೧ |
ಜುದೇಯದ ಅರಸನಾದ ಆಹಾಜನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಏಲನ ಮಗ ಹೋಶೇಯನು ಇಸ್ರಯೇಲರ ಅರಸನಾಗಿ ಸಮಾರಿಯದಲ್ಲಿ ಒಂಬತ್ತು ವರ್ಷ ಆಳಿದನು. |
೨ |
ಇವನು ತನ್ನ ಪೂರ್ವಿಕರಾದ ಇಸ್ರಯೇಲಿನ ಅರಸರಷ್ಟು ಕೆಟ್ಟವನಾಗಿರಲಿಲ್ಲ. ಆದರೂ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು. |
೩ |
ಅಸ್ಸೀರಿಯದ ಅರಸ ಶಲ್ಮನೆಸರನು ಇವನಿಗೆ ವಿರುದ್ಧ ದಂಡೆತ್ತಿ ಬಂದಾಗ ಇವನು ಇವನಿಗೆ ಅಧೀನನಾಗಿ ಕಪ್ಪಕೊಡುವವನಾದನು. |
೪ |
ಕೆಲವು ವರ್ಷಗಳಾದನಂತರ, ಇವನು ಪ್ರತಿ ವರ್ಷವೂ ಕೊಡಬೇಕಾದ ಕಪ್ಪವನ್ನು ಕೊಡದೆಹೋದನು; ಅದು ಮಾತ್ರವಲ್ಲ, ಈಜಿಪ್ಟಿನ ಅರಸನಾದ ಸೋ ಎಂಬವನ ಬಳಿಗೆ ರಾಯಭಾರಿಗಳನ್ನು ಕಳುಹಿಸಿದ್ದನು. ಈ ಕಾರಣ ಅಸ್ಸೀರಿಯದ ಅರಸನು ಇವನನ್ನು ದ್ರೋಹಿಯೆಂದು ತಿಳಿದು, ಬಂಧಿಸಿ ಸೆರೆಯಲ್ಲಿಟ್ಟನು. |
೫ |
ಇದಲ್ಲದೆ, ಈ ಅಸ್ಸೀರಿಯದ ಅರಸನು ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡು ಸಮಾರಿಯಕ್ಕೆ ಬಂದು ಮೂರು ವರ್ಷಗಳವರೆಗೂ ಅದಕ್ಕೆ ಮುತ್ತಿಗೆಹಾಕಿದನು. |
೬ |
ಅದು ಹೋಶೇಯನ ಆಳ್ವಿಕೆಯ ಒಂಬತ್ತನೆಯ ವರ್ಷದಲ್ಲಿ ಅವನ ಸ್ವಾಧೀನವಾಯಿತು. ಅವನು ಎಲ್ಲಾ ಇಸ್ರಯೇಲರನ್ನು ಅಸ್ಸೀರಿಯ ದೇಶಕ್ಕೆ ಒಯ್ದು ಹಲಹು ಎಂಬ ಪ್ರಾಂತ್ಯದಲ್ಲಿ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತ್ಯದಲ್ಲಿ ಹಾಗು ಮೇದ್ಯರ ಪಟ್ಟಣಗಳಲ್ಲಿ ಇರಿಸಿದನು. |
೭ |
