A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಕ್ರಾನಿಕಲ್ಸ್ ೨ ೧೯ಜುದೇಯದ ಅರಸ ಯೆಹೋಷಾಫಾಟನು ಸುರಕ್ಷಿತವಾಗಿ ತನ್ನ ಮನೆಗೆ ಹಿಂದಿರುಗಿದನು.
ಅವನು ಜೆರುಸಲೇಮಿಗೆ ಬಂದಾಗ ಹನಾನೀಯನ ಮಗ ಯೇಹೂ ಎಂಬ ದರ್ಶಿಯು ಅವನನ್ನು ಎದುರುಗೊಂಡು, “ನೀವು ಕೆಟ್ಟವನಿಗೆ ಸಹಾಯಮಾಡಬಹುದೇ? ಸರ್ವೇಶ್ವರನ ಹಗೆಗಾರರನ್ನು ಪ್ರೀತಿಸಬಹುದೇ? ನೀವು ಹೀಗೆ ಮಾಡಿದ್ದರಿಂದ ಸರ್ವೇಶ್ವರನ ಕೋಪ ನಿಮ್ಮ ಮೇಲಿರುತ್ತದೆ.
ಆದರೂ ನೀವು ನಾಡಿನಿಂದ ಅಶೇರ ವಿಗ್ರಹಸ್ತಂಭಗಳನ್ನು ತೆಗೆದುಹಾಕಿದ್ದೀರಿ. ಸರ್ವೇಶ್ವರನ ಭಕ್ತಿ ನಿಮ್ಮಲ್ಲಿ ಬೇರೂರಿದೆ, ನಿಮ್ಮಲ್ಲಿ ಸುಶೀಲತೆ ಉಂಟೆಂದು ತಿಳಿದುಬಂದಿದೆ,” ಎಂಬುದಾಗಿ ಹೇಳಿದನು.
ಯೆಹೋಷಾಫಾಟನು ಜೆರುಸಲೇಮಿನಲ್ಲಿ ವಾಸವಾಗಿದ್ದು, ಇನ್ನೊಮ್ಮೆ ಬೇರ್ಷೆಬದಿಂದ ಎಫ್ರಯಿಮ್ ಪರ್ವತದವರೆಗೂ ಸಂಚರಿಸಿ, ತನ್ನ ಪ್ರಜೆಗಳನ್ನು ಅವರ ಪೂರ್ವಜರ ದೇವರಾದ ಸರ್ವೇಶ್ವರನ ಕಡೆಗೆ ತಿರುಗಿಸಿದನು.
ಜುದೇಯ ನಾಡಿನ ಪ್ರತಿಯೊಂದು ಕೋಟೆಕೊತ್ತಲಗಳುಳ್ಳ ಪಟ್ಟಣದಲ್ಲಿ ನ್ಯಾಯಾಧಿಪತಿಗಳನ್ನು ನೇಮಿಸಿದನು.
ಅವರಿಗೆ, “ನೀವು ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂಬುದರ ಬಗ್ಗೆ, ಎಚ್ಚರಿಕೆ! ನೀವು ನ್ಯಾಯ ನಿರ್ಣಯಿಸುವುದು ಮನುಷ್ಯರಿಗಾಗಿ ಅಲ್ಲ; ಸರ್ವೇಶ್ವರನಿಗಾಗಿ, ನ್ಯಾಯವಿಚಾರಣೆ ನಡೆಯುವಾಗ ಸರ್ವೇಶ್ವರ ನಿಮ್ಮ ಮಧ್ಯೆ ಇರುತ್ತಾರೆ.
ಹೀಗಿರುವಲ್ಲಿ, ನಿಮಗೆ ಅವರ ಭಯಭಕ್ತಿಯಿರಲಿ. ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಅನ್ಯಾಯ, ಮುಖದಾಕ್ಷಿಣ್ಯ ಹಾಗು ಲಂಚಕೋರತನ ಇಲ್ಲ. ಆದುದರಿಂದ ಜಾಗರೂಕತೆಯಿಂದ ಕೆಲಸಮಾಡಿ,” ಎಂದು ಎಚ್ಚರಿಸಿದನು.
