A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಕ್ರಾನಿಕಲ್ಸ್ ೧ ೨೩ದಾವೀದನು ಹಣ್ಣುಹಣ್ಣು ಮುದುಕನಾದಾಗ ತನ್ನ ಮಗ ಸೊಲೊಮೋನನನ್ನು ಇಸ್ರಯೇಲರ ಅರಸನನ್ನಾಗಿ ಮಾಡಿದನು.
ಆಗ ಇಸ್ರಯೇಲರ ಎಲ್ಲಾ ಅಧಿಪತಿಗಳನ್ನು, ಯಾಜಕರನ್ನು ಹಾಗು ಲೇವಿಯರನ್ನು ತನ್ನ ಬಳಿಯಲ್ಲಿ ಸಭೆ ಸೇರಿಸಿದನು.
ಮೂವತ್ತು ವರ್ಷ ಮೊದಲ್ಗೊಂಡು ಹೆಚ್ಚಾದ ವಯಸ್ಸುಳ್ಳ ಲೇವಿಯರನ್ನು ಲೆಕ್ಕಿಸಿದಾಗ ಗಂಡಸರ ಸಂಖ್ಯೆ ಮೂವತ್ತೆಂಟು ಸಾವಿರವಿತ್ತು.
ಇವರಲ್ಲಿ ಸರ್ವೇಶ್ವರನ ಆಲಯವನ್ನು ಕಟ್ಟುವವರ ಮೇಲ್ವಿಚಾರಣೆಗಾಗಿ ಇಪ್ಪತ್ತನಾಲ್ಕು ಸಾವಿರ, ನ್ಯಾಯಾಧಿಪತಿಗಳನ್ನಾಗಿ ಮತ್ತು ಅಧಿಕಾರಿಗಳನ್ನಾಗಿ ಆರು ಸಾವಿರ,
ದ್ವಾರಪಾಲಕರನ್ನಾಗಿ ನಾಲ್ಕು ಸಾವಿರ ಹಾಗು ತಾನು ಒದಗಿಸಿದ್ದ ವಾದ್ಯಗಳಿಂದ ಸರ್ವೇಶ್ವರನನ್ನು ಭಜಿಸುವುದಕ್ಕಾಗಿ ನಾಲ್ಕು ಸಾವಿರ ಜನರನ್ನು ದಾವೀದನು ನೇಮಿಸಿದನು.
ಇದಲ್ಲದೆ, ಆ ಲೇವಿಯರನ್ನು ಗೇರ್ಷೋನ್ಯರು,ಮಕೆಹಾತ್ಯರು, ಮೆರಾರೀಯರು ಎಂಬ ಮೂರು ವರ್ಗಗಳಾಗಿ ವಿಂಗಡಿಸಿದನು.
ಗೇರ್ಷೋನ್ಯರ ಮೂಲಪುರುಷರು ಲದ್ದಾನ್ ಹಾಗೂ ಶಿಮ್ಮೀ ಎಂಬವರು.
ಲದ್ದಾನನ ಮಕ್ಕಳಾದ ಯೆಹೀಯೇಲ್, ಜೇತಾಮ್, ಯೋವೇಲ್ ಎಂಬ ಮೂರು ಮಂದಿ ಮುಖ್ಯಸ್ಥರಾಗಿದ್ದರು.
ಶಿಮ್ಮೀಯ ಮಕ್ಕಳು ಶೆಲೋಮೋತ್, ಹಜೀಯೇಲ್, ಹಾರಾನ್ ಎಂಬ ಮೂರು ಮಂದಿ. ಇವರು ಲದ್ದಾನ್ಯರ ಗೋತ್ರ ಪ್ರಧಾನರು.
೧೦
ಶಿಮ್ಮೀಗೆ ಯಹತ್, ಜೀನ, ಯೆಯೂಷ್, ಬೆರೀಯ ಎಂಬ ನಾಲ್ಕು ಮಂದಿ ಮಕ್ಕಳಿದ್ದರು.
೧೧
ಇವರಲ್ಲಿ ಯಹತನು ಮುಖ್ಯಸ್ಥನು. ಜೀಜನು ಎರಡನೆಯವನು. ಯೆಯೂಷ್, ಬೆರೀಯರಿಗೆ ಬಹಳ ಮಂದಿ ಮಕ್ಕಳು ಇರಲಿಲ್ಲವಾದ್ದರಿಂದ ಅವರಿಬ್ಬರೂ ಒಂದೇ ಕುಟುಂಬ ಹಾಗೂ ವರ್ಗವಾಗಿ ಎಣಿಕೆಯಾಗಿದ್ದರು.
೧೨
ಕೆಹಾತನಿಗೆ ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್ ಎಂಬ ನಾಲ್ಕು ಮಂದಿ ಮಕ್ಕಳಿದ್ದರು.
