೧ |
ಇಸ್ರಯೇಲರ ಅರಸ ಯಾರೊಬ್ಬಾಮನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ ಅಮಚ್ಯನ ಮಗ ಅಜರ್ಯನು ಜುದೇಯದ ಅರಸನಾದನು. |
೨ |
ಪಟ್ಟಕ್ಕೆ ಬಂದಾಗ ಇವನಿಗೆ ಹದಿನಾರು ವರ್ಷ ವಯಸ್ಸು. ಆ ಜೆರುಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಜೆರುಸಲೇಮಿನವಳಾದ ಯೆಕೊಲ್ಯ ಎಂಬಾಕೆ ಇವನ ತಾಯಿ. |
೩ |
ಇವನು ತನ್ನ ತಂದೆಯಾದ ಅಮಚ್ಯನಂತೆ ಸರ್ವೇಶ್ವರನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದನು. |
೪ |
ಆದರೆ ಇವನ ಕಾಲದಲ್ಲಿಯೂ ಪೂಜಾಸ್ಥಳಗಳು ಹಾಗೆಯೇ ಉಳಿದಿದ್ದವು. ಜನರು ಅವುಗಳಲ್ಲಿ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುತ್ತಿದ್ದರು. |
೫ |
ಸರ್ವೇಶ್ವರಸ್ವಾಮಿ ಇವನನ್ನು ಕುಷ್ಠರೋಗದಿಂದ ಶಿಕ್ಷಿಸಿದರು. ಆದುದರಿಂದ ಇವನು ಜೀವದಿಂದಿರುವವರೆಗೂ ಪ್ರತ್ಯೇಕವಾದ ಮನೆಯಲ್ಲಿ ವಾಸಿಸಬೇಕಾಯಿತು. ರಾಜಗೃಹಾಧಿಪತ್ಯವನ್ನೂ ಪ್ರಜಾಪಾಲನೆಯನ್ನೂ ಇವನ ಮಗ ಯೋತಾಮನು ನೋಡಿಕೊಳ್ಳುತ್ತಿದ್ದನು. |
೬ |
ಅಜರ್ಯನ ಉಳಿದ ಚರಿತ್ರೆ ಹಾಗು ಅವನ ಕಾರ್ಯಕಲಾಪಗಳು ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. |
೭ |
ಅವನು ಸತ್ತು ಪಿತೃಗಳ ಬಳಿ ಸೇರಿದಾಗ ಅವನ ಶವವನ್ನು ದಾವೀದನಗರದೊಳಗೆ ರಾಜಕುಟುಂಬದ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಯೋತಾಮನು ಅರಸನಾದನು. |
೮ |
ಜುದೇಯದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಯಾರೊಬ್ಬಾಮನ ಮಗ ಜೆಕರ್ಯ ಎಂಬವನು ಇಸ್ರಯೇಲರ ಅರಸನಾಗಿ ಸಮಾರಿಯದಲ್ಲಿ ಆರು ತಿಂಗಳು ಆಳಿದನು. |
೯ |
ಅವನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗ ಯಾರೊಬ್ಬಾಮನ ದುರ್ಮಾರ್ಗವನ್ನು ಬಿಡದೆ ತನ್ನ ಪೂರ್ವಿಕರಂತೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು. |
೧೦ |
ಯಾಬೇಷನ ಮಗ ಶಲ್ಲೂಮನು ಅವರಿಗೆ ವಿರುದ್ಧ ಒಳಸಂಚುಮಾಡಿ ಪ್ರಜೆಗಳ ಮುಂದೆಯೇ ಅವನನ್ನು ಕೊಂದು ಅವನಿಗೆ ಬದಲಾಗಿ ತಾನೇ ಅರಸನಾದನು. |
೧೧ |
