೧ |
ಒಂದು ಸಾರಿ ಪ್ರವಾದಿಮಂಡಲಿಯವರು ಎಲೀಷನಿಗೆ, “ನಾವು ನಿನ್ನ ಜೊತೆಯಲ್ಲಿ ವಾಸಿಸುತ್ತಿರುವ ಈ ಸ್ಥಳ ಬಹಳ ಇಕ್ಕಟ್ಟಾಗಿದೆ. |
೨ |
ಆದುದರಿಂದ ನಾವು ಜೋರ್ಡನಿಗೆ ಹೋಗಿ ಅಲ್ಲಿ ಪ್ರತಿಯೊಬ್ಬನೂ ಒಂದೊಂದು ದಿಮ್ಮಿಯನ್ನು ಕಡಿದುಕೊಂಡು ಬಂದು ನಮಗೆ ಇರಲು ಒಂದು ಮನೆಯನ್ನು ಕಟ್ಟಿಕೊಳ್ಳೋಣ,” ಎಂದರು. ಅವನು ಅವರಿಗೆ, “ಹೋಗಬಹುದು,” ಎಂದು ಹೇಳಿದನು. |
೩ |
ಅವರಲ್ಲೊಬ್ಬನು, “ದಯವಿಟ್ಟು ತಾವೂ ತಮ್ಮ ಸೇವಕರಾದ ನಮ್ಮ ಜೊತೆಯಲ್ಲಿ ಬರಬೇಕು,” ಎಂದು ಬೇಡಿಕೊಂಡನು. ಎಲೀಷನು, “ಬರುತ್ತೇನೆ,” ಎಂದು ಹೇಳಿ ಅವರೊಡನೆ ಹೊರಟನು. |
೪ |
ಅವರು ಜೋರ್ಡನನ್ನು ಮುಟ್ಟಿ ಮರಗಳನ್ನು ಕಡಿಯುತ್ತಿರುವಾಗ ಒಬ್ಬನ ಕೊಡಲಿ, ಕಾವು ತಪ್ಪಿ, ನೀರೊಳಗೆ ಬಿದ್ದಿತು. |
೫ |
ಆದುದರಿಂದ ಅವನು, “ಅಯ್ಯೋ! ಗುರುವೇ, ನಾನು ಅದನ್ನು ಸಾಲವಾಗಿ ತಂದಿದ್ದೆ,” ಎಂದು ಸಂತಾಪಿಸಿದನು. |
೬ |
ದೈವಪುರುಷನು, “ಅದು ಎಲ್ಲಿ ಬಿದ್ದಿತು?” ಎಂದು ಕೇಳಿದನು; ಅದು ಬಿದ್ದ ಸ್ಥಳವನ್ನು ಅವನು ತೋರಿಸಿದನು. ಆಗ ದೈವಪುರುಷನು ಆ ಮರದಿಂದ ಒಂದು ತುಂಡು ಕಟ್ಟಿಗೆಯನ್ನು ಕಡಿದು ಅಲ್ಲಿ ಹಾಕಿದನು; ಕೂಡಲೆ ಆ ಕೊಡಲಿ ತೇಲಾಡಿತು. |
೭ |
ಎಲೀಷನು, “ಅದನ್ನು ತೆಗೆದುಕೋ,” ಎಂದು ಆಜ್ಞಾಪಿಸಲು ಆ ವ್ಯಕ್ತಿ ಕೈಚಾಚಿ ಅದನ್ನು ತೆಗೆದುಕೊಂಡನು. |
೮ |
ಸಿರಿಯಾದ ರಾಜನು ಇಸ್ರಯೇಲರಿಗೆ ವಿರುದ್ಧ ಯುದ್ಧಕ್ಕೆ ಬಂದನು. ಅವನು ಯುದ್ಧದಲ್ಲಿ ಹೊಂಚುಹಾಕತಕ್ಕ ಸ್ಥಳವನ್ನು ತನ್ನ ಸೇನಾಪತಿಗಳೊಡನೆ ಗೊತ್ತುಮಾಡುತ್ತಿದ್ದನು. |
೯ |
