೧ |
ಸಿರಿಯಾದವರ ಅರಸ ಬೆನ್ಹದದನು ತನ್ನ ಇಡೀ ಸೈನ್ಯವನ್ನು ಕೂಡಿಸಿಕೊಂಡು ರಥಾಶ್ವಬಲಗಳಿಂದ ಕೂಡಿದ ಮೂವತ್ತು ಎರಡು ಮಂದಿ ರಾಜರೊಡನೆ ಹೊರಟು ಬಂದು, ಸಮಾರಿಯ ಪಟ್ಟಣಕ್ಕೆ ಮುತ್ತಿಗೆ ಹಾಕಿ ಯುದ್ಧಮಾಡಿದನು. |
೨ |
ಆ ಪಟ್ಟಣದಲ್ಲಿದ್ದ ಇಸ್ರಯೇಲರ ಅರಸ ಅಹಾಬನ ಬಳಿಗೆ ದೂತರನ್ನು ಕಳುಹಿಸಿದನು. |
೩ |
“ನಿನ್ನ ಬೆಳ್ಳಿಬಂಗಾರವು ನನ್ನದು; ನಿನ್ನ ಪ್ರಿಯ ಸತಿಸುತರರೂ ನನ್ನವರೇ ಎಂದು ತಿಳಿದುಕೋ,” ಎಂಬುದಾಗಿ ಆ ದೂತರಿಂದ ಹೇಳಿಸಿದನು. |
೪ |
ಅದಕ್ಕೆ ಇಸ್ರಯೇಲರ ಆ ಅರಸನು, “ನನ್ನ ಒಡೆಯನಾದ ಅರಸರೇ, ನೀವು ಹೇಳಿದಂತೆ ನಾನು ನಿಮ್ಮವನೇ; ನನಗಿರುವುದೆಲ್ಲವೂ ನಿಮ್ಮದೇ,” ಎಂದು ಉತ್ತರಕೊಟ್ಟು ಕಳುಹಿಸಿದನು. |
೫ |
ಆ ದೂತರು ಮರಳಿ ಅಹಾಬನ ಬಳಿಗೆ ಬಂದು, “ನಿನ್ನ ಬೆಳ್ಳಿಬಂಗಾರವನ್ನೂ ಸತಿಸುತರನ್ನೂ ನನಗೆ ಒಪ್ಪಿಸಬೇಕೆಂದು ನಿನಗೆ ಹೇಳಿಕಳುಹಿಸಿದೆನಲ್ಲವೆ? |
೬ |
ನಾಳೆ ಇಷ್ಟುಹೊತ್ತಿಗೆ ನನ್ನ ಆಳುಗಳನ್ನು ಕಳುಹಿಸುವೆನು; ಅವರು ನಿನ್ನ ಮತ್ತು ನಿನ್ನ ಅಧಿಕಾರಿಗಳ ಮನೆಗಳನ್ನು ಶೋಧಿಸಿ, ನಿಮಗೆ ಅಮೂಲ್ಯವಾದುವುಗಳನ್ನೆಲ್ಲಾ ತೆಗೆದುಕೊಳ್ಳುವರು ಎಂಬುದಾಗಿ ಬೆನ್ಹದದನು ತಿಳಿಸುತ್ತಾರೆ,” ಎಂದು ಹೇಳಿದರು. |
೭ |
ಆಗ ಇಸ್ರಯೇಲರ ಆ ಅರಸನು ನಾಡಿನ ಎಲ್ಲ ಹಿರಿಯರನ್ನು ಕರೆಸಿ ಅವರಿಗೆ, “ನೋಡಿದಿರೋ, ಅವನು ನಮಗೆಂಥ ಕೇಡು ಬಗೆಯುತ್ತಾನೆ; ‘ನಿನ್ನ ಬೆಳ್ಳಿಬಂಗಾರವನ್ನೂ ಸತಿಸುತರನ್ನೂ ನನಗೆ ಕೊಡು’ ಎಂದು ಹೇಳಿಕಳುಹಿಸಿದ್ದಕ್ಕೆ ನಾನು ಒಪ್ಪಿದರೂ ಅವನಿಗೆ ತೃಪ್ತಿಯಾಗಲಿಲ್ಲ,” ಎಂದು ಹೇಳಿದನು. |
೮ |
ಹಿರಿಯರೆಲ್ಲರೂ ಜನಸಾಮಾನ್ಯರೂ ಅವನಿಗೆ, “ನೀವು ಈ ಮಾತಿಗೆ ಒಪ್ಪಬೇಡಿ,” ಎಂದರು. |