ಇದಲ್ಲದೆ ಯೆಹೋಷಾಫಾಟನು ತನ್ನ ಪರಿವಾರದೊಡನೆ ಜೆರುಸಲೇಮಿಗೆ ಹಿಂದಿರುಗಿ ಬಂದು, ಲೇವಿಯರಿಂದ, ಯಾಜಕರ ಹಾಗು ಇಸ್ರಯೇಲ್ ಗೋತ್ರಪ್ರಧಾನರಿಂದ ಕೆಲವರನ್ನು ಆರಿಸಿ, ಸರ್ವೇಶ್ವರನ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವ್ಯಾಜ್ಯಗಳನ್ನೂ ಬೇರೆ ವ್ಯಾಜ್ಯಗಳನ್ನೂ ವಿಚಾರಿಸಿ ತೀರ್ಪುನೀಡಲು ಜೆರುಸಲೇಮಿನಲ್ಲೇ ಇರಿಸಿದನು. ಅವರಿಗೆ,
“ನೀವು ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿ ನಂಬಿಕೆಯಿಂದಲೂ ಯಥಾರ್ಥ ಮನಸ್ಸಿನಿಂದಲೂ ಕಾರ್ಯನಿರ್ವಹಿಸತಕ್ಕದ್ದು.
೧೦
ಜುದೇಯದ ಪಟ್ಟಣಗಳಲ್ಲಿ ವಾಸಿಸುವ ನಿಮ್ಮ ಸಹೋದರರಲ್ಲಿ ಜೀವಹತ್ಯ ಸಂಬಂಧದಲ್ಲಿಯಾಗಲಿ ಧರ್ಮಶಾಸ್ತ್ರದ ಆಯಾ ಆಜ್ಞಾವಿಧಿನ್ಯಾಯಗಳ ಸಂಬಂಧದಲ್ಲಿಯಾಗಲಿ ವ್ಯಾಜ್ಯವುಂಟಾಗಿ, ಅದು ನಿಮ್ಮ ಮುಂದೆ ವಿಚಾರಣೆಗೆ ಬಂದರೆ, ನಿಮ್ಮ ಸಹೋದರರು ಸರ್ವೇಶ್ವರನ ದೃಷ್ಟಿಯಲ್ಲಿ ಅಪರಾಧಿಗಳಾಗದಂತೆ ಹಾಗೂ ನೀವು ಅವರೊಂದಿಗೆ ದೇವಕೋಪಕ್ಕೆ ಗುರಿಯಾಗದಂತೆ ಅವರನ್ನು ಎಚ್ಚರಿಸಿರಿ. ಹೀಗೆ ಮಾಡುವುದಾದರೆ ನೀವು ನಿರ್ದೋಷಿಗಳಾಗುವಿರಿ.
೧೧
ಇಗೋ, ಸರ್ವೇಶ್ವರನ ಕಾರ್ಯಸಂಬಂಧವಾದ ಎಲ್ಲ ವಿಚಾರಣೆಗಳಿಗೂ ಮಹಾಯಾಜಕ ಅಮರ್ಯನು ನಿಮ್ಮ ಅಧ್ಯಕ್ಷನು; ರಾಜಕೀಯ ಕಾರ್ಯಗಳ ಸಂಬಂಧವಾದ ಎಲ್ಲ ವಿಚಾರಣೆಗಳಿಗೂ ಇಷ್ಮಾಯೇಲನ ಮಗನೂ ಯೆಹೂದ ಕುಲದ ಪ್ರಮುಖನೂ ಆದ ಜೆಬದ್ಯನು ಅಧ್ಯಕ್ಷನು; ಲೇವಿಯರು ನ್ಯಾಯಸ್ಥಾನದ ಲೇಖಕರು. ಧೈರ್ಯದಿಂದ ಕೆಲಸಮಾಡಿ. ಸರ್ವೇಶ್ವರಸ್ವಾಮಿ ಸಜ್ಜನರ ಸಹಾಯಕರು,” ಎಂದು ಹೇಳಿದನು.