ಆದರೆ ದೈವಪುರುಷನು, ಪ್ರತೀಸಾರಿ ಇಸ್ರಯೇಲರ ಅರಸನಿಗೆ, “ಜಾಗರೂಕತೆಯಿಂದಿರಿ! ನೀವು ಇಂಥಿಂಥ ಸ್ಥಳದಲ್ಲಿ ಹಾಯಬಾರದು, ಅಲ್ಲಿ ಸಿರಿಯಾದವರು ಅಡಗಿಕೊಂಡಿದ್ದಾರೆ,” ಎಂದು ತಿಳಿಸುತ್ತಿದ್ದನು. |
೧೦ |
ಹೀಗೆ ಅವನು ಹಲವು ಸಾರಿ ಸಿರಿಯಾದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡನು. |
೧೧ |
ಈ ಕಾರಣ ಸಿರಿಯಾದ ಅರಸನು ಕಳವಳಗೊಂಡು, ತನ್ನ ಸೇನಾಪತಿಗಳನ್ನು ಕರೆದು, “ನಮ್ಮವರಲ್ಲಿ ಇಸ್ರಯೇಲರ ಅರಸನ ಪಕ್ಷದವರು ಯಾರೋ ಇದ್ದಾರೆ; ನನಗೆ ನೀವು ಯಾರೂ ತಿಳಿಸುವುದಿಲ್ಲವೇ?’ ಎಂದು ಕೇಳಿದನು. |
೧೨ |
ಆಗ ಅವರಲ್ಲೊಬ್ಬನು, “ನನ್ನ ಒಡೆಯರಾದ ಅರಸೇ, ಹಾಗಲ್ಲ; ಇಸ್ರಯೇಲರಲ್ಲಿ ಎಲೀಷನೆಂಬೊಬ್ಬ ಪ್ರವಾದಿಯಿದ್ದಾನೆ; ನೀವು ನಿಮ್ಮ ಮಲಗುವ ಕೋಣೆಯಲ್ಲಿ ಆಡುವ ಮಾತುಗಳನ್ನು ಸಹ ಅವನು ಅರಿತುಕೊಂಡು ಎಲ್ಲವನ್ನೂ ಇಸ್ರಯೇಲರ ಅರಸನಿಗೆ ತಿಳಿಸುತ್ತಾನೆ,” ಎಂದನು. |
೧೩ |
ಅರಸನು ಇದನ್ನು ಕೇಳಿ, “ಅವನು ಎಲ್ಲಿರುತ್ತಾನೆಂದು ವಿಚಾರಿಸಿರಿ, ನಾನು ಅವನನ್ನು ಹಿಡಿಯುತ್ತೇನೆ,” ಎಂದು ಹೇಳಿದನು. |
೧೪ |
ಆ ಪ್ರವಾದಿ ದೋತಾನಿನಲ್ಲಿರುತ್ತಾನೆಂದು ತಿಳಿದುಕೊಂಡು ರಥರಥಾಶ್ವಸಹಿತವಾದ ಮಹಾಸೈನ್ಯವನ್ನು ಅಲ್ಲಿಗೆ ಕಳುಹಿಸಿದನು. ಸೈನ್ಯದವರು ರಾತ್ರಿಯಲ್ಲೇ ಆ ಪಟ್ಟಣವನ್ನು ಸಮೀಪಿಸಿ, ಅದಕ್ಕೆ ಮುತ್ತಿಗೆ ಹಾಕಿದರು. |
೧೫ |
ದೈವಪುರುಷನ ಸೇವಕನು ಬೆಳಿಗ್ಗೆ ಎದ್ದು ಹೊರಗೆ ಹೋದಾಗ ರಥರಥಾಶ್ವಸಹಿತವಾದ ಮಹಾಸೈನ್ಯವು ಬಂದು, ಪಟ್ಟಣದ ಸುತ್ತಲೂ ನಿಂತಿರುವುದನ್ನು ಕಂಡು, ತನ್ನ ಯಜಮಾನನಿಗೆ, “ಅಯ್ಯೋ! ಗುರುವೇ, ಏನು ಮಾಡೋಣ?” ಎಂದನು. |
೧೬ |
ಆಗ ಎಲೀಷನು, “ಹೆದರಬೇಡ; ಅವರ ಕಡೆ ಇರುವವರಿಗಿಂತಲೂ ನಮ್ಮ ಕಡೆ ಇರುವವರು ಹೆಚ್ಚಾಗಿದ್ದಾರೆ,” ಎಂದು ಹೇಳಿ, |