೯ |
ಆದುದರಿಂದ ಅವನು ಬಂದಂಥ ದೂತರ ಮುಖಾಂತರ ಬೆನ್ಹದದನಿಗೆ, “ನನ್ನ ಒಡೆಯರೇ, ಅರಸರೇ, ನಾನು ನಿಮ್ಮ ಮೊದಲನೆಯ ಮಾತಿಗೆ ಒಪ್ಪಿ ಅದರಂತೆ ಮಾಡಲು ಸಿದ್ಧನಾಗಿರುತ್ತೇನೆ; ಆದರೆ ಎರಡನೆಯ ಮಾತಿಗೆ ಒಪ್ಪಲಾರೆ,” ಎಂದು ಹೇಳಿಕಳುಹಿಸಿದನು ದೂತರು ಬಂದು ಈ ಮಾತುಗಳನ್ನು ಬೆನ್ಹದದನಿಗೆ ತಿಳಿಸಿದರು. |
೧೦ |
ಆಗ ಅವರು ಅಹಾಬನಿಗೆ, “ಸಮಾರಿಯ ಪಟ್ಟಣವನ್ನು ಸಂಪೂರ್ಣವಾಗಿ ನಾಶಮಾಡುವೆನು; ಲೆಕ್ಕವಿಲ್ಲದ ನನ್ನ ಸೈನಿಕರು ಅದರಲ್ಲಿ ಒಂದು ಹಿಡಿ ಧೂಳನ್ನೂ ಬಿಡುವುದಿಲ್ಲ; ಬಿಟ್ಟರೆ ದೇವತೆಗಳು ನನಗೆ ಬೇಕಾದದ್ದನ್ನು ಮಾಡಲಿ!” ಎಂದು ಹೇಳಿಕಳುಹಿಸಿದನು. |
೧೧ |
ಬಂದ ದೂತರಿಗೆ ಇಸ್ರಯೇಲರ ಅರಸನು, “ಯುದ್ಧಕ್ಕಾಗಿ ನಡುಕಟ್ಟನ್ನು ಬಿಗಿದುಕೊಳ್ಳುವವನು ಅದನ್ನು ಬಿಚ್ಚಿಡುವ ಜಯಶಾಲಿಯಂತೆ ಕೊಚ್ಚಿಕೊಳ್ಳಬಾರದು ಎಂದು ಅವನಿಗೆ ಹೇಳಿರಿ,” ಎಂದನು. |
೧೨ |
ತನ್ನ ರಾಜರುಗಳ ಸಂಗಡ ಡೇರೆಗಳಲ್ಲಿ ಮದ್ಯಪಾನಮಾಡುತ್ತಿದ್ದ ಬೆನ್ಹದದನು ಈ ಉತ್ತರವನ್ನು ಕೇಳುತ್ತಲೇ, ಪಟ್ಟಣಕ್ಕೆ ಲಗ್ಗೆ ಹತ್ತುವಂತೆ ಸೈನಿಕರಿಗೆ ಆಜ್ಞಾಪಿಸಿದನು. ಅವರು ಹಾಗೆಯೇ ಮಾಡಿದರು. |
೧೩ |
ಆಗ ಒಬ್ಬ ಪ್ರವಾದಿ ಇಸ್ರಯೇಲರ ಅರಸ ಅಹಾಬನ ಬಳಿಗೆ ಬಂದು ಅವನಿಗೆ, “ಈ ಮಹಾಸಮೂಹವನ್ನು ನೋಡಿದಿಯೋ? ‘ನಾನೇ ಸರ್ವೇಶ್ವರ’ ಎಂಬುದು ನಿನಗೆ ಮನದಟ್ಟಾಗುವಂತೆ ಈ ದಿನವೇ ಇವರನ್ನೆಲ್ಲಾ ನಿನ್ನ ಕೈಗೊಪ್ಪಿಸುವೆನು, ಎನ್ನುತ್ತಾರೆ ಸರ್ವೇಶ್ವರ,” ಎಂದು ಹೇಳಿದನು. |
೧೪ |
