೧ |
ಜುದೇಯ ನಾಡಿನವನಾದ ಒಬ್ಬ ದೈವಭಕ್ತನು ಸರ್ವೇಶ್ವರನಿಂದ ಕಳುಹಿಸಲ್ಪಟ್ಟವನಾಗಿ ಬೇತೇಲಿಗೆ ಬಂದನು. ಯಾರೊಬ್ಬಾಮನು ಧೂಪಾರತಿ ಎತ್ತಲು ಪೀಠದ ಹತ್ತಿರ ನಿಂತುಕೊಂಡನು. |
೨ |
ಆ ಭಕ್ತನು ಸರ್ವೇಶ್ವರನ ಅಪ್ಪಣೆಯಿಂದ ಆ ಪೀಠವನ್ನು ಉದ್ದೇಶಿಸಿ, “ಎಲೈ ಪೀಠವೇ, ಪೀಠವೇ, ದಾವೀದನ ಸಂತಾನದಲ್ಲಿ ಯೋಷೀಯ ಎಂಬೊಬ್ಬನು ಹುಟ್ಟುವನು. ಅವನು, ನಿನ್ನ ಮೇಲೆ ಧೂಪಸುಡುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು, ಅವರನ್ನು ನಿನ್ನ ಮೇಲೆಯೇ ಬಲಿಕೊಡುವನು. ಮನುಷ್ಯರ ಎಲುಬುಗಳನ್ನು ನಿನ್ನ ಮೇಲೆ ಸುಡಲಾಗುವುದು ಎಂದು ಸರ್ವೇಶ್ವರ ಹೇಳುತ್ತಾರೆ,” ಎಂದನು. |
೩ |
ಇದಲ್ಲದೆ, “ನನ್ನ ಮಾತು ಸರ್ವೇಶ್ವರನದು ಎಂಬುದಕ್ಕೆ ಈ ಪೀಠವು ಸೀಳಿ ಅದರ ಮೇಲಿನ ಬೂದಿ ಬಿದ್ದುಹೋಗುವುದೇ ಗುರುತಾಗಿರುವುದು,” ಎಂದು ಹೇಳಿದನು. |
೪ |
ಬೇತೇಲಿನ ಪೀಠದ ಬಳಿ ನಿಂತಿದ್ದ ಅರಸನು ಆ ದೈವಭಕ್ತನು ಪೀಠಕ್ಕೆ ವಿರೋಧವಾಗಿ ನುಡಿದದ್ದನ್ನು ಕೇಳಿ ಕೈಚಾಚಿ, “ಅವನನ್ನು ಹಿಡಿಯಿರಿ,” ಎಂದು ಆಜ್ಞಾಪಿಸಿದನು. ಕೂಡಲೆ ಅವನ ಕೈ ಒಣಗಿಹೋಯಿತು. ಅವನು ಅದನ್ನು ಹಿಂತೆಗೆದುಕೊಳ್ಳಲಾಗಲಿಲ್ಲ. |
೫ |
ಬಲಿಪೀಠವು ಸೀಳಿ ಅದರ ಮೇಲಿನ ಬೂದಿ ಬಿದ್ದುಹೋಯಿತು. ಹೀಗೆ ಆ ದೈವಭಕ್ತನು ಸರ್ವೇಶ್ವರನ ಅಪ್ಪಣೆಯಿಂದ ಹೇಳಿದ ಗುರುತು ನೆರವೇರಿತು. |
೬ |
ಅರಸನು ಆ ಭಕ್ತನಿಗೆ, “ನಿನ್ನ ದೇವರಾದ ಸರ್ವೇಶ್ವರನು ಪ್ರಸನ್ನನಾಗುವಂತೆ ಬೇಡಿಕೊ; ನಾನು ನನ್ನ ಕೈಯನ್ನು ಹಿಂತೆಗೆಯುವುದಕ್ಕಾಗುವ ಹಾಗೆ ಅವರನ್ನು ನನ್ನ ಪರವಾಗಿ ಪ್ರಾರ್ಥಿಸು,” ಎಂದು ಕೇಳಿದನು. ಅಂತೆಯೇ ಆ ದೈವಭಕ್ತನು ಸರ್ವೇಶ್ವರನನ್ನು ಬೇಡಿಕೊಂಡನು; ಅರಸನ ಕೈ ವಾಸಿಯಾಗಿ ಮೊದಲಿನಂತೆ ಆಯಿತು. |
೭ |
ಆಗ ಅರಸನು, “ನನ್ನ ಮನೆಗೆ ಬಾ; ಸ್ವಲ್ಪ ಊಟಮಾಡಿ ಸುಧಾರಿಸಿಕೊ. ನಾನು ನಿನಗೆ ಬಹುಮಾನವನ್ನು ಕೊಡುತ್ತೇನೆ,” ಎಂದನು. |
