೧ |
ಮೂರು ವರ್ಷಗಳವರೆಗೆ ಇಸ್ರಯೇಲರಿಗೂ ಸಿರಿಯಾದವರಿಗೂ ಯುದ್ಧ ನಡೆಯಲಿಲ್ಲ. |
೨ |
ಮೂರನೆಯ ವರ್ಷದಲ್ಲಿ ಯೆಹೂದ್ಯರ ಅರಸ ಯೆಹೋಷಾಫಾಟನು ಇಸ್ರಯೇಲರ ಅರಸನ ಬಳಿಗೆ ಬಂದನು. |
೩ |
ಆಗ ಇಸ್ರಯೇಲರ ಅರಸನು ತನ್ನ ಸೇವಕರಿಗೆ, “ಗಿಲ್ಯಾದಿನ ರಾಮೋತ್ ಪಟ್ಟಣ ನಮ್ಮದೆಂದು ನಿಮಗೆ ಗೊತ್ತುಂಟಲ್ಲವೆ; ಅದನ್ನು ಇಷ್ಟರವರೆಗೂ ಸಿರಿಯಾದವರ ಅರಸನಿಂದ ತಿರುಗಿ ತೆಗೆದುಕೊಳ್ಳದೆ ಸುಮ್ಮನೆ ಕುಳಿತಿರುತ್ತೇವೆ,” ಎಂದು ಹೇಳಿದನು. |
೪ |
ಯೆಹೋಷಾಫಾಟನನ್ನು, “ಯುದ್ಧಮಾಡುವುದಕ್ಕೆ ನೀನೂ ನಮ್ಮ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಬರುತ್ತಿಯೋ?’ ಎಂದು ಕೇಳಿದನು. ಅವನು, “ನಾನೂ ನೀನೂ, ನನ್ನ ಜನರೂ ನಿನ್ನ ಜನರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ ಅಲ್ಲವೇ?” ಎಂದು ಉತ್ತರಕೊಟ್ಟನು. |
೫ |
ಮಾತ್ರವಲ್ಲ, “ಸರ್ವೇಶ್ವರನ ಸನ್ನಿಧಿಯಲ್ಲಿ ಈಗಲೆ ವಿಚಾರಿಸು,” ಎಂದು ಇಸ್ರಯೇಲರ ಅರಸನನ್ನು ಬೇಡಿಕೊಂಡನು. |
೬ |
ಆಗ ಇಸ್ರಯೇಲರ ಅರಸನು ತನ್ನ ರಾಜ್ಯದಲ್ಲಿದ್ದ ಸುಮಾರು ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ, “ನಾನು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೋಗಬಹುದೋ? ಬಾರದೋ?” ಎಂದು ಕೇಳಿದನು. ಅವರು, “ಹೋಗಬಹುದು, ಸರ್ವೇಶ್ವರ ಅದನ್ನು ಕೈಗೆ ಒಪ್ಪಿಸುವರು,” ಎಂದರು. |
೭ |
ಆದರೆ ಯೆಹೋಷಾಫಾಟನು ಇಸ್ರಯೇಲರ ಅರಸನನ್ನು, “ಸರ್ವೇಶ್ವರನ ಪ್ರವಾದಿಗಳಲ್ಲಿ ಇವರ ಹೊರತಾಗಿ ನಾವು ವಿಚಾರಿಸಬಹುದಾದ ಬೇರೆ ಪ್ರವಾದಿಯಿಲ್ಲವೇ?’ ಎಂದು ಕೇಳಿದನು. |
೮ |