ಅಹಾಬನು, “ಇದು ಯಾರ ಮುಖಾಂತರ ಆಗುವುದು?” ಎಂದು ಕೇಳಿದ್ದಕ್ಕೆ ಅವನು, “ಪ್ರದೇಶಾಧಿಪತಿಗಳ ಸೇವಕರ ಮುಖಾಂತರ ಆಗುವುದೆಂದು ಸರ್ವೇಶ್ವರ ತಿಳಿಸುತ್ತಾರೆ,” ಎಂದು ಉತ್ತರಕೊಟ್ಟನು. ಅಹಾಬನು ಮುಂದುವರಿದು, “ಯುದ್ಧ ಪ್ರಾರಂಭಮಾಡತಕ್ಕವರಾರು?” ಎಂದು ಕೇಳಲು ಅವನು, “ನೀನೇ” ಎಂದು ಉತ್ತರಿಸಿದನು. |
೧೫ |
ಅಹಾಬನು ಪ್ರದೇಶಾಧಿಪತಿಗಳ ಆಳುಗಳನ್ನು ಲೆಕ್ಕಿಸಿದಾಗ ಇನ್ನೂರ ಮೂವತ್ತೆರಡು ಮಂದಿ ಇದ್ದರು; ಇಸ್ರಯೇಲರ ಸೈನ್ಯವನ್ನು ಲೆಕ್ಕಿಸಿದಾಗ ಏಳು ಸಾವಿರ ಮಂದಿಯಿದ್ದರು. |
೧೬ |
ಮಧ್ಯಾಹ್ನದಲ್ಲಿ, ಬೆನ್ಹದದನು ತನ್ನ ಸಹಾಯಕ್ಕಾಗಿ ಬಂದ ಮೂವತ್ತೆರಡು ಮಂದಿ ರಾಜರ ಸಂಗಡ ಮದ್ಯಪಾನಮಾಡಿ ಮತ್ತನಾಗಿ, ಡೇರೆಯಲ್ಲಿ ಕುಳಿತುಕೊಂಡಿದ್ದಾಗ ಇವರು ಪಟ್ಟಣದಿಂದ ಹೊರಗೆ ಬಂದರು. |
೧೭ |
ಪ್ರದೇಶಾಧಿಪತಿಗಳ ಆಳುಗಳು ಮೊದಲು ಬಂದರು, “ಸಮಾರಿಯದ ಜನರು ಹೊರಗೆ ಬಂದಿರುತ್ತಾರೆ” ಎಂದು ಬೆನ್ಹದದನ ಕಾವಲುಗಾರರು ಅವನಿಗೆ ತಿಳಿಸಿದರು. ಅವನು, |
೧೮ |
“ಅವರು ಯುದ್ಧಕ್ಕಾಗಿಯೇ ಬಂದಿರಲಿ, ಸಮಾಧಾನಕ್ಕಾಗಿಯೇ ಬಂದಿರಲಿ, ಅವರನ್ನು ಸಜೀವಿಗಳನ್ನಾಗಿ ಹಿಡಿದುತನ್ನಿ,” ಎಂದು ಆಜ್ಞಾಪಿಸಿದನು. |
೧೯ |
ಮೊದಲು ಹೊರಟು ಬಂದ ಪ್ರದೇಶಾಧಿಪತಿಗಳ ಆಳುಗಳ ಹಿಂದೆಯೇ ಇಸ್ರಯೇಲ್ ಸೈನ್ಯದವರೂ ಬಂದರು. |
೨೦ |
ಅವರಲ್ಲಿ ಪ್ರತಿಯೊಬ್ಬನು ತನ್ನ ಎದುರಿಗೆ ಬಂದ ವಿರೋಧಿಯನ್ನು ಕೊಲ್ಲುತ್ತಾ ಮುಂದೆ ನಡೆದನು; ಸಿರಿಯಾದವರು ಓಡಿಹೋಗತೊಡಗಿದರು. ಇಸ್ರಯೇಲರು ಅವರನ್ನು ಹಿಂದಟ್ಟಿದರು. ಅರಸ ಬೆನ್ಹದದನು ಹಾಗು ಕೆಲವು ಮಂದಿ ರಾಹುತರು ಕುದುರೆಗಳನ್ನೇರಿ ಓಡಿಹೋಗಿ ತಪ್ಪಿಸಿಕೊಂಡರು. |
೨೧ |
ಇಸ್ರಯೇಲರ ಅರಸನು ಹೊರಟುಬಂದು ಸಿರಿಯಾದವರ ರಥಾಶ್ವಬಲಗಳನ್ನು ಸೋಲಿಸಿ, ಮಹಾಸಮೂಹವನ್ನು ಸಂಹರಿಸಿದನು. |
