೧ |
“ಇದೇ ದೇವರಾದ ಸರ್ವೇಶ್ವರನ ಆಲಯ; ಇದೇ ಇಸ್ರಯೇಲರು ಬಲಿ ಅರ್ಪಿಸತಕ್ಕ ಪೀಠ,” ಎಂದು ಹೇಳಿದನು. |
೨ |
ಅನಂತರ ದಾವೀದನು ಇಸ್ರಯೇಲ್ ನಾಡಿನಲ್ಲಿದ್ದ ಅನ್ಯಜನಗಳನ್ನು ಕೂಡಿಸುವುದಕ್ಕೆ ಆಜ್ಞಾಪಿಸಿದನು. ಅವರಲ್ಲಿದ್ದ ಕಲ್ಲುಕುಟಿಗರನ್ನು ದೇವಾಲಯದ ಕಟ್ಟಡಕ್ಕಾಗಿ ಕಲ್ಲುಗಳನ್ನು ಕೆತ್ತುವುದಕ್ಕೆ ನೇಮಿಸಿದನು. |
೩ |
ಇದಲ್ಲದೆ, ಬಾಗಿಲುಗಳ ಕದಗಳಿಗೆ ಬೇಕಾದ ಮೊಳೆಗಳನ್ನು ಹಾಗು ಪಟ್ಟಿಗಳನ್ನು ಮಾಡುವುದಕ್ಕೆ ಬಹಳ ಕಬ್ಬಿಣವನ್ನೂ ತೂಕ ಮಾಡಲಾಗದಷ್ಟು ತಾಮ್ರವನ್ನೂ |
೪ |
ಎಣಿಸಲಾಗದಷ್ಟು ದೇವದಾರು ಮರಗಳನ್ನೂ ಸಿದ್ಧಪಡಿಸಿದನು; ಸಿದೋನ್ ಹಾಗು ಟೈರಿನ ಜನರು ಅವನಿಗೆ ದೇವದಾರು ಮರಗಳನ್ನು ಒದಗಿಸಿದರು. |
೫ |
ದಾವೀದನು ತನ್ನಲ್ಲೇ, “ನನ್ನ ಮಗ ಸೊಲೊಮೋನನು ಎಳೇ ಪ್ರಾಯದವನು. ಸರ್ವೇಶ್ವರನಿಗೆ ಕಟ್ಟಿಸತಕ್ಕ ದೇವಾಲಯವು, ಜಗತ್ತಿನಲ್ಲೆಲ್ಲಾ ಸುಪ್ರಸಿದ್ಧವಾಗಿರಬೇಕು; ಅದು ಅತಿ ಅದ್ಭುತಕರವಾಗಿರಬೇಕು; ಆದುದರಿಂದ ಅದಕ್ಕೆ ಬೇಕಾಗುವುದನ್ನೆಲ್ಲಾ ಸಿದ್ಧಪಡಿಸುವೆನು,” ಎಂದುಕೊಂಡನು. ಸಾಯುವುದಕ್ಕೆ ಮೊದಲೇ ಹಲವಾರು ಸಲಕರಣೆಗಳನ್ನು ದೊಡ್ಡ ಸಂಖ್ಯೆಯಲ್ಲಿ ಸಜ್ಜು ಮಾಡಿದನು. |
೬ |
ಆಮೇಲೆ ದಾವೀದನು ತನ್ನ ಮಗ ಸೊಲೊಮೋನನನ್ನು ಕರೆಯಿಸಿದನು. ಇಸ್ರಯೇಲ್ ದೇವರಾದ ಸರ್ವೇಶ್ವರನ ಹೆಸರಿನಲ್ಲಿ ದೇವಾಲಯವನ್ನು ಕಟ್ಟಬೇಕೆಂದು ಅವನಿಗೆ ಆಜ್ಞಾಪಿಸಿದನು: |
೭ |
ನಾನು ನನ್ನ ದೇವರಾದ ಸರ್ವೇಶ್ವರನ ಹೆಸರಿನಲ್ಲಿ ದೇವಾಲಯವನ್ನು ಕಟ್ಟಬೇಕೆಂದು ಮನಸ್ಸುಮಾಡಿದೆ. |
೮ |