ಇಸ್ರಯೇಲರ ಈ ದುರ್ಗತಿಗೆ ಅವರ ದುರ್ನಡತೆಯೇ ಕಾರಣ: ಹೇಗೆಂದರೆ, ಅವರು ತಮ್ಮನ್ನು ಈಜಿಪ್ಟಿನ ಅರಸನಾದ ಫರೋಹನ ಕೈಯಿಂದ ಬಿಡಿಸಿ ಅವನ ರಾಜ್ಯದಿಂದ ಹೊರತಂದ ದೇವರಾದ ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿ ಅನ್ಯದೇವತೆಗಳನ್ನು ಪೂಜಿಸಿದರು. |
೮ |
ತಮ್ಮ ನಾಡಿನಿಂದ ಸರ್ವೇಶ್ವರ ಹೊರಡಿಸಿಬಿಟ್ಟಿದ್ದ ಜನಾಂಗಗಳ ಮತ್ತು ಇಸ್ರಯೇಲ್ ರಾಜರ ದುರಾಚಾರಗಳನ್ನು ಅವರು ಅನುಸರಿಸಿದರು. |
೯ |
ತಮ್ಮ ದೇವರಾದ ಆ ಸರ್ವೇಶ್ವರನಿಗೆ ವಿರೋಧವಾದ ಕೃತ್ಯಗಳನ್ನು ಗುಪ್ತವಾಗಿ ನಡೆಸಿದರು; ಕಾವಲುಗಾರರ ಗೋಪುರವುಳ್ಳ ಚಿಕ್ಕ ಊರು ಮೊದಲುಗೊಂಡು ಕೋಟೆಕೊತ್ತಲುಗಳುಳ್ಳ ಪಟ್ಟಣದವರೆಗಿರುವ ಎಲ್ಲಾ ಊರುಗಳಲ್ಲಿ ತಮಗಾಗಿ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡರು; |
೧೦ |
ಎಲ್ಲಾ ದಿಣ್ಣೆಗಳ ಮೇಲೆ ಮತ್ತು ಎಲ್ಲಾ ಹಸಿರು ಮರಗಳ ಕೆಳಗೆ ಕಲ್ಲುಗಂಬ, ಅಶೇರುವಿಗ್ರಹಸ್ಥಂಭ ಇವುಗಳನ್ನು ಸ್ಥಾಪಿಸಿದರು. |
೧೧ |
ತಮ್ಮ ನಾಡಿನಿಂದ ಸರ್ವೇಶ್ವರ ಹೊರಡಿಸಿಬಿಟ್ಟಿದ್ದ ಅನ್ಯಜನಾಂಗಗಳಂತೆ ಎಲ್ಲಾ ಪೂಜಾಸ್ಥಳಗಳಲ್ಲಿ ಧೂಪಾರತಿಯೆತ್ತಿ ತಮ್ಮ ದುಷ್ಕೃತ್ಯಗಳಿಂದ ಅವರನ್ನು ರೇಗಿಸಿದರು; |
೧೨ |
ಸರ್ವೇಶ್ವರನ ಆಜ್ಞೆಯನ್ನು ಮೀರಿ ವಿಗ್ರಹಗಳನ್ನು ಆರಾಧಿಸಿದರು. |
೧೩ |
ದರ್ಶಿನಿಗಳೆನಿಸಿಕೊಂಡ ತಮ್ಮ ಪ್ರವಾದಿಗಳ ಮುಖಾಂತರ ಇಸ್ರಯೇಲ ಯೆಹೂದ್ಯರಿಗೆ, “ನೀವು ನಿಮ್ಮ ದುರಾಚಾರವನ್ನು ಬಿಟ್ಟು ನಾನು ನಿಮ್ಮ ಪೂರ್ವಜರಿಗೂ ನನ್ನ ದಾಸರಾದ ಪ್ರವಾದಿಗಳ ಮುಖಾಂತರ ನಿಮಗೂ ಕೊಟ್ಟಂಥ ನನ್ನ ಎಲ್ಲಾ ಆಜ್ಞಾವಿಧಿನಿಯಮಗಳನ್ನು ಕೈಕೊಂಡು ನಡೆಯಿರಿ,” ಎಂದು ಖಂಡಿತವಾಗಿ ಹೇಳಿದರು. |
೧೪ |
ಆದರೆ ಅವರು, ದೇವರಾದ ಸರ್ವೇಶ್ವರನನ್ನು ನಂಬದೆ, ಅವರ ಆಜ್ಞೆಗಳಿಗೆ ಮಣಿಯದೆಯಿದ್ದ ತಮ್ಮ ಹಿರಿಯರಂತೆ, ಕಿವಿಗೊಡದೆ ಹೋದರು. |
