A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಕ್ರಾನಿಕಲ್ಸ್ ೧ ೧೭ಆಗ ಅರಸ ದಾವೀದನು ತನ್ನ ಅರಮನೆಯಲ್ಲಿ ವಾಸಿಸುತ್ತಿದ್ದನು.
ಒಂದು ದಿನ ಅವನು ಪ್ರವಾದಿ ನಾತಾನನನ್ನು ಬರಮಾಡಿ, “ನೋಡು, ನಾನು ವಾಸಮಾಡುತ್ತಾ ಇರುವುದು ದೇವದಾರು ಮರದಿಂದ ಮಾಡಿದ ಅರಮನೆಯಲ್ಲಿ; ಆದರೆ ಸರ್ವೇಶ್ವರನ ನಿಬಂಧನ ಮಂಜೂಷವಿರುವುದು ಬಟ್ಟೆಯಿಂದ ಮಾಡಿದ ಗುಡಾರದಲ್ಲಿ!” ಎಂದನು.
ಅದಕ್ಕೆ ನಾತಾನನು ಸಮ್ಮತಿಸಿ, “ನಿಮಗೆ ಮನಸ್ಸಿದ್ದಂತೆ ಮಾಡಿ; ಸರ್ವೇಶ್ವರ ನಿಮ್ಮೊಡನೆ ಇದ್ದಾರೆ,” ಎಂದನು.
ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು:
“ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ‘ನೀನು ನನಗೊಂದು ದೇವಾಲಯವನ್ನು ಕಟ್ಟಬಾರದು.
ನಾನು ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದಂದಿನಿಂದ ಇಂದಿನವರೆಗೆ ದೇವಾಲಯದಲ್ಲಿ ವಾಸಮಾಡಲಿಲ್ಲ; ಗುಡಾರದಲ್ಲೇ ವಾಸಿಸುತ್ತಿದ್ದೆನು. ಹೀಗೆ ಇಸ್ರಯೇಲರ ಮಧ್ಯೆ ಸಂಚರಿಸುತ್ತಿದ್ದಾಗಲೆಲ್ಲಾ ನನ್ನ ಜನರಾದ ಅವರನ್ನು ಪಾಲಿಸುವುದಕ್ಕೆ ನ್ಯಾಯಸ್ಥಾಪಕರನ್ನು ನೇಮಿಸಿದೆ. ಅವರಾರಿಂದಲೂ ‘ನೀವೇಕೆ ನನಗೆ ದೇವದಾರು ಮರದಿಂದ ದೇವಾಲಯವನ್ನು ಕಟ್ಟಿಸಲಿಲ್ಲ?’ ಎಂದು ಕೇಳಿದ್ದಿಲ್ಲ’.”
“ಇದಲ್ಲದೆ, ನೀನು ನನ್ನ ದಾಸ ದಾವೀದನಿಗೆ, ಸರ್ವಶಕ್ತ ಸರ್ವೇಶ್ವರನಾದ ನಾನೇ ಹೇಳಿದೆನೆಂದು ಹೀಗೆ ತಿಳಿಸು: ‘ಕುರಿಗಳ ಹಿಂದೆ ತಿರುಗಾಡುತ್ತಿದ್ದ ನಿನ್ನನ್ನು ಅಡವಿಯಿಂದ ಆಯ್ದುಕೊಂಡು ನನ್ನ ಪ್ರಜೆ ಇಸ್ರಯೇಲರ ಮೇಲೆ ನಾಯಕನನ್ನಾಗಿ ನೇಮಿಸಿದೆ.
ನೀನು ಹೋದ ಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನ್ನೆಲ್ಲ ನಿನ್ನ ಕಣ್ಮುಂದೆಯೆ ಸದೆಬಡಿದೆ. ಜಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು.
ನನ್ನ ಪ್ರಜೆ ಇಸ್ರಯೇಲರಿಗೆ ಒಂದು ಸ್ಥಳವನ್ನು ಕೊಟ್ಟು, ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಇನ್ನು ಮೇಲೆ ಅವರು ಯಾವ ಭಯವೂ ಇಲ್ಲದೆ ಅಲ್ಲೇ ವಾಸಿಸುವರು.
೧೦
ಪೂರ್ವಕಾಲದಲ್ಲಿ ನಾನು ನನ್ನ ಜನರಿಗೆ ನ್ಯಾಯಸ್ಥಾಪಕರನ್ನು ನೇಮಿಸಿದೆ. ಅಲ್ಲಿಂದೀಚೆಗೆ ಇಸ್ರಯೇಲರು ಶೋಷಣೆಗೆ ಗುರಿಯಾಗದಂತೆ ಇನ್ನು ಗುರಿಯಾಗರು. ನಿನ್ನ ಶತ್ರುಗಳನ್ನೆಲ್ಲ ನಿನಗೆ ಅಧೀನಮಾಡುವೆನು. ಅದು ಮಾತ್ರವಲ್ಲ, ಸರ್ವೇಶ್ವರನಾದ ನಾನು ನಿನಗಾಗಿ ಒಂದು ಮನೆತನವನ್ನು ಕಟ್ಟುವೆನೆಂದು ಮಾತುಕೊಡುತ್ತೇನೆ.