ಆದರೆ ಸರ್ವೇಶ್ವರ ನನಗೆ, “ನೀನು ಬಹಳ ರಕ್ತವನ್ನು ಸುರಿಸಿದವನು; ಮಹಾಯುದ್ಧಗಳನ್ನು ನಡೆಸಿದವನು. ನೀನು ನನ್ನೆದುರಿನಲ್ಲಿ ಬಹಳ ರಕ್ತವನ್ನು ಸುರಿಸಿದ್ದರಿಂದ, ನನ್ನ ಹೆಸರಿಗಾಗಿ ಆಲಯವನ್ನು ಕಟ್ಟಬಾರದು. |
೯ |
ನಿನಗೆ ಒಬ್ಬ ಮಗ ಹುಟ್ಟುವನು; ಅವನು ಸಮಾಧಾನ ಪುರುಷನಾಗಿರುವನು. ನಾನು ಅವನ ಸುತ್ತಣ ಎಲ್ಲ ವಿರೋಧಿಗಳನ್ನು ಅಡಗಿಸಿ ಅವನಿಗೆ ಶಾಂತಿ ಸಮಾಧಾನವನ್ನು ಅನುಗ್ರಹಿಸುವೆನು. ಅವನಿಗೆ ಸೊಲೊಮೋನ ಎಂಬ ಹೆಸರಿರುವುದು. ಅವನ ಕಾಲದಲ್ಲಿ ಇಸ್ರಯೇಲರಿಗೆ ಶಾಂತಿಸಮಾಧಾನವನ್ನೂ ಸೌಭಾಗ್ಯವನ್ನೂ ದಯಪಾಲಿಸುವೆನು. |
೧೦ |
ಅವನೇ ನನ್ನ ಹೆಸರಿಗೆ ಒಂದು ಆಲಯವನ್ನು ಕಟ್ಟುವನು. ಅವನು ನನಗೆ ಮಗನಾಗಿರುವನು. ನಾನು ಅವನಿಗೆ ತಂದೆಯಾಗಿರುವೆನು; ಇಸ್ರಯೇಲರಲ್ಲಿ ಅವನ ರಾಜ್ಯಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು,” ಎಂಬುದಾಗಿ ಹೇಳಿದರು. |
೧೧ |
“ನನ್ನ ಮಗನೇ, ನೀನು ಕೃತಾರ್ಥನಾಗಬೇಕು; ನಿನ್ನ ದೇವರಾದ ಸರ್ವೇಶ್ವರ ನನ್ನ ವಿಷಯದಲ್ಲಿ ಮಾಡಿದ ವಾಗ್ದಾನದ ಪ್ರಕಾರ ನೀನು ದೇವಾಲಯವನ್ನು ಕಟ್ಟಬೇಕು. ಆ ಸರ್ವೇಶ್ವರ ನಿನ್ನೊಂದಿಗಿರಲಿ! |
೧೨ |
ನೀನು ನಿನ್ನ ದೇವರಾದ ಸರ್ವೇಶ್ವರನ ಧರ್ಮಶಾಸ್ತ್ರವನ್ನು ಕೈಗೊಳ್ಳುವಂತೆ ಅವರು ನಿನಗೆ ಜ್ಞಾನವಿವೇಕಗಳನ್ನು ದಯಪಾಲಿಸಲಿ! ಇಸ್ರಯೇಲರನ್ನು ಆಳುವುದಕ್ಕೆ ನಿನ್ನನ್ನು ನೇಮಿಸಲಿ! |
೧೩ |
ಮೋಶೆಯ ಮುಖಾಂತರ ಸರ್ವೇಶ್ವರ ಇಸ್ರಯೇಲರಿಗೆ ಕೊಟ್ಟ ನ್ಯಾಯವಿಧಿಗಳನ್ನು ನೀನು ಕೈಗೊಳ್ಳುವುದಾದರೆ ಸಫಲನಾಗುವೆ. ಸ್ಥಿರಚಿತ್ತನಾಗಿರು, ಧೈರ್ಯದಿಂದ ಇರು; ಅಂಜಬೇಡ, ಕಳವಳಗೊಳ್ಳಬೇಡ. |
೧೪ |
