೧ |
ಯೆಹೂದ್ಯರ ಅರಸನಾದ ಯೆಹೋಷಾಫಾಟನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಅಹಾಬನ ಮಗನಾದ ಯೋರಾಮನು ಇಸ್ರಯೇಲರ ಅರಸನಾಗಿ ಸಮಾರಿಯದಲ್ಲಿ ಹನ್ನೆರಡು ವರ್ಷ ಆಳಿದನು. |
೨ |
ಇವನು ತನ್ನ ತಂದೆ ತಾಯಿಗಳಷ್ಟು ದುಷ್ಟನಾಗಿರಲಿಲ್ಲ. ಆದರೂ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು. ತನ್ನ ತಂದೆ ಬಾಳ್ ದೇವತೆಯ ಗೌರವಾರ್ಥ ನಿಲ್ಲಿಸಿದ ಕಲ್ಲಿನ ಕಂಬವನ್ನು ತೆಗೆದುಹಾಕಿದನು. |
೩ |
ಆದರೂ ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗ ಯಾರೊಬ್ಬಾಮನ ಮಾರ್ಗವನ್ನು ಬಿಡಲೇ ಇಲ್ಲ. |
೪ |
ಅನೇಕ ಕುರಿಹಿಂಡುಗಳುಳ್ಳವನಾಗಿದ್ದ ಮೋವಾಬ್ಯರ ಅರಸ ಮೇಷನೆಂಬವನು ಇಸ್ರಯೇಲರ ಅರಸನಿಗೆ ಒಂದು ಲಕ್ಷ ಕುರಿಗಳ ಮತ್ತು ಒಂದು ಲಕ್ಷ ಟಗರುಗಳ ಉಣ್ಣೆಯನ್ನು ಕಪ್ಪವಾಗಿ ಕೊಡುತ್ತಿದ್ದನು. |
೫ |
ಆದರೆ ಅಹಾಬನು ಮರಣ ಹೊಂದಿದ ನಂತರ ಇವನು ಇಸ್ರಯೇಲರ ಅರಸನಿಗೆ ವಿರುದ್ಧ ದಂಗೆಯೆದ್ದನು. |
೬ |
ಆದುದರಿಂದ ಅರಸನಾದ ಯೋರಾಮನು ಒಡನೆ ಇಸ್ರಯೇಲರನ್ನು ಕೂಡಿಸಿಕೊಂಡು ಸಮಾರಿಯದಿಂದ ಹೊರಟನು; |
೭ |
ಯೆಹೂದ್ಯರ ಅರಸನಾದ ಯೆಹೋಷಾಫಾಟನಿಗೆ ದೂತರ ಮುಖಾಂತರ, “ಮೋವಾಬ್ಯರ ಅರಸನು ನನಗೆ ವಿರುದ್ಧ ದಂಗೆ ಎದ್ದಿದ್ದಾನೆ; ಮೋವಾಬರೊಡನೆ ಯುದ್ಧಮಾಡುವುದಕ್ಕೆ ನೀನೂ ನನ್ನ ಜೊತೆಯಲ್ಲಿ ಬರುತ್ತೀಯೋ?” ಎಂದು ಹೇಳಿ ಕಳುಹಿಸಿದನು. ಅದಕ್ಕೆ ಯೆಹೋಷಾಫಾಟನು, “ಬರುತ್ತೇನೆ; ನಾನೂ ನೀನೂ, ನನ್ನ ಜನರೂ ನಿನ್ನ ಜನರೂ ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ ಅಲ್ಲವೇ?” ಎಂದು ಉತ್ತರಕೊಟ್ಟನು. |
