೧ |
ಅರಸ ದಾವೀದನು ಸರ್ವಸಹಸ್ರಾಧಿಪತಿಗಳೊಂದಿಗೂ ಶತಾಧಿಪತಿಗಳೊಂದಿಗೂ ಸಮಾಲೋಚನೆ ನಡೆಸಿದನು. |
೨ |
“ನೀವು ಎಲ್ಲರು ಸಮ್ಮತಿಸಿದರೆ, ಇದು ನಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಚಿತ್ತವಾಗಿದ್ದರೆ, ಇಲ್ಲಿ ನಮ್ಮೊಂದಿಗೆ ಶೀಘ್ರವಾಗಿ ಬಂದು ಸೇರಬೇಕೆಂದು ಉಳಿದ ಎಲ್ಲಾ ನಮ್ಮ ದೇಶಬಾಂಧವರಿಗೆ, ಯಾಜಕ-ಲೇವಿಯರಿಗೆ ಹಾಗು ಅವರ ಪಟ್ಟಣಗಳಿಗೆ ಸಂದೇಶವನ್ನು ಕಳುಹಿಸೋಣ. |
೩ |
ಅನಂತರ ನಾವು ಹೋಗಿ ಅರಸ ಸೌಲ ನಿರ್ಲಕ್ಷಿಸಿದ್ದ ದೇವಮಂಜೂಷವನ್ನು ತೆಗೆದುಕೊಂಡು ಬರೋಣ,” ಎಂದು ಜನರೆಲ್ಲರಿಗೆ ಸಲಹೆ ಮಾಡಿದನು. |
೪ |
ಈ ಸಲಹೆಯನ್ನು ಸರ್ವರೂ ಮೆಚ್ಚಿ ಅನುಮೋದಿಸಿದರು. |
೫ |
ಹೀಗೆ ಅರಸ ದಾವೀದನು ಕಿರ್ಯತ್ಯಾರೀಮಿನಿಂದ ಜೆರುಸಲೇಮಿಗೆ ದೇವಮಂಜೂಷವನ್ನು ತರಲು ದೇಶದ ಎಲ್ಲಾ ಕಡೆಗಳಿಂದಲೂ, ದಕ್ಷಿಣದ ಈಜಿಪ್ಟ್ ಗಡಿಯಿಂದ ಉತ್ತರದ ಹಾಮಾತ್ ಕಣಿವೆಯವರೆಗಿನ ಜನರನ್ನು ಒಂದುಗೂಡಿಸಿದನು. |
೬ |
ದಾವೀದನೂ ಜನರೂ ಜುದೇಯದಲ್ಲಿ ‘ಬಾಳಾ’ ಎಂದು ಹೆಸರುಗೊಂಡಿದ್ದ ಕಿರ್ಯತ್ಯಾರೀಮ ಪಟ್ಟಣಕ್ಕೆ ಮಂಜೂಷವನ್ನು ತರಲು ಹೋದರು. ಆ ಮಂಜೂಷವು ಕೆರೂಬಿಯರ ನಡುವೆ ಆಸೀನರಾಗಿರುವ ಸರ್ವೇಶ ದೇವರ ನಾಮದಿಂದ ಸುಪ್ರಸಿದ್ಧವಾಗಿತ್ತು. |
೭ |
ಅಬೀನಾದಾಬಿನ ಮನೆಯಿಂದ ಆ ದೇವಮಂಜೂಷವನ್ನು ಹೊರಗೆ ತಂದು, ಒಂದು ಹೊಸ ಎತ್ತಿನ ಬಂಡಿಯ ಮೇಲಿಟ್ಟರು. ಉಜ್ಜನೂ ಅಹಿಯೋವನೂ ಬಂಡಿಯನ್ನು ನಡೆಸುತ್ತಿದ್ದರು. |
೮ |
ದಾವೀದನೂ ಎಲ್ಲಾ ಜನರೂ ಕಿನ್ನರಿ, ಸ್ವರಮಂಡಲ, ತಮಟೆ, ತಾಳ, ತುತೂರಿ ಮುಂತಾದ ವಾದ್ಯಗಳನ್ನು ಬಾರಿಸುತ್ತಾ ಪೂರ್ಣಶಕ್ತಿಯಿಂದ ಹಾಡುತ್ತಾ ದೇವರ ಮುಂದೆ ನರ್ತಿಸುತ್ತಾ ನಡೆದರು. |
೯ |
ಕೀದೋನ್ ಎಂಬಲ್ಲಿ ಕಾಳುತೂರುವ ಕಣಕ್ಕೆ ಬಂದಾಗ ಎತ್ತುಗಳು ಎಡವಿದವು. ಆಗ ಉಜ್ಜನು ತನ್ನ ಕೈಗಳನ್ನು ಚಾಚಿ ದೇವಮಂಜೂಷವನ್ನು ಹಿಡಿದುಕೊಂಡನು. |
೧೦ |
ಮಂಜೂಷವನ್ನು ಮುಟ್ಟಿದ್ದಕ್ಕಾಗಿ ಕೂಡಲೇ ಸರ್ವೇಶ್ವರ ಉಜ್ಜನ ಮೇಲೆ ಉಗ್ರಕೋಪ ತಾಳಿ ಅವನನ್ನು ಕೊಂದುಹಾಕಿದರು. ದೇವರ ಸನ್ನಿಧಿಯಲ್ಲಿಯೇ ಅವನು ಮರಣ ಹೊಂದಿದನು. |
೧೧ |
ಆ ಸ್ಥಳಕ್ಕೆ ಅಂದಿನಿಂದ ‘ಪೆರೆಚ್ ಉಜ್ಜ’ ಎಂಬ ಹೆಸರು ಬಂತು. ಸರ್ವೇಶ್ವರ ಕೋಪದಿಂದ ಉಜ್ಜನನ್ನು ಶಿಕ್ಷಿಸಿದ್ದಕ್ಕಾಗಿ ದಾವೀದನು ಭಯದಿಂದ ಕಂಗೆಟ್ಟನು. |
೧೨ |
ಸರ್ವೇಶ್ವರನ ಭಯದಿಂದ ದಾವೀದನು, “ದೇವರ ಮಂಜೂಷವನ್ನು ನಾನಿರುವಲ್ಲಿಗೆ ಈಗ ಹೇಗೆ ತಾನೆ ತೆಗೆದುಕೊಂಡು ಹೋಗಲಿ?” ಎಂದು ಕಳವಳಪಟ್ಟನು. |
೧೩ |
ಅದನ್ನು ಜೆರುಸಲೇಮಿಗೆ ತನ್ನೊಂದಿಗೆ ತೆಗೆದುಕೊಂಡು ಹೋಗಲಿಲ್ಲ. ಗತ್ ಊರಿನ ನಿವಾಸಿ ಓಬೇದೆದೋಮನ ಮನೆಯಲ್ಲಿ ಅದನ್ನು ಇರಿಸಿದನು. |
೧೪ |
ಅದು ಅಲ್ಲಿ ಮೂರು ತಿಂಗಳು ಇತ್ತು. ಸರ್ವೇಶ್ವರ ಆ ಅವಧಿಯಲ್ಲಿ ಓಬೇದೆದೋಮನ ಕುಟುಂಬವನ್ನೂ ಅವನಿಗೆ ಇದ್ದುದೆಲ್ಲವನ್ನೂ ಆಶೀರ್ವದಿಸಿದರು.
|
Kannada Bible (KNCL) 2016 |
No Data |