A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಕ್ರಾನಿಕಲ್ಸ್ ೧ ೧೧ಇಸ್ರಯೇಲಿನ ಜನರೆಲ್ಲರೂ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದರು. “ನೀವು ನಮ್ಮ ರಕ್ತಸಂಬಂಧಿ.
ಅರಸ ಸೌಲ ನಮ್ಮನ್ನು ಆಳುತ್ತಿದ್ದಾಗ ನೀವು ಇಸ್ರಯೇಲರ ದಳಪತಿಯಾಗಿ ಯುದ್ಧ ನಡೆಸಿದಿರಿ. ನಮ್ಮ ದೇವರಾದ ಸರ್ವೇಶ್ವರ, ‘ನೀನು ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನೂ ಪಾಲಕನೂ ಆಗುವೆ,’ ಎಂದು ವಾಗ್ದಾನ ಮಾಡಿದ್ದು ನಿಮ್ಮನ್ನು ಕುರಿತೇ” ಎಂದು ಹೇಳಿ ವಂದಿಸಿದರು.
ಹೀಗೆ ಇಸ್ರಯೇಲಿನ ನಾಯಕರೆಲ್ಲರೂ ಹೆಬ್ರೋನಿನಲ್ಲಿ ಅರಸ ದಾವೀದನ ಬಳಿಗೆ ಬಂದು ಬಿನ್ನವಿಸಿದರು. ದಾವೀದನು ಅವರೊಂದಿಗೆ ಸರ್ವೇಶ್ವರನ ಸನ್ನಿಧಿಯಲ್ಲಿ ಒಂದು ಒಪ್ಪಂದ ಮಾಡಿಕೊಂಡನು. ಅವರು ಅವನನ್ನು ಅಭಿಷೇಕಿಸಿದರು. ಹೀಗೆ ಸರ್ವೇಶ್ವರ ಸಮುವೇಲನ ಮುಖಾಂತರ ಮಾಡಿದ ವಾಗ್ದಾನ ನೆರವೇರಿತು; ದಾವೀದನು ಇಸ್ರಯೇಲರ ಅರಸನಾದನು.
ಆ ಕಾಲದಲ್ಲಿ ಜೆರುಸಲೇಮ್ ಪಟ್ಟಣವನ್ನು ‘ಯೆಬೂಸ’ ಎಂದು ಕರೆಯಲಾಗುತ್ತಿತ್ತು. ಅಲ್ಲಿಯ ಮೂಲನಿವಾಸಿಗಳಾದ ಯೆಬೂಸಿಯರು ಆ ಪ್ರದೇಶದಲ್ಲಿ ಇನ್ನೂ ವಾಸಿಸುತ್ತಿದ್ದರು. ಅರಸ ದಾವೀದನೂ ಎಲ್ಲಾ ಇಸ್ರಯೇಲರೂ ಜೆರುಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿದರು.
ದಾವೀದನು ಪಟ್ಟಣದೊಳಗೆ ಪ್ರವೇಶಿಸಲು ಎಂದಿಗೂ ಸಾಧ್ಯವಿಲ್ಲವೆಂದು ಯೆಬೂಸಿಯರು ಹೇಳಿದ್ದರು. ಆದರೂ ದಾವೀದನು ಪಟ್ಟಣವನ್ನು ಪ್ರವೇಶಿಸಿ ಸಿಯೋನ್ ಕೋಟೆಯನ್ನು ವಶಪಡಿಸಿಕೊಂಡನು. ಅದು ‘ದಾವೀದ್ ನಗರ’ ಎಂದು ಹೆಸರು ಪಡೆಯಿತು.
‘ಯೆಬೂಸಿಯರಲ್ಲಿ ಒಬ್ಬನನ್ನು ಯಾರು ಮೊದಲು ಕೊಲ್ಲುವನೋ ಅವನು ನನ್ನ ದಳಪತಿಯಾಗುವನು’ ಎಂದು ದಾವೀದ ಪ್ರಕಟಿಸಿದ್ದನು. ಜೆರೂಯಳ ಮಗ ಯೋವಾಬನು ಯುದ್ಧದಲ್ಲಿ ಮುಂದೆ ಹೋಗಿ ಸೇನಾಪತಿಯಾದನು.
