೧ |
ಪ್ರವಾದಿ ಎಲೀಷನು ಪ್ರವಾದಿಮಂಡಲಿಯವರಲ್ಲಿ ಒಬ್ಬನನ್ನು ಕರೆದು, “ಈ ಎಣ್ಣೆಯ ಕುಪ್ಪಿಯನ್ನು ತೆಗೆದುಕೊಂಡು ರಾಮೋತ್ ಗಿಲ್ಯಾದಿಗೆ ಹೋಗಲು ಸಿದ್ಧನಾಗು. |
೨ |
ಆ ಊರನ್ನು ಮುಟ್ಟಿದನಂತರ ನಿಂಷಿಯ ಮೊಮ್ಮಗನೂ ಯೆಹೋಷಾಫಾಟನ ಮಗನೂ ಆದ ಯೇಹುವು ಎಲ್ಲಿರುತ್ತಾನೆಂದು ವಿಚಾರಿಸು. ಅವನು ಸಿಕ್ಕಿದಾಗ ಅವನನ್ನು ಅವನ ಜೊತೆಗಾರರ ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಒಳಗಿನ ಕೋಣೆಗೆ ಹೋಗು. |
೩ |
ತರುವಾಯ ಕುಪ್ಪಿಯಲ್ಲಿರುವ ಈ ಎಣ್ಣೆಯನ್ನು ಅವನ ತಲೆಯ ಮೇಲೆ ಹೊಯ್ದು, ‘ನಾನು ನಿನ್ನನ್ನು ಇಸ್ರಯೇಲರ ಅರಸನಾಗುವುದಕ್ಕೆ ಅಭಿಷೇಕಿಸಿದ್ದೇನೆಂದು ಸರ್ವೇಶ್ವರ ನುಡಿದಿದ್ದಾರೆ,’ ಎಂಬುದಾಗಿ ಹೇಳಿ ಕೂಡಲೆ ಬಾಗಿಲು ತೆರೆದು ಓಡಿಹೋಗು,” ಎಂದು ಆಜ್ಞಾಪಿಸಿದನು. |
೪ |
ಆಗ ಪ್ರವಾದಿಯ ಸೇವಕನಾದ ಆ ಯೌವನಸ್ಥನು ರಾಮೋತ್ ಗಿಲ್ಯಾದಿಗೆ ಹೋಗಿ, |
೫ |
ಸೈನ್ಯಾಧಿಪತಿಗಳೆಲ್ಲಾ ಒಂದು ಕಡೆಯಲ್ಲಿ ಕೂಡಿರುವುದನ್ನು ಕಂಡು, ಅವರನ್ನು ಸಮೀಪಿಸಿ, “ಸೇನಾಪತಿಯೇ, ನಿಮಗೊಂದು ಮಾತು ಹೇಳಬೇಕಾಗಿದೆ,” ಎಂದನು. ಯೇಹುವು, “ನಮ್ಮಲ್ಲಿ ಯಾರಿಗೆ?” ಎಂದು ಕೇಳಿದನು. ಅವನು, “ಸೇನಾಪತಿಯಾದ ನಿಮಗೇ ಹೇಳಬೇಕಾಗಿದೆ,” ಎಂದು ಉತ್ತರಕೊಟ್ಟನು. |
೬ |
ಯೇಹುವು ಎದ್ದು ಒಳಗಿನ ಕೋಣೆಗೆ ಹೋಗಲು, ಆ ಯೌವನಸ್ಥನು ಇವನ ತಲೆಯ ಮೇಲೆ ಎಣ್ಣೆಯನ್ನು ಹೊಯ್ದು, “ಇಸ್ರಯೇಲ್ ದೇವರಾದ ಸರ್ವೇಶ್ವರನ ಮಾತನ್ನು ಕೇಳು; ಅವರು ನಿನಗೆ, ‘ನಾನು ನಿನ್ನನ್ನು ನನ್ನ ಪ್ರಜೆಯಾದ ಇಸ್ರಯೇಲರ ಅರಸನಾಗುವುದಕ್ಕೆ ಅಭಿಷೇಕಿಸಿದ್ದೇನೆ. |
೭ |
