೧ |
ಇಸ್ರಯೇಲರ ಅರಸನಾದ ಯೆಹೋವಾಹಾಜನ ಮಗ ಯೋವಾಷನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಜುದೇಯದ ಅರಸನಾದ ಯೆಹೋವಾಷನ ಮಗ ಅಮಚ್ಯ ಎಂಬವನು ಅರಸನಾದನು. |
೨ |
ಪಟ್ಟಕ್ಕೆ ಬಂದಾಗ ಇವನಿಗೆ ಇಪ್ಪತ್ತೈದು ವರ್ಷ ವಯಸ್ಸು. ಇವನು ಜೆರುಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಜೆರುಸಲೇಮಿನವಳಾದ ಯೆಹೋವದ್ದೀನ್ ಎಂಬಾಕೆ ಇವನ ತಾಯಿ. |
೩ |
ಇವನು ತನ್ನ ತಂದೆ ಯೆಹೋವಾಷನ ಸನ್ಮಾರ್ಗದಲ್ಲಿ ತಪ್ಪದೆ ನಡೆದು ಸರ್ವೇಶ್ವರನ ದೃಷ್ಟಿಯಲ್ಲಿ ಒಳ್ಳೆಯವನಾದನು. ಆದರೂ ತನ್ನ ಪೂರ್ವಜ ದಾವೀದನಷ್ಟು ಉತ್ತಮನಾಗಿರಲಿಲ್ಲ. |
೪ |
ಇವನ ಕಾಲದಲ್ಲೂ ಪೂಜಾಸ್ಥಳಗಳು ಹಾಗೆಯೇ ಇದ್ದವು. ಜನರು ಅವುಗಳಲ್ಲಿ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುತ್ತಿದ್ದರು. |
೫ |
ಇವನು ರಾಜ್ಯವನ್ನು ಭದ್ರಪಡಿಸಿಕೊಂಡ ಕೂಡಲೆ ತನ್ನ ತಂದೆಯನ್ನು ಕೊಂದ ಉದ್ಯೋಗಸ್ಥರಿಗೆ ಮರಣ ವಿಧಿಸಿದನು. |
೬ |
ಆದರೆ, “ಮಕ್ಕಳು ಮಾಡಿದ ಪಾಪಕ್ಕೆ ತಂದೆಗಾಗಲಿ, ತಂದೆ ಮಾಡಿದ ಪಾಪದ ನಿಮಿತ್ತ ಮಕ್ಕಳಿಗಾಗಲಿ ಮರಣಶಿಕ್ಷೆಯಾಗಬಾರದು; ಪ್ರತಿಯೊಬ್ಬನೂ ತನ್ನ ಪಾಪಫಲವನ್ನು ತಾನೇ ಅನುಭವಿಸಬೇಕು,” ಎಂಬುದಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿರುವ ಸರ್ವೇಶ್ವರನ ಆಜ್ಞೆಯನ್ನು ನೆನಪುಮಾಡಿಕೊಂಡು ಅವರ ಮಕ್ಕಳನ್ನು ಕೊಲ್ಲಿಸಲಿಲ್ಲ. |
೭ |
ಇದಲ್ಲದೆ, ಉಪ್ಪಿನ ಕಣಿವೆಯಲ್ಲಿ ಎದೋಮ್ಯರ ಹತ್ತು ಸಾವಿರ ಮಂದಿ ಸೈನಿಕರನ್ನು ಸದೆಬಡಿದು ಅವರಿಂದ ‘ಸೆಲ’ ದುರ್ಗವನ್ನು ಕಿತ್ತುಕೊಂಡು ಅದಕ್ಕೆ ಯೊಕ್ತೆಯೇಲ್ ಎಂಬ ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಇದೇ ಹೆಸರಿರುತ್ತದೆ. |
೮ |
