೧ |
ಆಗ ಎಲೀಷನು, “ಸರ್ವೇಶ್ವರಸ್ವಾಮಿಯ ಈ ವಾಕ್ಯವನ್ನು ಕೇಳು: ‘ನಾಳೆ ಇಷ್ಟೇಹೊತ್ತಿಗೆ ಸಮಾರಿಯಪಟ್ಟಣದ ಬಾಗಿಲಿನಲ್ಲಿ ಗೋದಿಹಿಟ್ಟು ನಾಣ್ಯಕ್ಕೆ ಮೂರು ಕಿಲೋಗ್ರಾಂನಂತೆಯೂ ಜವೆಗೋದಿಯು ನಾಣ್ಯಕ್ಕೆ ಆರು ಕಿಲೋಗ್ರಾಂನಂತೆಯೂ ಮಾರಲಾಗುವುದು’ ಎನ್ನುತ್ತಾರೆ,” ಎಂದು ಹೇಳಿದನು. |
೨ |
ಇದನ್ನು ಕೇಳಿ ಅರಸನ ಹಸ್ತಕನಾದ ಸರದಾರನು ದೈವಪುರುಷನಿಗೆ, “ಸರ್ವೇಶ್ವರ ಆಕಾಶದಲ್ಲಿ ದ್ವಾರಗಳನ್ನು ಮಾಡಿದರೂ ಇದು ಸಂಭವಿಸಲಾರದು,” ಎಂದನು. ಅದಕ್ಕೆ ಎಲೀಷನು, “ಅದು ಸಂಭವಿಸುವುದನ್ನು ನೀನು ಕಣ್ಣಾರೆ ಕಾಣುವೆ; ಆದರೆ ಅದನ್ನು ಅನುಭವಿಸಲಾರೆ,” ಎಂದು ಹೇಳಿದನು. |
೩ |
ಊರುಬಾಗಿಲಿನ ಹತ್ತಿರ ನಾಲ್ಕುಮಂದಿ ಕುಷ್ಠರೋಗಿಗಳಿದ್ದರು. ಅವರು ತಮ್ಮೊಳಗೇ, “ನಾವು ಸಾಯುವ ತನಕ ಇಲ್ಲೇ ಕುಳಿತಿರಬೇಕೇ? |
೪ |
ಪಟ್ಟಣದೊಳಗೆ ಕ್ಷಾಮ ಇರುವುದರಿಂದ ಅಲ್ಲಿಗೆ ಹೋದರೂ ಸಾಯಬೇಕು. ಇಲ್ಲಿಯೇ ಕುಳಿತಿದ್ದರೂ ಸಾಯಬೇಕು. ಆದುದರಿಂದ ಹೊರಟುಹೋಗಿ ಸಿರಿಯಾದವರ ಪಾಳೆಯವನ್ನು ಸೇರೋಣ. ಅವರು ನಮ್ಮನ್ನು ಉಳಿಸುವುದಾದರೆ ಉಳಿಸಲಿ, ಕೊಲ್ಲುವುದಾದರೆ ಕೊಲ್ಲಲಿ,” ಎಂದು ಮಾತಾಡಿಕೊಂಡರು. |
೫ |
ಸಾಯಂಕಾಲವಾದಾಗ ಅವರು ಸಿರಿಯಾದವರ ಪಾಳೆಯಕ್ಕೆ ಹೊರಟರು; ಪಾಳೆಯದ ಅಂಚಿಗೆ ಬಂದಾಗ ಅಲ್ಲಿ ಒಬ್ಬನೂ ಕಾಣಿಸಲಿಲ್ಲ. |
೬ |
ಸರ್ವೇಶ್ವರ ಸಿರಿಯಾದ ಪಾಳೆಯದವರಿಗೆ ರಥರಥಾಶ್ವಸಹಿತವಾದ ಮಹಾಸೈನ್ಯಘೋಷವು ಕೇಳಿಸುವಂತೆ ಮಾಡಿದ್ದರು. ಆದ್ದರಿಂದ ಅವರು, “ಇಸ್ರಯೇಲರ ಅರಸನು ಹಿತ್ತಿಯ ಹಾಗು ಈಜಿಪ್ಟ್ ಅರಸರಿಗೆ ಹಣಕೊಟ್ಟು ಅವರನ್ನು ನಮಗೆ ವಿರುದ್ಧ ಕರೆದುತಂದಿದ್ದಾನೆ,” ಎಂದುಕೊಂಡು, |
೭ |
ತಮ್ಮ ಗುಡಾರಗಳನ್ನೂ ಕತ್ತೆಕುದುರೆಗಳನ್ನೂ ಪಾಳೆಯದಲ್ಲಿದ್ದುದೆಲ್ಲವನ್ನೂ ಬಿಟ್ಟು, ತಮ್ಮ ಪ್ರಾಣರಕ್ಷಣೆಗಾಗಿ, ಅದೇ ಸಾಯಂಕಾಲದಲ್ಲಿ ಓಡಿಹೋಗಿದ್ದರು. |
೮ |