೮ |
ಆ ದೈವಭಕ್ತನು, “ನೀವು ನನಗೆ ನಿಮ್ಮ ಆಸ್ತಿಯಲ್ಲಿ ಅರ್ಧ ಕೊಟ್ಟರೂ ನಾನು ನಿಮ್ಮ ಸಂಗಡ ಬರುವುದಿಲ್ಲ. ಇಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳುವುದಿಲ್ಲ. |
೯ |
ಇಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದೆಂದೂ ಹಿಂದಿರುಗಿ ಹೋಗುವಾಗ ಬೇರೆ ದಾರಿಯಿಂದ ಹೋಗಬೇಕೆಂದೂ ನನಗೆ ಸರ್ವೇಶ್ವರನ ಅಪ್ಪಣೆಯಾಗಿದೆ,” ಎಂದನು. |
೧೦ |
ಅನಂತರ ಅವನು ಆ ದಾರಿಯನ್ನು ಬಿಟ್ಟು ಇನ್ನೊಂದು ದಾರಿಯನ್ನು ಹಿಡಿದು ಹೊರಟನು. |
೧೧ |
ಬೇತೇಲಿನಲ್ಲಿ ಒಬ್ಬ ಮುದುಕ ಪ್ರವಾದಿ ವಾಸವಾಗಿದ್ದನು. ಅವನ ಮಕ್ಕಳು ಬಂದು ಆ ದೈವಭಕ್ತನು ಆ ದಿನ ಬೇತೇಲಿನಲ್ಲಿ ಮಾಡಿದ್ದನ್ನೂ ಅವನು ಅರಸನಿಗೆ ಹೇಳಿದ್ದನ್ನೂ ತಂದೆಗೆ ತಿಳಿಸಿದರು. |
೧೨ |
“ಅವನು ಯಾವ ದಾರಿಯಿಂದ ಹೋದ?” ಎಂದು ತಂದೆ ಅವರನ್ನು ಕೇಳಲು, ಅವರು ಜುದೇಯ ನಾಡಿನ ಆ ದೈವಭಕ್ತ ಹೋದ ದಾರಿಯನ್ನು ತೋರಿಸಿದರು. |
೧೩ |
ಆಗ ಅವನು ತನ್ನ ಮಕ್ಕಳಿಗೆ, “ಕತ್ತೆಗೆ ತಡಿಹಾಕಿರಿ,” ಎಂದು ಆಜ್ಞಾಪಿಸಲು ಅವರು ಹಾಕಿದರು. ಅವನು ಕತ್ತೆಯ ಮೇಲೆ ಕುಳಿತುಕೊಂಡು |
೧೪ |
ಆ ದೈವಭಕ್ತನ ಹಿಂದೆಯೇ ಹೋಗಿ ಏಲಾವೃಕ್ಷದ ಕೆಳಗೆ ಕುಳಿತಿದ್ದ ಅವನನ್ನು ಕಂಡು, “ಜುದೇಯದಿಂದ ಬಂದ ದೈವಭಕ್ತನು ನೀನೋ?” ಎಂದು ಕೇಳಿದನು. ಅವನು ಹೌದೆಂದನು. |
೧೫ |
ಆಗ ಆ ಮುದುಕನು, “ನೀನು ನನ್ನ ಮನೆಗೆ ಬಂದು ಊಟಮಾಡು,” ಎಂದು ಹೇಳಿದನು. |
೧೬ |
ಅದಕ್ಕೆ ಅವನು, “ನಾನು ನಿನ್ನ ಸಂಗಡ ಬರಕೂಡದು; ಈ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದೆಂದೂ ಬಂದ ದಾರಿಯನ್ನು ಬಿಟ್ಟು ಬೇರೆ ದಾರಿಯಿಂದ ಹಿಂದಿರುಗಿ ಹೋಗಬೇಕೆಂದೂ ನನಗೆ ಸರ್ವೇಶ್ವರನ ಅಪ್ಪಣೆಯಾಗಿದೆ,” ಎಂದು ಉತ್ತರಕೊಟ್ಟನು. |
೧೭ |
*** |
೧೮ |
