English
A A A A A
×

ಕನ್ನಡ ಬೈಬಲ್ (KNCL) 2016

ಅರಸುಗಳು ೨ ೧೬
ರೆಮಲ್ಯನ ಮಗ ಪೆಕಹನ ಆಳ್ವಿಕೆಯ ಹದಿನೇಳನೆಯ ವರ್ಷದಲ್ಲಿ ಜುದೇಯದ ರಾಜನಾದ ಯೋತಾಮನ ಮಗ ಆಹಾಜನು ಆಳತೊಡಗಿದನು.
ಪಟ್ಟಕ್ಕೆ ಬಂದಾಗ ಇವನಿಗೆ ಇಪ್ಪತ್ತು ವರ್ಷ ವಯಸ್ಸು. ಜೆರುಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಇವನು ತನ್ನ ದೇವರಾದ ಸರ್ವೇಶ್ವರಸ್ವಾಮಿಯ ದೃಷ್ಟಿಯಲ್ಲಿ ಒಳ್ಳೆಯವನಾಗಿರಲಿಲ್ಲ. ತನ್ನ ಪೂರ್ವಜ ದಾವೀದನ ಮಾರ್ಗವನ್ನು ಬಿಟ್ಟು
ಇಸ್ರಯೇಲ್ ರಾಜರ ಮಾರ್ಗದಲ್ಲೇ ನಡೆದನು; ಇದಲ್ಲದೆ ಇಸ್ರಯೇಲರ ನಾಡಿನಿಂದ ಸರ್ವೇಶ್ವರ ಓಡಿಸಿಬಿಟ್ಟ ಜನಾಂಗಗಳ ಅಸಹ್ಯ ಆಚಾರಗಳನ್ನು ಅನುಸರಿಸಿ ತನ್ನ ಮಗನನ್ನೆ ಬಲಿಯಗ್ನಿಪರೀಕ್ಷೆಗೆ ಗುರಿಮಾಡಿದನು.
ಪೂಜಾಸ್ಥಳಗಳಲ್ಲೂ ದಿಣ್ಣೆಗಳ ಮೇಲೂ ಎಲ್ಲಾ ಹಸಿರು ಮರಗಳ ಕೆಳಗೂ ಯಜ್ಞಧೂಪಗಳನ್ನು ಸಮರ್ಪಿಸಿದನು.
ಇವನ ಕಾಲದಲ್ಲಿ ಸಿರಿಯಾದವರ ಅರಸನಾದ ರೆಚೀನ್ ಮತ್ತು ಇಸ್ರಯೇಲರ ಅರಸನೂ ರೆಮಲ್ಯನ ಮಗನೂ ಆದ ಪೆಕಹ ಎಂಬವರು ಕೂಡಿಕೊಂಡು ಜೆರುಸಲೇಮಿಗೆ ವಿರುದ್ಧ ದಾಳಿಮಾಡಿ ಆಹಾಜನನ್ನು ಸುತ್ತಿಕೊಂಡರು. ಆದರೆ ಅವನನ್ನು ಜಯಿಸಲು ಅವರಿಂದ ಆಗಲಿಲ್ಲ.
ಇದೇ ಕಾಲದಲ್ಲಿ ಸಿರಿಯಾದವರ ಅರಸನಾದ ರೆಚೀನನು ಏಲತ್ ಪಟ್ಟಣವನ್ನು ಸಿರಿಯಾ ರಾಜ್ಯಕ್ಕೆ ಸೇರಿಸಿಕೊಂಡು ಅದರಲ್ಲಿದ್ದ ಯೆಹೂದ್ಯರನ್ನೆಲ್ಲಾ ಓಡಿಸಿದನು. ಎದೋಮ್ಯರು ಬಂದು ಅಲ್ಲಿ ವಾಸಿಸಿದರು. ಇಂದಿನವರೆಗೂ ಅದರಲ್ಲಿ ಅವರೇ ವಾಸವಾಗಿದ್ದಾರೆ.
