೧ |
ಗಿಲ್ಬೋವ ಬೆಟ್ಟದಲ್ಲಿ ಇಸ್ರಯೇಲ್ ಅವರಿಗೂ ಫಿಲಿಷ್ಟಿಯರಿಗೂ ಘೋರಯುದ್ಧ ನಡೆಯಿತು. ಅನೇಕ ಜನ ಇಸ್ರಯೇಲರು ಯುದ್ಧದಲ್ಲಿ ಹತರಾದರು. ಅರಸ ಸೌಲನೂ ಅವನ ಮಕ್ಕಳೂ ಇನ್ನುಳಿದವರೂ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿದರು. |
೨ |
ಆದರೆ ಫಿಲಿಷ್ಟಿಯರು ಅವರನ್ನು ಬೆನ್ನಟ್ಟಿ ಸೌಲನ ಮಕ್ಕಳಾದ ಯೋನಾತಾನ, ಅಬೀನಾದಾಬ, ಮಲ್ಕೀಷೂವರನ್ನು ಕೊಂದುಹಾಕಿದರು. |
೩ |
ಘೋರ ಯುದ್ಧದ ಮಧ್ಯದಲ್ಲಿ ಸೌಲನು ತಪ್ಪಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ವೈರಿ ಬಾಣವು ಅವನಿಗೆ ತಾಕಲು ಅವನು ತೀವ್ರ ಗಾಯಗೊಂಡನು. |
೪ |
ಆಗ ಅವನು ತನ್ನ ಆಯುಧವಾಹಕ ಯುವಕನನ್ನು ಕರೆದು, ‘ದೇವರಲ್ಲಿ ನಂಬಿಕೆ ಇಲ್ಲದ ಈ ಫಿಲಿಷ್ಟಿಯರ ಹಸ್ತಗಳಿಂದ ನಾನು ಸಾಯಬಾರದು. ನಿನ್ನ ಖಡ್ಗವನ್ನು ಹಿಡಿದು ನನ್ನನ್ನು ಕೊಂದುಬಿಡು’, ಎಂದನು. ಆದರೆ ಆ ಯುವಕನು ಭಯಗೊಂಡು ಹಿಂಜರಿದನು. ಸೌಲನು ತನ್ನ ಖಡ್ಗವನ್ನೇ ಎತ್ತಿಟ್ಟು ಅದರ ಮೇಲೆ ಹಾರಿಬಿದ್ದು ಸತ್ತುಹೋದನು. |
೫ |
ಸೌಲನು ಮೃತನಾದದ್ದನ್ನು ನೋಡಿ ಆ ಯುವಕನು ಸಹ ತನ್ನ ಖಡ್ಗದ ಮೇಲೆ ಬಿದ್ದು ಸತ್ತುಹೋದನು. |
೬ |
ಹೀಗೆ ಸೌಲನೂ ಅವನ ಮೂರು ಮಂದಿ ಗಂಡುಮಕ್ಕಳೂ ಅದೇ ದಿವಸ ಮೃತರಾದರು. ಸೌಲನ ಮನೆಯವರಲ್ಲಿ ರಾಜ್ಯ ಆಳಲು ಯಾರೂ ಉಳಿಯಲಿಲ್ಲ. |
೭ |
ತಗ್ಗಿನಲ್ಲಿ ನೆಲೆಸಿದ್ದ ಇಸ್ರಯೇಲರು ತಮ್ಮ ಸೈನ್ಯವು ಪಲಾಯನಗೈಯಿತು ಮತ್ತು ಸೌಲನೂ ಅವನ ಮಕ್ಕಳೂ ಮರಣ ಹೊಂದಿದರು ಎಂಬ ವಾರ್ತೆಯನ್ನು ಕೇಳಿ ಅವರೂ ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಅನಂತರ ಫಿಲಿಷ್ಟಿಯರು ಬಂದು ಅವುಗಳನ್ನು ವಶಪಡಿಸಿಕೊಂಡರು. |