ಇಗೋ, ನಾನು ಬಹಳ ಪ್ರಯಾಸಪಟ್ಟು ಸರ್ವೇಶ್ವರನ ಆಲಯಕ್ಕಾಗಿ 3,400 ಮೆಟ್ರಿಕ್ ಟನ್ ಬಂಗಾರವನ್ನು 34,000 ಮೆಟ್ರಿಕ್ ಟನ್ ಬೆಳ್ಳಿಯನ್ನು ಹಾಗು ಲೆಕ್ಕವಿಲ್ಲದಷ್ಟು ತಾಮ್ರ, ಕಬ್ಬಿಣ, ಕಲ್ಲುಮರಗಳನ್ನೂ ಕೂಡಿಸಿದ್ದೇನೆ. |
೧೫ |
ನೀನು ಇನ್ನೂ ಹೆಚ್ಚು ಕೂಡಿಸುವೆ. ಇದಲ್ಲದೆ, ಕಟ್ಟುವ ಕೆಲಸಕ್ಕಾಗಿ ಬೇಕಾದಷ್ಟು ಮಂದಿ ಕಲ್ಲುಕುಟಿಗರು, ಶಿಲ್ಪಿಗಳು, ಬಡಗಿಯವರು ಹಾಗು ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ ಈ ಮುಂತಾದ ಕೆಲಸವನ್ನು ಮಾಡುವ ನಿಪುಣರು ನಿನಗಿರುತ್ತಾರೆ; ಅವರನ್ನು ಲೆಕ್ಕಿಸುವುದಕ್ಕಾಗುವುದಿಲ್ಲ. |
೧೬ |
ಏಳು, ಕೆಲಸಕ್ಕೆ ಕೈಹಾಕು; ಸರ್ವೇಶ್ವರ ನಿನ್ನೊಂದಿಗಿರಲಿ!” ಎಂದು ಹೇಳಿದನು. |
೧೭ |
ತನ್ನ ಮಗ ಸೊಲೊಮೋನನಿಗೆ ನೆರವಾಗಬೇಕೆಂದು ಇಸ್ರಯೇಲರ ಎಲ್ಲ ಅಧಿಪತಿಗಳಿಗೆ ದಾವೀದನು ಅಜ್ಞಾಪಿಸಿದನು. |
೧೮ |
“ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಸಂಗಡ ಇದ್ದು ಎಲ್ಲಾ ಕಡೆಗಳಲ್ಲೂ ನಿಮಗೆ ನೆಮ್ಮದಿಯನ್ನು ಅನುಗ್ರಹಿಸಿದ್ದಾರೆ. ನಾಡಿನ ಮೂಲ ನಿವಾಸಿಗಳನ್ನು ನನ್ನ ಕೈಗೊಪ್ಪಿಸಿದ್ದಾರೆ. ನೀವೆ ನೋಡುವ ಹಾಗೆ ನಾಡು ಸರ್ವೇಶ್ವರನಿಗೂ ಅವರ ಪ್ರಜೆಗಳಿಗೂ ಸ್ವಾಧೀನವಾಗಿದೆ. |
೧೯ |
ಆದುದರಿಂದ ನೀವು ಪೂರ್ಣಮನಸ್ಸಿನಿಂದ, ಪೂರ್ಣಪ್ರಾಣದಿಂದ ನಿಮ್ಮ ದೇವರಾದ ಸರ್ವೇಶ್ವರನ ದರ್ಶನವನ್ನು ಬಯಸಿರಿ. ಏಳಿ, ನಿಮ್ಮ ದೇವರಾದ ಸರ್ವೇಶ್ವರನ ನಿಬಂಧನ ಮಂಜೂಷವನ್ನೂ ದೇವಾರಾಧನೆಗೆ ಬೇಕಾದ ಸಾಮಗ್ರಿಗಳನ್ನೂ ಸರ್ವೇಶ್ವರನ ಹೆಸರಿಗಾಗಿ ಕಟ್ಟಲಾಗುವ ಮಂದಿರದಲ್ಲಿ ಇಡಿ,” ಎಂದು ಹೇಳಿದನು.
|
Kannada Bible (KNCL) 2016 |
No Data |