ನೀನು ನಿನ್ನ ಯಜಮಾನನಾದ ಅಹಾಬನ ಮನೆಯವರನ್ನು ಸಂಹರಿಸಿಬಿಡು; ಆಗ ನನ್ನ ಸೇವಕರಾದ ಪ್ರವಾದಿಗಳೇ ಮೊದಲಾದ ಸರ್ವೇಶ್ವರನ ಭಕ್ತರ ರಕ್ತವನ್ನು ಸುರಿಸಿದ್ದಕ್ಕಾಗಿ ನಾನು ಈಜೆಬೆಲಳಿಗೆ ಮುಯ್ಯಿ ತೀರಿಸಿದಂತಾಗುವುದು. |
೮ |
ಅಹಾಬನ ಕುಟುಂಬದವರೆಲ್ಲಾ ನಿರ್ನಾಮವಾಗಬೇಕು. ಅವನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಿರಲಿ, ಪರತಂತ್ರರಾಗಿರಲಿ ಎಲ್ಲರನ್ನೂ ಇಸ್ರಯೇಲರ ಮಧ್ಯೆಯಿಂದ ತೆಗೆದುಹಾಕುವೆನು. |
೯ |
ನೆಬಾಟನ ಮಗ ಯಾರೊಬ್ಬಾಮನ ಮನೆಗೂ ಅಹೀಯನ ಮಗ ಬಾಷನ ಮನೆಗೂ ಆದ ಗತಿಯೇ ಅಹಾಬನ ಮನೆಗೂ ಆಗುವುದು. |
೧೦ |
ಈಜೆಬೆಲಳ ಶವವು ಸಮಾಧಿಯನ್ನು ಸೇರುವುದಿಲ್ಲ; ನಾಯಿಗಳು ಅದನ್ನು ಜೆಸ್ರೀಲಿನ ಹೊಲದಲ್ಲಿ ತಿಂದುಬಿಡುವುವು;’ ಎನ್ನುತ್ತಾರೆ,” ಎಂದು ಹೇಳಿ ಬಾಗಿಲು ತೆರೆದು ಓಡಿಹೋದನು. |
೧೧ |
ಯೇಹುವು ಮರಳಿ ತನ್ನ ಒಡೆಯನ ಸೇವಕರ ಹತ್ತಿರ ಬಂದನು. ಅವರು ಅವನನ್ನು, “ಶುಭವಾರ್ತೆಯೋ? ಆ ಹುಚ್ಚನು ನಿನ್ನ ಬಳಿಗೆ ಬಂದದ್ದೇಕೆ?” ಎಂದು ಕೇಳಿದರು. ಅದಕ್ಕೆ ಅವನು, “ಆ ಮನುಷ್ಯ ಎಂಥವನು, ಅವನ ಮಾತು ಎಂಥದು ಎಂಬುದು ನಿಮಗೆ ಗೊತ್ತಲ್ಲವೆ?” ಎಂದು ಉತ್ತರಕೊಟ್ಟನು. |
೧೨ |
ಆದರೆ ಅವರು, “ಅದು ಸುಳ್ಳು; ಅವನು ಹೇಳಿದ್ದನ್ನು ತಿಳಿಸು,” ಎಂದು ಅವನನ್ನು ಒತ್ತಾಯಪಡಿಸಿದರು. ಆದ್ದರಿಂದ ಅವನು, “ನಿನ್ನನ್ನು ಇಸ್ರಯೇಲರ ಅರಸನಾಗುವುದಕ್ಕೆ ಅಭಿಷೇಕಿಸಿದ್ದಾನೆಂಬುದಾಗಿ ಸರ್ವೇಶ್ವರ ನುಡಿದಿದ್ದಾರೆ ಎಂಬೀ ಮೊದಲಾದ ಮಾತುಗಳನ್ನು ಹೇಳಿದನು,” ಎಂದು ಉತ್ತರಕೊಟ್ಟನು. |
೧೩ |
ಕೂಡಲೆ ಅವರು ಅವನಿಗಾಗಿ ಮೆಟ್ಟಲುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಸಿ, ತುತೂರಿಯನ್ನು ಊದಿಸಿ, “ಯೇಹುವು ಅರಸನಾಗಿದ್ದಾನೆ,” ಎಂದು ಆರ್ಭಟಿಸಿದರು. |