ಅವನು, “ನಮಗಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸಬಲ್ಲವನಾದ ಇನ್ನೊಬ್ಬ ಪ್ರವಾದಿಯಿರುತ್ತಾನೆ; ಅವನು ಇಮ್ಲನ ಮಗನಾದ ಮೀಕಾಯೆಹು ಎಂಬವನು. ಆದರೆ ನಾನು ಅವನನ್ನು ಹಗೆಮಾಡುತ್ತೇನೆ; ಅವನು ನನ್ನನ್ನು ಕುರಿತು ಯಾವಾಗಲೂ ಶುಭವನ್ನಲ್ಲ, ಅಶುಭವನ್ನೇ ಮುಂತಿಳಿಸುತ್ತಾನೆ,” ಎಂದು ಉತ್ತರಕೊಟ್ಟನು. ಅದಕ್ಕೆ ಯೆಹೋಷಾಫಾಟನು, “ಅರಸರು ಹಾಗನ್ನಬಾರದು,” ಎಂದನು. |
೯ |
ಆಗ ಇಸ್ರಯೇಲರ ಅರಸನು ಒಬ್ಬ ಕಂಚುಕಿಯನ್ನು ಕರೆದು, “ಬೇಗ ಹೋಗಿ ಇಮ್ಲನ ಮಗ ಮೀಕಾಯೆಹುವನ್ನು ಕರೆದುಕೊಂಡು ಬಾ,” ಎಂದು ಆಜ್ಞಾಪಿಸಿದನು. |
೧೦ |
ಇಸ್ರಯೇಲರ ಅರಸನೂ ಯೆಹೂದ್ಯರ ಅರಸ ಯೆಹೋಷಾಫಾಟನೂ ರಾಜವಸ್ತ್ರಗಳನ್ನು ಧರಿಸಿಕೊಂಡು ಸಮಾರಿಯ ಪಟ್ಟಣದ ಹೆಬ್ಬಾಗಿಲಿನ ಹತ್ತಿರವಿರುವ ಬಯಲಿನಲ್ಲಿ ತಮ್ಮ ತಮ್ಮ ಆಸನಗಳ ಮೇಲೆ ಕುಳಿತುಕೊಂಡರು. ಎಲ್ಲ ಪ್ರವಾದಿಗಳು ಅವರ ಮುಂದೆ ಪರವಶರಾಗಿ ಮಾತಾಡತೊಡಗಿದರು. |
೧೧ |
ಅವರಲ್ಲಿ ಕೆನಾನನ ಮಗ ಚಿದ್ಕೀಯ ಎಂಬವನು ಕಬ್ಬಿಣದ ಕೊಂಬುಗಳನ್ನು ಮಾಡಿಸಿ ತಲೆಗೆ ಕಟ್ಟಿಕೊಂಡು ಬಂದು, “ಕೊಂಬುಗಳಿಂದಲೋ ಎಂಬಂತೆ ನೀವು ಸಿರಿಯಾದವರನ್ನು ಇರಿದು ಕೊಂದುಹಾಕುವಿರಿ,” ಎಂದನು. |
೧೨ |
ಉಳಿದ ಪ್ರವಾದಿಗಳೂ ಇದೇ ತರದ ಮಾತುಗಳನ್ನು ನುಡಿದು, “ರಾಮೋತ್ ಗಿಲ್ಯಾದಿಗೆ ಹೋಗಿ; ನೀವು ಕೃತಾರ್ಥರಾಗಿ ಬರುವಿರಿ; ಸರ್ವೇಶ್ವರ ಅದನ್ನು ಅರಸರ ಕೈಗೆ ಒಪ್ಪಿಸುವರು,” ಎಂದರು. |
೧೩ |
ಇತ್ತ ಮೀಕಾಯೆಹುವನ್ನು ಕರೆಯುವುದಕ್ಕೆ ಬಂದಿದ್ದ ದೂತನು, “ನೋಡಿ, ಎಲ್ಲಾ ಪ್ರವಾದಿಗಳು ಏಕಮನಸ್ಸಿನಿಂದ ಅರಸರಿಗೆ ಶುಭವನ್ನೇ ಮುಂದೆ ತಿಳಿಸುತ್ತಾರೆ; ದಯವಿಟ್ಟು ನೀವೂ ಅವರಂತೆ ಶುಭವನ್ನೇ ಮುಂತಿಳಿಸಿ,” ಎಂದು ಹೇಳಿದನು. |
೧೪ |
