A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಅರಸುಗಳು ೧ ೧೯ಎಲೀಯನು ಪ್ರವಾದಿಗಳನ್ನೆಲ್ಲ ಕತ್ತಿಯಿಂದ ಸಂಹರಿಸಿದ್ದನ್ನೂ ಅವನು ಮಾಡಿದ ಬೇರೆ ಎಲ್ಲಾ ಕಾರ್ಯಗಳನ್ನೂ ಅಹಾಬನು ಈಜೆಬೆಲಳಿಗೆ ತಿಳಿಸಿದನು.
ಆಕೆ ಎಲೀಯನ ಬಳಿಗೆ ದೂತರನ್ನು ಕಳುಹಿಸಿ, “ನೀನು ಪ್ರವಾದಿಗಳ ಪ್ರಾಣವನ್ನು ತೆಗೆದಂತೆ ನಾಳೆ ಇಷ್ಟುಹೊತ್ತಿಗೆ ನಾನು ನಿನ್ನ ಪ್ರಾಣವನ್ನು ತೆಗೆಯದೆಹೋದರೆ, ದೇವತೆಗಳು ನನಗೆ ಬೇಕಾದದ್ದನ್ನು ಮಾಡಲಿ!” ಎಂದು ಹೇಳಿಕಳುಹಿಸಿದಳು.
ಅವನು ಅದನ್ನು ಕೇಳಿದೊಡನೆ ಪ್ರಾಣರಕ್ಷಣೆಗಾಗಿ ಅಲ್ಲಿಂದ ಹೊರಟು ಜುದೇಯದ ಬೇರ್ಷೆಬಕ್ಕೆ ಬಂದು ಅಲ್ಲಿ ತನ್ನ ಸೇವಕನನ್ನು ಬೀಳ್ಕೊಟ್ಟನು.
ತರುವಾಯ ತಾನೊಬ್ಬನೇ, ಮರುಭೂಮಿಯಲ್ಲಿ ಒಂದು ದಿವಸದ ಪ್ರಯಾಣದಷ್ಟು ದೂರಹೋಗಿ, ಒಂದು ಜಾಲೀಗಿಡದ ಕೆಳಗೆ ಕುಳಿತುಕೊಂಡು ಮರಣವನ್ನು ಅಪೇಕ್ಷಿಸಿದನು. “ಸರ್ವೇಶ್ವರಾ, ನನಗೆ ಸಾಕಾಯಿತು; ನನ್ನ ಪ್ರಾಣವನ್ನು ತೆಗೆದುಬಿಡಿ; ನನ್ನ ಪೂರ್ವಜರಿಗಿಂತ ನಾನು ಉತ್ತಮನಲ್ಲ,” ಎಂದು ದೇವರನ್ನು ಪ್ರಾರ್ಥಿಸಿದನು.
ಬಳಿಕ ಅದೇ ಗಿಡದ ಕೆಳಗೆ ಮಲಗಿಕೊಂಡು ನಿದ್ರೆಮಾಡಿದನು. ಕೂಡಲೆ ಒಬ್ಬ ದೇವದೂತನು ಅವನನ್ನು ತಟ್ಟಿ, “ಎದ್ದು ಊಟಮಾಡು,” ಎಂದು ಹೇಳಿದನು.
ಎಲೀಯನು ಎದ್ದು ಸುತ್ತಲೂ ನೋಡಿದನು. ಕೆಂಡದ ಮೇಲೆ ಸುಟ್ಟ ರೊಟ್ಟಿಯೂ ಒಂದು ತಂಬಿಗೆ ನೀರೂ ತನ್ನ ತಲೆಯ ಹತ್ತಿರ ಇದ್ದುವು. ಅವುಗಳನ್ನು ತೆಗೆದುಕೊಂಡು ತಿಂದು, ಕುಡಿದು ಪುನಃ ಮಲಗಿದನು.
ಸರ್ವೇಶ್ವರನ ದೂತನು ಎರಡನೆಯ ಸಾರಿ ಬಂದು ಅವನನ್ನು ತಟ್ಟಿ, “ಎದ್ದು ಊಟಮಾಡು; ನೀನು ನಿನ್ನ ಶಕ್ತಿಮೀರುವಷ್ಟು ಪ್ರಯಾಣ ಮಾಡಬೇಕಾಗಿದೆ,” ಎಂದನು.