ಆಹಾಜನು ಅಸ್ಸೀರಿಯಾ ದೇಶದ ಅರಸನಾದ ತಿಗ್ಲತ್ಪೆಲೆಸರನ ಬಳಿಗೆ ದೂತರನ್ನು ಕಳುಹಿಸಿ, “ನಾನು ನಿಮ್ಮ ಸೇವಕ ಹಾಗು ಕುವರ; ನೀವು ಬಂದು ನನ್ನನ್ನು, ನನಗೆ ವಿರುದ್ಧ ದಂಡೆತ್ತಿ ಬಂದಿರುವ ಸಿರಿಯಾದವರ ಮತ್ತು ಇಸ್ರಯೇಲರ ಅರಸುಗಳ ಕೈಗೆ ಸಿಕ್ಕದಂತೆ, ಕಾಪಾಡಿ,” ಎಂದು ಹೇಳಿಸಿದನು.
ಇದಲ್ಲದೆ ಆಹಾಜನು ಸರ್ವೇಶ್ವರನ ಆಲಯದಲ್ಲೂ ಅರಮನೆಯ ಭಂಡಾರದಲ್ಲೂ ಇದ್ದ ಬೆಳ್ಳಿ ಬಂಗಾರವನ್ನು ತೆಗೆದುಕೊಂಡು ಅಸ್ಸೀರಿಯಾದ ಅರಸನಿಗೆ ಕಪ್ಪವಾಗಿ ಕಳುಹಿಸಿದನು.
ಅವನು ಇವನ ಮಾತಿಗೆ ಒಪ್ಪಿ, ದಮಸ್ಕ ಪಟ್ಟಣಕ್ಕೆ ಮುತ್ತಿಗೆ ಹಾಕಿ, ರೆಚೀನನನ್ನು ಕೊಂದು, ನಿವಾಸಿಗಳನ್ನು ಸೆರೆಹಿಡಿದು ಕೀರ್ ಪ್ರಾಂತ್ಯಕ್ಕೆ ಒಯ್ದನು.
೧೦
ಅರಸ ಆಹಾಜನು ಅಸ್ಸೀರಿಯದ ಅರಸ ತಿಗ್ಲತ್ಪಿಲೆಸರನ ದರ್ಶನಕ್ಕಾಗಿ ದಮಸ್ಕಕ್ಕೆ ಹೋದನು; ಅಲ್ಲಿದ್ದ ಬಲಿಪೀಠವನ್ನು ಕಂಡು ಅದರ ಒಂದು ಚಿತ್ರವನ್ನೂ ಅದರ ಎಲ್ಲಾ ಅಲಂಕಾರದ ನಕ್ಷೆಯನ್ನೂ ಬರೆಯಿಸಿ ಯಾಜಕ ಊರೀಯನಿಗೆ ಕಳುಹಿಸಿದನು.
೧೧
ಅರಸ ಆಹಾಜನು ದಮಸ್ಕದಿಂದ ಬರುವಷ್ಟರಲ್ಲಿ ಊರೀಯನು ಅರಸನಿಂದ ತನಗೆ ಬಂದ ಮಾದರಿಯ ಪ್ರಕಾರ ಒಂದು ಪೂಜಾಪೀಠವನ್ನು ಮಾಡಿಸಿಬಿಟ್ಟಿದ್ದನು.
೧೨
ಅರಸನು ಹಿಂದಿರುಗಿ ಬಂದ ಮೇಲೆ ಆ ಬಲಿಪೀಠವನ್ನು ಕಂಡು ಅದರ ಸಮೀಪಕ್ಕೆ ಹೋಗಿ
೧೩
ತಾನು ತಂದ ದಹನಬಲಿ ದ್ರವ್ಯ, ಧಾನ್ಯನೈವೇದ್ಯ, ಪಾನದ್ರವ್ಯ ಇವುಗಳನ್ನು ಸಮರ್ಪಿಸಿ ಶಾಂತಿಸಮಾಧಾನ ಬಲಿಗಾಗಿ ವಧಿಸಿದ ಪಶುಗಳ ರಕ್ತವನ್ನು ಅದರ ಮೇಲೆ ಚಿಮುಕಿಸಿದನು.
೧೪
ಇದಲ್ಲದೆ, ಸರ್ವೇಶ್ವರನ ಆಲಯಕ್ಕೂ ತನ್ನ ಪೂಜಾಪೀಠಕ್ಕೂ ಮಧ್ಯೆ, ಆವರೆಗೂ ಸರ್ವೇಶ್ವರನ ಸೇವೆಗೆ ಉಪಯೋಗಿಸಲಾಗುತ್ತಿದ್ದ ತಾಮ್ರಪೀಠವನ್ನು ಆಲಯದ ಎದುರಿನಿಂದ ತೆಗೆಯಿಸಿ, ತನ್ನ ಪೂಜಾಪೀಠದ ಉತ್ತರ ದಿಕ್ಕಿನಲ್ಲಿ ಇಡಿಸಿದನು.