ಆ ಕೋಟೆಯನ್ನು ದಾವೀದನು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡದ್ದರಿಂದ ಅದಕ್ಕೆ ‘ದಾವೀದ ನಗರ’ ಎಂದು ಹೆಸರಾಯಿತು.
ಗುಡ್ಡದ ಪೂರ್ವದಿಕ್ಕಿನ ಸ್ಥಳವನ್ನು ಮಟ್ಟಮಾಡಿ ಪಟ್ಟಣವನ್ನು ಪುನಃ ಕಟ್ಟಿದನು. ಯೋವಾಬನು ಪಟ್ಟಣದ ಉಳಿದ ಭಾಗವನ್ನು ಜೀರ್ಣೋದ್ಧಾರ ಮಾಡಿದನು.
ಸರ್ವಶಕ್ತ ಸರ್ವೇಶ್ವರಸ್ವಾಮಿ ದಾವೀದನೊಂದಿಗೆ ಇದ್ದುದರಿಂದ ಅವನು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದಿದನು.
೧೦
ದಾವೀದನ ಸುಪ್ರಸಿದ್ಧ ರಣವೀರರ ಪಟ್ಟಿ ಇದು: ಸರ್ವೇಶ್ವರ ಮಾಡಿದ ವಾಗ್ದಾನಕ್ಕೆ ಅನುಗುಣವಾಗಿ ದಾವೀದನು ಅರಸನಾಗಲು ಇತರ ಇಸ್ರಯೇಲರೊಂದಿಗೆ ಸಹಾಯ ಮಾಡಿದವರು ಹಾಗೂ ಅವನ ರಾಜ್ಯ ಶಕ್ತಿಯುತವಾಗಿರುವಂತೆ ಮಾಡಿದವರು ಇವರು:
೧೧
ಹಕ್ಮೋನ ಗೋತ್ರದ ಯಾಷೊಬ್ಬಾಮ ಮೊದಲನೆಯವನು. ಇವನು ‘ಮೂವರು ಪ್ರಮುಖ ವೀರರು’ ಎಂಬ ಪಡೆಯ ನಾಯಕ. ಇವನು ತನ್ನ ಈಟಿಯಿಂದ ಮುನ್ನೂರು ಜನರ ಮೇಲೆ ಹೋರಾಡಿ ಅವರೆಲ್ಲರನ್ನೂ ಒಂದೇ ಕಾಳಗದಲ್ಲಿ ಕೊಂದುಹಾಕಿದನು.
೧೨
ಪ್ರಸಿದ್ಧರಾದ ‘ಮೂವರು ಪ್ರಮುಖರು’ ಎಂಬ ಪಡೆಯಲ್ಲಿ ಎರಡನೆಯವನು ಅಹೋಹ್ಯ ಗೋತ್ರದ ದೋದೋ ಎಂಬವನ ಮಗ ಎಲ್ಲಾಜಾರನು.
೧೩
ಈತ ಪಸ್ದಮ್ಮೀಮಿ ಎಂಬಲ್ಲಿ ಫಿಲಿಷ್ಟಿಯರಿಗೆ ವಿರುದ್ಧ ಹೂಡಿದ ಕಾಳಗದಲ್ಲಿ ದಾವೀದನ ಪರವಾಗಿ ಹೋರಾಡಿದನು. ಇಸ್ರಯೇಲರು ಹಿಂಜರಿದು ಓಡಿಹೋಗುತ್ತಿದ್ದಾಗ ಇವನು ಜವೆಗೋದಿಯ ಹೊಲದಲ್ಲಿ ಇದ್ದನು.
೧೪
ಆಗ ಅವನೂ ಅವನ ಸಂಗಡಿಗರೂ ಹೊಲದ ಮಧ್ಯದಲ್ಲಿ ನಿಂತುಕೊಂಡು ಫಿಲಿಷ್ಟಿಯರಿಗೆ ವಿರೋಧವಾಗಿ ಕಾದಾಡಿದರು. ಸರ್ವೇಶ್ವರ ಅವನಿಗೆ ಮಹಾಜಯವನ್ನು ದಯಪಾಲಿಸಿದರು.