೧೪ |
ಹೀಗೆ ನಿಂಷಿಯ ಮೊಮ್ಮಗನೂ ಯೆಹೋಷಾಫಾಟನ ಮಗನೂ ಆದ ಯೇಹುವು ಯೋರಾಮನಿಗೆ ಒಳಸಂಚು ಮಾಡಿದನು. (ಸಿರಿಯಾದವರ ಅರಸನಾದ ಹಜಾಯೇಲನು ರಾಮೋತ್ ಗಿಲ್ಯಾದಿಗೆ ಮುತ್ತಿಗೆ ಹಾಕಿದನು. ಯೋರಾಮನು ಅದನ್ನು ಕಾಪಾಡುವುದಕ್ಕಾಗಿ ಎಲ್ಲಾ ಇಸ್ರಯೇಲರ ಸಹಿತ ಹೋಗಿ, ಹಜಾಯೇಲನೊಡನೆ ಯುದ್ಧಮಾಡಿದನು. |
೧೫ |
ಆಗ ಗಾಯಗೊಂಡು ಅದನ್ನು ಮಾಗಿಸಿಕೊಳ್ಳುವುದಕ್ಕಾಗಿ ಹಿಂದಿರುಗಿ ಜೆಸ್ರೀಲಿಗೆ ಬಂದಿದ್ದನು.) ಯೇಹುವು ತನ್ನ ಜೊತೆಗಾರನಿಗೆ, “ನೀವು ನನ್ನವರಾಗಿದ್ದರೆ, ಈ ಸುದ್ದಿ ಜೆಸ್ರೀಲನ್ನು ಮುಟ್ಟದಂತೆ, ಒಬ್ಬನನ್ನೂ ಈ ಪಟ್ಟಣದಿಂದ ಹೊರಗೆ ಬಿಡಬೇಡಿ,” ಎಂದು ಹೇಳಿದನು. |
೧೬ |
ಅನಂತರ ಅವನು ರಥದಲ್ಲಿ ಕುಳಿತು ಜೆಸ್ರೀಲಿಗೆ ಹೋಗುವುದಕ್ಕಾಗಿ ಹೊರಟನು. ಅಲ್ಲಿ ಅಸ್ವಸ್ಥನಾದ ಯೋರಾಮನೂ ಅವನನ್ನು ನೋಡುವುದಕ್ಕೆ ಬಂದಿದ್ದ ಯೆಹೂದ್ಯರ ಅರಸನಾದ ಅಹಜ್ಯನೂ ಇದ್ದರು. |
೧೭ |
ಜೆಸ್ರೀಲಿನ ಗೋಪುರದಲ್ಲಿದ್ದ ಕಾವಲುಗಾರನು ಯೇಹುವಿನ ಗುಂಪಿನವರನ್ನು ಕಂಡು, “ಜನರ ಒಂದು ಗುಂಪು ಕಾಣಿಸುತ್ತಿದೆ,” ಎಂದು ಯೋರಾಮನಿಗೆ ತಿಳಿಸಿದನು. ಯೋರಾಮನು, “ನೀನು ಒಬ್ಬ ರಾಹುತನನ್ನು ಕರೆದು, ಬರುತ್ತಿರುವವರು ಶುಭವಾರ್ತೆಯನ್ನು ತರುತ್ತಾರೋ ಇಲ್ಲವೋ ಎಂದು ಕೇಳುವುದಕ್ಕಾಗಿ ಕಳುಹಿಸು,” ಎಂಬುದಾಗಿ ಆಜ್ಞಾಪಿಸಿದನು. |
೧೮ |
ರಾಹುತನು ಯೇಹುವನ್ನು ಎದುರುಗೊಂಡು, “ಅರಸರು ‘ಶುಭವಾರ್ತೆಯುಂಟೊ?’ ಎಂದು ಕೇಳುತ್ತಾರೆ,” ಎನ್ನಲು ಅವನು, “ಶುಭವಾರ್ತೆಯಿಂದ ನಿನಗೇನು? ನನ್ನ ಹಿಂದೆ ಬಾ,” ಎಂದನು. ಕಾವಲುಗಾರನು ಅರಸನಿಗೆ, “ರಾಹುತನು ಆ ಗುಂಪನ್ನು ಮುಟ್ಟಿದನು; ಆದರೆ ತಿರುಗಿಬರುವುದು ಕಾಣಿಸುವುದಿಲ್ಲ,” ಎಂದು ತಿಳಿಸಿದಾಗ ಅರಸನು ಇನ್ನೊಬ್ಬ ರಾಹುತನನ್ನು ಕಳುಹಿಸಿದನು. |