ಅದಕ್ಕೆ ಮೀಕಾಯೆಹುವು, “ಸರ್ವೇಶ್ವರನಾಣೆ, ಸರ್ವೇಶ್ವರ ಹೇಳುವುದನ್ನೇ ನುಡಿಯುತ್ತೇನೆ,” ಎಂದು ಉತ್ತರಕೊಟ್ಟನು. |
೧೫ |
ಅವನು ಅರಸನ ಬಳಿಗೆ ಬಂದಾಗ ಅರಸನು, “ಮೀಕಾಯೆಹುವೇ, ನಾವು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೋಗಬಹುದೋ ಬಾರದೋ?” ಎಂದು ಕೇಳಿದನು. ಅವನು, “ಹೋಗಬಹುದು, ಕೃತಾರ್ಥರಾಗಿ ಬರುವಿರಿ; ಸರ್ವೇಶ್ವರ ಪಟ್ಟಣವನ್ನು ಅರಸರ ಕೈಗೆ ಒಪ್ಪಿಸುವರು,” ಎಂದು ಹೇಳೀದನು. |
೧೬ |
ಆಗ ಅರಸನು ಅವನಿಗೆ, “ಸತ್ಯವನ್ನೇ ತಿಳಿಸಬೇಕೆಂದು ಸರ್ವೇಶ್ವರನ ಹೆಸರಿನಲ್ಲಿ ನಿನ್ನಿಂದ ಎಷ್ಟುಸಾರಿ ಪ್ರಮಾಣಮಾಡಿಸಬೇಕು?” ಎಂದನು. |
೧೭ |
ಆಗ ಅವನು, “ಇಸ್ರಯೇಲರೆಲ್ಲರೂ ಕುರುಬನಿಲ್ಲದ ಕುರಿಗಳಂತೆ ಬೆಟ್ಟಗಳಲ್ಲಿ ಚದರಿಹೋದದ್ದನ್ನು ಕಂಡೆ; ಆಗ ಸರ್ವೇಶ್ವರ, ‘ಇವರು ಒಡೆಯನಿಲ್ಲದವರಾಗಿರುತ್ತಾರೆ; ಸಮಾಧಾನದಿಂದ ತಮ್ಮ ತಮ್ಮ ಮನೆಗಳಿಗೆ ಹೋಗಲಿ,’ ಎಂದರು” ಎಂಬುದಾಗಿ ಉತ್ತರಕೊಟ್ಟನು. |
೧೮ |
ಆಗ ಇಸ್ರಯೇಲರ ಅರಸನು ಯೆಹೋಷಾಫಾಟನಿಗೆ, “ಇವನು ನನಗೆ ಯಾವಾಗಲೂ ಶುಭವನ್ನಲ್ಲ, ಅಶುಭವನ್ನೇ ಮುಂತಿಳಿಸುತ್ತಾನೆಂದು ನಾನು ನಿನಗೆ ಹೇಳಲಿಲ್ಲವೇ?” ಎಂದನು. |
೧೯ |
ಅದಕ್ಕೆ ಮೀಕಾಯೆಹುವು, “ಅದಿರಲಿ, ಸರ್ವೇಶ್ವರನ ವಾಕ್ಯವನ್ನು ಕೇಳು; ಸರ್ವೇಶ್ವರ ತಮ್ಮ ಸಿಂಹಾಸನದ ಮೇಲೆ ಕುಳಿತುಕೊಂಡದ್ದನ್ನೂ ಪರಲೋಕಸೈನ್ಯಗಳು ಅವರ ಎಡಬಲಗಡೆಗಳಲ್ಲಿ ನಿಂತದ್ದನ್ನೂ ಕಂಡೆ. |
೨೦ |
ಸರ್ವೇಶ್ವರ ತಮ್ಮ ಹತ್ತಿರ ನಿಂತವರನ್ನು, “ಅಹಾಬನು ಹತನಾಗಿ ಬೀಳುವಂತೆ ಅವನನ್ನು ರಾಮೋತ್ ಗಿಲ್ಯಾದಿನ ಯುದ್ಧಕ್ಕೆ ಯಾರು ಪ್ರೇರಿಸುವಿರಿ?” ಎಂದು ಕೇಳಿದಾಗ ಒಬ್ಬನು ಒಂದು ವಿಧವಾಗಿಯೂ ಇನ್ನೊಬ್ಬನು ಇನ್ನೊಂದು ವಿಧವಾಗಿಯೂ ಉತ್ತರಕೊಟ್ಟರು. |
೨೧ |
