೧ |
ಅನಂತರ ಇಸ್ರಯೇಲರ ಎಲ್ಲ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದರು. “ನಾವು ನಿಮ್ಮ ರಕ್ತಸಂಬಂಧಿಗಳು; |
೨ |
ಹಿಂದಿನ ದಿವಸಗಳಲ್ಲಿ, ಅಂದರೆ ಸೌಲನ ಆಳ್ವಿಕೆಯಲ್ಲಿ, ಇಸ್ರಯೇಲರ ದಳಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವರು ನೀವೇ. ನಿಮ್ಮನ್ನು ಕುರಿತು ಸರ್ವೇಶ್ವರಸ್ವಾಮಿ, ‘ನೀನು ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನೂ ಪಾಲಕನೂ ಆಗಿರುವೆ,’ ಎಂದು ವಾಗ್ದಾನಮಾಡಿದ್ದಾರೆ,” ಎಂದರು. |
೩ |
ಹೆಬ್ರೋನಿನಲ್ಲಿದ್ದ ಅರಸ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಯೇಲರ ಹಿರಿಯರೊಡನೆ ಅಲ್ಲೇ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದರು. |
೪ |
ದಾವೀದನು ಮೂವತ್ತು ವರ್ಷದವನಾಗಿದ್ದಾಗ ಅರಸನಾಗಿ ನಾಲ್ವತ್ತು ವರ್ಷ ಆಳಿದನು. |
೫ |
ಅವನು ಹೆಬ್ರೋನಿನಲ್ಲಿದ್ದುಕೊಂಡು ಯೆಹೂದ ಕುಲ ಒಂದನ್ನೇ ಆಳಿದ್ದು ಏಳು ವರ್ಷ ಆರು ತಿಂಗಳು; ಜೆರುಸಲೇಮಿನಲ್ಲಿದ್ದುಕೊಂಡು ಯೆಹೂದ್ಯರನ್ನು ಹಾಗು ಇಸ್ರಯೇಲರನ್ನು ಆಳಿದ್ದು ಮೂವತ್ತಮೂರು ವರ್ಷ. |
೬ |
ದಾವೀದನು ತನ್ನ ಜನರನ್ನು ಕರೆದುಕೊಂಡು ಜೆರುಸಲೇಮಿನ ಮೇಲೆ ದಾಳಿ ಮಾಡಲು ಹೊರಟನು. ನಾಡಿನ ಮೂಲನಿವಾಸಿಗಳಾದ ಯೆಬೂಸಿಯರು ಅಲ್ಲಿದ್ದರು. ಅವರು ದಾವೀದನು ಒಳಗೆ ಬರಲಾರನೆಂದು ನೆನೆಸಿ ಅವನಿಗೆ, “ನೀನು ಒಳಗೆ ಬರಕೂಡದು; ಬಂದರೆ ಕುರುಡರು, ಕುಂಟರು ಇವರೇ ನಿನ್ನನ್ನು ಅಟ್ಟಿಬಿಡುವರು,” ಎಂದು ಹೇಳಿದರು. |
೭ |
ಆದರೂ ಅವನು, ಈಗ ‘ದಾವೀದನಗರ’ ಎನಿಸಿಕೊಳ್ಳುವ ಸಿಯೋನ್ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು. |
೮ |
ಆ ದಿವಸ ದಾವೀದನು, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು ಜಲದ್ವಾರದಲ್ಲೆ ಹತ್ತಿ ಹೋಗಿ ನನ್ನನ್ನು ದ್ವೇಷಿಸುವ ಕುರುಡರನ್ನೂ ಕುಂಟರನ್ನೂ ಕಂದಕದಲ್ಲಿ ನಾಶಮಾಡಿಬಿಡಲಿ,” ಎಂದು ಹೇಳಿದನು. ಆದುದರಿಂದಲೇ “ಕುರುಡರೂ ಕುಂಟರೂ ದೇವಾಲಯದೊಳಗೆ ಹೋಗಲಾಗದು,” ಎಂಬ ಹೇಳಿಕೆಯುಂಟು. |
೯ |
ದಾವೀದನು ಆ ಕೋಟೆಗೆ ‘ದಾವೀದನಗರ’ ಎಂದು ಹೆಸರಿಟ್ಟು ಅಲ್ಲೇ ವಾಸಿಸುತ್ತಿದ್ದನು. ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ ಒಳಗಿನ ಪೌಳಿಗೋಡೆಯನ್ನು ಕಟ್ಟಿಸಿದನು. |
೧೦ |
ಸೇನಾಧೀಶ್ವರ ಹಾಗು ಸರ್ವೇಶ್ವರರಾದ ದೇವರು ಅವನೊಂದಿಗೆ ಇದ್ದರು. ಆದ್ದರಿಂದ ಅವನು ಅಭಿವೃದ್ಧಿಹೊಂದುತ್ತಾ ಬಂದನು. |
೧೧ |
ಟೈರಿನ ರಾಜನಾದ ಹೀರಾಮನು ದಾವೀದನಿಗೆ ದೂತರನ್ನು, ದೇವದಾರು ಮರಗಳನ್ನು, ಬಡಗಿಯವರನ್ನು ಹಾಗು ಶಿಲ್ಪಿಗಳನ್ನು ಕಳುಹಿಸಿದನು. ಅವರು ದಾವೀದನಿಗೆ ಅರಮನೆಯನ್ನು ಕಟ್ಟಿದರು. |
೧೨ |