೧೫ |
ಸರ್ವೇಶ್ವರ ತಮ್ಮ ಪೂರ್ವಜರಿಗೆ ಕೊಟ್ಟ ವಿಧಿನಿಬಂಧನೆಗಳನ್ನೂ ತಮಗೆ ಹೇಳಿಸಿದ ಬುದ್ಧಿವಾಕ್ಯಗಳನ್ನೂ ತಿರಸ್ಕರಿಸಿ, ಮಿಥ್ಯಾದೇವತೆಗಳನ್ನು ಪೂಜಿಸಿ ನಿಸ್ಸಾರ್ಥಕರಾದರು. ಸುತ್ತಣ ಜನಾಂಗಗಳನ್ನು ಅನುಸರಿಸಬಾರದೆಂದು ಸರ್ವೇಶ್ವರ ಆಜ್ಞಾಪಿಸಿದ್ದರೂ ಕೇಳದೆ ಆ ಜನಾಂಗಗಳನ್ನೇ ಅನುಸರಿಸಿದರು. |
೧೬ |
ತಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳನ್ನೆಲ್ಲಾ ಮೀರಿ, ಎರಡು ಎರಕದ ಹೋರಿಕರುಗಳ ಮೂರ್ತಿಗಳನ್ನು ಮಾಡಿಕೊಂಡರು; ಅಶೇರ ವಿಗ್ರಹಸ್ಥಂಭಗಳನ್ನು ನಿಲ್ಲಿಸಿಕೊಂಡರು; ಆಕಾಶಸೈನ್ಯ ಹಾಗು ಬಾಳ್ ದೇವತೆಗಳನ್ನು ಪೂಜಿಸಿದರು; |
೧೭ |
ತಮ್ಮ ಗಂಡುಹೆಣ್ಣು ಮಕ್ಕಳನ್ನು ಬಲಿಯಗ್ನಿಪರೀಕ್ಷೆಗೆ ಗುರಿಮಾಡಿದರು. ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟವುಗಳನ್ನು ಮಾಡಿದರು. ಕಣಿಹೇಳುವುದು, ಯಂತ್ರಮಂತ್ರಗಳನ್ನು ಮಾಡುವುದು, ಮೊದಲಾದ ದುಷ್ಕೃತ್ಯಗಳಿಗೆ ತಮ್ಮನ್ನೇ ಮಾರಿಬಿಟ್ಟು ಸರ್ವೇಶ್ವರನಿಗೆ ಕೋಪವನ್ನೆಬ್ಬಿಸಿದರು. |
೧೮ |
ಈ ಪ್ರಕಾರ ನಡೆದುದರಿಂದ ಸರ್ವೇಶ್ವರ ಅವರ ಮೇಲೆ ಕಡುಕೋಪಗೊಂಡು ಯೆಹೂದಕುಲದವರ ಹೊರತು, ಉಳಿದ ಎಲ್ಲಾ ಕುಲಗಳವರನ್ನು ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟರು. |
೧೯ |
ಜುದೇಯದವರು ಸಹ ತಮ್ಮ ದೇವರಾದ ಸರ್ವೇಶ್ವರನ ಆಜ್ಞೆಯನ್ನು ಕೈಕೊಳ್ಳದೆ ಇಸ್ರಯೇಲರ ಪದ್ಧತಿಯನ್ನು ಅನುಸರಿಸಿದ್ದರಿಂದ, |
೨೦ |
ಇಸ್ರಯೇಲ್ ಕುಲಗಳಲ್ಲಿ ಉಳಿದಿದ್ದ ಇವರನ್ನೂ ಹೇಸಿ, ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟು, ಸೂರೆಮಾಡುವವರಿಗೆ ಒಪ್ಪಿಸಿ, ಶಿಕ್ಷಿಸಿದರು. |
