್ರಾಂತ್ಯದ ಕಡೆಯಿಂದ ಬಂದು ಈಗ ಏಂಗೆದಿಯೆನಿಸಿಕೊಳ್ಳುವ ಹಚೆಚೋನ್‍ತಾಮಾರಿನಲ್ಲಿ ಇರುತ್ತಾರೆ,” ಎಂದು ತಿಳಿಸಿದರು.
ಯೆಹೋಷಾಫಾಟನು ಇದನ್ನು ಕೇಳಿ ಭಯಪಟ್ಟು, ಸರ್ವೇಶ್ವರನನ್ನೇ ಆಶ್ರಯಿಸಿಕೊಳ್ಳಬೇಕೆಂದು ನಿರ್ಣಯಿಸಿಕೊಂಡನು. ಯೆಹೂದ್ಯರೆಲ್ಲರೂ ಉಪವಾಸಮಾಡಬೇಕೆಂದು ಪ್ರಕಟಿಸಿದನು.
ಆಗ ಯೆಹೂದ್ಯರು ಸರ್ವೇಶ್ವರನ ಸಹಾಯವನ್ನು ಕೇಳಿಕೊಳ್ಳುವುದಕ್ಕಾಗಿ ತಮ್ಮ ಎಲ್ಲಾ ಪಟ್ಟಣಗಳಿಂದ ಆತನ ಸನ್ನಿಧಿಯಲ್ಲಿ ಕೂಡಿಬಂದರು.
ಯೆಹೂದ್ಯರೂ ಜೆರುಸಲೇಮಿನವರೂ ಸರ್ವೇಶ್ವರನ ಆಲಯದ ಹೊಸ ಪ್ರಾಕಾರದಲ್ಲಿ ಸಭೆಯಾಗಿ ನೆರೆದುಬಂದಾಗ, ಯೆಹೋಷಾಫಾಟನು ಅದರ ಮುಂದೆ ನಿಂತು,
“ಸರ್ವೇಶ್ವರಾ, ನಮ್ಮ ಪಿತೃಗಳ ದೇವರೇ, ಪರಲೋಕದಲ್ಲಿ ದೇವರಾಗಿ ಇರುವವರು ನೀವಲ್ಲವೇ? ನೀವು ಜನಾಂಗಗಳ ಎಲ್ಲ ರಾಜ್ಯಗಳನ್ನೂ ಆಳುತ್ತಿದ್ದೀರಿ. ನಿಮ್ಮ ಹಸ್ತದಲ್ಲಿ ಬಲಪರಾಕ್ರಮಗಳಿವೆ; ನಿಮ್ಮೆದುರಿನಲ್ಲಿ ಯಾರೂ ನಿಲ್ಲಲಾರರು.
ನಮ್ಮ ದೇವರಾದ ನೀವು ನಿಮ್ಮ ಪ್ರಜೆಗಳಾದ ಇಸ್ರಯೇಲರ ಎದುರಿನಿಂದ ಈ ನಾಡಿನ ನಿವಾಸಿಗಳನ್ನು ಹೊರದೂಡಿಸಿ, ಇದನ್ನು ಮಿತ್ರ ಅಬ್ರಹಾಮನ ಸಂತಾನದವರಿಗೆ ಶಾಶ್ವತ ಸೊತ್ತಾಗಿ ಕೊಟ್ಟಿರಲ್ಲವೆ?
ಅವರು ಈ ನಾಡಿನಲ್ಲಿ ನೆಲೆಗೊಂಡು ಇದರಲ್ಲಿ ನಿಮ್ಮ ಹೆಸರಿಗಾಗಿ ಒಂದು ಪವಿತ್ರಾಲಯವನ್ನು ಕಟ್ಟಿದರು.
ತಮ್ಮ ಮೇಲೆ ಖಡ್ಗವಿಧಿ, ಘೋರವ್ಯಾಧಿ, ಕ್ಷಾಮಡಾಮರ, ಮೊದಲಾದ ಆಪತ್ತುಗಳು ಬರುವಾಗ, ನಿಮ್ಮ ನಾಮಮಹಿಮೆ ಇರುವ ಈ ಆಲಯದ ಮುಂದೆಯೂ ನಿಮ್ಮ ಮುಂದೆಯೂ ನಿಂತು, ತಮ್ಮ ಇಕ್ಕಟ್ಟಿನಲ್ಲಿ ನಿಮಗೆ ಮೊರೆ ಇಡುವುದಾದರೆ ನೀವು ಆಲಿಸಿ ರಕ್ಷಿಸುವಿರಿ ಎಂದುಕೊಂಡರಷ್ಟೆ.
