೧ |
ಅಹಜ್ಯನು ಮರಣಹೊಂದಿದನೆಂಬುದನ್ನು ಅವನ ತಾಯಿ ಅತಲ್ಯಳು ಕೇಳಿದಾಗ ರಾಜಸಂತಾನದವರನ್ನೆಲ್ಲಾ ಬೇಗನೆ ಸಂಹರಿಸಿಬಿಟ್ಟಳು. |
೨ |
ಆದರೆ ಅರಸ ಯೆಹೋರಾಮನ ಮಗಳೂ ಅಹಜ್ಯನ ತಂಗಿಯೂ ಆದ ಯೆಹೋಷೆಬ ಎಂಬಾಕೆ, ಯಾರಿಗೂ ತಿಳಿಯದಂತೆ ತನ್ನ ಅಣ್ಣನ ಮಗ ಯೆಹೋವಾಷನನ್ನು, ಹತವಾಗುವುದಕ್ಕಿದ್ದ ರಾಜಪುತ್ರರ ಮಧ್ಯೆಯಿಂದ, ಅವನ ದಾದಿಯೊಡನೆ ತೆಗೆದುಕೊಂಡು ಹೋಗಿ, ಮಲಗುವ ಕೋಣೆಯಲ್ಲಿ ಅಡಗಿಸಿಬಿಟ್ಟಳು. |
೩ |
ಹೀಗೆ ಅವನು ಅತಲ್ಯಳಿಂದ ಹತವಾಗದೆ ತಪ್ಪಿಸಿಕೊಂಡು, ಆರು ವರ್ಷಗಳವರೆಗೂ ಯೆಹೋಷೆಬಳೊಡನೆ ಗುಪ್ತವಾಗಿ ಸರ್ವೇಶ್ವರನ ಆಲಯದಲ್ಲಿದ್ದನು. ಈ ಆರು ವರ್ಷಗಳಲ್ಲಿ ಅತಲ್ಯಳೇ ನಾಡನ್ನು ಆಳುತ್ತಿದ್ದಳು. |
೪ |
ಏಳನೆಯ ವರ್ಷದಲ್ಲಿ ಯೆಹೋಯಾದಾವನು ‘ಕಾರಿ’ ಎಂಬ ಸಿಪಾಯಿಗಳ ಮತ್ತು ಕಾವಲುದಂಡಿನವರ ಶತಾಧಿಪತಿಗಳನ್ನು ತನ್ನ ಹತ್ತಿರ ಸರ್ವೇಶ್ವರನ ಆಲಯಕ್ಕೆ ಕರೆಯಿಸಿದನು. ಅಲ್ಲಿ ಅವನು ಅವರ ಸಂಗಡ ಪ್ರಮಾಣಪೂರ್ವಕವಾದ ಒಪ್ಪಂದವನ್ನು ಮಾಡಿಕೊಂಡನಂತರ ರಾಜಕುಮಾರನನ್ನು ತೋರಿಸಿದನು. |
೫ |
ಅನಂತರ ಅವರಿಗೆ, “ಸಬ್ಬತ್ ದಿನದಲ್ಲಿ ಮನೆಗೆ ಹೋಗುವ ಸೈನ್ಯದ ಮೂರರಲ್ಲೊಂದು ಭಾಗ ಅರಮನೆಯನ್ನು ಕಾಯಬೇಕು; |
೬ |
ಇನ್ನೊಂದು ಭಾಗ ಸೂರ್ ಬಾಗಿಲಿನಲ್ಲಿಯೂ ಮತ್ತೊಂದು ಭಾಗ ಕಾವಲುದಂಡಿನ ಹಿಂದಣ ಬಾಗಿಲಿನಲ್ಲಿಯೂ ಇರಬೇಕು. ಈ ಪ್ರಕಾರ ನೀವು ಅರಮನೆಯನ್ನು ಭದ್ರವಾಗಿ ಕಾಯಬೇಕು. |
೭ |
ಅದೂ ಅಲ್ಲದೆ, ಸಬ್ಬತ್ ದಿನದಲ್ಲಿ ಕಾಯುವುದಕ್ಕಾಗಿ ಬರುವ ನಿಮ್ಮ ಇಮ್ಮಡಿಯಾದ ಸೈನ್ಯವು ಸರ್ವೇಶ್ವರನ ಆಲಯದಲ್ಲಿ ಅರಸನನ್ನು ಕಾಯಬೇಕು. |
೮ |