ಕಡೆಗೆ ಒಂದು ಆತ್ಮವು ಸರ್ವೇಶ್ವರನ ಮುಂದೆ ಬಂದು ನಿಂತು, ‘ನಾನು ಹೋಗಿ ಅವನನ್ನು ಪ್ರೇರಿಸುವೆನು,’ ಎಂದಿತು. |
೨೨ |
‘ಹೇಗೆ ಪ್ರೇರಿಸುವೆ?’ ಎಂದು ಸರ್ವೇಶ್ವರ ಕೇಳಿದರು. ಅದು, ‘ನಾನು ಅಸತ್ಯವಾಡುವ ಆತ್ಮವಾಗಿ ಅವನ ಎಲ್ಲ ಪ್ರವಾದಿಗಳಲ್ಲಿ ಸೇರುವೆನು,’ ಎಂದು ಉತ್ತರಕೊಟ್ಟಿತು. ಆಗ ಸರ್ವೇಶ್ವರ, ‘ಹೋಗಿ ಅದರ ಅಂತೆಯೇ ಮಾಡು; ಅವನನ್ನು ಪ್ರೇರಿಸಿ ಸಫಲನಾಗುವೆ,’ ಎಂದರು. |
೨೩ |
ನೋಡು, ಸರ್ವೇಶ್ವರ ನಿನ್ನ ವಿಷಯದಲ್ಲಿ ಕೇಡು ನುಡಿದು ನಿನ್ನ ಎಲ್ಲಾ ಪ್ರವಾದಿಗಳಲ್ಲಿ ಅಸತ್ಯವನ್ನಾಡುವ ಆತ್ಮವನ್ನು ಕಳುಹಿಸಿದ್ದಾರೆ,” ಎಂದು ಹೇಳಿದನು. |
೨೪ |
ಆಗ ಕೆನಾನನ ಮಗ ಚಿದ್ಕೀಯನು ಮೀಕಾಯೆಹುವಿನ ಬಳಿಗೆ ಬಂದು ಅವನ ಕೆನ್ನೆಗೆ ಒಂದು ಪೆಟ್ಟುಕೊಟ್ಟು, “ಸರ್ವೇಶ್ವರನ ಆತ್ಮ ನನ್ನನ್ನು ಬಿಟ್ಟು ನಿನ್ನೊಂದಿಗೆ ಮಾತಾಡುವುದಕ್ಕೆ ಯಾವ ಮಾರ್ಗವಾಗಿ ಬಂದಿತು?” ಎಂದನು. |
೨೫ |
ಮೀಕಾಯೆಹುವು, “ನೀನು ಅಡಗಿಕೊಳ್ಳುವುದಕ್ಕೆ ಒಳಗಿನ ಕೋಣೆಗೆ ಹೋಗುವ ದಿನದಲ್ಲಿ ಅದು ನಿನಗೆ ಗೊತ್ತಾಗುವುದು,” ಎಂದು ಉತ್ತರಕೊಟ್ಟನು. |
೨೬ |
ಆಗ ಇಸ್ರಯೇಲರ ಅರಸನು ಸೇವಕರಿಗೆ, “ಮೀಕಾಯೆಹುವನ್ನು ಹಿಡಿದುಕೊಂಡು ಹೋಗಿ ಪುರಾಧಿಕಾರಿಯಾದ ಆಮೋನನಿಗೂ ರಾಜಪುತ್ರನಾದ ಯೋವಾಷನಿಗೂ ಒಪ್ಪಿಸಿರಿ; |
೨೭ |
ಅವರಿಗೆ, ‘ನಾನು ಸುರಕ್ಷಿತನಾಗಿ ಹಿಂದಿರುಗುವವರೆಗೂ ಇವನನ್ನು ಸೆರೆಯಲ್ಲಿಟ್ಟು ಸೆರೆಮನೆಯ ಅನ್ನಪಾನಗಳನ್ನೇ ಕೊಟ್ಟು ಕರಗಿಸಬೇಕು,’ ಎಂದು ಆಜ್ಞಾಪಿಸಿದನು. |
೨೮ |
ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತನಾಗಿ ಬರುವುದಾದರೆ ನಾನು ನುಡಿದದ್ದು ಸರ್ವೇಶ್ವರನ ಮಾತಲ್ಲವೆಂದು ತಿಳಿದುಕೋ,” ಎಂದು ಹೇಳಿ, “ಮಹಾಜನರೇ, ನನ್ನ ಮಾತನ್ನು ಗಮನದಲ್ಲಿಡಿ,” ಎಂದು ಕೂಗಿದನು. |