೧೦
ಈ ಅಮ್ಮೋನಿಯರನ್ನು, ಮೋವಾಬ್ಯರನ್ನು ಹಾಗೂ ಸೇಯಿರ ಪರ್ವತಪ್ರದೇಶದವರನ್ನು ನೋಡಿರಿ; ಇಸ್ರಯೇಲರು ಈಜಿಪ್ಟ್ ದೇಶದಿಂದ ಬರುತ್ತಿದ್ದಾಗ, ಇವರ ದೇಶದಲ್ಲಿ ನುಗ್ಗಬಾರದೆಂದು ನಿಮ್ಮಿಂದ ಅಪ್ಪಣೆ ಹೊಂದಿ, ಇವರನ್ನು ಸಂಹರಿಸದೆ ಬೇರೆ ಮಾರ್ಗವಾಗಿ ಹೋದರಲ್ಲವೆ?”
೧೧
ಈಗ ಅವರು ಉಪಕಾರಕ್ಕೆ ಅಪಕಾರಮಾಡಿ, ನೀವು ನಮಗೆ ಅನುಗ್ರಹಿಸಿದ ಸೊತ್ತಿನಿಂದ ನಮ್ಮನ್ನು ಹೊರತಳ್ಳುವುದಕ್ಕಾಗಿ, ನಮ್ಮ ಮೇಲೆ ಯುದ್ಧಕ್ಕೆ ಬಂದಿರುತ್ತಾರೆ.
೧೨
ನಮ್ಮ ದೇವರೇ, ಅವರನ್ನು ದಂಡಿಸದೆ ಬಿಡುವಿರೋ? ನಮ್ಮ ಮೇಲೆ ಬಂದಿರುವ ಈ ಮಹಾಸಮೂಹದ ಮುಂದೆ ನಿಲ್ಲುವುದಕ್ಕೆ ನಮ್ಮಲ್ಲಿ ಬಲವಿಲ್ಲ; ಏನು ಮಾಡಬೇಕೆಂದೂ ತಿಳಿಯದು; ನಮ್ಮ ಕಣ್ಣುಗಳು ನಿಮ್ಮನ್ನೇ ನೋಡುತ್ತಿವೆ,” ಎಂದು ಪ್ರಾರ್ಥಿಸಿದನು.
೧೩
ಎಲ್ಲ ಯೆಹೂದ್ಯರೂ ಅವರ ಮಡದಿಮಕ್ಕಳೂ ಸರ್ವೇಶ್ವರನ ಸನ್ನಿಧಿಯಲ್ಲಿ ನಿಂತಿದ್ದರು.
೧೪
ಆಗ ಆ ಸಮೂಹದೊಳಗೆ ಆಸಾಫನ ವಂಶದವನೂ ಲೇವಿಯನೂ ಆದ ಯಹಜೀಯೇಲನ ಮೇಲೆ ಸರ್ವೇಶ್ವರನ ಆತ್ಮ ಇಳಿದು ಬಂದಿತು. ಇವನು ಮತ್ತನ್ಯನಿಗೆ ಹುಟ್ಟಿದ ಯೆಗೀಯೇಲನ ಮರಿಮಗ, ಬೆನಾಯನ ಮೊಮ್ಮಗ, ಹಾಗೂ ಜೆಕರ್ಯನ ಮಗ.
೧೫
ಅವನು, “ಜುದೇಯದ ಹಾಗು ಜೆರುಸಲೇಮಿನ ಎಲ್ಲ ಜನರೇ, ಅರಸ ಯೆಹೋಷಾಫಾಟನೇ, ಸರ್ವೇಶ್ವರ ಸ್ವಾಮಿ ಹೇಳುವುದನ್ನು ಕೇಳಿರಿ: ಈ ಮಹಾಸೈನ್ಯಸಮೂಹದ ನಿಮಿತ್ತ ಕಳವಳಗೊಳ್ಳಬೇಡಿ; ಹೆದರಬೇಡಿ. ಈ ಯುದ್ಧ ನಿಮ್ಮದಲ್ಲ, ದೇವರದೇ.
