೧ |
ಅಹಾಬನು ಮರಣಹೊಂದಿದ ನಂತರ ಮೋವಾಬ್ಯರು ಇಸ್ರಯೇಲರ ವಿರುದ್ಧ ದಂಗೆ ಎದ್ದರು. |
೨ |
ಅಹಜ್ಯನು ಸಮಾರಿಯದಲ್ಲಿದ್ದ ತನ್ನ ಮೇಲುಪ್ಪರಿಗೆಯ ಕಿಟಕಿಯೊಂದರಿಂದ ಬಿದ್ದು ಅಸ್ವಸ್ಥನಾಗಿದ್ದನು. ಅವನು ತನ್ನ ಸೇವಕರನ್ನು ಕರೆದು, “ನೀವು ಎಕ್ರೋನಿನ ದೇವರಾದ ‘ಬಾಳ್ಜೆಬೂಬ’ನ ಸನ್ನಿಧಿಗೆ ಹೋಗಿ ನಾನು ಈ ಅಸ್ವಸ್ಥತೆಯಿಂದ ಗುಣವಾಗುವೆನೋ ಇಲ್ಲವೋ, ಎಂದು ವಿಚಾರಿಸಿ ಬನ್ನಿ,” ಎಂದು ಹೇಳಿ ಕಳುಹಿಸಿದನು. |
೩ |
ಆದರೆ ಸರ್ವೇಶ್ವರ ಸ್ವಾಮಿಯ ದೂತನು ತಿಷ್ಬೀಯನಾದ ಎಲೀಯನಿಗೆ, “ನೀನು ಹೋಗಿ ಸಮಾರಿಯದ ಅರಸನ ಆ ಸೇವಕರನ್ನು ಭೇಟಿಯಾಗು. ಅವರಿಗೆ, ‘ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವ ಅಗತ್ಯವಾದರೂ ಏನು? ಇಸ್ರಯೇಲರಲ್ಲಿ ದೇವರಿಲ್ಲವೆ? |
೪ |
ಈ ಕಾರಣ ಅಹಜ್ಯನು ತಾನು ಹಿಡಿದ ಹಾಸಿಗೆಯಿಂದ ಏಳದೆ ಸಾಯಲೇಬೇಕು ಎನ್ನುತ್ತಾರೆ ಸರ್ವೇಶ್ವರ’ ಎಂದು ಹೇಳು,” ಎಂದು ಆಜ್ಞಾಪಿಸಿದರು. ಎಲೀಯನು ಹಾಗೆಯೇ ಮಾಡಿದನು. |
೫ |
ದೂತರು ಅರಸನ ಬಳಿಗೆ ಹಿಂದಿರುಗಿ ಬಂದಾಗ ಅರಸನು, “ನೀವು ಹಿಂದಿರುಗಿದ್ದೇಕೆ?” ಎಂದು ಕೇಳಿದನು. |
೬ |
ಅದಕ್ಕೆ ಅವರು, “ಒಬ್ಬ ವ್ಯಕ್ತಿ ನಮ್ಮನ್ನು ಎದುರುಗೊಂಡು, “ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹಿಂದಿರುಗಿರಿ. ಸರ್ವೇಶ್ವರನ ಹೆಸರಿನಲ್ಲಿ ಅವನಿಗೆ ಹೀಗೆಂದು ಹೇಳಿರಿ: ‘ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವ ಅಗತ್ಯವಾದರೂ ಏನು? ಇಸ್ರಯೇಲರಲ್ಲಿ ದೇವರಿಲ್ಲವೆ? ಹೀಗೆ ಮಾಡಿದ್ದರಿಂದ ನೀವು ಹಿಡಿದ ಹಾಸಿಗೆಯಿಂದ ಏಳದೆ ಸಾಯಲೇಬೇಕು ಎಂಬುದಾಗಿ ಹೇಳಿರಿ’ ಎಂದು ಆಜ್ಞಾಪಿಸಿದನು,” ಎಂದು ಉತ್ತರಕೊಟ್ಟರು. |
೭ |
