೧ |
ಒಂದು ದಿನ ದಾವೀದನು, “ಸೌಲನ ಮನೆಯವರಲ್ಲಿ ಯಾರಾದರು ಇನ್ನೂ ಉಳಿದಿದ್ದಾರೋ? ಯೋನಾತಾನನ ಸಲುವಾಗಿ ನಾನು ಅವರಿಗೆ ದಯೆತೋರಿಸಬೇಕೆಂದಿರುತ್ತೇನೆ,” ಎಂದು ವಿಚಾರಿಸಿದನು. |
೨ |
ಸೌಲನ ಮನೆಯಲ್ಲಿ ಊಳಿಗನಾಗಿದ್ದ ಚೀಬ ಎಂಬ ವ್ಯಕ್ತಿಯನ್ನು ಕರೆದುಕೊಂಡು ಬಂದರು. ಅರಸನು ಅವನನ್ನು, “ನೀನು ಚೀಬನೋ?’ ಎಂದು ಕೇಳಲು ಅವನು, “ನಿಮ್ಮ ಊಳಿಗನಾದ ನಾನು ಚೀಬನೇ,” ಎಂದು ಉತ್ತರಕೊಟ್ಟನು. |
೩ |
ಆಗ ಅರಸನು, “ಸೌಲನ ಕುಟುಂಬದವರಲ್ಲಿ ಯಾರಾದರೂ ಉಳಿದಿದ್ದರೆ ಹೇಳು; ನಾನು ದೇವರನ್ನು ನೆನಸಿ ಅವರಿಗೆ ದಯೆ ತೋರಿಸುತ್ತೇನೆ,” ಎಂದನು. ಆಗ ಚೀಬನು, “ಯೋನಾತಾನನಿಗೆ, ಎರಡು ಕಾಲೂ ಕುಂಟಾದ ಒಬ್ಬ ಮಗನಿರುತ್ತಾನೆ,” ಎಂದು ಹೇಳಿದನು. |
೪ |
ಅರಸನು, “ಎಲ್ಲಿದ್ದಾನೆ?” ಎಂದು ಕೇಳಲು ಅವನು, “ಲೋದೆಬಾರಿನಲ್ಲಿರುವ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಲ್ಲಿರುತ್ತಾನೆ,” ಎಂದು ಉತ್ತರಕೊಟ್ಟನು. |
೫ |
ಕೂಡಲೆ ಅರಸನು ದೂತರನ್ನು ಕಳುಹಿಸಿ ಅವನನ್ನು ಲೋದೆಬಾರಿನಲ್ಲಿದ್ದ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಿಂದ ಕರೆಯಿಸಿದನು. |
೬ |
ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಆ ಮೆಫೀಬೋಶೆತನು ಬಂದು ದಾವೀದನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ದಾವೀದನು, “ಮೆಫೀಬೋಶೆತನೇ,” ಎಂದೊಡನೆ ಅವನು, “ನಿನ್ನ ಸೇವಕನಾದ ನಾನು ಇಲ್ಲಿದ್ದೇನೆ,” ಎಂದನು. |
೭ |
ಆಗ ದಾವೀದನು, “ಹೆದರಬೇಡ; ನಿನ್ನ ತಂದೆ ಯೋನಾತಾನನ ನೆನಪಿನಲ್ಲಿ ನಿನಗೆ ದಯೆತೋರಿಸುತ್ತೇನೆ. ನಿನ್ನ ಅಜ್ಜ ಸೌಲನ ಭೂಮಿಯನ್ನೆಲ್ಲಾ ನಿನಗೆ ಹಿಂದಕ್ಕೆ ಕೊಡುತ್ತೇನೆ; ಇದಲ್ಲದೆ ನೀನು ಪ್ರತಿದಿನ ನನ್ನ ಪಂಕ್ತಿಯಲ್ಲೇ ಊಟಮಾಡಬೇಕು,” ಎಂದು ಹೇಳಿದನು. |
೮ |
ಮೆಫೀಬೋಶೆತನು ಇದನ್ನು ಕೇಳಿ ಅರಸನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, “ಸತ್ತ ನಾಯಿಯಂತಿರುವ ನನ್ನನ್ನು ತಾವು ಗಮನಿಸಲು ನಿಮ್ಮ ಗುಲಾಮನಾದ ನಾನು ಅಪಾತ್ರನೇ!” ಎಂದನು. |
೯ |
ಅನಂತರ ದಾವೀದನು ಸೌಲನ ಸೇವಕ ಚೀಬನನ್ನು ಕರೆದು ಅವನಿಗೆ, “ನಿನ್ನ ಯಜಮಾನ ಸೌಲನಿಗೂ ಅವನ ಕುಟುಂಬದವರಿಗೂ ಇದ್ದುದ್ದನ್ನೆಲ್ಲಾ ಅವನ ಮೊಮ್ಮಗನಿಗೆ ಕೊಟ್ಟಿರುತ್ತೇನೆ. |
೧೦ |
ನೀನೂ ನಿನ್ನ ಮಕ್ಕಳೂ ಆಳುಗಳೂ ನಿನ್ನ ಯಜಮಾನನ ಮೊಮ್ಮಗನಿಗಾಗಿ ಆ ಭೂಮಿಯನ್ನು ವ್ಯವಸಾಯಮಾಡಿ ಅದರ ಬೆಳೆಯನ್ನು ಇವನ ಮನೆಯವರ ಅಶನಾರ್ಥವಾಗಿ ತಂದುಕೊಡಬೇಕು. ಇವನಿಗಾದರೋ ನಿತ್ಯವೂ ನನ್ನ ಪಂಕ್ತಿಯಲ್ಲೇ ಭೋಜನವಾಗುವುದು,” ಎಂದು ಹೇಳಿದನು. ಚೀಬನಿಗೆ ಹದಿನೈದು ಮಂದಿ ಗಂಡು ಮಕ್ಕಳೂ ಇಪ್ಪತ್ತು ಮಂದಿ ಆಳುಗಳೂ ಇದ್ದರು. |
೧೧ |
ಚೀಬನು ಅರಸನಿಗೆ, “ಒಡೆಯರಾದ ಅರಸರ ಅಪ್ಪಣೆ ಮೇರೆಗೆ ಸೇವಕನು ನಡೆಯುವನು,” ಎಂದು ಉತ್ತರಕೊಟ್ಟನು. ಈ ಪ್ರಕಾರ ಮೆಫೀಬೋಶೆತನು ರಾಜಪುತ್ರರಂತೆ ಅರಸನ ಪಂಕ್ತಿಯಲ್ಲಿ ಊಟಮಾಡುತ್ತಿದ್ದನು. |
೧೨ |
ಅವನಿಗೆ ಮೀಕನೆಂಬೊಬ್ಬ ಚಿಕ್ಕ ಮಗನಿದ್ದನು; ಚೀಬನ ಮನೆಯವರೆಲ್ಲರೂ ಅವನ ಸೇವಕರು. |
೧೩ |
ಮೆಫೀಬೋಶೆತನಿಗೆ ಪ್ರತಿದಿನವೂ ರಾಜಪಂಕ್ತಿಯಲ್ಲಿ ಊಟವಾಗುತ್ತಿದ್ದುದರಿಂದ ಅವನು ಜೆರುಸಲೇಮಿನಲ್ಲೇ ವಾಸಿಸಿದನು. ಅವನ ಎರಡು ಕಾಲುಗಳೂ ಕುಂಟಾಗಿದ್ದವು.
|
Kannada Bible (KNCL) 2016 |
No Data |