೧೩
ಅಮ್ರಾಮನ ಮಕ್ಕಳು ಆರೋನ್, ಮೋಶೆ ಎಂಬವರು. ಆರೋನನೂ ಅವನ ಸಂತಾನದವರೂ ಮಹಾಪರಿಶುದ್ಧ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಪ್ರತ್ಯೇಕಿಸಲ್ಪಟ್ಟಿದ್ದರು. ಇವರು ಸರ್ವೇಶ್ವರನ ಸನ್ನಿಧಿಯಲ್ಲಿ ಸದಾ ಧೂಪಾರತಿ ಎತ್ತುವವರೂ ಸೇವೆ ಮಾಡುವವರೂ ಸರ್ವೇಶ್ವರನ ಹೆಸರಿನಿಂದ ಜನರನ್ನು ಆಶೀರ್ವದಿಸುವವರೂ ಆಗಿರಬೇಕಿತ್ತು.
೧೪
ದೈವಪುರುಷನಾದ ಮೋಶೆಯ ಸಂತಾನದವರು ಸಾಧಾರಣ ಲೇವಿಯರೊಳಗೆ ಲೆಕ್ಕಿತರಾಗಿದ್ದರು.
೧೫
ಮೋಶೆಯ ಮಕ್ಕಳು ಗೇರ್ಷೋಮ್ ಹಾಗೂ ಎಲೀಯೆಜೆರ್ ಎಂಬವರು.
೧೬
ಮುಖ್ಯಸ್ಥನಾದ ಶೆಬೂವೇಲನು ಗೇರ್ಷೋಮನ ಮಗ.
೧೭
ಮುಖ್ಯಸ್ಥನಾದ ರೆಹಬ್ಯ ಎಲೀಯೆಜೆರನ ಮಗ. ಎಲೀಯೆಜೆರನಿಗೆ ಬೇರೆ ಮಕ್ಕಳಿರಲಿಲ್ಲ. ಆದರೆ ರೆಹಬ್ಯನಿಗೆ ಅನೇಕ ಮಂದಿ ಮಕ್ಕಳಿದ್ದರು.
೧೮
ಮುಖ್ಯಸ್ಥ ಶೆಲೋಮೋತನು ಇಚ್ಹಾರನ ಮಗ.
೧೯
ಹೆಬ್ರೋನನ ಮಕ್ಕಳಲ್ಲಿ ಯೇರಿಯ ಮುಖ್ಯಸ್ಥ; ಅಮರ್ಯ ಎರಡನೆಯವನು, ಯಹಜೀಯೇಲ್ ಮೂರನೆಯವನು, ಯೆಕಮ್ಮಾಮ್ ನಾಲ್ಕನೆಯವನು.
೨೦
ಉಜ್ಜೀಯೇಲನ ಮಕ್ಕಳಲ್ಲಿ ಮೀಕನೂ ಮುಖ್ಯಸ್ಥ; ಇಷೀಯನು ಎರಡನೆಯವನು.
೨೧
ಮೆರಾರೀಯ ಮಕ್ಕಳು ಮಹ್ಲೀ ಹಾಗೂ ಮೂಷೀ ಎಂಬವರು. ಮಹ್ಲೀಯ ಮಕ್ಕಳು ಎಲ್ಲಾಜಾರ್ ಹಾಗೂ ಕೀಷ್ ಇವರು.
೨೨
ಎಲ್ಲಾಜಾರನು ಗಂಡುಮಕ್ಕಳಿಲ್ಲದೆ ಸತ್ತನು. ಅವನಿಗೆ ಹೆಣ್ಣುಮಕ್ಕಳು ಮಾತ್ರ ಇದ್ದರು; ಇವರು ತಮ್ಮ ಬಂಧುಗಳಾದ ಕೀಷನ ಮಕ್ಕಳನ್ನು ಮದುವೆಯಾದರು.
೨೩
ಮೂಷಿಗೆ ಮೆಹ್ಲೀ, ಏದೆರ್, ಯೆರೇಮೋತ್ ಎಂಬ ಮೂರು ಮಂದಿ ಮಕ್ಕಳಿದ್ದರು.
೨೪
ಲೇವಿಯರ ಪಟ್ಟಿಯಲ್ಲಿ ಬರೆದಿರುವ ಹೆಸರುಗಳ ಪ್ರಕಾರ ಇವರೇ ಆಯಾ ಲೇವಿ ವರ್ಗಗಳ ಕುಟುಂಬದ ಮುಖ್ಯಸ್ಥರು. ಇವರಲ್ಲಿ ಇಪ್ಪತ್ತು ವರ್ಷ ಮೊದಲ್ಗೊಂಡು ಹೆಚ್ಚು ವಯಸ್ಸುಳ್ಳವರು ಸರ್ವೇಶ್ವರನ ಆಲಯದಲ್ಲಿ ಸೇವೆಮಾಡಲು ಅರ್ಹರಾಗಿದ್ದರು.