೧೫
ಯಾಜಕ ಊರೀಯನಿಗೆ, “ಪ್ರಾತಃಕಾಲದ ದಹನಬಲಿಯನ್ನು, ಸಾಯಂಕಾಲದ ನೈವೇದ್ಯವನ್ನು ಅರಸನು ತರುವ ದಹನಬಲಿ ದ್ರವ್ಯ, ಧಾನ್ಯನೈವೇದ್ಯ, ಇವುಗಳನ್ನು ಮತ್ತು ಜನರು ತರುವ ದಹನಬಲಿ ದ್ರವ್ಯ, ಧಾನ್ಯನೈವೇದ್ಯ, ಪಾನದ್ರವ್ಯ ಇವುಗಳನ್ನು ಈ ಮಹಾ ಪೂಜಾಪೀಠದ ಮೇಲೆ ಸಮರ್ಪಿಸಬೇಕು; ಮತ್ತು ದಹನಬಲಿ ಯಜ್ಞಗಳಿಗಾಗಿ ವಧಿಸುವ ಪಶುಗಳ ರಕ್ತವನ್ನು ಇದರ ಮೇಲೆಯೇ ಚಿಮುಕಿಸಬೇಕು. ದೈವೋತ್ತರಗಳನ್ನು ತಿಳಿದುಕೊಳ್ಳುವುದಕ್ಕಾಗಿ ತಾಮ್ರಪೀಠವನ್ನು ಉಪಯೋಗಿಸುವೆನು,” ಎಂದು ಹೇಳಿದನು.
೧೬
ಯಾಜಕ ಊರೀಯನು ಅರಸನು ಹೇಳಿದಂತೆಯೇ ಮಾಡಿದನು.
೧೭
ಅರಸನಾದ ಆಹಾಜನು ಅಸ್ಸೀರಿಯದ ಅರಸನ ನಿಮಿತ್ತ ಪೀಠಗಳ ಪಟ್ಟಿಗಳನ್ನು ಕತ್ತರಿಸಿದನು; ಅವುಗಳ ಮೇಲಿದ್ದ ನೀರಿನ ತೊಟ್ಟಿಗಳನ್ನು ತೆಗೆದಿಟ್ಟನು; ಕಂಚಿನ ಕಡಲೆಂಬ ದೊಡ್ಡ ಪಾತ್ರೆಯನ್ನು ತಾಮ್ರದ ಹೋರಿಗಳ ಮೇಲಿನಿಂದ ಇಳಿಸಿ ಕಲ್ಲುಕಟ್ಟೆಗಳ ಮೇಲೆ ಇಡಿಸಿದನು.
೧೮
ಸರ್ವೇಶ್ವರನ ಆಲಯದ ಪ್ರಾಕಾರದೊಳಗೆ ಸಬ್ಬತ್ ದಿನದ ಆರಾಧನೆಗಾಗಿ ರಾಜರಿಗಾಗಿ ಕಟ್ಟಲಾಗಿದ್ದ ಮಂಟಪವನ್ನು ಹಾಗು ಅರಮನೆಯಿಂದ ದೇವಸ್ಥಾನಕ್ಕೆ ಹೋಗುವ ಹೊರಗಿನ ಬಾಗಿಲನ್ನೂ ಬದಲಾಯಿಸಿದವನು ಈ ಆಹಾಜನೇ.
೧೯
ಆಹಾಜನ ಉಳಿದ ಚರಿತ್ರೆ ಹಾಗು ಕೃತ್ಯಗಳು ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ.
೨೦
ಅವನು ಸತ್ತು ಪಿತೃಗಳ ಬಳಿ ಸೇರಿದನು. ಅವನ ಶವವನ್ನು ದಾವೀದನಗರದೊಳಗೆ ಅವನ ಕುಟುಂಬ ಸ್ಮಶಾನದಲ್ಲಿ ಸಮಾಧಿ ಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಹಿಜ್ಕೀಯನು ಅರಸನಾದನು.