ಆಗ ಆ ಮುದುಕನು, “ನಾನೂ ನಿನ್ನಂತೆ ಪ್ರವಾದಿಯಾಗಿದ್ದೇನೆ; ಒಬ್ಬ ದೇವದೂತನು ನನಗೆ ಕಾಣಿಸಿಕೊಂಡು ನಿನ್ನನ್ನು ಕರೆದುಕೊಂಡು ಬರಬೇಕೆಂದು ಸರ್ವೆಶ್ವರನ ಹೆಸರಿನಲ್ಲಿ ಆಜ್ಞಾಪಿಸಿದ್ದಾನೆ,” ಎಂದು ಹೇಳಿದನು. ಆದರೆ ಈ ಮಾತು ಸುಳ್ಳಾಗಿತ್ತು. |
೧೯ |
ದೈವಭಕ್ತನು ಹಿಂದಿರುಗಿ ಅವನ ಮನೆಗೆ ಹೋಗಿ ಅನ್ನಪಾನಗಳನ್ನು ತೆಗೆದುಕೊಂಡನು. |
೨೦ |
ಅವರು ಊಟಮಾಡುತ್ತಿರುವಾಗ ದೈವಭಕ್ತನನ್ನು ಹಿಂದಕ್ಕೆ ಕರೆದುತಂದ ಆ ಪ್ರವಾದಿಗೆ ಸರ್ವೇಶ್ವರ ಒಂದು ಸಂದೇಶವನ್ನು ದಯಪಾಲಿಸಿದರು. |
೨೧ |
ಅವನು ಜುದೇಯ ನಾಡಿನ ಆ ದೈವಭಕ್ತನಿಗೆ, “ನಿನ್ನ ದೇವರಾದ ಸರ್ವೇಶ್ವರ ನಿನಗೆ ಈ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದೆಂದು ಆಜ್ಞಾಪಿಸಿದರೂ ನೀನು ಅವರ ಆಜ್ಞೆಯನ್ನು ಮೀರಿ, ಅವಿಧೇಯನಾಗಿ |
೨೨ |
ಅನ್ನಪಾನಗಳನ್ನು ತೆಗೆದುಕೊಳ್ಳುವುದಕ್ಕಾಗಿ ಹಿಂದಿರುಗಿ ಬಂದುದರಿಂದ ನಿನ್ನ ಶವ ನಿನ್ನ ಕುಟುಂಬ ಸ್ಮಶಾನಭೂಮಿಯನ್ನು ಸೇರುವುದೇ ಇಲ್ಲವೆಂದು ಸರ್ವೇಶ್ವರ ಹೇಳುತ್ತಾರೆ,” ಎಂದನು. |
೨೩ |
ಅನ್ನಪಾನಗಳನ್ನು ತೆಗೆದುಕೊಂಡನಂತರ ಆ ಮುದುಕ ಪ್ರವಾದಿ ತಾನು ಕರೆದುತಂದ ಪ್ರವಾದಿಯನ್ನು ಕಳುಹಿಸಲು ಕತ್ತೆಗೆ ತಡಿಹಾಕಿಸಿದನು. |
೨೪ |
ಆ ದೈವಭಕ್ತನು ಸ್ವಲ್ಪ ದೂರಹೋದ ನಂತರ ಒಂದು ಸಿಂಹವು ಅವನಿಗೆ ಎದುರಾಗಿ ಬಂದು ಅವನನ್ನು ಕೊಂದುಹಾಕಿತು. ಅವನ ಶವ ದಾರಿಯಲ್ಲಿಯೇ ಬಿದ್ದಿತ್ತು; ಕತ್ತೆಯೂ ಸಿಂಹವೂ ಶವದ ಹತ್ತಿರ ನಿಂತುಕೊಂಡಿದ್ದವು. |
೨೫ |
ಹಾದುಹೋಗುವವರು ಆ ಶವವು ದಾರಿಯಲ್ಲಿ ಬಿದ್ದು ಇರುವುದನ್ನೂ ಸಿಂಹವು ಅದರ ಬಳಿಯಲ್ಲೆ ನಿಂತಿರುವುದನ್ನೂ ಕಂಡು ಮುದುಕ ಪ್ರವಾದಿಯ ಊರಿಗೆ ಬಂದು ಅದನ್ನು ತಿಳಿಸಿದರು. |
೨೬ |