೨೧ |
ಇಸ್ರಯೇಲ್ ರಾಜ್ಯವನ್ನು ದಾವೀದ ಸಂತಾನದವರ ಕೈಯಿಂದ ಕಿತ್ತುಕೊಂಡ ನಂತರ, ಇಸ್ರಯೇಲರು ನೆಬಾಟನ ಮಗ ಯಾರೊಬ್ಬಾಮನನ್ನು ಅರಸನನ್ನಾಗಿ ಮಾಡಿಕೊಂಡರು. ಅವನು ಅವರನ್ನು ಸರ್ವೇಶ್ವರನ ಭಕ್ತಿಮಾರ್ಗದಿಂದ ತಪ್ಪಿಸಿ ಮಹಾಪಾಪಕ್ಕೆ ಒಳಪಡಿಸಿದನು. |
೨೨ |
ಅವರು ಯಾರೊಬ್ಬಾಮನ ದುರ್ಮಾರ್ಗದಲ್ಲೇ ನಡೆಯುವುದನ್ನು ಬಿಡಲಿಲ್ಲವಾದುದರಿಂದ |
೨೩ |
ಸರ್ವೇಶ್ವರ, ತಮ್ಮ ದಾಸರಾದ ಎಲ್ಲಾ ಪ್ರವಾದಿಗಳ ಮುಖಾಂತರ ಭವಿಷ್ಯ ನುಡಿದಂತೆ, ಅವರನ್ನು ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟರು. ಅವರು ಸೆರೆಯವರಾಗಿ ತಮ್ಮ ನಾಡಿನಿಂದ ಅಸ್ಸೀರಿಯಾ ದೇಶಕ್ಕೆ ಒಯ್ಯಲ್ಪಟ್ಟು ಇಂದಿನವರೆಗೂ ಅಲ್ಲೇ ಇರುತ್ತಾರೆ. |
೨೪ |
ಅಸ್ಸೀರಿಯಾದ ಅರಸನು ಸಮಾರಿಯಾ ಪಟ್ಟಣಗಳಲ್ಲಿ ವಾಸವಾಗಿದ್ದ ಇಸ್ರಯೇಲರನ್ನು ಸೆರೆಯಾಗಿ ಒಯ್ದನಂತರ ಅವರಿಗೆ ಬದಲಾಗಿ ಆ ಪಟ್ಟಣಗಳಿಗೆ ಬಾಬೆಲ್, ಕೂತಾ, ಅವ್ವಾ, ಹಮಾತ್, ಸೆಫರ್ವಯಿಮ್ ಎಂಬ ಊರುಗಳವರನ್ನು ಕಳುಹಿಸಿದನು. ಅವರು ಸಮಾರಿಯಾ ನಾಡನ್ನು ಸ್ವತಂತ್ರಿಸಿಕೊಂಡು ಅದರ ಪಟ್ಟಣಗಳಲ್ಲಿ ವಾಸಿಸಿದರು. |
೨೫ |
ಅವರಿಗೆ ಆರಂಭದಲ್ಲಿ ಸರ್ವೇಶ್ವರನಲ್ಲಿ ಭಯಭಕ್ತಿ ಇರಲಿಲ್ಲ. ಆದ್ದರಿಂದ ಸರ್ವೇಶ್ವರ ಸಿಂಹಗಳನ್ನು ಕಳುಹಿಸಿದರು; ಅವು ಅವರಲ್ಲಿ ಅನೇಕರನ್ನು ಕೊಂದವು. |
೨೬ |
ಅಸ್ಸೀರಿಯದ ರಾಜನ ಸೇವಕರು ಅವನಿಗೆ, “ನೀವು ಸಮಾರಿಯಾ ಪಟ್ಟಣಗಳಿಗೆ ಕಳುಹಿಸಿದ ಆಯಾ ಊರುಗಳ ಜನರು, ಆ ನಾಡಿನ ದೇವರಿಗೆ ಸೇವೆಮಾಡುವ ರೀತಿಯನ್ನು ಅರಿಯದವರಾಗಿದ್ದಾರೆ. ಆದುದರಿಂದ ಅಲ್ಲಿನ ದೇವರು ಸಿಂಹಗಳನ್ನು ಕಳುಹಿಸಿ ಅವರನ್ನು ಸಂಹರಿಸುತ್ತಿರುತ್ತಾನೆ,” ಎಂದು ತಿಳಿಸಿದರು. |