ಅದಕ್ಕೆ ಅರಸನು, “ನಿಮ್ಮನ್ನು ಭೇಟಿಯಾಗಿ ಹೀಗೆಂದು ನುಡಿದ ಆ ವ್ಯಕ್ತಿ ಹೇಗಿದ್ದನು?” ಎಂದು ವಿಚಾರಿಸಿದನು. |
೮ |
ಅವರು, “ಅವನು ಕಂಬಳಿಯನ್ನು ಹೊದ್ದುಕೊಂಡಿದ್ದ; ಅವನ ಸೊಂಟಕ್ಕೆ ತೊಗಲಿನ ನಡುಕಟ್ಟು ಇತ್ತು,” ಎಂದರು. ಆಗ ಅರಸನು, “ಆ ವ್ಯಕ್ತಿ ತಿಷ್ಬೀಯನಾದ ಎಲೀಯನೇ ಆಗಿರಬೇಕು,” ಎಂದುಕೊಂಡನು. |
೯ |
ಬಳಿಕ ಅರಸನು ಎಲೀಯನನ್ನು ಕರೆದುತರುವುದಕ್ಕಾಗಿ ಒಬ್ಬ ಪಂಚಾಶದಧಿಪತಿಯನ್ನು ಅವನ ಐವತ್ತುಮಂದಿ ಸಿಪಾಯಿಗಳೊಡನೆ ಕಳುಹಿಸಿದನು. ಇವನು ಬಂದು ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿರುವುದನ್ನು ಕಂಡನು. “ದೈವಪುರುಷರೇ, ಇಳಿದು ಬನ್ನಿ, ಅರಸರು ತಮ್ಮನ್ನು ಕರೆಯುತ್ತಿದ್ದಾರೆ,” ಎಂದು ಆಮಂತ್ರಿಸಿದನು. |
೧೦ |
ಅದಕ್ಕೆ ಎಲೀಯನು, “ನಾನು ದೈವಪುರುಷನಾಗಿ ಇರುವುದು ನಿಜವಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ ನಿನ್ನ ಐವತ್ತುಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ,” ಎಂದನು. ಕೂಡಲೆ ಆಕಾಶದಿಂದ ಬೆಂಕಿಬಿದ್ದು ಅವನನ್ನೂ ಅವನ ಐವತ್ತುಮಂದಿ ಸಿಪಾಯಿಗಳನ್ನೂ ದಹಿಸಿಬಿಟ್ಟಿತು. |
೧೧ |
ಆಮೇಲೆ ಅರಸನು ಇನ್ನೊಬ್ಬ ಪಂಶಾಶದಧಿಪತಿಯನ್ನು ಅವನ ಐವತ್ತುಮಂದಿ ಸಿಪಾಯಿಗಳ ಸಮೇತ ಕಳುಹಿಸಿದನು. ಇವನು ಬಂದು ಎಲೀಯನಿಗೆ, “ದೈವಪುರುಷರೇ, ಬೇಗನೆ ಇಳಿದು ಬನ್ನಿ; ಅರಸರು ನಿಮ್ಮನ್ನು ಕರೆಯುತ್ತಾರೆ,” ಎಂದು ಹೇಳಿದನು. |
೧೨ |
ಅದಕ್ಕೆ ಎಲೀಯನು, “ನಾನು ದೈವಪುರುಷ ಹೌದಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ ನಿನ್ನ ಐವತ್ತುಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ,” ಎಂದನು. ಕೂಡಲೆ ದೇವರು ಆಕಾಶದಿಂದ ಕಳುಹಿಸಿದ ಬೆಂಕಿ ಬಂದು ಅವನನ್ನೂ ಅವನ ಐವತ್ತುಮಂದಿ ಸಿಪಾಯಿಗಳನ್ನೂ ಸುಟ್ಟುಬಿಟ್ಟಿತು. |