೧೭ |
“ಹೇ ಸರ್ವೇಶ್ವರಾ, ಇವನು ನೋಡುವಂತೆ ಇವನ ಕಣ್ಣುಗಳನ್ನು ತೆರೆಯಿರಿ,” ಎಂದು ಪ್ರಾರ್ಥಿಸಿದನು. ಸರ್ವೇಶ್ವರ ಅವನ ಕಣ್ಣುಗಳನ್ನು ತೆರೆದರು. ಆಗ ಎಲೀಷನ ರಕ್ಷಣೆಗಾಗಿ ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥರಥಾಶ್ವಗಳು ಆ ಸೇವಕನಿಗೆ ಕಂಡವು. |
೧೮ |
ಶತ್ರುಗಳು ಸಮೀಪಕ್ಕೆ ಬಂದಾಗ ಎಲೀಷನು, “ಸ್ವಾಮೀ, ಈ ಜನರನ್ನು ಕುರುಡರನ್ನಾಗಿ ಮಾಡಿ,” ಎಂದು ಸರ್ವೇಶ್ವರನನ್ನು ಪ್ರಾರ್ಥಿಸಿದನು. ಅವರು ಅವನ ಮೊರೆಯನ್ನು ಆಲಿಸಿ ಆ ಜನರನ್ನು ಕುರುಡರನ್ನಾಗಿ ಮಾಡಿದರು. |
೧೯ |
ಆಗ ಎಲೀಷನು, “ನೀವು ಹೋಗಬೇಕೆಂದಿದ್ದ ಪಟ್ಟಣವೂ ದಾರಿಯೂ ಇದಲ್ಲ; ನನ್ನ ಜೊತೆಯಲ್ಲೇ ಬನ್ನಿ, ನೀವು ಹುಡುಕುತ್ತಿರುವ ವ್ಯಕ್ತಿಯ ಬಳಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ,” ಎಂದು ಹೇಳಿ ಅವರನ್ನು ಸಮಾರಿಯಕ್ಕೆ ಕರೆದುಕೊಂಡು ಹೋದನು. |
೨೦ |
ಅವರು ಸಮಾರಿಯದೊಳಗೆ ಬಂದಾಗ ಎಲೀಷನು, “ಇವರು ನೋಡುವಂತೆ ಇವರ ಕಣ್ಣುಗಳನ್ನು ತೆರೆಯಿರಿ,” ಎಂದು ಸರ್ವೇಶ್ವರನನ್ನು ಬೇಡಿಕೊಂಡನು. ಅಂತೆಯೇ ಸರ್ವೇಶ್ವರ ಅವರ ಕಣ್ಣುಗಳನ್ನು ತೆರೆದರು. ಆಗ ಅವರಿಗೆ ತಾವು ಸಮಾರಿಯದಲ್ಲಿದ್ದೇವೆಂದು ತಿಳಿದುಬಂದಿತು. |
೨೧ |
ಇಸ್ರಯೇಲರ ಅರಸನು ಅವರನ್ನು ಕಂಡು ಎಲೀಷನಿಗೆ, ‘ಅಪ್ಪಾ ಗುರುವೇ, ಇವರನ್ನು ಸಂಹರಿಸಲೇ?, ಸಂಹರಿಸಲೇ?’ ಎಂದು ಕೇಳಿದನು. |
೨೨ |
ಅವನು, “ಬೇಡ; ನೀನು ಸ್ವಾಧೀನಪಡಿಸಿಕೊಂಡು ಸೆರೆಯಾಗಿ ತಂದವರನ್ನು ಕತ್ತಿಬಿಲ್ಲುಗಳಿಂದ ಸಂಹರಿಸುವೆಯೋ? ಅವರಿಗೆ ಅನ್ನಪಾನಗಳನ್ನು ಕೊಡು; ಉಂಡುಕುಡಿದು ತಮ್ಮ ಯಜಮಾನನ ಬಳಿಗೆ ಹಿಂದಿರುಗಿ ಹೋಗಲಿ,” ಎಂದು ಉತ್ತರಕೊಟ್ಟನು. |