ಹೀಗೆ ದಾವೀದನು, “ಸರ್ವೇಶ್ವರಸ್ವಾಮಿ ನನ್ನನ್ನು ಇಸ್ರಯೇಲ್ ಅರಸನನ್ನಾಗಿ ಸ್ಥಿರಪಡಿಸಿದ್ದಾರೆ, ತಮ್ಮ ಪ್ರಜೆಗಳಾದ ಇಸ್ರಯೇಲರ ನಿಮಿತ್ತ ನನ್ನ ರಾಜ್ಯವನ್ನು ಅಭಿವೃದ್ಧಿಪಡಿಸಿದ್ದಾರೆ,” ಎಂದು ತಿಳಿದುಕೊಂಡನು. |
೧೩ |
ಹೆಬ್ರೋನಿನಿಂದ ಜೆರುಸಲೇಮಿಗೆ ಬಂದ ಮೇಲೆ ದಾವೀದನು ಹೆಚ್ಚುಮಂದಿ ಸ್ತ್ರೀಯರನ್ನು ಪತ್ನಿಯರನ್ನಾಗಿ ಹಾಗು ಉಪಪತ್ನಿಯರನ್ನಾಗಿ ಮಾಡಿಕೊಂಡನು. ಅವನಿಗೆ ಇನ್ನೂ ಕೆಲವು ಮಂದಿ ಗಂಡುಹೆಣ್ಣು ಮಕ್ಕಳು ಹುಟ್ಟಿದರು. |
೧೪ |
ಅಲ್ಲಿ ಅವನಿಗೆ ಹುಟ್ಟಿದವರ ಹೆಸರುಗಳು ಇವು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್, |
೧೫ |
ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ, |
೧೬ |
ಎಲೀಷಾಮ, ಎಲ್ಯಾದ ಹಾಗು ಎಲೀಫೆಲೆಟ್. |
೧೭ |
ಇಸ್ರಯೇಲರು ದಾವೀದನನ್ನು ಅಭಿಷೇಕಿಸಿ ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ಸಮಾಚಾರ ಫಿಲಿಷ್ಟಿಯರಿಗೆ ಮುಟ್ಟಿತು. ಆಗ ಅವರು ಅವನನ್ನು ಬಂಧಿಸಲು ಬಂದರು. ದಾವೀದನು ಇದನ್ನು ಕೇಳಿ ದುರ್ಗಕ್ಕೆ ಹೋದನು. |
೧೮ |
ಫಿಲಿಷ್ಟಿಯರು ನಾಡಿನೊಳಗೆ ನುಗ್ಗಿ ರೆಫಾಯಿಮ್ ತಗ್ಗಿಗೆ ಬಂದು ಪಾಳೆಯ ಮಾಡಿಕೊಂಡರು. |
೧೯ |
ದಾವೀದನು ಸರ್ವೇಶ್ವರನನ್ನು, “ನಾನು ಫಿಲಿಷ್ಟಿಯರ ಮೇಲೆ ದಾಳಿ ಮಾಡಬಹುದೇ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿರಾ?’ ಎಂದು ಕೇಳಿದನು. ಸರ್ವೇಶ್ವರ, “ಹೋಗು, ನಾನು ಹೇಗೂ ಅವರನ್ನು ನಿನ್ನ ಕೈಗೆ ಒಪ್ಪಿಸುವೆನು,” ಎಂದು ಉತ್ತರಕೊಟ್ಟರು. |
೨೦ |
ಆದುದರಿಂದ ಅವನು ಹೋಗಿ ಅವರನ್ನು ಸೋಲಿಸಿದನು. “ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು ಸರ್ವೇಶ್ವರ ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾರೆ,” ಎಂದು ಹೇಳಿ ಆ ಯುದ್ಧಸ್ಥಳಕ್ಕೆ, ‘ಬಾಳ್ ಪೆರಾಚೀಮ್’ ಎಂದು ಹೆಸರಿಟ್ಟನು. |
೨೧ |
ಫಿಲಿಷ್ಟಿಯರು ಅಲ್ಲಿ ಬಿಟ್ಟುಹೋಗಿದ್ದ ವಿಗ್ರಹಗಳನ್ನು ದಾವೀದನೂ ಅವನ ಜನರೂ ತೆಗೆದುಕೊಂಡು ಬಂದರು. |
೨೨ |
ಫಿಲಿಷ್ಟಿಯರು ಇನ್ನೊಮ್ಮೆ ಹೊರಟುಬಂದು ರೆಫಾಯೀಮ್ ತಗ್ಗಿನಲ್ಲಿ ಇಳಿದುಕೊಂಡರು. |
೨೩ |
ದಾವೀದನು ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸಿದಾಗ ಅವರು, “ನೀನು ನೆಟ್ಟಗೆ ಹೋಗಿ ಅವರ ಮೇಲೆ ದಾಳಿ ಮಾಡಬೇಡ; ಅವರ ಹಿಂದಳವನ್ನು ಸುತ್ತಿಕೊಂಡು ಹೋಗಿ ಬಾಕಾ ಮರಗಳಿರುವ ಕಡೆಯಿಂದ ಅವರ ಮೇಲೆ ಬೀಳು. |
೨೪ |
ಆ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳಿಸುವಾಗ ಸರ್ವೇಶ್ವರ, ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕಾಗಿ ನಿನ್ನ ಮುಂದಾಗಿ ಹೊರಟರೆಂದು ತಿಳಿದುಕೊಂಡು ಅವರ ಮೇಲೆ ದಾಳಿಮಾಡು,” ಎಂದರು. |
೨೫ |
ದಾವೀದನು ಸರ್ವೇಶ್ವರನ ಆಜ್ಞಾನುಸಾರ ಮಾಡಿ ಫಿಲಿಷ್ಟಿಯರನ್ನು ಗೆಬದಿಂದ ಗೆಜರಿನವರೆಗೂ ಹೊಡೆದು ಓಡಿಸಿದನು.
|
Kannada Bible (KNCL) 2016 |
No Data |