೨೨ |
ಆಗ ಆ ಪ್ರವಾದಿ ಮತ್ತೆ ಇಸ್ರಯೇಲರ ಅರಸನ ಬಳಿಗೆ ಬಂದನು. “ಸಿರಿಯಾದವರ ಅರಸನು ಮುಂದಿನ ವರ್ಷ ಇನ್ನೊಮ್ಮೆ ನಿನ್ನ ಮೇಲೆ ದಾಳಿಮಾಡಬರುವನು; ಆದುದರಿಂದ ನೀನು ಹೋಗಿ ನಿನ್ನನ್ನು ಬಲಪಡಿಸಿಕೋ; ಜಾಗರೂಕನಾಗಿದ್ದು ನೀನು ಮಾಡತಕ್ಕದ್ದೇನೆಂಬುದನ್ನು ಪರ್ಯಾಲೋಚಿಸು,” ಎಂದು ಎಚ್ಚರಿಸಿದನು. |
೨೩ |
ಸಿರಿಯಾದವರ ಅರಸನ ಮಂತ್ರಿಗಳು ತಮ್ಮ ಒಡೆಯನಿಗೆ, “ಇಸ್ರಯೇಲರ ದೇವರು ಬೆಟ್ಟಗಳ ದೇವರಾಗಿರುವುದರಿಂದ ಅವರು ನಮ್ಮನ್ನು ಸೋಲಿಸಿದರು; ನಾವು ಅವರೊಡನೆ ಬಯಲಿನಲ್ಲಿ ಯುದ್ಧಮಾಡುವುದಾದರೆ ಖಂಡಿತವಾಗಿ ಜಯಹೊಂದುವೆವು. |
೨೪ |
ನೀವು ಆಯಾ ಸ್ಥಳಗಳಲ್ಲಿರುವ ರಾಜರನ್ನು ತೆಗೆದುಹಾಕಿ, ಅವರಿಗೆ ಬದಲಾಗಿ ಪ್ರದೇಶಾಧಿಪತಿಗಳನ್ನು ನೇಮಿಸಿರಿ. |
೨೫ |
ನಮ್ಮ ಸೈನ್ಯದಿಂದ ನಷ್ಟವಾಗಿಹೋದಷ್ಟು ಜನರನ್ನೂ ಕುದುರೆಗಳನ್ನೂ ರಥಗಳನ್ನೂ ಮತ್ತೆ ಕೂಡಿಸಿ ಅವರೊಡನೆ ಬಯಲಿನಲ್ಲಿ ಯುದ್ಧಮಾಡೋಣ; ನಮಗೆ ಹೇಗೂ ಜಯಸಿಕ್ಕುವುದು ನಿಶ್ಚಯ,” ಎಂದು ಹೇಳಿದರು. ಅವನು ಅದರ ಅಂತೆಯೇ ಮಾಡಿದನು. |
೨೬ |
ಒಂದು ವರ್ಷ ದಾಟಿದನಂತರ ಬೆನ್ಹದದನು ಸಿರಿಯಾದವರನ್ನು ಕೂಡಿಸಿಕೊಂಡು ಇಸ್ರಯೇಲರೊಡನೆ ಯುದ್ಧಮಾಡುವುದಕ್ಕಾಗಿ ಅಫೇಕಕ್ಕೆ ಬಂದನು. |
೨೭ |
ಇಸ್ರಯೇಲರು ಸಹ ಆಹಾರ ಸಾಮಗ್ರಿಗಳನ್ನು ಒದಗಿಸಿಕೊಂಡು ಅವರಿಗೆ ವಿರುದ್ಧ ಕೂಡಿಬಂದರು. ಸಿರಿಯಾದವರು ನಾಡಿನಲ್ಲೆಲ್ಲಾ ವ್ಯಾಪಿಸಿಕೊಂಡಿದ್ದರು. ಆಡುಮರಿಗಳ ಎರಡು ಹಿಂಡುಗಳಂತಿದ್ದ ಇಸ್ರಯೇಲರು ಅವರ ಎದುರಿನಲ್ಲೇ ಪಾಳೆಯಮಾಡಿಕೊಂಡರು. |
೨೮ |