ಅನಂತರ ಅಮಚ್ಯನು ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಯೇಲರ ಅರಸನೂ ಆದ ಯೋವಾಷನ ಬಳಿಗೆ ದೂತರನ್ನು ಕಳುಹಿಸಿದನು. ಅವನಿಗೆ, “ನಾವು ಒಬ್ಬರನ್ನೊಬ್ಬರು ಎದುರುಗೊಳ್ಳೋಣ ಬಾ,” ಎಂದು ಹೇಳಿಸಿದನು. |
೯ |
ಆಗ ಇಸ್ರಯೇಲರ ಅರಸನಾದ ಯೋವಾಷ ಜುದೇಯದ ಅರಸನಾದ ಅಮಚ್ಯನಿಗೆ, “ಲೆಬನೋನಿನ ಮುಳ್ಳುಗಿಡವು ಅಲ್ಲಿನ ದೇವದಾರು ಮರಕ್ಕೆ, ‘ನನ್ನ ಮಗನಿಗೆ ನಿನ್ನ ಮಗಳನ್ನು ಕೊಡು,’ ಎಂದು ಹೇಳಿಕಳುಹಿಸಿತು. ತುಸು ಹೊತ್ತಾದ ಮೇಲೆ ಲೆಬನೋನಿನ ಒಂದು ಕಾಡುಮೃಗ ಅಲ್ಲಿಂದ ಹಾದುಹೋಗುತ್ತಿರುವಾಗ ಆ ಮುಳ್ಳುಗಿಡವನ್ನು ತುಳಿದುಬಿಟ್ಟಿತು. |
೧೦ |
ನೀನು ಎದೋಮ್ಯರನ್ನು ಸೋಲಿಸಿದ್ದರಿಂದ ಬಹಳವಾಗಿ ಉಬ್ಬಿಕೊಂಡಿರುವೆ; ಆ ಕೀರ್ತಿ ಸಾಕೆಂದು ನೆನಸಿ ಸುಮ್ಮನೆ ಮನೆಯಲ್ಲೇ ಕುಳಿತುಕೋ. ನನ್ನನ್ನು ಕೆಣಕಿ ನಿನ್ನ ಮೇಲೆಯೂ ನಿನ್ನ ರಾಜ್ಯದ ಮೇಲೆಯೂ ಏಕೆ ಕೇಡನ್ನು ಬರಮಾಡಿಕೊಳ್ಳುವೆ?” ಎಂದು ಉತ್ತರಕೊಟ್ಟು ಕಳುಹಿಸಿದನು. |
೧೧ |
ಅಮಚ್ಯನು ಇದನ್ನು ಲಕ್ಷಿಸಲಿಲ್ಲವಾದುದರಿಂದ ಇಸ್ರಯೇಲರ ಅರಸನಾದ ಯೋವಾಷನು ಯುದ್ಧಕ್ಕೆ ಹೊರಟನು; ಅವರು ಜುದೇಯ ಪ್ರಾಂತ್ಯದ ಬೇತ್ಷೆಮೆಷಿನಲ್ಲಿ ಒಬ್ಬರನ್ನೊಬ್ಬರು ಎದುರುಗೊಂಡರು. |
೧೨ |
ಯೆಹೂದ್ಯರು ಇಸ್ರಯೇಲರಿಂದ ಸೋಲು ಸವಿದು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು. |
೧೩ |
ಇಸ್ರಯೇಲರ ಅರಸ ಯೋವಾಷನು, ಅಹಜ್ಯನ ಮೊಮ್ಮಗನೂ ಯೆಹೋವಾಷನ ಮಗನೂ ಜುದೇಯದ ಅರಸನೂ ಆದ ಅಮತ್ಯನನ್ನು, ಬೇತ್ಷೆಮೆಷಿನಲ್ಲಿ ಹಿಡಿದು, ಅವನನ್ನು ಜೆರುಸಲೇಮಿಗೆ ಕರೆದುಕೊಂಡುಬಂದು, ಎಫ್ರಯಿಮ್ ಬಾಗಿಲಿಗೂ ಮೂಲೆಯ ಬಾಗಿಲಿಗೂ ಮಧ್ಯದಲ್ಲಿದ್ದ ಜೆರುಸಲೇಮಿನ ನಾನೂರು ಮೊಳ ಗೋಡೆಯನ್ನು ಕೆಡವಿಬಿಟ್ಟನು. |
೧೪ |