೧೫
ಅದುಲ್ಲಾಮ್ ಗವಿಯ ಹತ್ತಿರ ದಾವೀದನು ವಾಸಿಸುತ್ತಿದ್ದಾಗ, ಮೂವತ್ತು ಪ್ರಮುಖ ರಣವೀರರಲ್ಲಿ ಮೂವರು ಒಂದು ದಿನ ಒಂದು ಬಂಡೆಯ ಬಳಿಗೆ ಹೋದರು. ಅಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ಕೊಳ್ಳದಲ್ಲಿ ಬೀಡುಬಿಟ್ಟದ್ದನ್ನು ಕಂಡರು.
೧೬
ಆ ಸಮಯದಲ್ಲಿ ದಾವೀದನು ಭದ್ರವಾದ ದಿಣ್ಣೆಯ ಮೇಲಿದ್ದನು. ಫಿಲಿಷ್ಟಿಯರು ಬೆತ್ಲೆಹೇಮನ್ನು ವಶಪಡಿಸಿಕೊಂಡಿದ್ದರು.
೧೭
ದಾವೀದನು ತನ್ನೂರನ್ನು ಜ್ಞಾಪಿಸಿಕೊಂಡು ಅಸ್ವಸ್ಥನಾಗಿ ‘ಬೆತ್ಲೆಹೇಮಿನ ದ್ವಾರದ ಬಳಿಯಿರುವ ಬಾವಿಯಿಂದ ನನಗೆ ಕುಡಿಯಲು ಯಾರಾದರೂ ನೀರನ್ನು ತಂದುಕೊಡಬಲ್ಲಿರೋ!’ ಎಂದು ತನ್ನ ಅಪೇಕ್ಷೆಯನ್ನು ವ್ಯಕ್ತಪಡಿಸಿದನು.
೧೮
ಪ್ರಸಿದ್ಧರಾದ ಮೂವರು ರಣವೀರರು ಫಿಲಿಷ್ಟಿಯರ ಪಾಳೆಯವನ್ನು ಹಾದುಹೋಗಿ ಬಾವಿಯಿಂದ ನೀರನ್ನು ಸೇದಿಕೊಂಡು ದಾವೀದನಿಗೆ ತಂದುಕೊಟ್ಟರು. “ನಾನು ಈ ನೀರನ್ನು ಎಂದೆಂದಿಗೂ ಕುಡಿಯಬಾರದು. ಇದನ್ನು ಕುಡಿದರೆ, ತಮ್ಮ ಪ್ರಾಣಗಳನ್ನೇ ಪಣವಾಗಿಟ್ಟ ಈ ಮೂವರ ರಕ್ತವನ್ನು ಕುಡಿದಂತಾಗುವುದು,” ಎಂದು ಹೇಳಿ,
೧೯
ದಾವೀದನು ಆ ನೀರನ್ನು ಕುಡಿಯದೇ ಸರ್ವೇಶ್ವರನಿಗೆ ಸಮರ್ಪಿಸುವಂತೆ ನೆಲದ ಮೇಲೆ ಸುರಿದನು. ಈ ಮೂರು ಮಂದಿ ರಣವೀರರು ಸಾಧಿಸಿದ ಪರಾಕ್ರಮವಿದು.
೨೦
ಯೋವಾಬನ ಸಹೋದರ ಅಬ್ಷೈ ‘ಮೂವತ್ತು ಪ್ರಮುಖ ವೀರರು,’ ಎಂಬ ಪಡೆಯ ನಾಯಕನಾಗಿದ್ದನು. ಅವನು ತನ್ನ ಈಟಿಯಿಂದ ಮುನ್ನೂರು ಜನರಿಗೆ ವಿರೋಧವಾಗಿ ಹೋರಾಡಿ ಅವರನ್ನು ಕೊಂದುಹಾಕಿ ‘ಮೂವತ್ತು ಪ್ರಮುಖ ವೀರರು ‘ ಎಂಬ ಪಡೆಯಲ್ಲಿ ಪ್ರಖ್ಯಾತ ನಾದನು.