೮ |
ಅದೂ ಅಲ್ಲದೆ, “ಯಾವ ಮಾರ್ಗವಾಗಿ ಬರಬೇಕು?” ಎಂದು ವಿಚಾರಿಸಿದನು. ಅದಕ್ಕೆ ಯೋರಾಮನು ಎದೋಮ್ಯರ ಅರಣ್ಯಮಾರ್ಗವಾಗಿ ಬರಬೇಕೆಂದನು. |
೯ |
ಆಗ ಇಸ್ರಯೇಲ್, ಜುದೇಯ ಹಾಗು ಎದೋಮ್ ರಾಜ್ಯಗಳ ಅರಸರು ಹೊರಟು ಸುತ್ತಾದ ದಾರಿಯಿಂದ ಏಳು ದಿವಸ ಪ್ರಯಾಣ ಮಾಡಿದರು. ಮಾರ್ಗದಲ್ಲಿ ಅವರ ಸೈನಿಕರಿಗೂ ಅವರು ತಂದಿದ್ದ ಪಶುಗಳಿಗೂ ನೀರು ಸಿಕ್ಕದೆಹೋಯಿತು. |
೧೦ |
ಆದ್ದರಿಂದ ಇಸ್ರಯೇಲರ ಅರಸನು, “ಅಯ್ಯೋ, ಮೂರು ಮಂದಿ ಅರಸರಾದ ನಮ್ಮನ್ನು ಮೋವಾಬ್ಯರ ಕೈಗೆ ಒಪ್ಪಿಸುವುದಕ್ಕಾಗಿ ಸರ್ವೇಶ್ವರ ಇಲ್ಲಿಗೆ ಬರಮಾಡಿದ್ದಾರೆ,” ಎಂದು ಪರಿತಪಿಸಿದನು. |
೧೧ |
ಆದರೆ ಯೆಹೋಷಾಫಾಟನು, “ಸರ್ವೇಶ್ವರನ ಸನ್ನಿಧಿಯಲ್ಲಿ ನಮ್ಮ ಪರವಾಗಿ ವಿಚಾರಿಸಬಲ್ಲ ಪ್ರವಾದಿ ಇಲ್ಲಿ ಯಾರೂ ಇಲ್ಲವೇ?” ಎಂದು ಕೇಳಿದನು. ಆಗ ಇಸ್ರಯೇಲ್ ಅರಸನ ಸೇವಕರಲ್ಲೊಬ್ಬನು, “ಶಾಫಾಟನ ಮಗನೂ ಎಲೀಯನ ಕೈಗೆ ನೀರು ಕೊಡುತ್ತಿದ್ದವನೂ ಆದ ಎಲೀಷನೆಂಬ ಪ್ರವಾದಿ ಇಲ್ಲಿರುತ್ತಾನೆ,” ಎಂದು ಉತ್ತರಕೊಟ್ಟನು. |
೧೨ |
ಯೆಹೋಷಾಫಾಟನು, “ಅವನು ಹೇಗೂ ಸರ್ವೇಶ್ವರನ ಉತ್ತರವನ್ನು ತಿಳಿಸುವನು,” ಎಂದದ್ದರಿಂದ ಇಸ್ರಯೇಲ್ ಹಾಗು ಎದೋಮ್ ರಾಜ್ಯಗಳ ಅರಸರು ಯೆಹೋಷಾಫಾಟನೊಡನೆ ಎಲೀಷನ ಬಳಿಗೆ ಬಂದರು. |
೧೩ |
ಎಲೀಷನು ಇಸ್ರಯೇಲರ ಅರಸನಿಗೆ, “ನನಗೂ ನಿನಗೂ ಏನು ಸಂಬಂಧ? ನಿನ್ನ ತಂದೆತಾಯಿಗಳ ಪ್ರವಾದಿಗಳ ಬಳಿಗೆ ಹೋಗು,” ಎಂದು ಹೇಳಿದನು. ಅದಕ್ಕೆ ಇಸ್ರಯೇಲರ ಅರಸನು, “ಹಾಗೆನ್ನಬೇಡಿ; ಸರ್ವೇಶ್ವರ ಈ ಮೂರು ಮಂದಿ ಅರಸರಾದ ನಮ್ಮನ್ನು ಮೋವಾಬ್ಯರ ಕೈಗೆ ಒಪ್ಪಿಸುವುದಕ್ಕಾಗಿ ಇಲ್ಲಿಗೆ ಬರಮಾಡಿದ್ದಾರೆ ಅಲ್ಲವೇ?’ ಎಂದನು. |
೧೪ |