೨೭ |
ಆಗ ಅವನು, “ಅಲ್ಲಿಂದ ಇಲ್ಲಿಗೆ ಸೆರೆಯವರಾಗಿ ಬಂದಿರುವ ಯಾಜಕರಲ್ಲೊಬ್ಬನನ್ನು ಅಲ್ಲಿಗೆ ಕಳುಹಿಸಿರಿ. ಅವನು ಹೋಗಿ ಅಲ್ಲಿ ವಾಸವಾಗಿದ್ದು ಆ ನಾಡಿನ ದೇವರಿಗೆ ಸೇವೆಮಾಡುವ ರೀತಿಯನ್ನು ಅವರಿಗೆ ಕಲಿಸಲಿ,” ಎಂದು ಆಜ್ಞಾಪಿಸಿದನು. |
೨೮ |
ಅವರು ಸಮಾರಿಯಾದಿಂದ ಸೆರೆಯವರಾಗಿ ಬಂದಿದ್ದ ಒಬ್ಬ ಯಾಜಕನನ್ನು ಅಲ್ಲಿಗೆ ಕಳುಹಿಸಿದರು. ಇವನು ಬೇತೇಲಿನಲ್ಲಿ ವಾಸವಾಗಿದ್ದು, ಜನರಿಗೆ ಸರ್ವೇಶ್ವರನ ಭಕ್ತಿಯನ್ನು ಬೋಧಿಸಿದನು. |
೨೯ |
ಆದರೂ ಆ ಜನಾಂಗಗಳವರು ತಮ್ಮ ದೇವತೆವಿಗ್ರಹಗಳನ್ನು ಮಾಡಿಕೊಂಡು ತಾವು ವಾಸಿಸುವ ಊರುಗಳೊಳಗೆ ಸಮಾರಿಯದವರು ಏರ್ಪಡಿಸಿದ್ದ ಪೂಜಾಸ್ಥಳಗಳಲ್ಲಿ ಅವುಗಳನ್ನಿಟ್ಟು ಪೂಜಿಸುತ್ತಿದ್ದರು. |
೩೦ |
ಬಾಬಿಲೋನಿನವರು ಸುಕ್ಕೋತ್ಬೆನೋತ್, ಕೂತದವರು ನೇರ್ಗಲ್, |
೩೧ |
ಹಮಾತಿನವರು ಅಷೀಮಾ, ಅವ್ವೀಯರು ನಿಭಜ್ ಮತ್ತು ತರ್ತಕ್ ಎಂಬ ದೇವತೆಗಳನ್ನು ಪೂಜಿಸುತ್ತಿದ್ದರು. ಸೆಫರ್ವಯಿಮಿನವರು ತಮ್ಮ ಕುಲದೇವತೆಗಳಾಗಿರುವ ಅದ್ರೆಮ್ಮೆಲೆಕ್ ಹಾಗು ಅನಮೆಲೆಕ್ ಎಂಬುವುಗಳಿಗಾಗಿ ತಮ್ಮ ಮಕ್ಕಳನ್ನು ಬಲಿಯಗ್ನಿ ಪರೀಕ್ಷೆಗೆ ಗುರಿಮಾಡುತ್ತಿದ್ದರು. |
೩೨ |
ಅವರು ಸರ್ವೇಶ್ವರನ ಭಕ್ತರಾಗಿದ್ದರೂ ತಮ್ಮಲ್ಲೆ ಯಾರ್ಯಾರನ್ನೋ ಉನ್ನತ ಪೂಜಾಸ್ಥಳಗಳ ಯಾಜಕರನ್ನಾಗಿ ನೇಮಿಸಿಕೊಂಡು, ಅವರ ಮುಖಾಂತರ ಪೂಜಾಸ್ಥಳದ ಗುಡಿಗಳಲ್ಲಿ ಆರಾಧನೆ ನಡೆಸುತ್ತಿದ್ದರು. |
೩೩ |
ಸರ್ವೇಶ್ವರನ ಭಕ್ತರಾಗಿದ್ದ ಅವರು ತಾವು ಬಿಟ್ಟುಬಂದ ದೇಶಗಳ ಪದ್ಧತಿಯ ಪ್ರಕಾರ ತಮ್ಮ ಕುಲದೇವತೆಗಳ ಆರಾಧನೆಯನ್ನೂ ಮಾಡುತ್ತಿದ್ದರು. |