ಆಗ ದೈವಪುರುಷನೊಬ್ಬನು ಇಸ್ರಯೇಲರ ಅಹಾಬನ ಬಳಿಗೆ ಬಂದು, “ಸರ್ವೇಶ್ವರ ಹೀಗೆನ್ನುತ್ತಾರೆ, ‘ಸರ್ವೇಶ್ವರ ಕಣಿವೆಗಳ ದೇವರಲ್ಲ, ಬೆಟ್ಟಗಳ ದೇವರಾಗಿ ಮಾತ್ರ ಇರುತ್ತಾರೆಂದುಕೊಂಡು ಬಂದಿರುವ ಈ ಸಿರಿಯಾದವರ ಮಹಾಸೈನ್ಯವನ್ನು ನಿನ್ನ ಕೈಗೆ ಒಪ್ಪಿಸುವೆನು; ಇದರಿಂದ ನಾನೇ ಸರ್ವೇಶ್ವರ ಎಂದು ನಿನಗೆ ಗೊತ್ತಾಗುವುದು,” ಎಂದು ಹೇಳಿದನು. |
೨೯ |
ಈ ಎರಡು ಸೈನ್ಯಗಳೂ ಏಳುದಿನಗಳವರೆಗೆ ಎದುರುಬದುರಾಗಿ ಪಾಳೆಯಮಾಡಿಕೊಂಡಿದ್ದವು; ಏಳನೆಯ ದಿನದಲ್ಲಿ ಯುದ್ಧಪ್ರಾರಂಭವಾಯಿತು. ಇಸ್ರಯೇಲರು ಆ ಒಂದೇ ದಿನದಲ್ಲಿ ಸಿರಿಯಾದವರ ಒಂದು ಲಕ್ಷಮಂದಿ ಕಾಲಾಳುಗಳನ್ನು ವಧಿಸಿದರು. |
೩೦ |
ಉಳಿದ ಇಪ್ಪತ್ತೇಳು ಸಾವಿರಮಂದಿ ಸೈನಿಕರು ಅಫೇಕ ಪಟ್ಟಣವನ್ನು ಹೊಕ್ಕರು. ಆದರೆ ಆ ಪಟ್ಟಣದ ಗೋಡೆ ಅವರ ಮೇಲೆ ಬಿದ್ದುದರಿಂದ ಅವರೂ ಸತ್ತರು. ಬೆನ್ಹದದನೂ ಆ ಪಟ್ಟಣವನ್ನು ಹೊಕ್ಕು, ಒಂದು ಮನೆಯ ಒಳಕೋಣೆಯಲ್ಲಿ ಅಡಗಿಕೊಂಡನು. |
೩೧ |
ಆಗ ಅವನ ಅಧಿಕಾರಿಗಳು, “ಇಸ್ರಯೇಲರ ಅರಸರು ದಯೆಯುಳ್ಳವರೆಂದು ನಾವು ಕೇಳಿದ್ದೇವೆ; ಆದುದರಿಂದ ಸೊಂಟಕ್ಕೆ ಗೋಣೀತಟ್ಟು ಕಟ್ಟಿಕೊಂಡು, ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಆ ಅರಸನ ಬಳಿಗೆ ಹೋಗುವುದಕ್ಕೆ ನಮಗೆ ಅಪ್ಪಣೆಯಾಗಲಿ; ಹೀಗೆ ಮಾಡಿದರೆ ಅವನು ತಮ್ಮ ಜೀವವನ್ನು ಉಳಿಸಬಹುದು,” ಎಂದು ಹೇಳಿದರು. |
೩೨ |
ಅವರು ಸೊಂಟಕ್ಕೆ ಗೋಣೀತಟ್ಟು ಕಟ್ಟಿಕೊಂಡು ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಇಸ್ರಯೇಲರ ಅರಸನ ಬಳಿಗೆ ಬಂದು, “ಜೀವದಾನ ಮಾಡಬೇಕೆಂದು ನಿಮ್ಮ ಸೇವಕನಾದ ಬೆನ್ಹದದನು ವಿಜ್ಞಾಪಿಸುತ್ತಾನೆ,” ಎಂದರು. ಆಗ ಅವನು, “ಬೆನ್ಹದದನು ಇನ್ನೂ ಜೀವದಿಂದಿರುತ್ತಾನೋ? ಅವನು ನನ್ನ ಸಹೋದರನು,” ಎಂದು ಉತ್ತರಕೊಟ್ಟನು. |