೮ |
ಕಾಳಗದ ಮರುದಿನ ಫಿಲಿಷ್ಟಿಯರು ಸತ್ತವರ ಒಡವೆವಸ್ತುಗಳನ್ನು ಸುಲಿಗೆಮಾಡಲು ಹೋದಾಗ, ಗಿಲ್ಬೋವ ಬೆಟ್ಟದಲ್ಲಿ ಸೌಲ ಹಾಗೂ ಅವನ ಮಕ್ಕಳು ಸತ್ತುಬಿದ್ದಿರುವುದನ್ನು ಕಂಡರು. |
೯ |
ಸೌಲನ ತಲೆಯನ್ನು ಕಡಿದು ದೇಹದಿಂದ ಬೇರ್ಪಡಿಸಿದರು. ಅವನ ಆಯುಧಗಳನ್ನು ಬಿಚ್ಚಿಕೊಂಡರು. ಅವುಗಳೊಂದಿಗೆ ಸುದ್ದಿವಾಹಕರನ್ನು ತಮ್ಮ ನಾಡಿನ ಎಲ್ಲೆಡೆಗೂ ಕಳುಹಿಸಿ, ಈ ಜಯವಾರ್ತೆಯನ್ನು ತಮ್ಮ ದೇವತೆಗಳಿಗೂ ಜನರಿಗೂ ಮುಟ್ಟಿಸಿದರು. |
೧೦ |
ಸೌಲನ ಆಯುಧಗಳನ್ನು ತೆಗೆದುಕೊಂಡು ಹೋಗಿ ತಮ್ಮ ಒಂದು ಗುಡಿಯಲ್ಲಿಟ್ಟರು. ಸೌಲನ ತಲೆಯನ್ನು ತಮ್ಮ ದೇವರಾದ ದಾಗೋನನ ಗುಡಿಯಲ್ಲಿ ನೇತುಹಾಕಿದರು. |
೧೧ |
ಸೌಲನಿಗೆ ಫಿಲಿಷ್ಟಿಯರು ಮಾಡಿದ್ದು ಎಲ್ಲವನ್ನೂ ಯಾಬೇಷ್ ಗಿಲ್ಯಾದಿನ ಜನರು ಕೇಳಿದರು. |
೧೨ |
ಅವರಲ್ಲಿ ಅತೀ ಶೂರರಾದವರು ಹೋಗಿ ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ತೆಗೆದುಕೊಂಡು ಯಾಬೇಷಿಗೆ ಬಂದರು. ಅಲ್ಲಿ ಅವುಗಳನ್ನು ಏಲಾ ಮರದ ಕೆಳಗೆ ಸಮಾಧಿಮಾಡಿ ಏಳು ದಿನ ಉಪವಾಸ ಆಚರಿಸಿದರು. |
೧೩ |
ಸೌಲನು ಸರ್ವೇಶ್ವರನಿಗೆ ಅವಿಧೇಯನಾದ್ದರಿಂದ ಮರಣ ಹೊಂದಿದನು. ಅವನು ಸರ್ವೇಶ್ವರನ ಆಜ್ಞೆಗಳನ್ನು ಮೀರಿದನು; ಸರ್ವೇಶ್ವರನನ್ನು ವಿಚಾರಿಸದೆ ಭೂತಪ್ರೇತಗಳನ್ನು ವಿಚಾರಿಸಿದನು. |
೧೪ |
ಆದುದರಿಂದ ಸರ್ವೇಶ್ವರ ಅವನನ್ನು ಕೊಲ್ಲಿಸಿ ಜೆಸ್ಸೆಯ ಮಗ ದಾವೀದನಿಗೆ ರಾಜ್ಯವನ್ನೊಪ್ಪಿಸಿದರು.
|
Kannada Bible (KNCL) 2016 |
No Data |