೩೪ |
ಆ ಕಾಲದ ಪದ್ಧತಿಯನ್ನು ಇಂದಿಗೂ ಮುಂದುವರಿಸುತ್ತಿದ್ದಾರೆ. ಸರ್ವೇಶ್ವರನಲ್ಲಿ ಭಯಭಕ್ತಿ ಇಸ್ರಯೇಲರಿಗಿಲ್ಲ; ಅವರಿಂದಲೇ ಇಸ್ರಯೇಲನೆಂಬ ಹೆಸರು ಹೊಂದಿದ ಯಕೋಬನ ಸಂತಾನದವರಿಗೆ ಕೊಡಲಾದ ಆಜ್ಞಾನಿಯಮವಿಧಿ ಧರ್ಮಶಾಸ್ತ್ರಗಳನ್ನು ಅವರು ಅನುಸರಿಸಲಿಲ್ಲ. |
೩೫ |
ಇಸ್ರಯೇಲರಿಗೆ ಸರ್ವೇಶ್ವರ, “ನೀವು ಅನ್ಯದೇವತೆಗಳನ್ನು ಆರಾಧಿಸಬಾರದು, ಅವುಗಳಿಗೆ ಕೈಮುಗಿಯಲೂಬಾರದು. ಸೇವೆಮಾಡಬಾರದು, ಬಲಿ ಅರ್ಪಿಸಲೂಬಾರದು. |
೩೬ |
ನಿಮ್ಮನ್ನು ಮಹಾಶಕ್ತಿ ಹಾಗು ಭುಜಪರಾಕ್ರಮಗಳ ಮೂಲಕ ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದ ಸರ್ವೇಶ್ವರನಾದ ನನ್ನಲ್ಲೇ ಭಯಭಕ್ತಿಯುಳ್ಳವರಾಗಿ ನನಗೊಬ್ಬನಿಗೇ ಕೈಮುಗಿದು ಬಲಿಯರ್ಪಿಸಬೇಕು. |
೩೭ |
ನಾನು ನಿಮಗೆ ಬರೆಯಿಸಿಕೊಟ್ಟ ಆಜ್ಞಾನಿಯಮವಿಧಿ ಧರ್ಮಶಾಸ್ತ್ರಗಳನ್ನು ತಪ್ಪದೆ ಕೈಗೊಳ್ಳಬೇಕು. |
೩೮ |
ಅನ್ಯದೇವತೆಗಳನ್ನು ಪೂಜಿಸಬಾರದು; ನನ್ನ ನಿಬಂಧನೆಯನ್ನು ಮರೆತು ಅನ್ಯದೇವತೆಗಳನ್ನು ಪೂಜಿಸಬಾರದು. |
೩೯ |
ನಿಮ್ಮ ದೇವರಾಗಿರುವ ಸರ್ವೇಶ್ವರನಾದ ನನ್ನಲ್ಲಿ ಭಯಭಕ್ತಿಯುಳ್ಳವರಾಗಿರಬೇಕು; ಆಗ ನಿಮ್ಮನ್ನು ಯಾವ ಶತ್ರುಗಳ ಕೈಗೂ ಸಿಕ್ಕದಂತೆ ತಪ್ಪಿಸುವೆನು,” ಎಂದು ಹೇಳಿ ಅವರೊಡನೆ ಒಡಂಬಡಿಕೆ ಮಾಡಿಕೊಂಡರು. |
೪೦ |
ಆದರೆ ಅವರು ಅದನ್ನು ಲಕ್ಷಿಸದೆ ತಮ್ಮ ಹಿಂದಿನ ಪದ್ಧತಿಗಳನ್ನೇ ಅನುಸರಿಸಿದರು. |
೪೧ |
ಆ ಜನಾಂಗಗಳವರು ಸರ್ವೇಶ್ವರನ ಭಕ್ತರಾಗಿದ್ದರೂ ತಮ್ಮ ವಿಗ್ರಹಗಳನ್ನು ಆರಾಧಿಸುತ್ತಿದ್ದರು. ಅವರ ಸಂತಾನದವರು ಇಂದಿನವರೆಗೂ ಹಾಗೆಯೇ ಮಾಡುತ್ತಿದ್ದಾರೆ.
|
Kannada Bible (KNCL) 2016 |
No Data |