೧ |
ಈ ವರದಿಯನ್ನು ಕೇಳಿದ ಹಿಜ್ಕೀಯನು ಕೋಪದಿಂದ ತನ್ನ ಬಟ್ಟೆಯನ್ನು ಹರಿದುಕೊಂಡು, ಗೋಣಿತಟ್ಟನ್ನು ಕಟ್ಟಿಕೊಂಡು ಸರ್ವೇಶ್ವರನ ಆಲಯಕ್ಕೆ ಹೋದನು. |
೨ |
ಇದಲ್ಲದೆ, ಅವನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಕಾರ್ಯದರ್ಶಿ ಶೆಬ್ನ, ಹಿರಿಯ ಯಾಜಕರು, ಇವರನ್ನು ಕರೆಯಿಸಿ, “ನೀವು ಗೋಣಿತಟ್ಟನ್ನು ಕಟ್ಟಿಕೊಂಡು, ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನ ಬಳಿಗೆ ಹೋಗಿ, |
೩ |
ಅವನಿಗೆ ಹೀಗೆಂದು ಹೇಳಿ: ‘ಈ ದಿನ ನಮಗೆ ಮಹಾಸಂಕಟದ ದಿನ, ದಂಡನೆಯ ದಿನ, ನಿಂದೆ ಅವಮಾನದ ದಿನ; ಹೆರಿಗೆಯ ಕಾಲ ಬಂದಿದೆ. ಆದರೆ ಹೆರುವುದಕ್ಕೆ ಶಕ್ತಿಸಾಲದು. |
೪ |
ಜೀವಸ್ವರೂಪರಾದ ದೇವರನ್ನು ದೂಷಿಸುವುದಕ್ಕಾಗಿ ತನ್ನ ಯಜಮಾನ ಅಸ್ಸೀರಿಯದ ರಾಜನಿಂದ ಕಳುಹಿಸಲಾಗಿದ್ದ ರಬ್ಷಾಕೆಯ ನಿಂದಾವಾಕ್ಯಗಳನ್ನು ನಿಮ್ಮ ದೇವರಾದ ಸರ್ವೇಶ್ವರ ಕೇಳಿದ್ದಾರೆ. ನಿಮ್ಮ ದೇವರಾದ ಸರ್ವೇಶ್ವರ ತಾವು ಕೇಳಿದ ಆ ವಾಕ್ಯಗಳ ನಿಮಿತ್ತ ಮುಯ್ಯಿತೀರಿಸಾರು; ಹೀಗಿರಲು ಉಳಿದಿರುವ ಸ್ವಲ್ಪ ಜನರಿಗಾಗಿ ದೇವರನ್ನು ನೀವು ಪ್ರಾರ್ಥನೆ ಮಾಡಿ’ ಎಂದು ಹಿಜ್ಕೀಯ ಕೇಳಿಕೊಂಡಿದ್ದಾರೆ ಎಂದು ತಿಳಿಸಿ,” ಎಂದನು. |
೫ |
ಅರಸ ಹಿಜ್ಕೀಯನ ಸೇವಕರು ತನ್ನ ಬಳಿಗೆ ಬಂದು ವರದಿಮಾಡಿದ ಮೇಲೆ ಯೆಶಾಯನು, |
೬ |
“ನೀವು ಹಿಂದಿರುಗಿ ಹೋಗಿ ನಿಮ್ಮ ರಾಜನಿಗೆ, ‘ಅಸ್ಸೀರಿಯದ ಅರಸನ ಸೇವಕರು ನನ್ನನ್ನು ದೂಷಿಸಿ ಆಡಿದ ಮಾತುಗಳನ್ನು ಕೇಳಿದ್ದೇನೆ. ಅವುಗಳಿಗಾಗಿ ನೀನು ಹೆದರಬೇಕಾಗಿಲ್ಲ. |
೭ |
ಅವನ ಮೇಲೆ ಭಯಾತ್ಮನನ್ನು ಬರಮಾಡುವೆನು. ಅವನು ಒಂದು ಸುದ್ದಿಯನ್ನು ಕೇಳಿ ಸ್ವದೇಶಕ್ಕೆ ಹಿಂದಿರುಗಿ ಅಲ್ಲೇ ಕತ್ತಿಗೆ ತುತ್ತಾಗುವಂತೆ ಮಾಡುವೆನು, ಇದು ಸರ್ವೇಶ್ವರನ ನುಡಿ, ಎಂದು ತಿಳಿಸಿರಿ,” ಎಂದು ಉತ್ತರಕೊಟ್ಟನು. |
೮ |