ಆ ಕುಷ್ಠರೋಗಿಗಳು ಪಾಳೆಯದ ಅಂಚಿಗೆ ಬಂದಾಗ ಮೊದಲನೆಯ ಡೇರೆಯನ್ನು ಹೊಕ್ಕು ಉಂಡು, ಕುಡಿದು ಅದರಲ್ಲಿದ್ದ ಬೆಳ್ಳಿ ಬಂಗಾರವನ್ನೂ ಬಟ್ಟೆಗಳನ್ನೂ ತೆಗೆದುಕೊಂಡು ಬಚ್ಚಿಟ್ಟರು. ಇನ್ನೊಂದು ಡೇರೆಯನ್ನು ಹೊಕ್ಕು ಅಲ್ಲಿಂದಲೂ ತೆಗೆದುಕೊಂಡು ಅಡಗಿಸಿ ಇಟ್ಟರು. |
೯ |
ಅನಂತರ ಅವರು, “ಇದು ಶುಭವಾರ್ತೆಯ ದಿವಸ; ನಾವು ಇದನ್ನು ಪ್ರಕಟಿಸದಿರುವುದು ಒಳ್ಳೆಯದಲ್ಲ. ಬೆಳಗಾಗುವವರೆಗೆ ತಡಮಾಡಿದರೆ ಶಿಕ್ಷೆಗೆ ಪಾತ್ರರಾಗಬಹುದು. ಆದುದರಿಂದ ಹೋಗಿ ಅರಮನೆಯವರಿಗೆ ಈ ಸಂಗತಿಯನ್ನು ತಿಳಿಸೋಣ,” ಎಂದು ಮಾತಾಡಿಕೊಂಡರು. |
೧೦ |
ಅಲ್ಲಿಂದ ಹೊರಟು ಊರಬಾಗಿಲಿಗೆ ಬಂದು, ಕಾವಲುಗಾರರಿಗೆ, “ನಾವು ಸಿರಿಯಾದವರ ಪಾಳೆಯಕ್ಕೆ ಹೋಗಿದ್ದೆವು; ಅಲ್ಲಿ ನಮಗೆ ಯಾರೂ ಕಾಣಿಸಲಿಲ್ಲ, ಮನುಷ್ಯಶಬ್ದವೇ ಕೇಳಿಸಲಿಲ್ಲ. ಕತ್ತೆಕುದುರೆಗಳನ್ನು ಅಲ್ಲಲ್ಲಿ ಕಟ್ಟಲಾಗಿದೆ. ಡೇರೆಗಳು ಇದ್ದ ಹಾಗೆಯೇ ಇರುತ್ತವೆ,” ಎಂದು ಕೂಗಿ ತಿಳಿಸಿದರು. |
೧೧ |
ದ್ವಾರಪಾಲಕರು ಕೂಡಲೆ ಅರಮನೆಯವರನ್ನು ಕೂಗಿ ಅವರಿಗೆ ಈ ಸಮಾಚಾರವನ್ನು ಮುಟ್ಟಿಸಿದರು. |
೧೨ |
ಅರಸನು ರಾತ್ರಿಯಲ್ಲೇ ಎದ್ದು ತನ್ನ ಪರಿವಾರದವರಿಗೆ, “ಸಿರಿಯಾದವರ ಹಂಚಿಕೆಯನ್ನು ಹೇಳುತ್ತೇನೆ ಕೇಳಿ; ನಾವು ಹಸಿವೆಯಿಂದ ಸಾಯುವವರಾಗಿದ್ದೇವೆ ಎಂಬುದನ್ನು ಅವರು ಬಲ್ಲರು. ಆದುದರಿಂದ ಪಾಳೆಯವನ್ನು ಬಿಟ್ಟುಹೋಗಿ ಅಡವಿಯಲ್ಲಿ ಅಡಗಿಕೊಂಡಿದ್ದಾರೆ; ನಾವು ಪಟ್ಟಣದಿಂದ ಹೊರಗೆ ಹೋದ ಕೂಡಲೆ ನಮ್ಮನ್ನು ಸಜೀವಿಗಳನ್ನಾಗಿಯೇ ಹಿಡಿದು ಪಟ್ಟಣವನ್ನು ಪ್ರವೇಶಿಸಬೇಕೆಂದಿದ್ದಾರೆ,” ಎಂದನು. |
೧೩ |
ಆಗ ಅವರಲ್ಲೊಬ್ಬನು ಅರಸನಿಗೆ, “ರಾಹುತರು ಪಟ್ಟಣದಲ್ಲುಳಿದಿರುವ ಕುದುರೆಗಳಲ್ಲಿ ನಾಲ್ಕೈದು ಕುದುರೆಗಳನ್ನು ತೆಗೆದುಕೊಂಡು ನೋಡುವುದಕ್ಕೆ ಹೋಗಲಿ; ಅವರಿಗೆ ಪಟ್ಟಣದಲ್ಲಿ ಉಳಿದಿರುವ ಇಸ್ರಯೇಲರ ಗತಿಯಾಗಲಿ ಅಥವಾ ಸತ್ತುಹೋದವರ ಗತಿಯಾಗಲಿ ಸಂಬವಿಸುವದಷ್ಟೆ,” ಎಂದು ಹೇಳಿದನು. |
