English
A A A A A
×

ಕನ್ನಡ ಬೈಬಲ್ (KNCL) 2016

ಅರಸುಗಳು ೨ ೨೧
ಮನಸ್ಸೆ ಅರಸನಾದಾಗ ಅವನಿಗೆ ಹನ್ನೆರಡು ವರ್ಷ ವಯಸ್ಸು. ಜೆರುಸಲೇಮಿನಲ್ಲಿ ಐವತ್ತೈದು ವರ್ಷ ಆಳಿದನು; ಅವನ ತಾಯಿಯ ಹೆಸರು ಹೆಫ್ಚಿಬಾ.
ಸರ್ವೇಶ್ವರ ಇಸ್ರಯೇಲರ ನಾಡಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳ ಅಸಹ್ಯಕಾರ್ಯಗಳನ್ನು ಅವನು ಅನುಸರಿಸಿ ಆ ಸರ್ವೇಶ್ವರನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.
ತನ್ನ ತಂದೆ ಹಿಜ್ಕೀಯನು ತೆಗೆದುಹಾಕಿದ್ದ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿ ಇಸ್ರಯೇಲರ ಅರಸನಾದ ಅಹಾಬನಂತೆ ಬಾಳ್ ದೇವತೆಗಾಗಿ ಬಲಿಪೀಠಗಳನ್ನು ಕಟ್ಟಿಸಿ, ಅಶೇರ ವಿಗ್ರಹಸ್ತಂಭವನ್ನು ನಿಲ್ಲಿಸಿ, ನಕ್ಷತ್ರಮಂಡಲಕ್ಕೆ ಕೈಮುಗಿದು, ಆರಾಧಿಸಿದನು.
ಸರ್ವೇಶ್ವರ ತಮ್ಮ ಹೆಸರನ್ನು ಸ್ಥಾಪಿಸುವುದಕ್ಕಾಗಿ ಆರಿಸಿಕೊಂಡ ಜೆರುಸಲೇಮಿನ ದೇವಾಲಯದ ಎರಡು ಪ್ರಾಕಾರಗಳಲ್ಲಿಯೂ
ಸರ್ವ ನಕ್ಷತ್ರಮಂಡಲಕ್ಕಾಗಿ ಬಲಿಪೀಠಗಳನ್ನು ಕಟ್ಟಿಸಿದನು.
ಇದಲ್ಲದೆ ಅವನು ತನ್ನ ಮಗನನ್ನು ಬಲಿಯಗ್ನಿಪರೀಕ್ಷೆಗೆ ಗುರಿಯಾಗಿಸಿದನು. ಕಣಿ ಹೇಳಿಸುವುದು, ತಂತ್ರಮಂತ್ರಗಳನ್ನು ಮಾಡಿಸುವುದು, ಭೂತಪ್ರೇತಗಳನ್ನು ವಿಚಾರಿಸುವವರನ್ನು ಸಂಪರ್ಕಿಸುವುದು ಇವೇ ಮೊದಲಾದ ದುಷ್ಕೃತ್ಯಗಳಿಂದ ಸರ್ವೇಶ್ವರನಿಗೆ ಕೋಪವನ್ನೆಬ್ಬಿಸಿದನು.
ತಾನು ಮಾಡಿಸಿದ ಅಶೇರ ವಿಗ್ರಹಸ್ತಂಭವನ್ನು ದೇವಾಲಯದಲ್ಲಿ ಇಡಿಸಿದನು. ಸರ್ವೇಶ್ವರ ಆ ಆಲಯದಲ್ಲಿ ದಾವೀದನಿಗೂ ಅವನ ಮಗ ಸೊಲೊಮೋನನಿಗೂ, “ಇಸ್ರಯೇಲರು ತಮಗೆ ಮೋಶೆಯ ಮುಖಾಂತರ ಕೊಡಲಾದ ನನ್ನ ಧರ್ಮಶಾಸ್ತ್ರದ ನಿಬಂಧನೆಗಳನ್ನು ಅನುಸರಿಸಿ ನಡೆಯುವುದಾದರೆ
ನನ್ನ ನಾಮಮಹತ್ತು ಈ ದೇವಾಲಯದಲ್ಲು, ಇಸ್ರಯೇಲರ ಊರುಗಳಲ್ಲು ಹಾಗು ನನಗೆ ಪ್ರಿಯವಾಗಿರುವ ಜೆರುಸಲೇಮಿನಲ್ಲು ಸದಾಕಾಲ ಇರುವುದು. ಇಸ್ರಯೇಲರು ಇನ್ನು ಮುಂದೆ ದೇಶಭ್ರಷ್ಟರಾಗಿ ಅಲೆದಾಡದೆ ತಮ್ಮ ಪಿತೃಗಳಿಗೆ ಕೊಡಲಾದ ನಾಡಿನಲ್ಲಿಯೇ ವಾಸವಾಗಿರುವಂತೆ ಮಾಡುವೆನು,” ಎಂದು ಹೇಳಿದ್ದರು.