ರಬ್ಷಾಕೆಯು ಹಿಂದಿರುಗಿ ಹೋಗುವಾಗ ದಾರಿಯಲ್ಲಿ, ಅಸ್ಸೀರಿಯದ ಅರಸನು ಲಾಕೀಷನನ್ನು ಬಿಟ್ಟು ಲಿಬ್ನಕ್ಕೆ ಹೋಗಿ ಆ ರಾಜ್ಯದ ವಿರುದ್ಧ ಯುದ್ಧಮಾಡುತ್ತಿರುವುದಾಗಿ ಸಮಾಚಾರ ಪಡೆದನು. ಆದುದರಿಂದ ಅವನು ಅಲ್ಲಿಗೆ ತೆರಳಿದನು. |
೯ |
ಅಷ್ಟರಲ್ಲಿ ಸುಡಾನಿನ ರಾಜ ತಿರ್ಹಾಕನು ತನಗೆ ವಿರುದ್ಧವಾಗಿ ಹೊರಟಿದ್ದಾನೆ ಎಂಬ ಸುದ್ದಿ ಅಸ್ಸೀರಿಯದ ಅರಸನಿಗೆ ಮುಟ್ಟಿತು. ಆಗ ಅವನು ಜುದೇಯದ ಅರಸನಾದ ಹಿಜ್ಕೀಯನಿಗೆ, |
೧೦ |
“ಜೆರುಸಲೇಮ್ ನನ್ನ ವಶವಾಗುವುದಿಲ್ಲವೆಂದು ನೀನು ನಂಬುವ ದೇವರು ನಿನಗೆ ಹೇಳಿ ನಿನ್ನನ್ನು ಮೋಸಗೊಳಿಸಬಹುದು. |
೧೧ |
ಅಸ್ಸೀರಿಯದ ಅರಸನು ಎಲ್ಲಾ ರಾಜ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾನೆಂಬ ಸಮಾಚಾರ ನಿನಗೆ ಮುಟ್ಟಿರಬೇಕು, ಹೀಗಿರುವಲ್ಲಿ ನೀನು ಮಾತ್ರ ತಪ್ಪಿಸಿಕೊಳ್ಳುವಿಯೋ? |
೧೨ |
ನನ್ನ ತಂದೆತಾತಂದಿರು ಗೋಜಾನ್, ಖಾರನ್, ರೆಚೆಫ್ ಎಂಬ ನಗರಗಳ ಜನರನ್ನು ಮತ್ತು ತೆಲಸ್ಸಾರ್ ಪ್ರಾಂತ್ಯದಲ್ಲಿರುವ ಎದೆನಿನ ಜನರನ್ನು ನಾಶಮಾಡಿದರು. ಆಗ ಅವರ ದೇವರುಗಳು ಅವರನ್ನು ರಕ್ಷಿಸಲಾಗಲಿಲ್ಲ. |
೧೩ |
ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ್ ಮತ್ತು ಇವ್ವಾ ಎಂಬ ನಗರಗಳ ಅರಸರ ಗತಿ ಏನಾಯಿತು?” ಎಂದು ಪತ್ರ ಬರೆದು ದೂತರ ಸಮೇತ ಕಳುಹಿಸಿದನು. |
೧೪ |
ಹಿಜ್ಕೀಯನು, ಆ ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದ ನಂತರ, ದೇವಾಲಯಕ್ಕೆ ಹೋಗಿ ಅದನ್ನು ಸರ್ವೇಶ್ವರ ಸ್ವಾಮಿಯ ಮುಂದೆ ತೆರೆದಿಟ್ಟು, ಹೀಗೆಂದು ಪ್ರಾರ್ಥನೆ ಮಾಡಿದನು: |
೧೫ |
“ಇಸ್ರಯೇಲಿನ ದೇವರೇ, ಸರ್ವೇಶ್ವರಾ, ಕೆರೂಬಿಗಳ ಮೇಲೆ ಆಸೀನಾರೂಢರಾಗಿರುವವರೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀವೊಬ್ಬರೇ; ಪರಲೋಕ ಭೂಲೋಕಗಳನ್ನುಂಟುಮಾಡಿದವರು ನೀವೇ. |
೧೬ |