ಜೆಕರ್ಯನ ಉಳಿದ ಚರಿತ್ರೆ ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ. |
೧೨ |
ನಿನ್ನ ಸಂತಾನದವರು ನಾಲ್ಕನೆಯ ತಲೆಯವರೆಗೂ ಇಸ್ರಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು ಎಂಬುದಾಗಿ ಯೇಹುವಿಗೆ ಸರ್ವೇಶ್ವರ ಮುಂತಿಳಿಸಿದ ಮಾತು ನೆರವೇರಿತು. |
೧೩ |
ಜುದೇಯದ ಅರಸ ಉಜ್ಜೀಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಯಾಬೇಷನ ಮಗ ಶಲ್ಲೂಮನು ಇಸ್ರಯೇಲರ ಅರಸನಾಗಿ ಸಮಾರಿಯದಲ್ಲಿ ಒಂದು ತಿಂಗಳು ಆಳಿದನು. |
೧೪ |
ಗಾದಿಯ ಮಗ ಮೆನಹೇಮನೆಂಬವನು ತಿರ್ಚದಿಂದ ಸಮಾರಿಯಕ್ಕೆ ಬಂದು ಅಲ್ಲಿದ್ದ ಯಾಬೇಷನ ಮಗ ಶಲ್ಲೂಮನನ್ನು ಕೊಂದು ಅವನ ಸ್ಥಾನದಲ್ಲಿ ತಾನೇ ಅರಸನಾದನು. |
೧೫ |
ಶಲ್ಲೂಮನ ಉಳಿದ ಚರಿತ್ರೆ ಹಾಗು ಅವನ ಒಳಸಂಚಿನ ವಿವರ ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. |
೧೬ |
ಮೆನಹೇಮನು ತಿರ್ಚದಿಂದ ತಿಪ್ಸಹುವಿಗೆ ಹೋದಾಗ ಅಲ್ಲಿಯವರು ತಮ್ಮ ಊರುಬಾಗಿಲನ್ನು ಅವನಿಗೆ ತೆರೆಯಲಿಲ್ಲ. ಆದುದರಿಂದ ಅವನು ಅದನ್ನೂ ಅದಕ್ಕೆ ಸೇರಿದ ಪ್ರದೇಶವನ್ನೂ ಹಾಳುಮಾಡಿದನು. ಅದರ ನಿವಾಸಿಗಳನ್ನು ಸಂಹರಿಸಿದನು. ಅದರಲ್ಲಿದ್ದ ಎಲ್ಲಾ ಗರ್ಭಿಣಿಯರ ಹೊಟ್ಟೆ ಸೀಳಿಸಿದನು. |
೧೭ |
ಜುದೇಯದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಗಾದಿಯ ಮಗ ಮೆನಹೇಮನು ಇಸ್ರಯೇಲರ ಅರಸನಾಗಿ ಸಮಾರಿಯದಲ್ಲಿ ಹತ್ತು ವರ್ಷ ಆಳಿದನು. |
೧೮ |
ಇವನು ಜೀವದಿಂದಿರುವವರೆಗೂ ಇಸ್ರಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗ ಯಾರೊಬ್ಬಾಮನ ದುರ್ಮಾರ್ಗವನ್ನು ಬಿಡದೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು. |
೧೯ |
ಅಸ್ಸೀರಿಯಾ ದೇಶದ ಅರಸನಾದ ಪೂಲನೆಂಬವನು ಇಸ್ರಯೇಲ್ ದೇಶಕ್ಕೆ ವಿರುದ್ಧ ದಾಳಿಯಿಟ್ಟಾಗ, ಮೆನಹೇಮನು ಅವನ ಮುಖಾಂತರ ತನ್ನ ಅರಸುತನವನ್ನು ದೃಢಪಡಿಸಿಕೊಳ್ಳುವುದಕ್ಕಾಗಿ, ಅವನಿಗೆ ಮೂವತ್ತನಾಲ್ಕು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟನು. |
೨೦ |