ಅವನು ಎದ್ದು, ತಿಂದು, ಕುಡಿದು ಅದರ ಬಲದಿಂದ ನಾಲ್ವತ್ತು ದಿವಸ ಹಗಲಿರುಳು ಪ್ರಯಾಣ ಮಾಡಿದನು;
ದೇವಗಿರಿಯಾದ ಹೋರೇಬನ್ನು ಮುಟ್ಟಿ ಅಲ್ಲಿನ ಒಂದು ಗವಿಯಲ್ಲಿ ಇಳಿದುಕೊಂಡನು. ಆಗ ಅವನಿಗೆ ಸರ್ವೇಶ್ವರನಿಂದ, “ಎಲೀಯನೇ, ಇಲ್ಲೇನು ಮಾಡುತ್ತಿರುವೆ?” ಎಂಬ ವಾಣಿ ಕೇಳಿಸಿತು.
೧೦
ಅದಕ್ಕೆ ಅವನು, “ಸರ್ವಶಕ್ತರಾದ ದೇವರೇ, ಸರ್ವೇಶ್ವರಾ, ಇಸ್ರಯೇಲರು ನಿಮ್ಮ ನಿಬಂಧನೆಯನ್ನು ಮೀರಿದ್ದಾರೆ; ಬಲಿಪೀಠಗಳನ್ನು ಕೆಡವಿಹಾಕಿದ್ದಾರೆ; ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದಾರೆ; ನಾನೊಬ್ಬನೇ ಉಳಿದು ನಿಮ್ಮ ಗೌರವವನ್ನು ಕಾಪಾಡುವುದರಲ್ಲಿ ಆಸಕ್ತನಾಗಿ ಇದ್ದೆನು; ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಬೇಕೆಂದಿದ್ದಾರೆ,” ಎಂದು ಉತ್ತರಕೊಟ್ಟನು.
೧೧
ಆಗ ಇನ್ನೊಮ್ಮೆ, “ನೀನು ಹೊರಗೆ ಬಂದು ಬೆಟ್ಟದ ಮೇಲೆ ಸರ್ವೇಶ್ವರನ ಮುಂದೆ ನಿಲ್ಲು,” ಎಂದು ವಾಣಿಯಾಯಿತು; ಆಹಾ! ಸರ್ವೇಶ್ವರ ಅಲ್ಲೇ ಹಾದುಹೋದರು, ಅವರ ಮುಂದೆ ಪರ್ವತಗಳನ್ನು ಭೇದಿಸಿ ಬಂಡೆಗಳನ್ನು ಪುಡಿಪುಡಿಮಾಡುವಂಥ ದೊಡ್ಡ ಬಿರುಗಾಳಿ ಬೀಸಿತು; ಸರ್ವೇಶ್ವರ ಅದರಲ್ಲಿ ಇರಲಿಲ್ಲ. ತರುವಾಯ ಭೂಕಂಪವುಂಟಾಯಿತು; ಅದರಲ್ಲೂ ಅವರಿರಲಿಲ್ಲ.
೧೨
ಭೂಕಂಪವಾದನಂತರ ಸಿಡಿಲು ಉಂಟಾಯಿತು; ಅದರಲ್ಲಿಯೂ ಸರ್ವೇಶ್ವರ ಇರಲಿಲ್ಲ. ಕಡೆಗೊಂದು ಮೆಲುದನಿ!
೧೩
ಅದನ್ನು ಕೇಳಿದ ಕೂಡಲೆ ಎಲೀಯನು ತನ್ನ ಕಂಬಳಿಯಿಂದ ಮುಖವನ್ನು ಮುಚ್ಚಿಕೊಂಡು ಹೋಗಿ ಗವಿಯ ದ್ವಾರದಲ್ಲಿ ನಿಂತನು. ಆಗ, “ಎಲೀಯನೇ, ನೀನು ಇಲ್ಲೇನು ಮಾಡುತ್ತಿರುವೆ?” ಎಂದು ವಾಣಿ ಕೇಳಿಸಿತು.
೧೪
ಅದಕ್ಕೆ ಅವನು, “ಸೇನಾಧೀಶ್ವರರಾದ ಸರ್ವೇಶ್ವರಾ, ಇಸ್ರಯೇಲರು ನಿಮ್ಮ ನಿಬಂಧನೆಯನ್ನು ಮೀರಿದ್ದಾರೆ; ಬಲಿಪೀಠಗಳನ್ನು ಕೆಡವಿಹಾಕಿದ್ದಾರೆ; ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದಾರೆ; ನಾನೊಬ್ಬನೇ ಉಳಿದು ನಿಮ್ಮ ಗೌರವವನ್ನು ಕಾಪಾಡುವುದರಲ್ಲಿ ಆಸಕ್ತನಾಗಿದ್ದೆನು; ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಬೇಕೆಂದು ಇದ್ದಾರೆ,” ಎಂದು ಉತ್ತರಕೊಟ್ಟನು.