೨೩ |
ಆಗ ಅರಸನು ಅವರಿಗಾಗಿ ಒಂದು ದೊಡ್ಡ ಔತಣವನ್ನು ಮಾಡಿಸಿ, ಅವರು ಅನ್ನಪಾನಗಳನ್ನು ತೆಗೆದುಕೊಂಡ ಮೇಲೆ, ಅವರನ್ನು ಅವರ ಯಜಮಾನನ ಬಳಿಗೆ ಕಳುಹಿಸಿದನು. ಅಂದಿನಿಂದ ಸುಲಿಗೆಮಾಡುವ ಸಿರಿಯಾದ ಗುಂಪುಗಳು ಇಸ್ರಯೇಲರ ಪ್ರಾಂತದೊಳಗೆ ಮತ್ತೆ ಬರಲಿಲ್ಲ. |
೨೪ |
ಆಮೇಲೆ ಸಿರಿಯಾದ ರಾಜ ಬೆನ್ಹದದನು ತನ್ನ ಸೈನ್ಯವನ್ನೆಲ್ಲಾ ಕೂಡಿಸಿಕೊಂಡು ಬಂದು ಸಮಾರಿಯಕ್ಕೆ ಮುತ್ತಿಗೆ ಹಾಕಿದನು. |
೨೫ |
ಆಗ ಸಮಾರಿಯ ಪಟ್ಟಣದಲ್ಲಿ ಘೋರ ಕ್ಷಾಮವಿತ್ತು. ಮುತ್ತಿಗೆಯ ನಿಮಿತ್ತ ಅದು ಮತ್ತಷ್ಟು ಘೋರವಾಗಿ ಒಂದು ಕತ್ತೆಯ ತಲೆಯನ್ನು ಒಂಬತ್ತು ಬೆಳ್ಳಿ ನಾಣ್ಯಗಳಿಗೂ, ಇನ್ನೂರು ಗ್ರಾಂ ಕಾಡು ಈರುಳ್ಳಿಯನ್ನು ಐದು ಬೆಳ್ಳಿ ನಾಣ್ಯಗಳಿಗೂ ಮಾರಲಾಗುತ್ತಿತ್ತು. |
೨೬ |
ಒಂದು ದಿನ ಇಸ್ರಯೇಲರ ಅರಸನು ಕೋಟೆಯ ಮೇಲೆ ತಿರುಗಾಡುತ್ತಿರುವಾಗ ಒಬ್ಬ ಮಹಿಳೆ, “ಅರಸರೇ, ನಮ್ಮ ಒಡೆಯರೇ, ನನ್ನನ್ನು ಕಾಪಾಡಿ,” ಎಂದು ಮೊರೆಯಿಟ್ಟಳು. |
೨೭ |
ಅರಸನು ಆಕೆಗೆ, “ಸರ್ವೇಶ್ವರಸ್ವಾಮಿ ನಿನ್ನನ್ನು ಕಾಪಾಡದಿದ್ದರೆ ನಾನು ಹೇಗೆ ಕಾಪಾಡಲು ಸಾಧ್ಯ? ಕಣದಲ್ಲಾಗಲಿ, ದ್ರಾಕ್ಷೀ ಆಲೆಯಲ್ಲಾಗಲಿ ಏನಾದರೂ ಇದೆಯೇ?’ ಎಂದು ಕೇಳಿ, |
೨೮ |
“ನಿನಗಿರುವ ದುಃಖ ಯಾವುದು?” ಎಂದನು. ಆಗ ಆಕೆ, “ಈ ಸ್ತ್ರೀ ನನಗೆ, ‘ನಿನ್ನ ಮಗನನ್ನು ತೆಗೆದುಕೊಂಡು ಬಾ; ನಾವು ಈ ದಿನ ಅವನನ್ನು ತಿಂದುಬಿಡೋಣ; ನಾಳೆ ನನ್ನ ಮಗನನ್ನು ತಿನ್ನೋಣ,’ ಎಂದು ಹೇಳಿದ್ದರಿಂದ ನಾವಿಬ್ಬರೂ ನನ್ನ ಮಗನನ್ನು ಕೊಂದು ಬೇಯಿಸಿ ತಿಂದುಬಿಟ್ಟೆವು. |
೨೯ |