೨೫
ಇಸ್ರಯೇಲ್ ದೇವರಾದ ಸರ್ವೇಶ್ವರ, ತಮ್ಮ ಪ್ರಜೆಗೆ ನೆಮ್ಮದಿಯನ್ನು ಅನುಗ್ರಹಿಸಿ, ಸದಾ ಜೆರುಸಲೇಮಿನಲ್ಲಿ ವಾಸಿಸುವವರಾದ ಕಾರಣ,
೨೬
ಲೇವಿಯರು ಇನ್ನು ಮುಂದೆ ಅವರ ಗುಡಾರವನ್ನೂ ಆರಾಧನಾ ಸಾಮಗ್ರಿಗಳನ್ನೂ ಹೊರುವುದು ಅವಶ್ಯವಿಲ್ಲವೆಂದುಕೊಂಡು, ದಾವೀದನು ಈ ಪ್ರಕಾರ ವಿಧಿಸಿದನು:
೨೭
ದಾವೀದನ ಈ ಕಡೇ ಆಜ್ಞೆಯ ಮೇರೆಗೆ ಲೇವಿಯರಲ್ಲಿ ಇಪ್ಪತ್ತು ವರ್ಷ ಮೊದಲ್ಗೊಂಡು ಹೆಚ್ಚು ವಯಸ್ಸುಳ್ಳವರೆಲ್ಲರೂ ಲೆಕ್ಕಿಸಲ್ಪಟ್ಟರು.
೨೮
ಅವರು ಆರೋನ್ಯರ ಕೈಕೆಳಗಿದ್ದುಕೊಂಡು ಸರ್ವೇಶ್ವರನ ಆಲಯದ ಪರಿಚರ್ಯೆಯನ್ನು ನಡೆಸಬೇಕಾಗಿತ್ತು. ಅವರ ಕೆಲಸ ಕಾರ್ಯ ಇವು: ಅಂಗಳವನ್ನೂ ಅಲ್ಲಿಯ ಕೋಣೆಗಳನ್ನು ನೋಡಿಕೊಳ್ಳುವುದು, ದೇವಾಲಯಕ್ಕೆ ಸಂಬಂಧಪಟ್ಟವುಗಳನ್ನೆಲ್ಲಾ ಶುದ್ಧಮಾಡುವುದು, ದೇವಾಲಯದಲ್ಲಿ ಸೇವೆಮಾಡುವುದು;
೨೯
ನೈವೇದ್ಯದ ಮೀಸಲು ರೊಟ್ಟಿ, ನೈವೇದ್ಯಕ್ಕೆ ಬೇಕಾದ ಗೋದಿಹಿಟ್ಟು, ಹುಳಿಯಿಲ್ಲದ ರೊಟ್ಟಿ, ಕಬ್ಬಿಣದ ಹಂಚಿನಲ್ಲಿ ಸುಟ್ಟ ರೊಟ್ಟಿ, ಎಣ್ಣೆಯಿಂದ ನೆನೆದ ಭಕ್ಷ್ಯ ಇವುಗಳನ್ನು ಒದಗಿಸುವುದು; ಸೇರು, ಅಳತೆಗೋಲು ಇವುಗಳನ್ನು ಪರೀಕ್ಷಿಸುವುದು;
೩೦
ಪ್ರತಿದಿನ ಬೆಳಿಗ್ಗೆ, ಸಂಜೆ ಮತ್ತು ನಿಯಮಿತ ಸಂಖ್ಯೆಗೆ ಸರಿಯಾಗಿ ಸಬ್ಬತ್ ದಿನ, ಅಮಾವಾಸ್ಯೆ, ಜಾತ್ರೆ ಇವುಗಳಲ್ಲಿ, ಸರ್ವೇಶ್ವರನ ಮುಂದೆ ತಪ್ಪದೆ ನಡೆಯುವ ದಹನಬಲಿ ಸಮರ್ಪಣೆಯ ಹೊತ್ತಿನಲ್ಲಿ, ಸರ್ವೇಶ್ವರನಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸುವುದು.
೩೧
***
೩೨
ಹೀಗೆ ಅವರು ತಮ್ಮ ಸಹೋದರರಾದ ಆರೋನ್ಯರ ಸಹಾಯಕರಾಗಿದ್ದು, ದೇವದರ್ಶನದ ಗುಡಾರವನ್ನೂ ಪರಿಶುದ್ಧವಾದ ಎಲ್ಲಾ ಸಾಮಾನುಗಳನ್ನೂ ನೋಡಿಕೊಳ್ಳುವುದೇ ಸರ್ವೇಶ್ವರನ ಆಲಯದಲ್ಲಿ ಅವರು ಮಾಡಬೇಕಾಗಿದ್ದ ಪರಿಚರ್ಯೆ.