ಆಗ ಎಲೀಷನು, “ನಾನು ಸನ್ನಿಧಿಸೇವೆ ಮಾಡುತ್ತಿರುವ ಸರ್ವೇಶ್ವರನಾಣೆ, ಯೆಹೂದ್ಯರ ಅರಸನಾದ ಯೆಹೋಷಾಫಾಟನು ನಿಮ್ಮ ಜೊತೆಯಲ್ಲಿರದಿದ್ದರೆ ನಾನು ನಿಮ್ಮನ್ನು ನೋಡುತ್ತಿರಲಿಲ್ಲ; ಲಕ್ಷಿಸುತ್ತಲೂ ಇರಲಿಲ್ಲ. |
೧೫ |
ಈಗ ಒಬ್ಬ ವಾದ್ಯಗಾರನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ,” ಎಂದು ಹೇಳಿದನು. (ವಾದ್ಯಗಳ ಸ್ವರವನ್ನು ಕೇಳುವಾಗಲೆಲ್ಲಾ ಎಲೀಷನಲ್ಲಿ ಸರ್ವೇಶ್ವರನ ಶಕ್ತಿ ಪ್ರಾಪ್ತವಾಗುತ್ತಿತ್ತು). |
೧೬ |
ಅನಂತರ ಎಲೀಷನು ಇಸ್ರಯೇಲರ ಅರಸನಿಗೆ, “ಈ ಹಳ್ಳದ ತುಂಬಾ ಗುಂಡಿಗಳನ್ನು ಮಾಡಿರಿ; |
೧೭ |
ಗಾಳಿಮಳೆಗಳು ಕಾಣದಿದ್ದರೂ ಇದು ನೀರಿನಿಂದ ತುಂಬುವುದು. ನೀವೂ ನಿಮ್ಮ ಕುರಿದನಗಳೂ ಎಲ್ಲಾ ಪಶುಪ್ರಾಣಿಗಳೂ ಕುಡಿಯಬಹುದು ಎಂಬುದಾಗಿ ಸರ್ವೇಶ್ವರ ನುಡಿಯುತ್ತಾರೆ. |
೧೮ |
ಅವರು ತಮ್ಮ ದೃಷ್ಟಿಯಲ್ಲಿ ಅಲ್ಪವಾಗಿರುವ ಈ ಕಾರ್ಯ ಮಾತ್ರವಲ್ಲ, ಮೋವಾಬ್ಯರನ್ನೂ ನಿಮ್ಮ ಕೈಗೆ ಒಪ್ಪಿಸುವರು. |
೧೯ |
ನೀವು ಅವರ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನೂ ವಿಶೇಷವಾದ ಎಲ್ಲಾ ಊರುಗಳನ್ನೂ ಸ್ವಾಧೀನಮಾಡಿಕೊಳ್ಳುವಿರಿ. ಎಲ್ಲ ಹಣ್ಣಿನ ಮರಗಳನ್ನು ಕಡಿದುಹಾಕಿ, ಬಾವಿಗಳನ್ನು ಮುಚ್ಚಿಬಿಟ್ಟು, ಹೊಲಗಳನ್ನು ಕಲ್ಲು ತುಂಬಿಸಿ ಹಾಳುಮಾಡುವಿರಿ,” ಎಂದು ನುಡಿದನು. |
೨೦ |
ಪ್ರಾತಃಕಾಲದ ನೈವೇದ್ಯವನ್ನು ಸಮರ್ಪಿಸುವ ಹೊತ್ತಿನಲ್ಲಿ ಫಕ್ಕನೆ ಎದೋಮಿನ ಕಡೆಯಿಂದ ನೀರು ಬಂದು ನಾಡಿನಲ್ಲೆಲ್ಲಾ ತುಂಬಿಕೊಂಡಿತು. |
೨೧ |