೨೯ |
ಇಸ್ರಯೇಲರ ಅರಸನು ಹಾಗು ಯೆಹೂದ್ಯರ ಅರಸ ಯೆಹೋಷಾಫಾಟನು ರಾಮೋತ್ ಗಿಲ್ಯಾದಿಗೆ ವಿರುದ್ಧ ಯುದ್ಧಕ್ಕೆ ಹೊರಟರು. |
೩೦ |
ಇಸ್ರಯೇಲರ ಅರಸನು ಯೆಹೋಷಾಫಾಟನಿಗೆ, “ನಾನು ವೇಷಹಾಕಿಕೊಂಡು ರಣರಂಗಕ್ಕೆ ಬರುತ್ತೇನೆ; ನೀನಾದರೋ ನಿನ್ನ ರಾಜವಸ್ತ್ರಗಳನ್ನು ಧರಿಸಿಕೊಂಡೇ ಬಾ;” ಎಂದು ಹೇಳಿ ವೇಷಹಾಕಿಕೊಂಡು ರಣರಂಗಕ್ಕೆ ಹೋದನು. |
೩೧ |
ಸಿರಿಯಾದವರ ಅರಸನು ತನ್ನ ರಥಬಲದ ಮೂವತ್ತೆರಡು ಮಂದಿ ಅಧಿಪತಿಗಳಿಗೆ, “ನೀವು ಶತ್ರುಗಳ ಸಾಧಾರಣ ಸೈನಿಕರನ್ನೂ ಅಧಿಪತಿಗಳನ್ನೂ ಬಿಟ್ಟು ಇಸ್ರಯೇಲರ ಅರಸನಿಗೇ ಗುರಿ ಇಡಿ,” ಎಂದು ಆಜ್ಞಾಪಿಸಿದ್ದನು. |
೩೨ |
ಅವರು ಯೆಹೋಷಾಫಾಟನನ್ನು ಕಂಡಾಗ ಅವನೇ ಇಸ್ರಯೇಲರ ಅರಸನೆಂದು ನೆನಸಿ, ಅವನಿಗೆ ವಿರುದ್ಧ ಯುದ್ಧಮಾಡಲು ಬಂದರು. |
೩೩ |
ಅವನು ಕೂಗಿಕೊಂಡನು. ಆಗ ಇವನು ಇಸ್ರಯೇಲರ ಅರಸನಲ್ಲವೆಂಬುದು ರಥಬಲದ ಅಧಿಪತಿಗಳಿಗೆ ಗೊತ್ತಾಯಿತು. ಅವರು ಅವನನ್ನು ಬಿಟ್ಟು ಹಿಂದಿರುಗಿದರು. |
೩೪ |
ಸಿರಿಯಾದವರ ಸೈನಿಕನೊಬ್ಬನು ಯಾರಿಗೂ ಗುರಿಯಿಡದೆ ಬಾಣವನ್ನೆಸೆದನು. ಆ ಬಾಣ ಇಸ್ರಯೇಲರ ಅರಸನಿಗೆ, ಅವನ ಕವಚದ ಸಂದಿನಲ್ಲಿ ಬಂದು ತಾಕಿತು. ಆಗ ಅವನು ತನ್ನ ಸಾರಥಿಗೆ, “ರಥವನ್ನು ತಿರುಗಿಸಿ ನನ್ನನ್ನು ರಣರಂಗದಿಂದ ಆಚೆಗೆ ತೆಗೆದುಕೊಂಡು ಹೋಗು; ನನಗೆ ದೊಡ್ಡ ಗಾಯವಾಗಿದೆ,” ಎಂದು ಹೇಳಿದನು. |
೩೫ |
ಆ ದಿವಸ ಯುದ್ಧ ಬಹುಘೋರವಾಗಿತ್ತು. ಆದ್ದರಿಂದ ಅರಸನು ಸಿರಿಯಾದವರ ಎದುರಿಗೆ ತನ್ನ ರಥದಲ್ಲೇ ಆತುಕೊಂಡು ನಿಲ್ಲಬೇಕಾಯಿತು. ಸಾಯಂಕಾಲವಾದಾಗ ಅವನು ಸತ್ತನು. ಗಾಯದಿಂದ ರಕ್ತವು ಸುರಿದು ಸುರಿದು ರಥದ ಅಡಿಯಲ್ಲಿ ನಿಂತಿತ್ತು. |
೩೬ |