೧೧
ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು.
೧೨
ನನಗಾಗಿ ಒಂದು ದೇವಾಲಯವನ್ನು ಕಟ್ಟುವವನು ಅವನೇ. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು.
೧೩
ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ನಿನಗಿಂತ ಮುಂಚೆ ಇದ್ದವನನ್ನು ನನ್ನ ಕೃಪೆ ಬಿಟ್ಟು ಹೋಗದ ಹಾಗೆ ಅವನನ್ನು ಬಿಟ್ಟು ಹೋಗುವುದಿಲ್ಲ.
೧೪
ಅವನನ್ನು ನನ್ನ ಮನೆಯಲ್ಲೂ ನನ್ನ ರಾಜ್ಯದಲ್ಲೂ ಸದಾ ಸ್ಥಿರಗೊಳಿಸುವೆನು. ಅವನ ಸಿಂಹಾಸನ ಶಾಶ್ವತವಾಗಿರುವುದು’.”
೧೫
ನಾತಾನನು ತನಗಾದ ದರ್ಶನದ ಈ ಮಾತುಗಳನ್ನೆಲ್ಲ ದಾವೀದನಿಗೆ ಹೇಳಿದನು.
೧೬
ಬಳಿಕ ಅರಸ ದಾವೀದನು ಸರ್ವೇಶ್ವರನ ಸನ್ನಿಧಿಗೆ ಹೋಗಿ ಅಲ್ಲಿ ಕುಳಿತುಕೊಂಡು, “ದೇವರೇ, ಸರ್ವೇಶ್ವರಾ, ನನ್ನಂಥವನಿಗೆ ತಾವು ಈ ಪದವಿಯನ್ನು ಅನುಗ್ರಹಿಸಿದ್ದೀರಿ; ತಾವು ನನ್ನನ್ನು ಇಷ್ಟು ಮುಂದಕ್ಕೆ ತರಲು ನಾನೆಷ್ಟರವನು! ನನ್ನ ಕುಟುಂಬ ಎಷ್ಟರದು!
೧೭
ದೇವರೇ, ಇದೂ ಸಾಲದೆಂದೆಣಿಸಿ, ನಿಮ್ಮ ದಾಸನ ಬಹುದೂರ ಸಂತಾನದ ವಿಷಯದಲ್ಲೂ ತಾವು ವಾಗ್ದಾನ ಮಾಡಿರುವಿರಿ. ದೇವರೇ, ಸರ್ವೇಶ್ವರಾ, ನೀವು ನನ್ನನ್ನು ಒಬ್ಬ ಮಹಾನ್ ವ್ಯಕ್ತಿಯನ್ನೋ ಎಂಬಂತೆ ಭಾವಿಸಿದಿರಿ; ತಾವು ಹೀಗೆ ವರ್ತಿಸುವುದು ನರಮಾನವರಿಗೆ ಎಂಥಾ ಭಾಗ್ಯ!
೧೮
ನೀವು ನಿಮ್ಮ ದಾಸ ದಾವೀದನನ್ನು ಚೆನ್ನಾಗಿ ಬಲ್ಲಿರಿ; ನಾನು ನನ್ನ ಘನತೆಯನ್ನು ಕುರಿತು ಇನ್ನೇನು ಹೇಳಲಿ?
೧೯
ಸರ್ವೇಶ್ವರಾ, ನಿಮ್ಮ ದಾಸನಾದ ನನ್ನ ಹಿತಕ್ಕಾಗಿಯೂ ತಮ್ಮ ಚಿತ್ತಾನುಸಾರವಾಗಿಯೂ ಈ ಮಹತ್ಕಾರ್ಯಗಳನ್ನೆಲ್ಲಾ ನಡೆಸಿ ನಿಮ್ಮ ಸರ್ವಮಹತ್ವವನ್ನು ತೋರ್ಪಡಿಸಿದ್ದೀರಿ.
೨೦
ಸರ್ವೇಶ್ವರಾ, ತಮಗೆ ಸಮಾನರು ಯಾರೂ ಇಲ್ಲ. ನಾವು ಕೇಳಿದಂಥವುಗಳನ್ನೆಲ್ಲಾ ಆಲೋಚಿಸಿ ನೋಡಿದರೆ ತಮ್ಮ ಹೊರತು, ಬೇರಾವ ದೇವರೂ ಇಲ್ಲ ಎಂಬುದು ನಿಶ್ಚಯ.