ಅಸ್ಸೀರಿಯದ ಅರಸನಿಗೆ ಆ ಹಣವನ್ನು ಕೊಡುವುದಕ್ಕಾಗಿ ಇಸ್ರಯೇಲರ ಪ್ರತಿಯೊಬ್ಬ ಐಶ್ವರ್ಯವಂತನಿಂದ ಐವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡನು. ಆ ಹಣ ಸಿಕ್ಕಿದ ನಂತರ ಅಸ್ಸೀರಿಯದ ಅರಸನು ಅಲ್ಲಿ ನಿಲ್ಲದೆ ಹಿಂದಿರುಗಿ ಹೋದನು. |
೨೧ |
ಮೆನಹೇಮನ ಉಳಿದ ಚರಿತ್ರೆ ಹಾಗು ಕಾರ್ಯಕಲಾಪಗಳು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ. |
೨೨ |
ಅವನು ಮೃತನಾಗಿ ಪಿತೃಗಳ ಬಳಿ ಸೇರಿದನು. ಅವನ ಮಗ ಪೆಕಹ್ಯನು ಅರಸನಾದನು. |
೨೩ |
ಜುದೇಯದ ಅರಸ ಅಜರ್ಯನ ಆಳ್ವಿಕೆಯ ಐವತ್ತೆಂಟನೆಯ ವರ್ಷದಲ್ಲಿ ಮೆನಹೇಮನ ಮಗನಾದ ಪೆಕಹ್ಯ ಎಂಬವನು ಇಸ್ರಯೇಲರ ಅರಸನಾಗಿ ಸಮಾರಿಯದಲ್ಲಿ ಎರಡು ವರ್ಷ ಆಳಿದನು. |
೨೪ |
ಇವನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗ ಯಾರೊಬ್ಬಾಮನ ದುರ್ಮಾರ್ಗವನ್ನು ಬಿಡದೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು. |
೨೫ |
ಇವನ ಸರದಾರನೂ ರೆಮಲ್ಯನ ಮಗನೂ ಆಗಿದ್ದ ಪೆಕಹ್ಯನು ಗಿಲ್ಯಾದಿನ ಐವತ್ತು ಮಂದಿ ಜನರನ್ನು ಕೂಡಿಸಿಕೊಂಡು ಇವನಿಗೆ ವಿರುದ್ಧ ಒಳಸಂಚುಮಾಡಿ ಸಮಾರಿಯದಲ್ಲಿರುವ ಅರಮನೆಯ ಗರ್ಭಗೃಹದಲ್ಲೇ ಇವನನ್ನು ಮತ್ತು ಅರ್ಗೋಬ್, ಅರ್ಯೇ ಎಂಬವರನ್ನು ಕೊಂದು ಇವನಿಗೆ ಬದಲಾಗಿ ತಾನೇ ಅರಸನಾದನು. |
೨೬ |
ಪೆಕಹ್ಯನ ಉಳಿದ ಚರಿತ್ರೆ ಹಾಗು ಕಾರ್ಯಕಲಾಪಗಳು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. |
೨೭ |
ಜುದೇಯದ ಅರಸ ಅಜರ್ಯನ ಆಳ್ವಿಕೆಯ ಐವತ್ತೆರಡನೆಯ ವರ್ಷದಲ್ಲಿ ರೆಮಲ್ಯನ ಮಗನಾದ ಪೆಕಹ್ಯನು ಇಸ್ರಯೇಲರ ಅರಸನಾಗಿ ಸಮಾರಿಯದಲ್ಲಿ ಇಪ್ಪತ್ತು ವರ್ಷ ಆಳಿದನು. |
೨೮ |
ಇವನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗ ಯಾರೊಬ್ಬಾಮನ ದುರ್ಮಾರ್ಗವನ್ನು ಬಿಡದೆ, ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು. |
೨೯ |
ಇಸ್ರಯೇಲರ ಅರಸನಾದ ಪೆಕಹನ ಕಾಲದಲ್ಲಿ ಅಸ್ಸೀರಿಯಾ ದೇಶದ ಅರಸನಾದ ತಿಗ್ಲತ್ಪಿಲೆಸೆರನೆಂಬವನು ಬಂದು ಇಯ್ಯೋನ್, ಅಬೇಲ್ಬೇತ್ಮಾಕಾ, ಯಾನೋಹ, ಕೆದೆಷ್, ಹಾಚೋರ್ ಮೊದಲಾದ ನಫ್ತಾಲಿಯ ಊರುಗಳನ್ನೂ ಮತ್ತು ಗಿಲ್ಯಾದ್ ಹಾಗು ಗಲಿಲೇಯ ಪ್ರಾಂತ್ಯಗಳನ್ನೂ ಸ್ವಾಧೀನಪಡಿಸಿಕೊಂಡು, ಅವುಗಳ ನಿವಾಸಿಗಳನ್ನು ಅಸ್ಸೀರಿಯಾ ದೇಶಕ್ಕೆ ಸೆರೆಯಾಗಿ ತೆಗೆದುಕೊಂಡು ಹೋದನು. |