೧೬
ನಾಳೆ ಬೆಳಿಗ್ಗೆ ಅವರಿಗೆ ವಿರೋಧವಾಗಿ ಹೊರಡಿರಿ; ಇಗೋ ಅವರು ಹಚ್ಚೀಚ್‍ಗಟ್ಟದ ಮಾರ್ಗವಾಗಿ ಬರುತ್ತಾರೆ. ಯೆರುವೇಲ್ ಮರುಭೂಮಿಯ ಮುಂದಿರುವ ಕಣಿವೆಯ ತುದಿಯಲ್ಲಿ ಅವರನ್ನು ಸಂಧಿಸುವಿರಿ.
೧೭
ಈ ಸಾರಿ ನೀವು ಯುದ್ಧಮಾಡುವುದು ಅವಶ್ಯವಿಲ್ಲ. ಯೆಹೂದ್ಯರೇ, ಜೆರುಸಲೇಮಿನವರೇ, ಸುಮ್ಮನೆ ನಿಂತುಕೊಂಡು ಸರ್ವೇಶ್ವರ ನಿಮಗಾಗಿ ನಡೆಸುವ ರಕ್ಷಣಾಕಾರ್ಯವನ್ನು ನೋಡಿರಿ; ಹೆದರಬೇಡಿ, ಕಳವಳಗೊಳ್ಳಬೇಡಿ. ನಾಳೆ ಅವರೆದುರಿಗೆ ಹೊರಡಿರಿ; ಸರ್ವೇಶ್ವರ ನಿಮ್ಮೊಂದಿಗೆ ಇರುವರು!” ಎಂದು ಹೇಳಿದನು.
೧೮
ಆಗ ಯೆಹೋಷಾಫಾಟನು ನೆಲದ ಮಟ್ಟಿಗೂ ತಲೆಬಾಗಿದನು. ಎಲ್ಲಾ ಯೆಹೂದ್ಯರೂ ಜೆರುಸಲೇಮಿನವರೂ ಸರ್ವೇಶ್ವರನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು.
೧೯
ಆಮೇಲೆ ಲೇವಿಯರಲ್ಲಿ ಕೆಹಾತ್ಯರೂ ಕೋರಹಿಯರೂ ಎದ್ದು, ಇಸ್ರಯೇಲ್ ದೇವರಾದ ಸರ್ವೇಶ್ವರನನ್ನು ಮಹಾಸ್ವರದಿಂದ ಕೀರ್ತಿಸಿದರು.
೨೦
ಅವರು ಮರುದಿನ ಬೆಳಿಗ್ಗೆ ಎದ್ದು ತೆಕೋವ ಮರುಭೂಮಿಗೆ ಹೊರಟರು. ಹೊರಡುವಾಗ ಯೆಹೋಷಾಫಾಟನು ಎದ್ದು ನಿಂತು, “ಯೆಹೂದ್ಯರೇ, ಜೆರುಸಲೇಮಿನವರೇ, ನನ್ನ ಮಾತನ್ನು ಕೇಳಿರಿ; ಸರ್ವೇಶ್ವರನಲ್ಲಿ ಭರವಸೆ ಇಡಿ, ಆಗ ಸುರಕ್ಷಿತರಾಗುವಿರಿ; ಸರ್ವೇಶ್ವರನ ಪ್ರವಾದಿಗಳನ್ನು ನಂಬಿರಿ, ಆಗ ಸಾರ್ಥಕರಾಗುವಿರಿ,” ಎಂದು ಹೇಳಿದನು.
೨೧
ಆಮೇಲೆ ಜನರ ಸಮ್ಮತಿಯಿಂದ ಸರ್ವೇಶ್ವರನಿಗಾಗಿ ಗಾಯನಮಾಡುವುದಕ್ಕಾಗಿ ಕೆಲವರನ್ನು ಆರಿಸಿಕೊಂಡನು. ಅವರಿಗೆ, “ಪರಿಶುದ್ಧತ್ವವೆಂಬ ಭೂಷಣದೊಡನೆ ಯೋಧರ ಮುಂದೆ ಹೋಗುತ್ತಾ, “ಸರ್ವೇಶ್ವರನಿಗೆ ಕೃತಜ್ಞತಾ ಸ್ತುತಿಮಾಡಿರಿ, ಅವರ ಅಚಲಪ್ರೀತಿ ಶಾಶ್ವತ’ ಎಂದು ಭಜಿಸಿರಿ,” ಎಂಬುದಾಗಿ ಆಜ್ಞಾಪಿಸಿದನು.