ಆದರೆ ಇಸ್ರಯೇಲರು ಅವರ ಮಾತನ್ನು ಕೇಳದೆ, ಮನಸ್ಸೆಯಿಂದ ಪ್ರೇರಿತರಾಗಿ, ತಮ್ಮ ಮುಂದೆಯೇ ಸರ್ವೇಶ್ವರನಿಂದ ಸಂಹೃತರಾದ ಅನ್ಯಜನಾಂಗಗಳಿಗಿಂತಲೂ ದುಷ್ಟರಾದರು.
೧೦
ಆಗ ಸರ್ವೇಶ್ವರ ತನ್ನ ದಾಸರಾದ ಪ್ರವಾದಿಗಳ ಮುಖಾಂತರ.
೧೧
“ಯೆಹೂದ್ಯರ ಅರಸನಾದ ಮನಸ್ಸೆಯು, ಹಿಂದೆ ಇದ್ದ ಅಮೋರಿಯರ ಕೃತ್ಯಗಳಿಗಿಂತ ಅಸಹ್ಯವಾದ ಕೃತ್ಯಗಳನ್ನು ನಡೆಸಿದ್ದಾನೆ. ವಿಗ್ರಹಗಳಿಂದ ಯೆಹೂದ್ಯರನ್ನು ಪಾಪಕ್ಕೆ ಪ್ರೇರಿಸಿದ್ದಾನೆ;
೧೨
ಆದ್ದರಿಂದ ಇಸ್ರಯೇಲ್ ದೇವರಾದ ಸರ್ವೇಶ್ವರ ಎಂಬ ನಾನು ಜೆರುಸಲೇಮಿನವರ ಮೇಲೂ ಜುದೇಯದವರ ಮೇಲೂ ಕೇಡನ್ನು ಬರಮಾಡುವೆನು; ಅದನ್ನು ಕೇಳುವವರ ಎರಡು ಕಿವಿಗಳೂ ಬಿರಿಯುವುವು.
೧೩
ನೂಲು, ಮಟ್ಟಗೋಲು ಇವುಗಳಿಂದಲೋ ಎಂಬಂತೆ ಸಮಾರಿಯವನ್ನೂ ಅಹಾಬನ ಮನೆಯನ್ನೂ ನೆಲಸಮ ಮಾಡಿಬಿಟ್ಟೆನಲ್ಲವೆ? ಜೆರುಸಲೇಮನ್ನೂ ಅವುಗಳಂತೆಯೇ ಮಾಡುವೆನು. ಒಬ್ಬನು ಪಾತ್ರೆಯನ್ನು ಉಜ್ಜಿ ತಲೆ ಕೆಳಗಾಗಿ ಇಡುವಂತೆ ನಾನು ಜೆರುಸಲೇಮನ್ನು ಉಜ್ಜಿ ತಲೆ ಕೆಳಗಾಗಿ ಮಾಡುವೆನು.
೧೪
ನನ್ನ ಪ್ರಜೆಗಳಲ್ಲಿ ಉಳಿದಿರುವವರನ್ನು ತಳ್ಳಿಬಿಟ್ಟು ಶತ್ರುಗಳ ಕೈಗೆ ಒಪ್ಪಿಸುವೆನು. ಅವರ ಶತ್ರುಗಳೆಲ್ಲಾ ಬಂದು ಅವರನ್ನು ಸುಲಿದು ಸೂರೆಮಾಡುವರು.
೧೫
ಅವರು ಈಜಿಪ್ಟ್ ದೇಶವನ್ನು ಬಿಟ್ಟುಬಂದ ಪಿತೃಗಳ ಕಾಲ ಮೊದಲ್ಗೊಂಡು ಇಂದಿನವರೆಗೂ ತಮ್ಮ ಪಾಪಗಳಿಂದ ನನ್ನನ್ನು ರೇಗಿಸುತ್ತಾ ಬಂದದ್ದೇ ಇದಕ್ಕೆ ಕಾರಣ,” ಎಂದು ಹೇಳಿಸಿದರು.