ಸೂರ್ಯಾಸ್ತಮವಾದ ಕೂಡಲೆ, “ಪ್ರತಿಯೊಬ್ಬನು ತನ್ನ ಪ್ರಾಂತ್ಯಕ್ಕೂ ಪಟ್ಟಣಕ್ಕೂ ಹೋಗಲಿ,” ಎಂಬ ಕೂಗು ಇಸ್ರಯೇಲರ ಸೈನ್ಯದಲ್ಲಿ ಹಬ್ಬಿಕೊಂಡಿತು. |
೩೭ |
ಅರಸನ ಶವವನ್ನು ಸಮಾರಿಯಕ್ಕೆ ತಂದು ಅಲ್ಲಿ ಸಮಾಧಿಮಾಡಿದರು. |
೩೮ |
ವೇಶ್ಯೆಯರು ಸ್ನಾನಮಾಡುವ ಸಮಾರಿಯದ ಕೆರೆಯಲ್ಲಿ ಅವನ ರಥವನ್ನು ತೊಳೆಯುತ್ತಿದ್ದಾಗ, ನಾಯಿಗಳು ಬಂದು ಅದರಲ್ಲಿದ್ದ ರಕ್ತವನ್ನು ನೆಕ್ಕಿದವು, ಹೀಗೆ ಸರ್ವೇಶ್ವರ ಹೇಳಿದ ಮಾತು ನೆರವೇರಿತು. |
೩೯ |
ಅಹಾಬನ ಉಳಿದ ಚರಿತ್ರೆ, ಅವನು ಕಟ್ಟಿಸಿದ ದಂತಮಂದಿರ, ಪಟ್ಟಣಗಳು, ಇವುಗಳ ವಿವರ, ಹಾಗು ಅವನ ಬೇರೆ ಕಾರ್ಯಸಾಧನೆಗಳು ಇಸ್ರಯೇಲರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. |
೪೦ |
ಅಹಾಬನು ಸತ್ತು ಪಿತೃಗಳ ಬಳಿಗೆ ಸೇರಿದನು. ಅವನಿಗೆ ಬದಲಾಗಿ ಅವನ ಮಗ ಅಹಜ್ಯ ಎಂಬವನು ಅರಸನಾದನು. |
೪೧ |
ಇಸ್ರಯೇಲರ ಅರಸ ಅಹಾಬನ ನಾಲ್ಕನೆಯ ವರ್ಷದಲ್ಲಿ ಆಸನ ಮಗ ಯೆಹೋಷಾಫಾಟನು ಯೆಹೂದ್ಯರ ಅರಸನಾದನು. |
೪೨ |
ಅವನು ಅರಸನಾದಾಗ ಮೂವತ್ತೈದು ವರ್ಷದವನಾಗಿ ಇದ್ದನು. ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಶಿಲ್ಹಿಯ ಮಗಳಾದ ಅಜೂಬಳೆಂಬ ಆಕೆ ಇವನ ತಾಯಿ. |
೪೩ |
ತನ್ನ ತಂದೆ ಆಸನ ಮಾರ್ಗದಲ್ಲಿ ಇವನು ತಪ್ಪದೆ ನಡೆಯುತ್ತಾ, ಸರ್ವೇಶ್ವರನ ದೃಷ್ಟಿಯಲ್ಲಿ ಒಳ್ಳೆಯವನಾಗಿ ಇದ್ದನು. ಆದರೂ ಪೂಜಾಸ್ಥಳಗಳನ್ನು ಹಾಳುಮಾಡಲಿಲ್ಲ. ಜನರು ಆ ಸ್ಥಳಗಳಲ್ಲಿ ಬಲಿಕೊಡುತ್ತಾ, ಧೂಪಾರತಿ ಎತ್ತುತ್ತಾ ಇದ್ದರು. |
೪೪ |
ಇವನು ಇಸ್ರಯೇಲರ ಅರಸನೊಡನೆ ಸಮಾಧಾನದಿಂದಿದ್ದನು. |
೪೫ |
ಇವನ ಉಳಿದ ಚರಿತ್ರೆ ಹಾಗು ಇವನು ಯುದ್ಧಗಳಲ್ಲಿ ನಡಿಸಿದ ಶೂರಕೃತ್ಯಗಳ ವಿವರ ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ. |