ಅರಸುಗಳು ತಮಗೆ ವಿರುದ್ಧ ಯುದ್ಧಕ್ಕೆ ಬಂದಿದ್ದಾರೆಂಬುದನ್ನು ಮೋವಾಬ್ಯರು ಕೇಳಿದರು. ಆಯುಧಗಳನ್ನು ಧರಿಸಲು ಶಕ್ತರಾದ ಎಲ್ಲ ಯೌವನಸ್ಥರನ್ನೂ ಪ್ರಾಯಸ್ಥರನ್ನೂ ಕೂಡಿಸಿಕೊಂಡು ತಮ್ಮ ದೇಶದ ಗಡಿಗೆ ಬಂದರು. |
೨೨ |
ಬೆಳಿಗ್ಗೆ ಎದ್ದು ನೋಡುವಾಗ ಎದುರಿಗಿದ್ದ ನೀರು ಇವರ ದೃಷ್ಟಿಗೆ ಬಿದ್ದಿತು. ಸೂರ್ಯಪ್ರಕಾಶದಿಂದ ಆ ನೀರು ರಕ್ತದಂತೆ ಕೆಂಪಾಗಿ ಕಾಣಿಸುತ್ತಿತ್ತು. |
೨೩ |
ಆದ್ದರಿಂದ, “ಅದು ರಕ್ತ; ಅರಸರು ತಮ್ಮ ತಮ್ಮೊಳಗೆ ಜಗಳವಾಡಿ ಹತರಾಗಿರಬೇಕು; ಮೋವಾಬ್ಯರೇ, ಏಳಿ, ಸುಲಿಗೆಗೆ ಹೋಗೋಣ,” ಎಂದು ಕೂಗಿಕೊಂಡು ಇಸ್ರಯೇಲರ ಪಾಳೆಯಕ್ಕೆ ಹೋದರು. |
೨೪ |
ಆದರೆ ಇಸ್ರಯೇಲರು ಎದ್ದು ಮೋವಾಬ್ಯರನ್ನು ಸೋಲಿಸಿ ಓಡಿಸಿಬಿಟ್ಟರು. ಇದಲ್ಲದೆ, ಅವರು ಮೋವಾಬ್ಯರನ್ನು ಸಂಹರಿಸುತ್ತಾ, ಅವರ ದೇಶದೊಳಗೆ ನುಗ್ಗಿದರು; |
೨೫ |
ಎಲ್ಲಾ ಪಟ್ಟಣಗಳನ್ನು ಕೆಡವಿ, ಹೊಲಗಳನ್ನು ಕಲ್ಲುಗಳಿಂದ ತುಂಬಿಸಿ, ಬಾವಿಗಳನ್ನು ಮುಚ್ಚಿ, ಹಣ್ಣಿನ ಮರಗಳನ್ನು ಕಡಿದುಹಾಕಿದರು. ಕೀರ್ಹರೆಷೆತ್ ಎಂಬ ಒಂದೇ ಒಂದು ಮಾರ್ಗ ಉಳಿಯಿತು. ಕವಣೆ ಹೊಡೆಯುವವರು ಅದನ್ನೂ ಸುತ್ತಿಕೊಂಡು ಕಲ್ಲೆಸೆದರು. |
೨೬ |
ಮೋವಾಬ್ಯರ ಅರಸನು ತಾನು ಯುದ್ಧದಲ್ಲಿ ಗೆಲ್ಲಲಾರೆನೆಂದು ತಿಳಿದು ಏಳುನೂರು ಮಂದಿ ಯೋಧರೊಡನೆ ಸೈನ್ಯದೊಳಗೆ ನುಗ್ಗಿ ಎದೋಮ್ಯರ ಅರಸನ ಕಡೆಗೆ ಹೋಗಪ್ರಯತ್ನಿಸಿದನು; ಆದರೆ ಆಗದೆ ಹೋಯಿತು. |
೨೭ |
ಆಗ ಅವನು ತನಗೆ ಬದಲಾಗಿ ಅರಸನಾಗತಕ್ಕ ತನ್ನ ಚೊಚ್ಚಲ ಮಗನನ್ನು ಹಿಡಿದು, ವಧಿಸಿ, ಗೋಡೆಯ ಮೇಲೆ ದಹನಬಲಿ ಮಾಡಿದನು. ಇದರಿಂದ ಮೋವಾಬ್ಯರಿಗೆ ಇಸ್ರಯೇಲರ ಮೇಲೆ ಕೋಪೋದ್ರೇಕವುಂಟಾಯಿತು. ಅವರು ಅವನನ್ನು ಬಿಟ್ಟು ತಮ್ಮ ದೇಶಕ್ಕೆ ಹೊರಟುಹೋದರು.
|
Kannada Bible (KNCL) 2016 |
No Data |