ನೀವು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು, ಅವನ ಸುತ್ತಲೂ ನಿಂತು, ನಿಮ್ಮ ಗುಂಪಿನಲ್ಲಿ ನುಗ್ಗುವಂಥವನನ್ನು ಸಂಹರಿಸಬೇಕು. ಅರಸನು ಹೊರಗೆ ಹೋಗಿ ಬರುವಾಗಲೆಲ್ಲಾ ನೀವು ಅವನ ಜೊತೆಯಲ್ಲೇ ಇರಬೇಕು; ಇದು ನನ್ನ ಅಪ್ಪಣೆ,” ಎಂದು ಹೇಳಿದನು. |
೯ |
ಯಾಜಕನಾದ ಯೆಹೋಯಾದವನು ಆಜ್ಞಾಪಿಸಿದಂತೆ ಶತಾಧಿಪತಿಗಳು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಕಾಯುವುದಕ್ಕಾಗಿ ಬರತಕ್ಕ ಸಿಪಾಯಿಗಳನ್ನು ಕರೆದುಕೊಂಡು ಅವನ ಬಳಿಗೆ ಬಂದರು. |
೧೦ |
ಅವರು ಆ ಶತಾಧಿಪತಿಗಳಿಗೆ ಸರ್ವೇಶ್ವರನ ಆಲಯದಲ್ಲಿ ಇಡಲಾಗಿದ್ದ ದಾವೀದನ ಬರ್ಜಿಯನ್ನೂ ಗುರಾಣಿಗಳನ್ನೂ ಕೊಟ್ಟನು. |
೧೧ |
ಕಾವಲುದಂಡಿನವರು ಆಯುಧ ಹಿಡಿದುಕೊಂಡು ಅರಸನನ್ನು ಕಾಯುವುದಕ್ಕಾಗಿ ದೇವಾಲಯದ ದಕ್ಷಿಣ ದಿಕ್ಕಿನ ಮೂಲೆಯಿಂದ ಬಲಿಪೀಠದವರೆಗು, ಅಲ್ಲಿಂದ ಉತ್ತರ ದಿಕ್ಕಿನ ಮೂಲೆಯವರೆಗು, ಸಾಲಾಗಿ ನಿಂತರು. |
೧೨ |
ಯೆಹೋಯಾದವನು ರಾಜಪುತ್ರನನ್ನು ಹೊರಗೆ ಕರೆದುಕೊಂಡು ಬಂದು, ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ರಾಜ್ಯಾಭಿಷೇಕ ಮಾಡಿದನು. ಕೂಡಲೆ ಜನರು ಚಪ್ಪಾಳೆಹೊಡೆದು, ‘ಅರಸನು ಚಿರಂಜೀವಿಯಾಗಿರಲಿ!’ ಎಂದು ಜಯಕಾರ ಮಾಡಿದರು. |
೧೩ |
ಅತಲ್ಯಳು ಕಾವಲುದಂಡಿನವರ ಮತ್ತು ಇತರ ಜನರ ಗದ್ದಲವನ್ನು ಕೇಳಿ, ಅವರು ಕೂಡಿದ್ದ ಸರ್ವೇಶ್ವರನ ಆಲಯಕ್ಕೆ ಬಂದಳು. |
೧೪ |
ಅಲ್ಲಿ ಅರಸನು ಪದ್ಧತಿಯ ಪ್ರಕಾರ ಸ್ತಂಭದ ಬಳಿಯಲ್ಲಿ ನಿಂತಿದ್ದನು. ಅಧಿಪತಿಗಳೂ ತುತೂರಿಗಳನ್ನು ಊದುವವರೂ ಅರಸನ ಹತ್ತಿರ ಇದ್ದರು. ಜನಸಾಮಾನ್ಯರೆಲ್ಲರು ಸಂತೋಷದಿಂದ ಕೊಂಬೂದುತ್ತಿದ್ದರು. ಇದನ್ನು ಕಂಡ ಕೂಡಲೆ ಆಕೆ ಕೋಪದಿಂದ ಬಟ್ಟೆಗಳನ್ನು ಹರಿದುಕೊಂಡು, “ದ್ರೋಹ! ದ್ರೋಹ!” ಎಂದು ಕೂಗಿದಳು. |