ಸರ್ವೇಶ್ವರಾ, ಕಿವಿಗೊಟ್ಟು ಕೇಳಿ; ಸರ್ವೇಶ್ವರಾ, ಕಣ್ಣಿಟ್ಟು ನೋಡಿ: ಸನ್ಹೇರೀಬನು ಜೀವಸ್ವರೂಪ ದೇವರಾದ ನಿಮ್ಮನ್ನು ನಿಂದಿಸುವುದಕ್ಕಾಗಿ ಹೇಳಿಕಳುಹಿಸಿದ ಈ ಮಾತುಗಳನ್ನೆಲ್ಲಾ ಮನಸ್ಸಿಗೆ ತಂದುಕೊಳ್ಳಿ. |
೧೭ |
ಸರ್ವೇಶ್ವರಾ, ಅಸ್ಸೀರಿಯದ ರಾಜರು ಸಕಲ ರಾಷ್ಟ್ರಗಳನ್ನೂ ಹಾಗೂ ಅವರ ನಾಡುಗಳನ್ನೂ ಹಾಳುಮಾಡಿದ್ದಾರೆ. |
೧೮ |
ಅವರ ದೇವರುಗಳನ್ನೂ ಬೆಂಕಿಗೆ ಹಾಕಿದ್ದು ನಿಜ. ಅವು ದೇವರುಗಳಲ್ಲ, ಕೇವಲ ಮನುಷ್ಯರು ಕೆತ್ತಿದ ಕಲ್ಲುಮರಗಳ ಬೊಂಬೆಗಳಷ್ಟೆ. ಆದುದರಿಂದಲೇ ಅವು ಅವರಿಂದ ಹಾಳಾದವು. |
೧೯ |
ನಮ್ಮ ದೇವರಾದ ಸರ್ವೇಶ್ವರಾ, ನೀವೇ ಏಕೈಕ ದೇವರು ಎಂಬುದನ್ನು ಭೂಮಿಯ ರಾಷ್ಟ್ರಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಈ ಅಸ್ಸೀರಿಯನ ಕೈಯಿಂದ ಬಿಡಿಸಿರಿ.” |
೨೦ |
ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ: ” ಇಸ್ರಯೇಲಿನ ದೇವರಾದ ಸರ್ವೇಶ್ವರಸ್ವಾಮಿಯ ಈ ಮಾತುಗಳನ್ನು ಕೇಳು: ನೀನು ಅಸ್ಸೀರಿಯದ ರಾಜನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹಗಳು ಸರ್ವೇಶ್ವರಸ್ವಾಮಿಗೆ ಮುಟ್ಟಿವೆ. ಅವರು ಅವನನ್ನು ಕುರಿತು ಹೀಗೆಂದಿದ್ದಾರೆ: |
೨೧ |
‘ನಿನ್ನನ್ನು ಪರಿಹಾಸ್ಯಮಾಡಿ ತಿರಸ್ಕರಿಸುತಿಹಳು ಕನ್ಯೆಯಾದ ಸಿಯೋನಿನ ಕುವರಿಯು; ನಿನ್ನ ಹಿಂದೆ ತಲೆಯಾಡಿಸಿ ಮೂದಲಿಸುತಿಹಳು ಜೆರುಸಲೇಮಿನ ಆ ಕುವರಿಯು. |
೨೨ |
ನೀನು ನಿಂದಿಸಿ ದೂಷಿಸುತ್ತಿರುವುದು ಯಾರನ್ನು? ಕಿರಿಚಿ ಹೀಯಾಳಿಸುತ್ತಿರುವುದು ಯಾರನ್ನು? ಗರ್ವದಿಂದ ದುರುಗುಟ್ಟಿ ನೋಡಿದುದು ಯಾರನ್ನು? ಇಸ್ರಯೇಲರ ಸದಮಲಸ್ವಾಮಿಯನ್ನು ಅಲ್ಲವೇನು? |
೨೩ |