೪೬ |
ಇವನು ತನ್ನ ತಂದೆ ಆಸನ ಕಾಲದಲ್ಲಿ ತಪ್ಪಿಸಿಕೊಂಡ ಹೆಣ್ಣು-ಗಂಡು ವೇಶ್ಯೆಯರನ್ನು ನಾಡಿನಿಂದ ತೆಗೆದುಹಾಕಿದನು. |
೪೭ |
ಆ ಕಾಲದಲ್ಲಿ ಎದೋಮ್ ದೇಶದಲ್ಲಿ ಅರಸನಿರಲಿಲ್ಲ; ಇವನ ಪ್ರತಿನಿಧಿಯೇ ಅದನ್ನು ಆಳುತ್ತಿದ್ದನು. |
೪೮ |
ಇದಲ್ಲದೆ, ಯೆಹೋಷಾಫಾಟನು ಓಫೀರಿನಿಂದ ಬಂಗಾರ ತರುವುದಕ್ಕಾಗಿ ತಾರ್ಷೀಷ್ ಹಡಗುಗಳನ್ನು ಮಾಡಿಸಿದನು. |
೪೯ |
ಆಗ ಅಹಾಬನ ಮಗ ಅಹಜ್ಯನು, “ನಿನ್ನ ಜನರ ಜೊತೆಯಲ್ಲಿ ನನ್ನ ಜನರೂ ಸಮುದ್ರಪ್ರಯಾಣ ಮಾಡುವುದಕ್ಕೆ ಅಪ್ಪಣೆಯಾಗಲಿ,” ಎಂದು ಬೇಡಿಕೊಂಡನು. ಅವನು ಅದಕ್ಕೆ ಒಪ್ಪಲಿಲ್ಲ. ಆದರೆ ಆ ಹಡಗುಗಳು ಎಚ್ಯೋನ್ಗೆಬೆರಿನಲ್ಲಿ ಒಡೆದುಹೋದುದರಿಂದ ಓಫೀರನ್ನು ಮುಟ್ಟಲಿಲ್ಲ. |
೫೦ |
ಯೆಹೋಷಾಫಾಟನು ಮೃತನಾಗಿ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ಅವನ ಪೂರ್ವಜ ದಾವೀದನ ಪಟ್ಟಣದೊಳಗೆ ಕುಟುಂಬ ಸ್ಮಶಾನಭೂಮಿಯಲ್ಲಿ ಸಮಾಧಿ ಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಯೆಹೋರಾಮನು ಅರಸನಾದನು. |
೫೧ |
ಯೆಹೂದ್ಯರ ಅರಸ ಯೆಹೋಷಾಫಾಟನ ಆಳ್ವಿಕೆಯ ಹದಿನೇಳನೆಯ ವರ್ಷದಲ್ಲಿ ಅಹಾಬನ ಮಗ ಅಹಜ್ಯ ಎಂಬುವನು ಅರಸನಾಗಿ ಸಮಾರಿಯದಲ್ಲಿ ಎರಡು ವರ್ಷ ಆಳಿದನು. |
೫೨ |
ಇವನು ಇಸ್ರಯೇಲರನ್ನು ಪಾಪಕ್ಕೆ ಪ್ರಚೋದಿಸಿ ನೆಬಾಟನ ಮಗ ಯಾರೊಬ್ಬಾಮನ ಮತ್ತು ತನ್ನ ತಂದೆತಾಯಿಗಳ ಮಾರ್ಗದಲ್ಲಿ ನಡೆದು ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು. |
೫೩ |
ತನ್ನ ತಂದೆಯಂತೆ ಬಾಳ್ ದೇವರನ್ನು ಪೂಜಿಸಿ ಇಸ್ರಯೇಲರ ದೇವರಾದ ಸರ್ವೇಶ್ವರನನ್ನು ರೇಗಿಸಿದನು.
|
Kannada Bible (KNCL) 2016 |
No Data |