೨೨
ಅವರು ಉತ್ಸಾಹಧ್ವನಿಯಿಂದ ಕೀರ್ತಿಸುವುದಕ್ಕೆ ಪ್ರಾರಂಭಿಸಿದರು. ಆಗ ಸರ್ವೇಶ್ವರ ಯೆಹೂದ್ಯರಿಗೆ ವಿರುದ್ಧ ಬಂದ ಅಮ್ಮೋನಿಯರನ್ನೂ ಮೋವಾಬ್ಯರನ್ನೂ ಸೇಯೀರ್‍ಪರ್ವತದವರನ್ನೂ ನಶಿಸುವುದಕ್ಕಾಗಿ ಅವರಲ್ಲಿ ಹೊಂಚುಹಾಕುವವರನ್ನು ಇರಿಸಿದ್ದರು. ಅಮ್ಮೋನಿಯರೂ ಮೋವಾಬ್ಯರೂ ಸೇಯೀರ್‍ಪರ್ವತದವರ ಮೇಲೆ ಬಿದ್ದು ಅವರನ್ನು ಪೂರ್ಣವಾಗಿ ಸಂಹರಿಸಿಬಿಟ್ಟರು.
೨೩
ಅವರನ್ನು ಮುಗಿಸಿಬಿಟ್ಟ ಮೇಲೆ ತಾವೇ ಒಬ್ಬರನ್ನೊಬ್ಬರು ಕೊಲ್ಲುವುದಕ್ಕೆ ಪ್ರಾರಂಭಿಸಿದರು.
೨೪
ಯೆಹೂದ್ಯರು ಮರುಭೂಮಿಯ ಬುರುಜಿಗೆ ಬಂದು ಆ ಸೈನ್ಯಸಮೂಹವಿದ್ದ ಕಡೆಗೆ ನೋಡಿದಾಗ ನೆಲದ ಮೇಲೆ ಬಿದ್ದಿರುವ ಹೆಣಗಳು ಹೊರತಾಗಿ ಜೀವದಿಂದುಳಿದವರು ಯಾರೂ ಕಾಣಿಸಲಿಲ್ಲ.
೨೫
ಯೆಹೋಷಾಫಾಟನೂ ಅವನ ಜನರೂ ಸುಲಿಗೆಮಾಡುವುದಕ್ಕಾಗಿ ಅಲ್ಲಿಗೆ ಹೋದರು. ಅವರಿಗೆ ದ್ರವ್ಯ, ವಸ್ತ್ರ, ಶ್ರೇಷ್ಠಾಯುಧ, ಇವುಗಳು ರಾಶಿರಾಶಿಯಾಗಿ ಸಿಕ್ಕಿದವು. ಅವರು ಹೊರಲಾರದಷ್ಟನ್ನೂ ಸುಲಿದುಕೊಂಡರು. ಕೊಳ್ಳೆಯ ಮೊತ್ತ ಹೆಚ್ಚಾಗಿದ್ದುದರಿಂದ ಅವರು ಮೂರು ದಿನಗಳವರೆಗೂ ಕೂಡಿಸುತ್ತಿದ್ದರು.
೨೬
ನಾಲ್ಕನೆಯ ದಿನದಲ್ಲಿ ಬೆರಾಕ ಕಣಿವೆಗೆ ಕೂಡಿಬಂದರು. ಅಲ್ಲಿ ಅವರು ಸರ್ವೇಶ್ವರನನ್ನು ಸ್ತುತಿಸಿದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ ‘ಬೆರಾಕ ಕಣಿವೆ’ ಎಂಬ ಹೆಸರಿದೆ.
೨೭
ಆಮೇಲೆ ಯೆಹೂದ್ಯರು, ಜೆರುಸಲೇಮಿನವರು, ಅವರ ಮುಂಗಡೆಯಲ್ಲಿ ಯೆಹೋಷಾಫಾಟನು, ಸರ್ವೇಶ್ವರ ತಮಗೆ ಶತ್ರುಗಳ ಮೇಲೆ ಜಯವನ್ನು ಅನುಗ್ರಹಿಸಿದ್ದಾರೆಂದು ಜಯಘೋಷ ಮಾಡುತ್ತಾ ಜೆರುಸಲೇಮಿಗೆ ಹಿಂದಿರುಗಿದರು.
೨೮
ಸ್ವರಮಂಡಲ, ಕಿನ್ನರಿ, ತುತೂರಿ ಇವುಗಳೊಡನೆ ಜೆರುಸಲೇಮಿನಲ್ಲಿರುವ ಸರ್ವೇಶ್ವರನಾಲಯಕ್ಕೆ ಬಂದರು.