ನೀನು ನಿನ್ನ ದೂತರ ಮೂಲಕ ಸರ್ವೇಶ್ವರನನ್ನು ನಿಂದಿಸಿರುವೆ, ಅಲ್ಲದೆ ಈ ಮಾತುಗಳನ್ನಾಡಿ ಜಂಬಕೊಚ್ಚಿಕೊಂಡಿರುವೆ: ‘ಹತ್ತಿದ್ದೇನೆ ಗಿರಿಶಿಖರಗಳನ್ನು ರಥಸಮೂಹದೊಡನೆ ಸೇರಿದ್ದೇನೆ ಲೆಬನೋನಿನ ದುರ್ಗಮ ಸ್ಥಳಗಳನ್ನೇ! ಕಡಿದಿದ್ದೇನೆ ಅದರ ಎತ್ತರವಾದ ದೇವದಾರು ವೃಕ್ಷಗಳನ್ನೇ ಕತ್ತರಿಸಿದ್ದೇನೆ ಅದರ ಶ್ರೇಷ್ಠವಾದ ತುರಾಯಿ ಮರಗಳನ್ನೇ ಒಳಹೊಕ್ಕಿದ್ದೇನೆ ಅಲ್ಲಿನ ದೂರದ ನಿವಾಸಸ್ಥಳಗಳನ್ನೇ, ಶಿಖರವನ್ನೇ, ಪ್ರವೇಶಿಸಿದ್ದೇನೆ ದಟ್ಟವಾದ ಆ ಕಾಡು ಮೇಡುಗಳನ್ನೇ! |
೨೪ |
ಪರನಾಡುಗಳಲ್ಲಿ ಬಾವಿ ತೋಡಿ ನೀರು ಕುಡಿದಿದ್ದೇನೆ, ನನ್ನ ಅಂಗಾಲಿನಿಂದಲೇ ಈಜಿಪ್ಟಿನ ನದಿಗಳನ್ನೆಲ್ಲಾ ಬತ್ತಿಸಿದ್ದೇನೆ!’ |
೨೫ |
“ಕೇಳು, ಇದನ್ನೆಲ್ಲಾ ಬಹುಕಾಲದ ಹಿಂದೆ ಗೊತ್ತುಮಾಡಿದವನು ನಾನೇ, ಪೂರ್ವಕಾಲದಲ್ಲಿ ನಿರ್ಣಯಿಸಿದುದನ್ನು ಈಗ ನೆರವೇರಿಸಿದ್ದೇನೆ. ಕೋಟೆ ನಗರಗಳನ್ನು ನೀನು ಹಾಳುದಿಬ್ಬಗಳನ್ನಾಗಿಸಿದೆ. ಆದರೆ ಸಾಧ್ಯವಾಯಿತಿದು ನನ್ನಿಂದಲೇ; ನಿನಗಿದು ತಿಳಿಯದೆ ಹೋಯಿತೆ? |
೨೬ |
ಬಲವಿಲ್ಲದವರಾದರು ಆ ನಗರವಾಸಿಗಳು ನನ್ನ ನಿಮಿತ್ತವೆ, ಸಮಾನರಾದರು ಹೊಲದ ಸಸಿಗೆ, ಎಳೆಗರಿಕೆಗೆ, ಮಾಳಿಗೆ ಮೇಲಿನ ಹುಲ್ಲಿಗೆ; ಬೆಳೆಯುವುದಕ್ಕೆ ಮೊದಲೆ ತುತ್ತಾದರು ಬಿರುಗಾಳಿಯ ಹೊಡೆತಕ್ಕೆ! |
೨೭ |
ನನಗೆ ಗೊತ್ತಿದೆ ನೀ ಕೂರುವುದು, ನೀ ಹೋಗಿಬರುವುದು ನನಗೆ ತಿಳಿದಿದೆ ನೀ ನನ್ನ ಮೇಲೆ ರೌದ್ರಾವೇಶಗೊಂಡಿರುವುದು. |
೨೮ |
ನನ್ನ ವಿರುದ್ಧ ನಿನಗಿರುವ ಕ್ರೋಧ, ಗರ್ವ ತಿಳಿದಿದೆ ನನಗೆ ಎಂದೇ ಹಾಕುವೆ ದಾರ ಕಡಿವಾಣ ಮೂಗಿಗೆ, ಬಾಯಿಗೆ; ನೀ ಬಂದ ದಾರಿಯಿಂದಲೇ ಅಟ್ಟುವೆ ನಿನ್ನನ್ನು ಹಿಂದಕ್ಕೆ.” |
೨೯ |
ಬಳಿಕ ಯೆಶಾಯನು ರಾಜ ಹಿಜ್ಕೀಯನಿಗೆ ಹೀಗೆಂದನು: “ಈ ಮಾತುಗಳು ನೆರವೇರುತ್ತವೆಂಬುದಕ್ಕೆ ಸೂಚನೆ ಇದು: ಈ ವರ್ಷದಲ್ಲಿ ನೀವು ಕೂಳೆಬೆಳೆಯನ್ನು, ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಅದು ಬೆಳೆದುದನ್ನು, ಆದರೆ ಮೂರನೆಯ ವರ್ಷ ಹೊಲಗಳಲ್ಲಿ ಬಿತ್ತಿ ಕೊಯ್ದುದನ್ನು, ದ್ರಾಕ್ಷಿತೋಟದಲ್ಲಿ ವ್ಯವಸಾಯ ಮಾಡಿ ಶೇಖರಿಸಿದ್ದನ್ನು ಅನುಭವಿಸಿರಿ. |