೨೧
ಅವನು ಈ ‘ಮೂವತ್ತು ಪ್ರಮುಖ ವೀರರ’ ಪಡೆಯಲ್ಲಿ ಪ್ರಸಿದ್ಧನಾದುದಲ್ಲದೇ ಅದರ ನಾಯಕನೂ ಆದನು. ಆದರೆ ‘ಮೂವರು ಪ್ರಮುಖ ವೀರರು’ ಎಂಬ ಪಡೆಯವರಷ್ಟು ಪ್ರಸಿದ್ಧನಾಗಲಿಲ್ಲ.
೨೨
ಕಬ್ಜಯೇಲಿನ ಯೆಹೋಯಾದನ ಮಗ ಬೇನಾಯನು ಪ್ರಖ್ಯಾತಿ ಪಡೆದ ಸೈನಿಕನಾಗಿದ್ದನು. ಅವನು ಅನೇಕ ಶೂರಕೃತ್ಯಗಳನ್ನೆಸಗಿದನು: ಮೋವಾಬ್ಯರ ಇಬ್ಬರು ಬಲಶಾಲಿ ಯುದ್ಧವೀರರನ್ನು ಕೊಂದದ್ದೂ ಈ ಕೃತ್ಯಗಳಲ್ಲಿ ಒಂದಾಗಿದೆ. ಒಮ್ಮೆ ಚಳಿಗಾಲದಲ್ಲಿ ತಗ್ಗುಪ್ರದೇಶದಲ್ಲಿ ಹೋಗಿ ಒಂದು ಸಿಂಹವನ್ನು ಕೊಂದನು.
೨೩
ಇನ್ನೊಮ್ಮೆ ಏಳುವರೆ ಅಡಿ ಎತ್ತರದ, ಅತೀ ಬಲವಾದ ಈಟಿಯನ್ನು ಹೊಂದಿದ್ದ, ಬಲಾಢ್ಯನಾದ ಈಜಿಪ್ಟನೊಬ್ಬನನ್ನು ಸೋಲಿಸಿದನು. ಆ ಈಜಿಪ್ಟಿನವನ ಕೈಯಲ್ಲಿ ಬಲವಾದ ಈಟಿ ಇತ್ತು. ಇವನಾದರೋ ಒಂದು ಕೋಲನ್ನು ಮಾತ್ರ ಹಿಡಿದುಕೊಂಡು ಹೋಗಿ, ಅವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು ಅದರಿಂದಲೇ ಅವನನ್ನು ಸಂಹರಿಸಿದನು.
೨೪
‘ಮೂವತ್ತು ಪ್ರಮುಖ ವೀರರು’ ಪಡೆಯ ಒಬ್ಬನಾದ ಬೆನಾಯ ಮಾಡಿದ ಶೂರಕೃತ್ಯ ಇದು.
೨೫
ಇವನು ‘ಮೂವತ್ತು ಪ್ರಮುಖ ವೀರರ’ ಪಡೆಯಲ್ಲಿ ಪ್ರಸಿದ್ಧನಾಗಿದ್ದನೇ ಹೊರತು, ‘ಮೂವರು ಪ್ರಮುಖ ವೀರರ’ ಪಡೆಯವರಷ್ಟು ಪ್ರಖ್ಯಾತನಾಗಲಿಲ್ಲ. ಅವನನ್ನು ದಾವೀದನು ತನ್ನ ಕಾವಲುಗಾರರಲ್ಲಿ ಮುಖ್ಯಸ್ಥನನ್ನಾಗಿ ಇಟ್ಟುಕೊಂಡಿದ್ದನು.