೧೯ |
ಇವನು ಹೋಗಿ ಯೇಹುವನ್ನು ಎದುರುಗೊಂಡು, “ಅರಸರು ‘ಶುಭವಾರ್ತೆಯುಂಟೊ?’ ಎಂದು ಕೇಳುತ್ತಾರೆ,” ಎನ್ನಲು ಅವನು, “ಶುಭವಾರ್ತೆಯಿಂದ ನಿನಗೇನು?, ನನ್ನ ಹಿಂದೆ ಬಾ,” ಎಂದನು. |
೨೦ |
ಕಾವಲುಗಾರನು ಪುನಃ ಅರಸನಿಗೆ, “ಎರಡನೆಯವನೂ ಆ ಗುಂಪನ್ನು ಮುಟ್ಟಿದನು; ಆದರೆ ಹಿಂದಿರುಗಿ ಬರುವುದು ಕಾಣಿಸುವುದೇ ಇಲ್ಲ. ರಥದಲ್ಲಿ ಕುಳಿತಿರುವವನು ಕುದುರೆಗಳನ್ನು ಹುಚ್ಚುಹಿಡಿದವನಂತೆ ಓಡಿಸುವುದನ್ನು ನೋಡಿದರೆ ಅವನು, ನಿಂಷಿಯ ಮೊಮ್ಮಗನಾದ ಯೇಹುವಾಗಿರಬೇಕು,” ಎಂದು ಹೇಳಿದನು. |
೨೧ |
ಯೋರಾಮನು ರಥಹೂಡಬೇಕೆಂದು ತನ್ನ ಸೇವಕರಿಗೆ ಆಜ್ಞಾಪಿಸಿದನು. ಅವರು ಹೂಡಿದರು. ಆಗ ಇಸ್ರಯೇಲರ ಅರಸನಾದ ಇವನೂ ಯೆಹೂದ್ಯರ ಅರಸನಾದ ಅಹಜ್ಯನೂ ತಮ್ಮ ತಮ್ಮ ರಥಗಳಲ್ಲಿ ಕುಳಿತುಕೊಂಡು, ಯೇಹುವನ್ನು ಎದುರುಗೊಳ್ಳುವುದಕ್ಕಾಗಿ ಹೊರಟು, ಜೆಸ್ರೀಲಿನವನಾದ ನಾಬೋತನ ಹೊಲದಲ್ಲಿ ಅವನನ್ನು ಸಂಧಿಸಿದರು. |
೨೨ |
ಯೋರಾಮನು ಅವನನ್ನು ಕಂಡ ಕೂಡಲೆ, “ಯೇಹುವೇ, ಶುಭವೋ?’ ಎಂದು ಕೇಳಿದನು. ಅದಕ್ಕೆ ಅವನು, “ನಿನ್ನ ತಾಯಿಯ ದೇವದ್ರೋಹವೂ ಮಂತ್ರತಂತ್ರವೂ ಪ್ರಬಲವಾಗಿರುವಲ್ಲಿ ಶುಭವೆಲ್ಲಿಂದ ಬರುವುದು?” ಎಂದು ಉತ್ತರಕೊಟ್ಟನು. |
೨೩ |
ಒಡನೆ ಯೋರಾಮನು ತನ್ನ ರಥವನ್ನು ತಿರುಗಿಸಿ ಅಹಜ್ಯನಿಗೆ, “ಅಹಜ್ಯನೇ, ಇದು ಒಳಸಂಚು,” ಎಂದು ಹೇಳಿ ಓಡಿಹೋದನು. |
೨೪ |
ಯೇಹುವು ಪೂರ್ಣಬಲದಿಂದ ಬಿಲ್ಲನ್ನು ಬಗ್ಗಿಸಿ ಯೋರಾಮನ ಬೆನ್ನಿಗೆ ಬಾಣವನ್ನೆಸೆದನು; ಅದು ಅವನ ಹೃದಯದಿಂದ ಹೊರಗೆ ಬಂದಿತು. ಅವನು ರಥದಲ್ಲೇ ಕುಸಿದುಬಿದ್ದನು. |
೨೫ |