೨೧
ತಮ್ಮ ಇಸ್ರಯೇಲ್ ಪ್ರಜೆಗೆ ಸಮನಾದ ಜನಾಂಗ ಲೋಕದಲ್ಲಿ ಬೇರೆ ಯಾವುದಿದೆ? ದೇವರಾದ ತಾವೇ ಬಂದು ಅದನ್ನು ವಿಮೋಚಿಸಿ ಸ್ವಪ್ರಜೆಯನ್ನಾಗಿಸಿಕೊಂಡಿರಿ; ಆಶ್ಚರ್ಯಕರವಾದ ಅದ್ಭುತಕಾರ್ಯಗಳಿಂದ ನಿಮ್ಮ ನಾಮವನ್ನು ಪ್ರಸಿದ್ಧಿಪಡಿಸಿದ್ದೀರಿ. ಈಜಿಪ್ಟರ ಕೈಯಿಂದ ತಮ್ಮ ಪ್ರಜೆಯನ್ನು ತಪ್ಪಿಸಿ, ರಕ್ಷಿಸಿದಿರಿ. ಅನ್ಯಜನಾಂಗಗಳನ್ನು ಅವರ ನಾಡಿನಿಂದ ಹೊರಡಿಸಿಬಿಟ್ಟಿರಿ.
೨೨
ಇಸ್ರಯೇಲರು ಸದಾಕಾಲ ನಿಮ್ಮ ಪ್ರಜೆಗಳಾಗಿರಬೇಕೆಂದು ನಿರ್ಣಯಿಸಿದಿರಿ;
೨೩
ಸರ್ವೇಶ್ವರಾ, ನೀವು ಅವರಿಗೆ ದೇವರಾದಿರಿ. ಸರ್ವೇಶ್ವರಾ, ತಮ್ಮ ದಾಸನನ್ನೂ ಅವನ ಕುಟುಂಬವನ್ನೂ ಕುರಿತು ನೀವು ಮಾಡಿದ ವಾಗ್ದಾನವನ್ನು ಶಾಶ್ವತಪಡಿಸಿ, ನೆರವೇರಿಸಿರಿ. ಅದು ಸದಾ ಸ್ಥಿರವಾಗಿರಲಿ.
೨೪
‘ಸರ್ವಶಕ್ತರಾದ ಸರ್ವೇಶ್ವರ, ಇಸ್ರಯೇಲರ ದೇವರು; ತಮ್ಮ ದಾಸ ದಾವೀದನ ಮನೆತನವನ್ನು ತಮ್ಮ ಸನ್ನಿಧಿಯಲ್ಲಿ ಸ್ಥಿರವಾಗಿಟ್ಟಿದ್ದಾರೆ’ ಎಂದು ಜನರು ನಿಮ್ಮ ನಾಮವನ್ನು ಕೊಂಡಾಡಲಿ.
೨೫
ನನ್ನ ದೇವರೇ, ತಾವು ತಮ್ಮ ದಾಸನಿಗೆ, ‘ನಾನು ನಿನಗೊಂದು ಮನೆತನವನ್ನು ಕಟ್ಟುವೆನು’ ಎಂದು ವಾಗ್ದಾನ ಮಾಡಿದ್ದೀರಿ. ಆದುದರಿಂದಲೇ ಈ ಪ್ರಕಾರ ನಿಮ್ಮನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡೆ.
೨೬
ಸರ್ವೇಶ್ವರಾ, ತಮ್ಮ ದಾಸನಾದ ನನಗೆ ಇಂಥ ಶ್ರೇಷ್ಠ ವಾಗ್ದಾನ ಮಾಡಿದ ನೀವು ದೇವರಾಗಿದ್ದೀರಿ.
೨೭
ಈಗ ನಿಮ್ಮ ದಾಸನ ಮನೆತನವನ್ನು ಆಶೀರ್ವದಿಸಿರಿ; ಅದನ್ನು ಸದಾಕಾಲ ನಿಮ್ಮ ಆಶ್ರಯದಲ್ಲಿ ಇಟ್ಟುಕೊಳ್ಳಬೇಕೆಂದು ಮನಸ್ಸು ಮಾಡಿದ್ದೀರಿ; ಸರ್ವೇಶ್ವರಾ, ನೀವು ಅದನ್ನು ಆಶೀರ್ವದಿಸಿದ್ದೀರಿ; ಅದು ನಿತ್ಯವು ಸೌಭಾಗ್ಯದಿಂದ ಇರುವುದು,” ಎಂದು ಪ್ರಾರ್ಥಿಸಿದನು.