೧೫
ಆಗ ಸರ್ವೇಶ್ವರ, “ನೀನು ಬಂದ ದಾರಿಯಲ್ಲೇ ಹಿಂದಿರುಗಿ ದಮಸ್ಕದ ಮರುಭೂಮಿಗೆ ಹೋಗು; ಅಲ್ಲಿಂದ ಪಟ್ಟಣದೊಳಗೆ ಹೋಗಿ ಹಜಾಯೇಲನನ್ನು ಸಿರಿಯಾದವರ ಅರಸನನ್ನಾಗಿ ಅಭಿಷೇಕಿಸು;
೧೬
ನಿಂಷಿಯ ಮಗ ಯೇಹುವನ್ನು, ಇಸ್ರಯೇಲರ ಅರಸನನ್ನಾಗಿ ಅಭಿಷೇಕಿಸು. ಅಬೇಲ್ ಮಹೋಲದವನೂ ಶಾಫಾಟನ ಮಗನೂ ಆದ ಎಲೀಷನನ್ನು ನಿನ್ನ ಉತ್ತರಾಧಿಕಾರಿಯಾದ ಪ್ರವಾದಿಯನ್ನಾಗಿ ಅಭಿಷೇಕಿಸು.
೧೭
ಹಜಾಯೇಲನ ಕತ್ತಿಗೆ ತಪ್ಪಿಸಿಕೊಂಡವರನ್ನು ಯೇಹುವು ಕೊಲ್ಲುವನು; ಇವನ ಕತ್ತಿಗೆ ತಪ್ಪಿಸಿಕೊಂಡವರನ್ನು ಎಲೀಷನು ಕೊಲ್ಲುವನು.
೧೮
ಆದರೆ ಬಾಳನ ವಿಗ್ರಹಕ್ಕೆ ಅಡ್ಡಬೀಳದೆಯೂ ಅದನ್ನು ಮುದ್ದಿಡದೆಯೂ ಇರುವ ಏಳುಸಾವಿರ ಮಂದಿ ಇಸ್ರಯೇಲರನ್ನು ಉಳಿಸುವೆನು,” ಎಂದು ಹೇಳಿದನು.
೧೯
ಎಲೀಯನು ಅಲ್ಲಿಂದ ಹೊರಟುಹೋಗಿ ಶಾಫಾಟನ ಮಗನಾದ ಎಲೀಷನನ್ನು ಕಂಡನು. ಅವನು ಹೊಲವನ್ನು ಉಳುವುದಕ್ಕೆ ಹನ್ನೆರಡು ಜೋಡಿ ಎತ್ತುಗಳನ್ನು ತಂದು ಹನ್ನೆರಡನೆಯ ಜೋಡಿಯಿಂದ ತಾನಾಗಿ ಉಳುತ್ತಿದ್ದನು. ಎಲೀಯನು ಅಲ್ಲಿಂದ ಹಾದುಹೋಗುವಾಗ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು.
೨೦
ಕೂಡಲೆ ಅವನು ಎತ್ತುಗಳನ್ನು ಬಿಟ್ಟು ಓಡುತ್ತಾ ಬಂದು ಎಲೀಯನಿಗೆ, “ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ಬರುವುದಕ್ಕೆ ಅಪ್ಪಣೆಯಾಗಲಿ; ಅನಂತರ ನಿನ್ನನ್ನು ಹಿಂಬಾಲಿಸುವೆನು,” ಎಂದನು. ಅದಕ್ಕೆ ಎಲೀಯನು, “ಹೋಗಿ ಬಾ; ನಾನು ನಿನಗೆ ಮಾಡಬೇಕಾದದ್ದನ್ನು ಮಾಡಿದ್ದೇನೆ,” ಎಂದು ಉತ್ತರಕೊಟ್ಟನು.
೨೧
ಎಲೀಷನು ಹಿಂದಿರುಗಿಹೋಗಿ ತಾನು ಉಳುತ್ತಿದ್ದ ಜೋಡಿ ಎತ್ತುಗಳನ್ನು ತೆಗೆದುಕೊಂಡು ವಧಿಸಿ ಮಾಂಸವನ್ನು ನೊಗದ ಕಟ್ಟಿಗೆಯಿಂದ ಬೇಯಿಸಿ, ಜನರಿಗೆ ಔತಣಮಾಡಿಸಿದನು. ಅನಂತರ ಅವನು ಎದ್ದು ಎಲೀಯನನ್ನು ಹಿಂಬಾಲಿಸಿ ಅವನ ಶಿಷ್ಯನಾದನು.