ಆಗ ಯೇಹುವು ತನ್ನ ಜೊತೆಯಲ್ಲಿದ್ದ ಬಿದ್ಕರನೆಂಬ ಸೇನಾಪತಿಗೆ, “ಯೋರಾಮನ ಶವವನ್ನು ಎತ್ತಿ ಜೆಸ್ರೀಲಿನವನಾದ ನಾಬೋತನ ಹೊಲದಲ್ಲಿ ಹಾಕು. ಒಂದು ದಿನ ನಾವಿಬ್ಬರೂ ಕುದುರೆ ಹತ್ತಿ ಇವನ ತಂದೆಯಾದ ಅಹಾಬನ ಹಿಂದಿನಿಂದ ಹೋಗುತ್ತಿರುವಾಗ |
೨೬ |
ಅಹಾಬನಿಗೆ ಸರ್ವೇಶ್ವರ, ‘ನನ್ನ ಮಾತನ್ನು ಕೇಳು, ನೀನು ನಿನ್ನೆ ಸುರಿಸಿದ ನಾಬೋತನ ಮತ್ತು ಅವನ ಮಕ್ಕಳ ರಕ್ತವನ್ನು ನಿಶ್ಚಯವಾಗಿ ನೋಡಿದ್ದೇನೆ. ನೀನು ಅವರ ರಕ್ತವನ್ನು ಸುರಿಸಿದ ಹೊಲದಲ್ಲೇ ನಿನಗೆ ಮುಯ್ಯಿತೀರಿಸುವೆನು,’ ಎಂದು ಪ್ರವಾದಿಯಿಂದ ಹೇಳಿಸಿದ್ದು ನಿನಗೆ ನೆನಪಿರುತ್ತದಲ್ಲವೆ?’ ಎಂದಿದ್ದರು. ಸರ್ವೇಶ್ವರನ ಆ ನುಡಿ ನೆರವೇರುವಂತೆ ಇವನ ಶವವನ್ನು ಆ ಹೊಲದಲ್ಲೇ ಹಾಕಿಬಿಡು,” ಎಂದು ಹೇಳಿದನು. |
೨೭ |
ಜುದೇಯದ ಅರಸನಾದ ಅಹಜ್ಯನು ಇದನ್ನೆಲ್ಲಾ ಕಂಡು ಬೇತ್ಹಗ್ಗನಿನ ಮಾರ್ಗವಾಗಿ ಓಡಿಹೋದನು. ಯೇಹುವು ಅವನನ್ನು ಹಿಂದಟ್ಟಿ, “ಅವನನ್ನೂ ರಥದಲ್ಲಿಯೇ ಹೊಡೆಯಿರಿ,” ಎಂದು ಕೂಗಲು ಅವನ ಜನರು ಇಬ್ಲೆಯಾಮಿನ ಬಳಿಯಲ್ಲಿರುವ ಗೂರ್ ಗಟ್ಟದ ಮೇಲೆ ಅವನನ್ನು ಗಾಯಪಡಿಸಿದರು. ಅಹಜ್ಯನು ಮೆಗಿದ್ದೋವಿಗೆ ಓಡಿಹೋಗಿ ಅಲ್ಲಿ ಸತ್ತನು. |
೨೮ |
ಅವನ ಸೇವಕರು ಅವನ ಶವವನ್ನು ರಥದಲ್ಲಿ ಹಾಕಿಕೊಂಡು ಜೆರುಸಲೇಮಿನಲ್ಲಿರುವ ದಾವೀದ ನಗರಕ್ಕೆ ತಂದು ಅದನ್ನು ಅವನ ಕುಟುಂಬ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. |
೨೯ |
ಅಹಜ್ಯನು ಅಹಾಬನ ಮಗನಾದ ಯೋರಾಮನ ಆಳ್ವಿಕೆಯ ಹನ್ನೊಂದನೆಯ ವರ್ಷದಲ್ಲಿ ಯೆಹೂದ್ಯರ ಅರಸನಾಗಿದ್ದನು. |
೩೦ |
ಯೇಹುವು ಜೆಸ್ರೀಲಿಗೆ ಬಂದನು. ಈಜೆಬೆಳು ಅದನ್ನು ಕೇಳಿ ತಲೆಯನ್ನು ಆಭರಣಗಳಿಂದ ಅಲಂಕರಿಸಿಕೊಂಡು, ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು, ಕಿಟಕಿಯಿಂದ ನೋಡುತ್ತಾ ನಿಂತಳು. |