೧೩ |
ಅರಸನು ಮತ್ತೊಬ್ಬ ಪಚಾಶದಧಿಪತಿಯನ್ನು ಅವನ ಐವತ್ತುಮಂದಿ ಸಿಪಾಯಿಗಳೊಡನೆ ಕಳುಹಿಸಿದನು. ಇವನು ಬಂದು, ಎಲೀಯನ ಮುಂದೆ ಮೊಣಕಾಲೂರಿ, “ದೈವಪುರುಷರೇ, ನನ್ನ ಮತ್ತು ನನ್ನ ಸೇವಕರಾದ ಈ ಐವತ್ತುಮಂದಿಯ ಪ್ರಾಣ ನಿಮ್ಮ ದೃಷ್ಟಿಯಲ್ಲಿ ಮೌಲ್ಯವುಳ್ಳದ್ದಾಗಿರಲಿ; |
೧೪ |
ಆಕಾಶದಿಂದ ಬೆಂಕಿಬಿದ್ದು ನನಗೆ ಮುಂದೆ ಬಂದ ಆ ಇಬ್ಬರು ಪಂಚಾಶದಧಿಪತಿಗಳನ್ನೂ ಅವರ ಸಿಪಾಯಿಗಳನ್ನೂ ದಹಿಸಿಬಿಟ್ಟಿತಲ್ಲವೆ? ನನ್ನ ಪ್ರಾಣವಾದರೂ ನಿಮ್ಮ ದೃಷ್ಟಿಯಲ್ಲಿ ಮೌಲ್ಯವುಳ್ಳದೆಂದು ಮಾನ್ಯವಾಗಲಿ,” ಎಂದು ಬೇಡಿಕೊಂಡನು. |
೧೫ |
ಆಗ ಸರ್ವೇಶ್ವರನ ದೂತನು ಎಲೀಯನಿಗೆ, “ನೀನು ಇವನ ಸಂಗಡ ಹೋಗು; ಹೆದರಬೇಡ,” ಎಂದು ಹೇಳಿದನು. ಆದ್ದರಿಂದ ಎಲೀಯನು ಎದ್ದು ಇವನ ಜೊತೆಯಲ್ಲೇ ಅರಸನ ಬಳಿಗೆ ಹೋದನು. |
೧೬ |
ಅರಸನಿಗೆ, “ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ದೂತರನ್ನು ಕಳುಹಿಸಿದ್ದೇಕೆ? ಇಸ್ರಯೇಲರಲ್ಲಿ ದೇವರಿಲ್ಲವೆ? ಹೀಗೆ ಮಾಡಿದ್ದರಿಂದ ನೀವು ಹಿಡಿದ ಹಾಸಿಗೆಯಿಂದ ಏಳದೆ ಸಾಯಲೇಬೇಕು ಎಂಬುದಾಗಿ ಸರ್ವೇಶ್ವರ ಹೇಳಿದ್ದಾರೆ,” ಎಂದನು. |
೧೭ |
ಸರ್ವೇಶ್ವರ ಎಲೀಯನ ಮುಖಾಂತರ ಮುಂತಿಳಿಸಿದಂತೆಯೇ ಅರಸನು ಸತ್ತುಹೋದನು. ಅವನಿಗೆ ಮಕ್ಕಳಿರಲಿಲ್ಲ. ಅವನ ಸ್ಥಾನದಲ್ಲಿ ಅವನ ತಮ್ಮ ಯೋರಾಮನು, ಯೆಹೂದ್ಯರ ಅರಸ ಯೆಹೋಷಾಫಾಟನ ಮಗ ಯೆಹೋರಾಮನ ಅಳ್ವಿಕೆಯ ಎರಡನೆಯ ವರ್ಷದಲ್ಲಿ, ಅರಸನಾದನು. |
೧೮ |
ಅಹಜ್ಯನ ಉಳಿದ ಚರಿತ್ರೆ ಹಾಗು ಕಾರ್ಯಕಲಾಪಗಳು ಇಸ್ರಯೇಲ್ ಅರಸುಗಳ ಇತಿಹಾಸ ಗ್ರಂಥದಲ್ಲಿ ಲಿಖಿತವಾಗಿವೆ.
|
Kannada Bible (KNCL) 2016 |
No Data |