೩೦ |
ಅಳಿದು ಉಳಿದ ಯೆಹೂದ್ಯರು ನಾಡಿನಲ್ಲಿ ಬೇರೂರಿ ನೆಲೆಗೊಳ್ಳುವರು; ಬೆಳೆದು ಅಭಿವೃದ್ಧಿಯಾಗುವರು. |
೩೧ |
ಅಳಿದುಳಿದವರು ಜೆರುಸಲೇಮಿನಲ್ಲೇ ಹರಡಿಕೊಳ್ಳುವರು; ಸಿಯೋನ್ ಪರ್ವತದಲ್ಲಿ ಅಭಿವೃದ್ಧಿಯಾಗುವರು. ಸರ್ವೇಶ್ವರಸ್ವಾಮಿಯ ಆಗ್ರಹವೇ ಇದನ್ನು ಸಾಧಿಸುವುದು. |
೩೨ |
“ಅಸ್ಸೀರಿಯದ ಅರಸನನ್ನು ಕುರಿತು ಸರ್ವೇಶ್ವರ ಹೇಳಿರುವ ಮಾತಿದು: ‘ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದರತ್ತ ಬಾಣವನ್ನೆಸೆಯುವುದಿಲ್ಲ, ಕವಚಧಾರಿಗಳನ್ನು ಕಳುಹಿಸುವುದಿಲ್ಲ. ಅದರ ಆಕ್ರಮಣಕ್ಕಾಗಿ ಮಣ್ಣುದಿಬ್ಬಗಳನ್ನು ಎಬ್ಬಿಸುವುದಿಲ್ಲ. |
೩೩ |
ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು; ಈ ಪಟ್ಟಣಕ್ಕೆ ಕಾಲಿಡನು. |
೩೪ |
ನನಗಾಗಿಯೂ ನನ್ನ ದಾಸ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು,’ ಎಂದಿದ್ದಾರೆ\. |
೩೫ |
ಅದೇ ರೀತಿಯಲ್ಲಿ ಸರ್ವೇಶ್ವರಸ್ವಾಮಿಯ ದೂತನು ಹೊರಟುಬಂದು ಅಸ್ಸೀರಿಯರ ಪಾಳೆಯದಲ್ಲಿ 185,000 ಮಂದಿ ಸೈನಿಕರನ್ನು ಮರಣಕ್ಕೆ ಈಡುಮಾಡಿದನು; ಅಸ್ಸೀರಿಯರು ಬೆಳಿಗ್ಗೆ ಎದ್ದು ನೋಡುವಾಗ ಪಾಳೆಯ ತುಂಬ ಹೆಣಗಳು ಇದ್ದವು. |
೩೬ |
ಆದ್ದರಿಂದ ಅಸ್ಸೀರಿಯರ ಅರಸನಾದ ಸನ್ಹೇರೀಬನು ಹಿಂದಿರುಗಿದನು. ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲೆ ವಾಸಿಸಿದನು. |
೩೭ |
ಒಂದು ದಿನ ಗುಡಿಗೆ ಹೋಗಿ ತನ್ನ ದೇವರಾದ ನಿಸ್ರೋಕನನ್ನು ಆರಾಧನೆ ಮಾಡುತ್ತಿರುವಾಗ, ಅದ್ರಮ್ಮೆಲೆಕ್ ಮತ್ತು ಸರೆಚೆರ್ ಎಂಬವರು ಅವನನ್ನು ಕತ್ತಿಯಿಂದ ಕೊಂದು ಅರರಾಟ್ ದೇಶಕ್ಕೆ ಪಲಾಯನ ಗೈದರು. ಅವನ ಸ್ಥಾನದಲ್ಲಿ ಅವನ ಮಗ ಏಸರ್ ಹದ್ದೋನನು ಅರಸನಾದನು.
|
Kannada Bible (KNCL) 2016 |
No Data |