೩೩ |
ಅವರು ಈ ಮಾತು ಶುಭವಚನವೆಂದು ನೆನೆಸಿ, ಕೂಡಲೆ ಅವನ ಮಾತನ್ನೇ ಅನುಮೋದಿಸಿ, “ಬೆನ್ಹದದನು ನಿಮ್ಮ ಸಹೋದರನೇ ಹೌದು,” ಎಂದರು. ಅವನು ಅವರಿಗೆ, “ಹೋಗಿ ಬೆನ್ಹದದನನ್ನು ಕರೆದುಕೊಂಡು ಬನ್ನಿ,” ಎಂದು ಆಜ್ಞಾಪಿಸಿದನು. ಅವನು ಬಂದಾಗ ಅವನನ್ನು ತನ್ನ ರಥದಲ್ಲೇ ಕುಳ್ಳಿರಿಸಿಕೊಂಡನು. |
೩೪ |
ಬೆನ್ಹದದನು ಅವನಿಗೆ, “ನನ್ನ ತಂದೆ, ನಿನ್ನ ತಂದೆಯಿಂದ ಕಿತ್ತುಕೊಂಡ ಪಟ್ಟಣಗಳನ್ನು ನಾನು ಹಿಂದಕ್ಕೆ ಕೊಡುತ್ತೇನೆ; ಅವನು ಸಮಾರಿಯಾದಲ್ಲಿ ಮಾಡಿದಂತೆ ನೀನೂ ನನಗಾಗಿ ದಮಸ್ಕದಲ್ಲಿ ಕೆಲವು ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿಕೊಳ್ಳಬಹುದು,” ಎಂದು ಹೇಳಿದನು. ಅಹಾಬನು, “ನಾನು ಈ ಒಪ್ಪಂದದ ಮೇಲೆ ನಿನ್ನನ್ನು ಬಿಟ್ಟುಬಿಡುತ್ತೇನೆ,” ಎಂದು ಹೇಳಿ, ಅವನಿಂದ ಪ್ರಮಾಣಮಾಡಿಸಿ ಕಳುಹಿಸಿಬಿಟ್ಟನು. |
೩೫ |
ಪ್ರವಾದಿಮಂಡಲಿಯವರಲ್ಲಿ ಒಬ್ಬನು, ಸರ್ವೇಶ್ವರನಿಂದ ಪ್ರೇರಿತನಾಗಿ ತನ್ನ ಜೊತೆಗಾರನೊಬ್ಬನಿಗೆ, “ನನ್ನನ್ನು ಹೊಡೆ,” ಎಂದು ಹೇಳಿದನು. ಅದಕ್ಕೆ ಅವನು ಒಪ್ಪಲಿಲ್ಲ. |
೩೬ |
ಆಗ ಆ ಪ್ರವಾದಿ ಅವನಿಗೆ, “ನೀನು ಸರ್ವೇಶ್ವರನ ಮಾತನ್ನು ಕೇಳದೆಹೋದುದರಿಂದ ನನ್ನನ್ನು ಬಿಟ್ಟು ಹೊರಟಕೂಡಲೆ ಒಂದು ಸಿಂಹವು ಬಂದು ನಿನ್ನನ್ನು ಕೊಲ್ಲುವುದು,” ಎಂದನು. ಅಂತೆಯೇ ಅವನು ಇವನನ್ನು ಬಿಟ್ಟುಹೋದ ಕೂಡಲೆ, ಒಂದು ಸಿಂಹವು ಬಂದು ಅವನನ್ನು ಕೊಂದುಹಾಕಿತು. |
೩೭ |
ಅನಂತರ ಆ ಪ್ರವಾದಿ ಇನ್ನೊಬ್ಬನನ್ನು ನೋಡಿ, “ನನ್ನನ್ನು ಹೊಡೆ,” ಎಂದು ಬೇಡಿಕೊಂಡನು. ಅವನು ಇವನನ್ನು ಗಾಯವಾಗುವಷ್ಟು ಹೊಡೆದನು. |
೩೮ |