೩೦ |
ಆಗ ಏಲನ ಮಗ ಹೋಶೇಯನು, ರೆಮಲ್ಯನ ಮಗ ಪೆಕಹನಿಗೆ ವಿರುದ್ಧ ಒಳಸಂಚು ಮಾಡಿ, ಇವನನ್ನು ಉಜ್ಜೀಯನ ಮಗ ಯೋತಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಕೊಂದು, ಇವನ ಸ್ಥಾನದಲ್ಲಿ ತಾನೇ ಅರಸನಾದನು. |
೩೧ |
ಪೆಕಹನ ಉಳಿದ ಚರಿತ್ರೆ ಹಾಗು ಕಾರ್ಯಕಲಾಪಗಳನ್ನು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಓದಬಹುದು. |
೩೨ |
ಇಸ್ರಯೇಲರ ಅರಸನೂ ರೆಮಲ್ಯನ ಮಗನೂ ಆದ ಪೆಕಹನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಜುದೇಯದ ರಾಜನಾದ ಉಜ್ಜೀಯನ ಮಗ ಯೋತಾಮನು ಆಳತೊಡಗಿದನು. |
೩೩ |
ಇವನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದನು. ಇವನು ಜೆರುಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷಾ ಇವನ ತಾಯಿ. |
೩೪ |
ಇವನು ತನ್ನ ತಂದೆ ಉಜ್ಜೀಯನಂತೆ ಸರ್ವೇಶ್ವರನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು; |
೩೫ |
ಆದರೆ ಇವನ ಕಾಲದಲ್ಲೂ ಪೂಜಾಸ್ಥಳಗಳು ಇನ್ನು ಹಾಗೆಯೇ ಇದ್ದವು. ಆದುದರಿಂದ ಜನರು ಅವುಗಳಲ್ಲಿ ಬಲಿಗಳನ್ನೂ ಧೂಪಗಳನ್ನೂ ಸಮರ್ಪಿಸುತ್ತಿದ್ದರು. ಸರ್ವೇಶ್ವರನ ಆಲಯಕ್ಕೆ ಮೇಲಣ ಹೆಬ್ಬಾಗಿಲನ್ನು ಇಡಿಸಿದವನು ಇವನೇ. |
೩೬ |
ಯೋತಾಮನ ಉಳಿದ ಚರಿತ್ರೆ ಹಾಗು ಕಾರ್ಯಕಲಾಪಗಳು ಜುದೇಯದ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. |
೩೭ |
ಸರ್ವೇಶ್ವರ ಆ ಕಾಲದಲ್ಲಿ ಸಿರಿಯಾದ ಅರಸ ರೆಚೀನನನ್ನೂ ರೆಮಲ್ಯನ ಮಗ ಪೆಕಹನನ್ನೂ ಯೆಹೂದ್ಯರಿಗೆ ವಿರುದ್ಧ ಕಳುಹಿಸತೊಡಗಿದರು. |
೩೮ |
ಯೋತಾಮನು ಸತ್ತು ಪಿತೃಗಳ ಬಳಿ ಸೇರಲು ಅವನ ಶವವನ್ನು ಅವನ ಪೂರ್ವಜನಾದ ದಾವೀದನ ಪಟ್ಟಣದೊಳಗೆ ಕುಟುಂಬ ಸ್ಮಶಾನದಲ್ಲಿ ಸಮಾಧಿಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಅಹಾಜನು ಅರಸನಾದನು.
|
Kannada Bible (KNCL) 2016 |
No Data |