ಮರುದಿನ ನಾನು ಈಕೆಗೆ, ‘ಈ ದಿನ ನಿನ್ನ ಮಗನನ್ನು ತೆಗೆದುಕೊಂಡು ಬಾ; ಅವನನ್ನು ಕೊಂದು ತಿನ್ನೋಣ,’ ಎಂದಾಗ ಈಕೆ ಅವನನ್ನು ಎಲ್ಲಿಯೋ ಅಡಗಿಸಿಬಿಟ್ಟಳು,” ಎಂದು ಹೇಳಿದಳು. |
೩೦ |
ಕೋಣೆಯ ಮೇಲೆ ತಿರುಗಾಡುತ್ತಿದ್ದ ಅರಸನು ಆ ಮಹಿಳೆಯ ಮಾತನ್ನು ಕೇಳಿದೊಡನೆ ಸಿಟ್ಟಿನಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನು. ಆಗ ಅವನ ಮೈಮೇಲೆ ಗೋಣಿತಟ್ಟು ಇರುವುದು ಜನರಿಗೆ ಕಂಡಿತು. |
೩೧ |
ಇದಲ್ಲದೆ ಅವನು, “ನಾನು ಈ ದಿನ ಶಾಫಾಟನ ಮಗ ಎಲೀಷನ ತಲೆಯನ್ನು ಹಾರಿಸದಿದ್ದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ!” ಎಂದು ಆಣೆಯಿಟ್ಟುಕೊಂಡನು. |
೩೨ |
ಎಲೀಷನು ಊರಿನ ಹಿರಿಯರೊಡನೆ ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು. ಅರಸನು ತನ್ನ ಹತ್ತಿರ ಇದ್ದ ಒಬ್ಬ ಆಳನ್ನು ಕಳುಹಿಸಿದನು. ಅವನು ಇನ್ನೂ ದೂರದಲ್ಲಿರುವಾಗಲೇ ಎಲೀಷನು ಹಿರಿಯರಿಗೆ, “ನೋಡಿ, ಆ ಕೊಲೆಗಾರನ ಮಗನು ನನ್ನ ತಲೆಯನ್ನು ಹಾರಿಸುವುದಕ್ಕೆ ಆಳನ್ನು ಕಳುಹಿಸಿದ್ದಾನೆ. ಆಳು ಇಲ್ಲಿಗೆ ಬಂದ ಕೂಡಲೆ ನೀವು ಬಾಗಿಲನ್ನು ಮುಚ್ಚಿ ಅವನು ಒಳಗೆ ಬಾರದಂತೆ ಅದನ್ನು ಒತ್ತಿಹಿಡಿಯಿರಿ; ಅವನ ಹಿಂದೆಯೇ ಬರುತ್ತಿರುವ ಅವನೊಡೆಯನ ಕಾಲು ಸಪ್ಪಳ ಕೇಳಿಸುತ್ತಿದೆಯಲ್ಲವೆ?” ಎಂದು ಹೇಳಿದನು. |
೩೩ |
ಅವನು ಅವರೊಡನೆ ಮಾತಾಡುತ್ತಿರುವಾಗಲೇ ಆ ಆಳೂ ಅವನ ಹಿಂದಿನಿಂದ ಅರಸನೂ ಅಲ್ಲಿಗೆ ಬಂದರು. ಅರಸನು ಎಲೀಷನಿಗೆ, “ನೋಡು, ಈ ಆಪತ್ತು ಸರ್ವೇಶ್ವರನಿಂದಲೇ ಬಂದದ್ದು. ಇನ್ನು ಮುಂದೆ ನಾನೇಕೆ ಆತನನ್ನು ನಂಬಿ ನಿರೀಕ್ಷಿಸಿಕೊಂಡಿರಬೇಕು?” ಎಂದನು.
|
Kannada Bible (KNCL) 2016 |
No Data |