೧೫ |
ಆಗ ಯಾಜಕನಾದ ಯೆಹೋಯಾದಾವನು ಸೇನಾನಿಗಳಾದ ಶತಾಧಿಪತಿಗಳಿಗೆ, “ಈಕೆಯನ್ನು ಸರ್ವೇಶ್ವರನ ಆಲಯದಲ್ಲಿ ಕೊಲ್ಲಬೇಡಿ; ಎರಡು ಸಾಲು ಸಿಪಾಯಿಗಳು ಈಕೆಯನ್ನು ನಡುವೆ ಮಾಡಿ, ಹೊರಗೆ ಕರೆದುಕೊಂಡು ಹೋಗಲಿ; ಮತ್ತು ಈಕೆಯನ್ನು ಹಿಂಬಾಲಿಸುವಂಥವರನ್ನು ಕತ್ತಿಯಿಂದ ಕೊಲ್ಲಿರಿ,” ಎಂದು ಆಜ್ಞಾಪಿಸಿದನು. |
೧೬ |
ಅವರು ಆಕೆಯನ್ನು ಹಿಡಿದು ಕುದುರೆಗಳ ಬಾಗಿಲಿನಿಂದ ಅರಮನೆಗೆ ಒಯ್ದು ಅಲ್ಲಿ ಹತಿಸಿದರು. |
೧೭ |
ಅನಂತರ ಯೆಹೋಯಾದಾವನ ಪ್ರೇರಣೆಯಿಂದ ಅರಸನೂ ಪ್ರಜೆಗಳೂ ತಾವು ಸರ್ವೇಶ್ವರನ ಪ್ರಜೆಗಳಾಗಿರುವುದಾಗಿ ಪ್ರಮಾಣಮಾಡಿದರು. ಇದಲ್ಲದೆ, ರಾಜನಿಗೂ ಪ್ರಜೆಗಳಿಗೂ ಒಂದು ಒಪ್ಪಂದವಾಯಿತು. |
೧೮ |
ಯೆಹೂದ್ಯರೆಲ್ಲರೂ ಬಾಳ್ ದೇವತೆಯ ದೇವಸ್ಥಾನಕ್ಕೆ ಹೋಗಿ ಬಾಳನ ಪೂಜಾರಿಯಾದ ಮತ್ತಾನನನ್ನು ಪೀಠಗಳ ಮುಂದೆಯೇ ಕೊಂದು, ಆ ದೇವಸ್ಥಾನವನ್ನೂ ಅದರಲ್ಲಿದ್ದ ಪೀಠ ಹಾಗು ವಿಗ್ರಹಗಳನ್ನೂ ಸಂಪೂರ್ಣವಾಗಿ ಹಾಳುಮಾಡಿದರು. ಯೆಹೋಯಾದಾವನು ದೇವಾಲಯಕ್ಕೆ ಕಾವಲಿಟ್ಟನು; |
೧೯ |
ಬಳಿಕ ಶತಾಧಿಪತಿಗಳು, ‘ಕಾರಿ’ ಎನಿಸಿಕೊಳ್ಳುವ ಸೈನ್ಯ, ಕಾವಲುದಂಡು ಹಾಗು ಜನಸಾಮಾನ್ಯರು ಇವರೊಡನೆ ಅರಸನನ್ನು ಸರ್ವೇಶ್ವರನ ಆಲಯದಿಂದ ಕಾವಲುದಂಡಿನವರ ಬಾಗಿಲಿನ ಮಾರ್ಗವಾಗಿ, ಅರಮನೆಗೆ ಕರೆದುಕೊಂಡು ಹೋಗಿ, ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು. |
೨೦ |
ನಾಡಿನವರೆಲ್ಲರೂ ಬಹಳವಾಗಿ ಸಂತೋಷಪಟ್ಟರು. ಪಟ್ಟಣದಲ್ಲಿ ಶಾಂತಿಯಿತ್ತು; ಅತಲ್ಯಳನ್ನು ಅರಮನೆಯಲ್ಲೇ ಕತ್ತಿಯಿಂದ ಸಂಹರಿಸಿದರು. |
೨೧ |
ಹೀಗೆ ಯೆಹೋವಾಷನು ಅರಸನಾದಾಗ ಅವನಿಗೆ ಏಳು ವರ್ಷ ವಯಸ್ಸು.
|
Kannada Bible (KNCL) 2016 |
No Data |