ಆಗ ಇವನು ತನ್ನ ಗುರುತು ತಿಳಿಯಬಾರದೆಂದು ರುಮಾಲಿನಿಂದ ಕಣ್ಣುಗಳನ್ನು ಮುಚ್ಚಿಕೊಂಡು, ಅರಸನು ಬರುವ ದಾರಿಯಲ್ಲಿ ಕಾದು ನಿಂತನು. |
೩೯ |
ಅರಸನು ಹಾದುಹೋಗುವಾಗ ಅವನಿಗೆ, “ನಿಮ್ಮ ಸೇವಕನಾದ ನಾನು ಯುದ್ಧಕ್ಕೆ ಹೋಗಿದ್ದಾಗ ರಣರಂಗದಲ್ಲಿ ಒಬ್ಬನು, ಇನ್ನೊಬ್ಬನನ್ನು ಹಿಡಿದುಕೊಂಡು ನನ್ನ ಬಳಿಗೆ ಬಂದು, ‘ನೀನು ಇವನನ್ನು ಕಾಯಬೇಕು, ಇವನು ತಪ್ಪಿಸಿಕೊಂಡರೆ ಇವನ ಪ್ರಾಣಕ್ಕೆ ನಿನ್ನ ಪ್ರಾಣವು ನನ್ನದಾಗಿರುವುದು; ಇಲ್ಲವೆ ನೀನು ನನಗೆ ಮೂರು ಸಾವಿರ ಬೆಳ್ಳಿನಾಣ್ಯವನ್ನು ಕೊಡಬೇಕು’ ಎಂದು ಆಜ್ಞಾಪಿಸಿದನು. |
೪೦ |
ನಾನು ಬೇರೆ ಕೆಲಸದಲ್ಲಿದ್ದಾಗ ಆ ವ್ಯಕ್ತಿ ತಪ್ಪಿಸಿಕೊಂಡು ಹೋದನು,” ಎಂದು ಮೊರೆಯಿಟ್ಟನು. ಇಸ್ರಯೇಲರ ಅರಸನು ಇವನಿಗೆ, “ನಿನಗೆ ಆ ತೀರ್ಪು ಸರಿಯಾಗಿದೆ; ತೀರ್ಮಾನಿಸಿದವನು ನೀನೇ ಅಲ್ಲವೇ?’ ಎಂದು ನುಡಿದನು. |
೪೧ |
ಕೂಡಲೆ ಆ ಪ್ರವಾದಿ ಕಣ್ಣುಗಳ ಮೇಲಿನಿಂದ ರುಮಾಲನ್ನು ತೆಗೆದನು. ಅವನು ಪ್ರವಾದಿಗಳಲ್ಲೊಬ್ಬನೆಂದು ಇಸ್ರಯೇಲರ ಅರಸನಿಗೆ ಗೊತ್ತು ಆಯಿತು. |
೪೨ |
ಆಗ ಆ ಪ್ರವಾದಿ ಅರಸನಿಗೆ, “ಸಂಹರಿಸಬೇಕೆಂದು ಹೇಳಿ ನಾನು ನಿನ್ನ ಕೈಗೆ ಒಪ್ಪಿಸಿದ ವ್ಯಕ್ತಿಯನ್ನು ನೀನು ಹೋಗಿಬಿಟ್ಟದ್ದರಿಂದ ಅವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವು ಹೋಗುವುದು; ನಿನ್ನ ಪ್ರಜೆಗಳು ಅವನ ಪ್ರಜೆಗಳಾಗುವರು, ಎನ್ನುತ್ತಾರೆ ಸರ್ವೇಶ್ವರ,” ಎಂದು ಹೇಳಿದನು. |
೪೩ |
ಇಸ್ರಯೇಲರ ಅರಸನು ಸಿಟ್ಟಿನಿಂದ, ಗಂಟುಮೋರೆ ಮಾಡಿಕೊಂಡು, ಸಮಾರಿಯದಲ್ಲಿ ಇದ್ದ ತನ್ನ ಮನೆಗೆ ಹೋದನು.
|
Kannada Bible (KNCL) 2016 |
No Data |