೧೪ |
ಕೂಡಲೆ ಅರಸನು ಎರಡು ಜೋಡಿ ಕುದುರೆಗಳನ್ನು ತರಿಸಿ, ಸಿರಿಯಾದವರ ಸೈನ್ಯವೆಲ್ಲಿರುತ್ತದೆಂಬುದನ್ನು ನೋಡಿಬರುವುದಕ್ಕಾಗಿ, ರಾಹುತರನ್ನು ಕಳುಹಿಸಿದನು. |
೧೫ |
ಅವರು ಜೋರ್ಡನ್ ನದಿಯವರೆಗೂ ಹೋಗಿ, ದಾರಿಯಲ್ಲೆಲ್ಲಾ ತಮ್ಮ ಬಟ್ಟೆಬರೆಗಳನ್ನೂ ಸಾಮಾನು ಸರಂಜಾಮುಗಳನ್ನೂ ಬಿಸಾಡಿರುವುದನ್ನು ಕಂಡು, ಹಿಂದಿರುಗಿ ಬಂದು ಅರಸನಿಗೆ ತಿಳಿಸಿದರು. |
೧೬ |
ಆಗ ಜನರು ಹೊರಗೆ ಹೋಗಿ, ಸಿರಿಯಾದವರ ಪಾಳೆಯವನ್ನು ಸೂರೆಮಾಡಿಬಿಟ್ಟರು. ಸರ್ವೇಶ್ವರನ ಮಾತಿನಂತೆ ಗೋದಿಹಿಟ್ಟು ನಾಣ್ಯಕ್ಕೆ ಮೂರು ಕಿಲೋಗ್ರಾಂನಂತೆಯೂ ಜವೆಗೋದಿಯು ನಾಣ್ಯಕ್ಕೆ ಆರು ಕಿಲೋಗ್ರಾಂನಂತೆಯೂ ಮಾರಲಾಗುತ್ತಿತ್ತು. |
೧೭ |
ಅರಸನು ತನ್ನ ಹಸ್ತಕನಾದ ಸರದಾರನನ್ನು ಊರ ದ್ವಾರಪಾಲಕರ ನಾಯಕನನ್ನಾಗಿ ಕಳುಹಿಸಿದ್ದನು. ಅವನು ಜನರ ತುಳಿತಕ್ಕೆ ಸಿಕ್ಕಿ ಸತ್ತನು. ಹೀಗೆ ಆ ದೈವಪುರುಷನು ಅರಸನ ಜೊತೆಯಲ್ಲಿ ತನ್ನ ಬಳಿಗೆ ಬಂದಿದ್ದ ಆ ಸರದಾರನಿಗೆ ಹೇಳಿದ ಮಾತು ನೆರವೇರಿತು. |
೧೮ |
ಅವನು ಅರಸನಿಗೆ, “ನಾಳೆ ಇಷ್ಟು ಹೊತ್ತಿಗೆ ಸಮಾರಿಯ ಪಟ್ಟಣದ ಬಾಗಿಲಿನಲ್ಲಿ ಜವೆಗೋದಿ ನಾಣ್ಯಕ್ಕೆ ಆರು ಕಿಲೋಗ್ರಾಂನಂತೆಯೂ ಗೋದಿಹಿಟ್ಟು ನಾಣ್ಯಕ್ಕೆ ಮೂರು ಕಿಲೋಗ್ರಾಂನಂತೆಯೂ ಮಾರಲಾಗುವುದು,” ಎಂದು ಹೇಳಿದಾಗ |
೧೯ |
ಆ ಸರದಾರನು, “ಸರ್ವೇಶ್ವರ ಆಕಾಶದಲ್ಲಿ ದ್ವಾರಗಳನ್ನು ಮಾಡಿದರೂ ಇದು ಸಂಭವಿಸಲಾರದು,” ಎಂದದ್ದರಿಂದ ದೈವಪುರುಷನು ಅವನಿಗೆ, “ನೀನು ಅದನ್ನು ಕಣ್ಣಾರೆ ಕಾಣುವೆ; ಆದರೆ ಅದನ್ನು ಅನುಭವಿಸಲಾರೆ,” ಎಂದು ನುಡಿದಿದ್ದನು. |
೨೦ |
ಊರು ಬಾಗಿಲಿನಲ್ಲಿ ಜನರಿಂದ ತುಳಿತಕ್ಕೆ ಸಿಕ್ಕಿ ಅವನು ಸತ್ತದ್ದರಿಂದ ಈ ಮಾತು ನೆರವೇರಿತು.
|
Kannada Bible (KNCL) 2016 |
No Data |