ಇದಲ್ಲದೆ, ಅವನು ಸರ್ವೇಶ್ವರನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿ ಸಿಕ್ಕಿದ ಎಲ್ಲಾ ಬೆಳ್ಳಿ ಬಂಗಾರವನ್ನೂ ಪಾತ್ರೆಗಳನ್ನೂ ತೆಗೆದುಕೊಂಡು, ಕೆಲವರನ್ನು ಒತ್ತೆಯಾಳುಗಳಾಗಿ ಸೆರೆಹಿಡಿದು, ಸಮಾರಿಯಕ್ಕೆ ಹಿಂದಿರುಗಿದನು. |
೧೫ |
ಯೋವಾಷನ ಉಳಿದ ಚರಿತ್ರೆ, ಅವನ ಶೂರಕೃತ್ಯಗಳ ಮತ್ತು ಜುದೇಯದ ರಾಜನಾದ ಅಮಚ್ಯನೊಡನೆ ನಡೆಸಿದ ಯುದ್ಧದ ವಿವರ, ಇವು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. |
೧೬ |
ಅವನು ನಿಧನನಾಗಿ ಪಿತೃಗಳ ಬಳಿ ಸೇರಲು ಅವನ ಶವವನ್ನು ಸಮಾರಿಯದೊಳಗೆ ಇಸ್ರಯೇಲರ ರಾಜಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗ ಯಾರೊಬ್ಬಾಮನು ಅರಸನಾದನು. |
೧೭ |
ಇಸ್ರಯೇಲರ ಅರಸನೂ ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತನಂತರ, ಜುದೇಯದ ಅರಸನೂ ಯೆಹೋವಾಷನ ಮಗನೂ ಆದ ಅಮಚ್ಯನು ಇನ್ನೂ ಹದಿನೈದು ವರ್ಷ ಬದುಕಿದ್ದನು. |
೧೮ |
ಅವನ ಉಳಿದ ಚರಿತ್ರೆ ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತದೆ. |
೧೯ |
ಜೆರುಸಲೇಮಿನವರು ಅವನಿಗೆ ವಿರುದ್ಧ ಒಳಸಂಚು ಮಾಡಿದ್ದರಿಂದ ಅವನು ಲಾಕೀಷಿಗೆ ಓಡಿಹೋದನು; ಆದರೆ ಅವರು ಅಲ್ಲಿಗೆ ಆಳುಗಳನ್ನು ಕಳುಹಿಸಿ ಅವನನ್ನು ಕೊಲ್ಲಿಸಿದರು. |
೨೦ |
ಅವನ ಜನರು ಅವನ ಶವವನ್ನು ಕುದುರೆಗಳ ಮೇಲೆ ಜೆರುಸಲೇಮಿಗೆ ತಂದು ದಾವೀದ ನಗರದೊಳಗೆ ಅವನ ಕುಟುಂಬ ಸ್ಮಶಾನಭೂಮಿಯಲ್ಲಿ ಸಮಾಧಿ ಮಾಡಿದರು. |
೨೧ |
ಅನಂತರ ಎಲ್ಲಾ ಯೆಹೂದ್ಯರು ಕೂಡಿ ಹದಿನಾರು ವರ್ಷದವನಾದ ಅಜರ್ಯನನ್ನು ಅವನ ತಂದೆ ಅಮಚ್ಯನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು. |
೨೨ |
ಅರಸನು ಮೃತನಾಗಿ ಪಿತೃಗಳ ಬಳಿ ಸೇರಿದ ಮೇಲೆ, ಇವನು ಏಲತ್ ಎಂಬ ಪಟ್ಟಣವನ್ನು ಮತ್ತೆ ಜುದೇಯ ರಾಜ್ಯಕ್ಕೆ ಸೇರಿಸಿ, ಭದ್ರಪಡಿಸಿದನು. |