೩೧ |
ಅನಂತರ ಅರಮನೆಯ ಪ್ರಾಕಾರದೊಳಗೆ ಬಂದು ಯೇಹುವನ್ನು ಕಂಡು, “ಯಜಮಾನನನ್ನು ಕೊಂದ ಜಿಮ್ರಿಗೆ ಸಮಾನನೇ, ಕ್ಷೇಮವೇ?” ಎಂದು ಕೇಳಿದಳು. |
೩೨ |
ಅವನು ಕಣ್ಣೆತ್ತಿ ಕಿಟಕಿಯ ಕಡೆಗೆ ನೋಡಿ, “ಅಲ್ಲಿ ನನ್ನ ಪಕ್ಷದವರು ಯಾರು?” ಎಂದು ಕೂಗಿದನು. ಕೂಡಲೆ ಆ ಕಿಟಕಿಯಿಂದ ಇಬ್ಬರು ಮೂವರು ಕಂಚುಕಿಗಳು ಅವನ ಕಡೆಗೆ ನೋಡಿದರು. |
೩೩ |
ಅವನು ಅವರಿಗೆ, “ಆಕೆಯನ್ನು ಕೆಳಗೆ ದೊಬ್ಬಿರಿ,” ಎಂದು ಆಜ್ಞಾಪಿಸಲು ಅವರು ದೊಬ್ಬಿದರು. ಆಕೆಯ ರಕ್ತ ಗೋಡೆಗೂ ಕುದುರೆಗಳಿಗೂ ಸಿಡಿಯಿತು. ಅವನು ಆಕೆಯ ಶವವನ್ನು ತುಳಿಸಿಬಿಟ್ಟನು. |
೩೪ |
ಅನಂತರ ಅವನು ಅರಮನೆಯೊಳಗೆ ಹೋಗಿ, ಅನ್ನಪಾನಗಳನ್ನು ತೆಗೆದುಕೊಂಡು, ತನ್ನ ಸೇವಕರಿಗೆ, “ಆ ಶಾಪಗ್ರಸ್ತ ಸ್ತ್ರೀಯ ಶವವನ್ನು ಸರಿಯಾಗಿ ಸಮಾಧಿಮಾಡಿರಿ; ಆಕೆ ರಾಜಪುತ್ರಿಯಾಗಿರುತ್ತಾಳಷ್ಟೆ,” ಎಂದು ಆಜ್ಞಾಪಿಸಿದನು. |
೩೫ |
ಸೇವಕರು ಶವವನ್ನು ಸಮಾಧಿಮಾಡುವುದಕ್ಕಾಗಿ ಹೋದರು. ಆದರೆ ಅವರಿಗೆ ಆಕೆಯ ತಲೆಬುರುಡೆ, ಕೈಕಾಲುಗಳು ಹೊರತಾಗಿ ಬೇರೇನೂ ಸಿಕ್ಕಲಿಲ್ಲ. |
೩೬ |
ಅವರು ಹಿಂದಿರುಗಿ, ಯೇಹುವಿನ ಹತ್ತಿರ ಬಂದು, ಆ ಸಂಗತಿಯನ್ನು ತಿಳಿಸಿದರು. ಅವನು ಅವರಿಗೆ, “’ನಾಯಿಗಳು ಈಜೆಬೆಲಳ ದೇಹಮಾಂಸವನ್ನು ಜೆಸ್ರೀಲಿನ ಹೊಲದಲ್ಲಿ ತಿಂದುಬಿಡುವುವು; |
೩೭ |
ಆಕೆಯ ಶವ ಆ ಹೊಲಕ್ಕೆ ಗೊಬ್ಬರವಾಗುವುದು; ಇದು ಈಜೆಬೆಲಳ ಶವವೆಂದು ಯಾರಿಗೂ ಗುರುತು ಸಿಕ್ಕದ ಹಾಗಾಗುವುದು’ ಎಂಬುದಾಗಿ ತಿಷ್ಬೀಯನೂ ತಮ್ಮ ದಾಸನೂ ಆದ ಎಲೀಯನ ಮುಖಾಂತರ ಸರ್ವೇಶ್ವರ ಹೇಳಿಸಿದ ಮಾತು ಈಗ ನೆರವೇರಿತು,” ಎಂದನು.
|
Kannada Bible (KNCL) 2016 |
No Data |