೧೬
ಮನಸ್ಸೆಯು ಯೆಹೂದ್ಯರನ್ನು ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನು ಮಾಡಲು ಪ್ರೇರಿಸಿದ್ದಲ್ಲದೆ, ನಿರಪರಾಧಿಗಳ ವಧೆಯಿಂದ ಜೆರುಸಲೇಮನ್ನೆಲ್ಲಾ ರಕ್ತಮಯವಾಗಿಸಿದನು.
೧೭
ಮನಸ್ಸೆಯ ಉಳಿದ ಚರಿತ್ರೆ ಅವನ ಕಾರ್ಯಕಲಾಪಗಳು ಹಾಗು ಅವನು ಮಾಡಿದ ಪಾಪಕೃತ್ಯಗಳು ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ.
೧೮
ಅವನು ಸತ್ತು ಪಿತೃಗಳ ಬಳಿ ಸೇರಿದಾಗ ಅವನ ಶವವನ್ನು ಅವನ ಅರಮನೆಯಿರುವ ಉಜ್ಜನ ವನದಲ್ಲಿ ಸಮಾಧಿ ಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಆಮೋನನು ಅರಸನಾದನು.
೧೯
ಆಮೋನನು ಅರಸನಾದಾಗ ಇಪ್ಪತ್ತೆರಡು ವರ್ಷ ವಯಸ್ಸು. ಜೆರುಸಲೇಮಿನಲ್ಲಿ ಎರಡು ವರ್ಷ ಆಳಿದನು. ಯೊಟ್ಟಾ ಊರಿನವಳೂ ಹಾರೂಚನ ಮಗಳೂ ಆದ ಮೆಷುಲ್ಲೆಮೆತ್ ಎಂಬಾಕೆ ಅವನ ತಾಯಿ.
೨೦
ಅವನು ತನ್ನ ತಂದೆ ಮನಸ್ಸೆಯ ದುರ್ಮಾರ್ಗದಲ್ಲೇ ನಡೆದು ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.
೨೧
ತನ್ನ ಪೂರ್ವಜರ ದೇವರಾದ ಸರ್ವೇಶ್ವರನನ್ನೂ ಅವರು ಮೆಚ್ಚುವ ಮಾರ್ಗವನ್ನೂ ಬಿಟ್ಟು ತನ್ನ ತಂದೆಯ ಮಾರ್ಗದಲ್ಲೇ ನಡೆದನು.
೨೨
ಅವನು ಪೂಜಿಸಿದ ವಿಗ್ರಹಗಳನ್ನು ತಾನೂ ಪೂಜಿಸಿ ಅವುಗಳಿಗೆ ಅಡ್ಡಬಿದ್ದನು.
೨೩
ಅವನ ಸೇವಕರು ಅವನಿಗೆ ವಿರುದ್ಧ ಒಳಸಂಚು ಮಾಡಿ ಅವನನ್ನು ಅರಮನೆಯಲ್ಲಿಯೇ ಕೊಂದರು.
೨೪
ಆದರೆ ನಾಡಿನ ಜನರು ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ ಆಮೋನನಿಗೆ ಬದಲಾಗಿ ಅವನ ಮಗ ಯೋಷೀಯನನ್ನು ಅರಸನನ್ನಾಗಿ ಮಾಡಿದರು.
೨೫
ಆಮೋನನ ಉಳಿದ ಚರಿತ್ರೆ ಹಾಗು ಅವನ ಕೃತ್ಯಗಳು ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
೨೬
ಅವನ ಶವವನ್ನು ಉಜ್ಜನ ವನದಲ್ಲಿ ಸಮಾಧಿಮಾಡಿದರು. ಅಲ್ಲಿ ಅವನು ಮೊದಲೇ ತನಗಾಗಿ ಒಂದು ಸಮಾಧಿಯನ್ನು ಸಿದ್ಧಪಡಿಸಿಟ್ಟಿದ್ದನು. ಅವನ ಸ್ಥಾನದಲ್ಲಿ ಅವನ ಮಗ ಯೋಷೀಯನು ಅರಸನಾದನು.