೨೩ |
ಜುದೇಯದ ಅರಸನೂ ಯೆಹೋವಾಷನ ಮಗನೂ ಆದ ಅಮಚ್ಯನ ಆಳ್ವಿಕೆಯ ಹದಿನೈದನೆಯ ವರ್ಷದಲ್ಲಿ, ಇಸ್ರಯೇಲರ ಅರಸನಾದ ಯೋವಾಷನ ಮಗ ಯಾರೊಬ್ಬಾಮನು, ಅರಸನಾಗಿ ಸಮಾರಿಯದಲ್ಲಿ ನಾಲ್ವತ್ತೊಂದು ವರ್ಷ ಆಳಿದನು. |
೨೪ |
ಇವನು ಇಸ್ರಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ದುರ್ಮಾರ್ಗವನ್ನು ಬಿಡದೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು. |
೨೫ |
ಇಸ್ರಯೇಲ್ ದೇವರಾದ ಸರ್ವೇಶ್ವರ, ತನ್ನ ಸೇವಕನೂ ಗತ್ ಹೇಫೆರಿವನಾದ ಅಮಿತ್ತೈಯ ಮಗನೂ ಆದ ಯೋನಾ ಎಂಬ ಪ್ರವಾದಿಯ ಮುಖಾಂತರ ಮುಂತಿಳಿಸಿದಂತೆ, ಹಮಾತಿನ ದಾರಿಯಿಂದ ಅರಾಬಾ ತಗ್ಗಿನ ಸಮುದ್ರದವರೆಗಿದ್ದ ಇಸ್ರಯೇಲರ ಮೇರೆಯನ್ನು ತಿರುಗಿ ತೆಗೆದುಕೊಂಡವನು ಇವನೇ. |
೨೬ |
“ಇಸ್ರಯೇಲರು ಘೋರಕಷ್ಟವನ್ನು ಅನುಭವಿಸುತ್ತಿರುತ್ತಾರೆ. ಅವರಲ್ಲಿದ್ದ ಸ್ವತಂತ್ರರೂ ಪರತಂತ್ರರೂ ನಾಶವಾಗಿದ್ದಾರೆ, ಅವರನ್ನು ರಕ್ಷಿಸುವವನು ಒಬ್ಬನೂ ಇಲ್ಲ,” ಎಂಬುದನ್ನು ಸರ್ವೇಶ್ವರ ನೋಡಿದರು. |
೨೭ |
ಆ ಜನರನ್ನು ಭೂಲೋಕದಿಂದ ನಿರ್ನಾಮಮಾಡುವುದಕ್ಕೆ ಮನಸ್ಸಿಲ್ಲದೆ, ಯೋವಾಷನ ಮಗ ಯಾರೊಬ್ಬಾಮನ ಮುಖಾಂತರ ಅವರನ್ನು ರಕ್ಷಿಸಿದರು. |
೨೮ |
ಯಾರೊಬ್ಬಾಮನ ಉಳಿದ ಚರಿತ್ರೆ, ಅವನು ಯುದ್ಧದಲ್ಲಿ ನಡೆಸಿದ ಶೂರಕಾರ್ಯ ಮತ್ತು ಮೊದಲು ಯೆಹೂದ್ಯರ ಸ್ವಾಧೀನದಲ್ಲಿದ್ದ ದಮಸ್ಕ, ಹಮಾತ್ ಎಂಬ ಪಟ್ಟಣಗಳು ಇವನಿಂದ ಇಸ್ರಯೇಲ್ ರಾಜ್ಯಕ್ಕೆ ವಶವಾದ ವಿವರ, ಇವೆಲ್ಲವು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. |
೨೯ |
ಅವನು ನಿಧನನಾಗಿ ಇಸ್ರಯೇಲ್ ರಾಜರಾಗಿದ್ದ ತನ್ನ ಪಿತೃಗಳ ಬಳಿ ಸೇರಿದನು. ಅವನ ಸ್ಥಾನದಲ್ಲಿ ಅವನ ಮಗ ಜೆಕರ್ಯನು ಅರಸನಾದನು.
|
Kannada Bible (KNCL) 2016 |
No Data |