ಅವನನ್ನು ಹಿಂದಕ್ಕೆ ಕರೆದುಕೊಂಡು ಹೋಗಿದ್ದ ಪ್ರವಾದಿ, ಈ ಸುದ್ದಿಯನ್ನು ಕೇಳಿ, “ಆ ಶವವು ದೈವಭಕ್ತನದೇ ಆಗಿರಬೇಕು. ಅವನು ಸರ್ವೇಶ್ವರನ ಆಜ್ಞೆಗೆ ಅವಿಧೇಯನಾದುದರಿಂದ ಸರ್ವೇಶ್ವರ ಅವನ ವಿಷಯದಲ್ಲಿ ತಾವು ಹೇಳಿದ ಮಾತು ನೆರವೇರುವಂತೆ ಅವನನ್ನು ಸಿಂಹದ ಬಾಯಿಗೆ ಒಪ್ಪಿಸಿದರು. ಅದು ಅವನ ಮೇಲೆ ಹಾರಿ ಅವನನ್ನು ಕೊಂದುಬಿಟ್ಟಿತು,” ಎಂದು ಹೇಳಿ, |
೨೭ |
ಕತ್ತೆಗೆ ತಡಿಹಾಕಬೇಕೆಂದು ಮಕ್ಕಳಿಗೆ ಆಜ್ಞಾಪಿಸಿದನು. ಅವರು ಹಾಕಿದರು. |
೨೮ |
ಅವನು ಹೋಗಿ ಶವವು ದಾರಿಯಲ್ಲಿ ಬಿದ್ದಿರುವುದನ್ನೂ ಕತ್ತೆಯೂ ಸಿಂಹವೂ ಅದರ ಬಳಿಯಲ್ಲಿ ನಿಂತಿರುವುದನ್ನೂ ಕಂಡನು. ಸಿಂಹವು ಶವವನ್ನು ತಿನ್ನಲಿಲ್ಲ, ಕತ್ತೆಯನ್ನು ಕೊಲ್ಲಲೂ ಇಲ್ಲ. |
೨೯ |
ಪ್ರವಾದಿಯು ಆ ದೈವಭಕ್ತನ ಶವವನ್ನು ಹೂಳಿ ಗೋಳಾಡಬೇಕೆಂದು, ಕತ್ತೆಯ ಮೇಲೆ ಹಾಕಿ, |
೩೦ |
ತನ್ನ ಊರಿಗೆ ತೆಗೆದುಕೊಂಡು ಬಂದು, ತನ್ನ ಸ್ಮಶಾನ ಭೂಮಿಯಲ್ಲಿ ಅದನ್ನು ಸಮಾಧಿಮಾಡಿದನು. ಅವರು, “ಅಯ್ಯೋ, ನನ್ನ ಸಹೋದರನೇ,” ಎಂದು ಗೋಳಾಡಿದರು. |
೩೧ |
ಅನಂತರ ಅವನು ತನ್ನ ಮಕ್ಕಳಿಗೆ, “ನಾನು ಸತ್ತಾಗ ನನ್ನ ಶವವನ್ನು ಆ ದೈವಭಕ್ತನ ಶವ ಇರುವಲ್ಲೇ ಸಮಾಧಿಮಾಡಿರಿ; ನನ್ನ ಎಲುಬುಗಳನ್ನು ಅವನ ಎಲುಬುಗಳಿರುವಲ್ಲೇ ಇಡಿ. |
೩೨ |
ಅವನು ಸರ್ವೇಶ್ವರನ ಅಪ್ಪಣೆಯಿಂದ ಬೇತೇಲಿನ ಬಲಿಪೀಠಕ್ಕೆ ವಿರುದ್ಧ ಹಾಗು ಸಮಾರಿಯದ ಪಟ್ಟಣಗಳಲ್ಲಿರುವ ಎಲ್ಲಾ ಪೂಜಾಸ್ಥಳಗಳಿಗೆ ವಿರುದ್ಧ ಹೇಳಿದ ಮಾತುಗಳು ನಿಸ್ಸಂದೇಹವಾಗಿ ನೆರವೇರುವುವು,” ಎಂದನು. |
೩೩ |
ಇಷ್ಟಾದರೂ ಯಾರೊಬ್ಬಾಮನು ತನ್ನ ದುರ್ಮಾರ್ಗವನ್ನು ಬಿಡದೆ ಪದೇ ಪದೇ ಜನಸಾಮಾನ್ಯರನ್ನು ಉನ್ನತಸ್ಥಾನಗಳಿಗೆ ನೇಮಿಸಿದನು; ಮನಸ್ಸಿಗೆ ಬಂದವರನ್ನು ಪೂಜಾಸ್ಥಳಗಳ ಯಾಜಕರನ್ನಾಗಿ ಪ್ರತಿಷ್ಠಿಸಿದನು. |
೩೪ |
ಈ ಕಾರಣ ಯಾರೊಬ್ಬಾಮನ ಕುಟುಂಬದವರು ಪಾಪಿಗಳಾಗಿ ಭೂಲೋಕದಿಂದ ವಿಸರ್ಜಿತರಾಗಿ ನಿರ್ನಾಮವಾದರು.
|
Kannada Bible (KNCL) 2016 |
No Data |