೨೯
ಸರ್ವೇಶ್ವರಾ ಸ್ವಾಮಿಯೇ ಇಸ್ರಯೇಲರ ಪರವಾಗಿ ಶತ್ರಗಳೊಡನೆ ಯುದ್ಧಮಾಡಿದರೆಂಬ ಸುದ್ದಿ ಅನ್ಯದೇಶಗಳ ರಾಜ್ಯಗಳವರೆಗೆ ಮುಟ್ಟಿದಾಗ, ಅವರೆಲ್ಲರು ಬಹಳ ಭಯಭೀತರಾದರು.
೩೦
ಹೀಗೆ ದೇವ ಅನುಗ್ರಹದಿಂದ ಸುತ್ತಮುತ್ತಲಿನ ವೈರಿಗಳ ಭಯ ತಪ್ಪಿ, ಯೆಹೋಷಾಫಾಟನ ರಾಜ್ಯಕ್ಕೆ ಸಮಾಧಾನ ಉಂಟಾಯಿತು.
೩೧
ಯೆಹೂದ್ಯರ ಅರಸ ಯೆಹೋಷಾಫಾಟನು ಪಟ್ಟಕ್ಕೆ ಬಂದಾಗ ಮೂವತ್ತೈದು ವರ್ಷದವನಾಗಿದ್ದನು. ಇವನು ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಶಿಲ್ಹಿಯ ಮಗಳಾದ ಅಜೂಬಳೆಂಬಾಕೆ ಇವನ ತಾಯಿ.
೩೨
ತಂದೆ ಆಸನ ಮಾರ್ಗದಲ್ಲಿ ಇವನು ತಪ್ಪದೆ ನಡೆಯುತ್ತಾ ಸರ್ವೇಶ್ವರನ ದೃಷ್ಟಿಯಲ್ಲಿ ಒಳ್ಳೆಯವನಾಗಿ ಇದ್ದನು.
೩೩
ಆದರೂ ಪೂಜಾಸ್ಥಳಗಳನ್ನು ಹಾಳುಮಾಡಲಿಲ್ಲ. ಜನರ ಮನಸ್ಸು ಇನ್ನೂ ತಮ್ಮ ಪಿತೃಗಳ ದೇವರ ಮೇಲೆ ನಾಟಿರಲಿಲ್ಲ.
೩೪
ಯೆಹೋಷಾಫಾಟನ ಉಳಿದ ಪೂರ್ವೋತ್ತರ ಚರಿತ್ರೆ ಇಸ್ರಯೇಲ್ ರಾಜರ ಗ್ರಂಥದಲ್ಲಿ ಹನಾನೀಯನ ಮಗ ಯೇಹುವಿನ ವೃತ್ತಾಂತದಲ್ಲಿ ದಾಖಲಾಗಿದೆ.
೩೫
ಒಮ್ಮೆ ಯೆಹೂದ್ಯರ ಅರಸ ಯೆಹೋಷಾಫಾಟನು, ಬಹು ದುರಾಚಾರಿಯಾದ ಇಸ್ರಯೇಲರ ಅರಸ ಅಹಜ್ಯನೊಡನೆ ಒಂದು ಒಪ್ಪಂದ ಮಾಡಿಕೊಂಡನು.
೩೬
ಅವರು ತಾರ್ಷೀಷಿಗೆ ಹೋಗುವುದಕ್ಕಾಗಿ ಹಡಗುಗಳನ್ನು ಕಟ್ಟಬೇಕೆಂದು ಒಪ್ಪಂದ ಮಾಡಿಕೊಂಡು ಅವುಗಳನ್ನು ಎಚ್ಯೋನ್ಗೆಬೆರಿನಲ್ಲಿ ಕಟ್ಟಿಸಿದರು.
೩೭
ಆಗ ಮಾರೇಷಾ ಊರಿನ ದೋದಾವಾಹುವಿನ ಮಗ ಎಲೀಯೆಜರನು ಯೆಹೋಷಾಫಾಟನಿಗೆ ವಿರೋಧವಾಗಿ, “ನೀನು ಅಹಜ್ಯನೊಡನೆ ಒಪ್ಪಂದಮಾಡಿಕೊಂಡಿದ್ದರಿಂದ ಸರ್ವೇಶ್ವರ ನಿನ್ನ ಕೆಲಸವನ್ನು ಹಾಳುಮಾಡುವರು,” ಎಂದು ಪ್ರವಾದಿಸಿದನು. ಆ ಹಡಗುಗಳು ಒಡೆದುಹೋದುದರಿಂದ ತಾರ್ಷೀಷಿಗೆ ಹೊರಡಲೇ ಇಲ್ಲ.