೨೬
ಪ್ರಖ್ಯಾತರಾದ ಇನ್ನಿತರ ಸೈನಿಕರು: ಯೋವಾಬನ ತಮ್ಮ ಅಸಾಹೇಲ, ಬೆತ್ಲೆಹೇಮಿನ ದೋದೋವಿನ ಮಗ ಎಲ್ಖಾನಾನ್,
೨೭
ಹರೋರಿನ ಶಮ್ಮೋತ್, ಪೆಲೋನ್ಯನಾದ ಹೆಲೆಚ್,
೨೮
ತೆಕೋವದ ಇಕ್ಕೇಷನ ಮಗ ಈರ, ಅನತೋತಿನ ಅಬೀಯೆಜೆರ್,
೨೯
ಹುಷ ಊರಿನ ಸಿಬ್ಕೈ, ಅಹೋಹಿನ ಈಲೈ,
೩೦
ನೆಟೋಫದ ಮಹರೈ, ನೆಟೋಫದ ಬಾಣನ ಮಗ ಹೇಲೆದ್,
೩೧
ಬೆನ್ಯಾಮೀನ್ ದೇಶದ ಗಿಬೆಯ ಊರಿನ ರೀಬೈನ ಮಗ ಈತೈ, ಪಿರಾತೋನ್ಯದ ಬೆನಾಯ,
೩೨
ನಹಲೇಗಾಷಿನ ಹೂರೈ, ಅರಾಮಾ ತಗ್ಗಿನ ಅಬೀಯೇಲ್,
೩೩
ಬಹರೂಮ್ಯದ ಅಜ್ಮಾವೆತ್, ಶಾಲ್ಬೋನ್ಯದ ಎಲೆಯಖ್ಬ,
೩೪
ಗೀಜೋನಿನ ಹಾಷೇಮನ ಮಕ್ಕಳು, ಹರಾರ್ಯದ ಶಾಗೇಯನ ಮಗ ಯೋನಾತಾನ,
೩೫
ಹರಾರ್ಯದ ಶಾಕಾರನ ಮಗ ಅಹೀಯಾಮ್, ಊರನ ಮಗ ಎಲೀಫಲ್,
೩೬
ಮೆಕೆರಾತ್ಯದ ಹೇಫೆರ್, ಪೆಲೋನ್ಯದ ಅಹೀಯ,
೩೭
ಕರ್ಮೇಲ್ಯದ ಹೆಚ್ರೋ, ಎಜ್ಬೈಯ ಮಗ ನಾರೈ,
೩೮
ನಾತಾನನ ತಮ್ಮ ಯೋವೇಲ್, ಹಗ್ರೀಯನ ಮಗ ಮಿಬ್ದಾರ್,
೩೯
ಅಮ್ಮೋನಿನ ಚೆಲೆಕ್, ಬೇರೋತ್ಯನೂ ಚೆರೂಯಳ ಮಗ ಯೋವಾಬನ ಆಯುಧವಾಹಕನೂ ಆಗಿದ್ದ ನಹರೈ,
೪೦
ಇತ್ರೀಯರಾದ ಈರ ಮತ್ತು ಗಾರೇಬ,
೪೧
ಹಿತ್ತೀಯನಾದ ಊರೀಯ, ಅಹ್ಲೈಯ ಮಗ ಜಾಬಾದ್,
೪೨
ಶೀಜನ ಮಗ ಅದೀನ, (ಈತ ರೂಬೇನ್ ಗೋತ್ರದ ಪ್ರಮುಖ ಸದಸ್ಯ, ಮೂವತ್ತು ಸೈನಿಕರ ಒಂದು ಗುಂಪೂ ಅವನಿಗಿತ್ತು).
೪೩
ಮಾಕನ ಮಗ ಹಾನಾನ್, ಮೆತೆನ ಊರಿನ ಯೋಷಾಫಾಟ್,
೪೪
ಅಷ್ಟೆರಾತ್ಯದ ಉಜ್ಜೀಯ, ಅರೋಯೇರಿನ ಹೋತಾಮನ ಮಕ್ಕಳಾದ ಶಾಮಾ, ಯೆಗೀಯೇಲರು,
೪೫
ಶಮ್ರಿಯ ಮಗ ಎದೀಗಯೇಲ್, ಎದೀಗಯೇಲನ ತಮ್ಮನೂ ತೀಚೀಯನೂ ಆದ ಯೋಹ,
೪೬
ಮಹವೀಯದ ಎಲೀಯೇಲ್, ಎಲ್ನಾಮನ ಮಕ್ಕಳಾದ ಯೆರೀಬೈ ಮತ್ತು ಯೋಷವ್ಯ, ಮೋವಾಬ್ಯನಾದ ಇತ್ಮ, ಎಲೀಯೇಲ್, ಓಬೆದ್,
೪೭
ಮೆಚೋಬಾಯದ ಯಾಸೀಯೇಲ.