A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಸಮುವೇಲನು ೨ ೨೩ದಾವೀದನ ಕಡೇ ಮಾತುಗಳಿವು: ಜೆಸ್ಸೆಯನ ಮಗ ದಾವೀದನ ನುಡಿಗಳಿವು: ಉನ್ನತಸ್ಥಾನವನ್ನು ಅಲಂಕರಿಸಿದವನು, ಯಕೋಬ ದೇವರಿಂದ ಅಭಿಷಿಕ್ತನಾದವನು, ಇಸ್ರಯೇಲರ ವರಕವಿ ಆಡಿದ ವಚನಗಳಿವು:
ನನ್ನೊಳು ಉಸಿರಾಡಿತು ಸರ್ವೇಶ್ವರನಾತ್ಮ ನನ್ನ ಬಾಯೊಳಿತ್ತು ಆತನ ವಾಕ್ಯ.
ಇಸ್ರಯೇಲರ ದೇವನು, ಅವರಾಶಕ್ತನು, ಹೀಗೆಂದು ನನಗೆ ನುಡಿದನು
ದೇವರಲ್ಲಿ ಭಯಭಕ್ತಿಯುಳ್ಳ ರಾಜನು ನೀತಿಯಿಂದ ಪ್ರಜೆಗಳನಾಳುವಾತನು ಉದಯಕಾಲದ ಸೂರ್ಯನಿಗೆ ಸಮಾನನು ಏರುವನಾತ ಮೇಘರಹಿತ ಪ್ರಾತಃಕಾಲದೊಳು ತೇಜೋಮಯನಾಗಿ ಮೊಳೆಯಿಸುವನು ಪಚ್ಚೆಪಸಿರನು ಮಳೆ ತೋಯ್ದ ನೆಲದೊಳು ಹುಲುಸಾಗಿ.
ಹೌದು, ಸರ್ವೇಶ್ವರನ ಸನ್ನಿಧಿಯಲಿ ನನ್ನ ಮನೆತನ ಸುಸ್ಥಿರ ಆತನೊಂದಿಗೆ ನಾ ಮಾಡಿಲ್ಲವೆ ಚಿರವಾದ ಒಪ್ಪಂದ? ಅದೆಲ್ಲದರಲು ಸುವ್ಯವಸ್ಥಿತ, ಅದೆಂದಿಗೂ ನಿರ್ಭೀತ. ಆತನೇ ನನ್ನುದ್ಧಾರಕ್ಕೆ ಮೂಲಾಧಾರ ನನ್ನ ಆಶೆ ಆಕಾಂಕ್ಷೆಗಳ ಪೂರೈಸುವಾತ.
ದುರುಳರಾದರೊ ದೂರವೆಸೆದ ಕಾಡುಮುಳ್ಳುಗಳು ಮುಟ್ಟಲಾಗದು ಅವುಗಳನು ಬರಿಗೈಯಿಂದ,
ಬಳಸಬೇಕು ಕಬ್ಬಿಣದಾಯುಧವನು, ಮೊನೆ ಭರ್ಜಿಯನು, ಇಲ್ಲವೆ ಸುಡಬೇಕು ಇದ್ದಲ್ಲೇ ಬೆಂಕಿಯಿಂದ.
ದಾವೀದನ ರಣವೀರರ ಪಟ್ಟಿ: ತಹ್ಕೆಮೋನ್ಯನಾದ ಯೋಷೆಬಷ್ಬೆತನು ಸರದಾರರಲ್ಲಿ ಮುಖ್ಯಸ್ಥನು. ಎಚ್ನೀಯನಾದ ಅದೀನೋ ಎನ್ನಿಸಿಕೊಳ್ಳುವ ಇವನು ಒಮ್ಮೆಗೆ ಎಂಟುನೂರು ಮಂದಿಯನ್ನು ಕೊಂದನು.
ಎರಡನೆಯವನು ಅಹೋಹ್ಯನಾದ ದೋದೋ ಎಂಬವನ ಮಗ ಎಲ್ಲಾಜಾರನು. ಫಿಲಿಷ್ಟಿಯರು ಅಲ್ಲಿ ಯುದ್ಧಕ್ಕೆ ಕೂಡಿಕೊಂಡಾಗ ಅವರನ್ನು ಪ್ರತಿಭಟಿಸಲು ದಾವೀದನ ಜೊತೆಯಲ್ಲಿ ಹೋದ ಮೂರು ಮಂದಿ ಶೂರರಲ್ಲಿ ಇವನೂ ಒಬ್ಬನಾಗಿದ್ದನು.
೧೦
ಇಸ್ರಯೇಲರು ಹೋದನಂತರ ಇವನು ಅಲ್ಲೇ ನಿಂತು, ಕತ್ತಿ ಹಿಡಿದು ಕೈಸೋತು ಮರಗಟ್ಟಿಹೋಗುವ ತನಕ, ಫಿಲಿಷ್ಟಿಯರನ್ನು ಕೊಲ್ಲುತ್ತಲೇ ಇದ್ದನು. ಆ ದಿನ ಸರ್ವೇಶ್ವರ ಮಹಾಜಯವನ್ನುಂಟುಮಾಡಲು ಇಸ್ರಯೇಲರು ಸುಲಿದುಕೊಳ್ಳುವುದಕ್ಕಾಗಿಯೇ, ಹಿಂದಿರುಗಿದ್ದರು.
೧೧
ಮೂರನೆಯವನು ಹರಾರ್ಯನಾದ ಆಗೇಯನ ಮಗ ಶಮ್ಮ ಎಂಬವನು ಫಿಲಿಷ್ಟಿಯರು ದೊಡ್ಡ ಗುಂಪಾಗಿ ಒಂದು ಅಲಸಂದೆಯ ಹೊಲಕ್ಕೆ ಬಂದರು.
೧೨
ಇಸ್ರಯೇಲರು ಅವರ ಎದುರಿನಿಂದ ಓಡಿಹೋದಾಗ ಇವನು ಆ ಹೊಲದ ಮಧ್ಯದಲ್ಲೇ ನಿಂತುಕೊಂಡು ಫಿಲಿಷ್ಟಿಯರನ್ನು ಕೊಂದು ಹೊಲವನ್ನು ಕಾಪಾಡಿದನು. ಹೀಗೆ ಸರ್ವೇಶ್ವರ ಮಹಾಜಯವನ್ನುಂಟುಮಾಡಿದರು.
೧೩
ಮೂವತ್ತು ಮಂದಿ ಪ್ರಸಿದ್ಧ ಶೂರರಲ್ಲಿ ಮೂರು ಮಂದಿ, ದಾವೀದನು ಅದುಲ್ಲಾಮ್ ಗವಿಯಲ್ಲಿದ್ದಾಗ, ಸುಗ್ಗೀಕಾಲದಲ್ಲಿ ಅವನ ಬಳಿಗೆ ಬಂದರು. ಫಿಲಿಷ್ಟಿಯರು ದಂಡೆತ್ತಿಬಂದು ರೆಫಾಯಿಮ್ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡಾಗ
೧೪
ದಾವೀದನು ಆ ಅದುಲ್ಲಾಮ್ ದುರ್ಗದಲ್ಲಿದ್ದನು. ಫಿಲಿಷ್ಟಿಯರು ಬೆತ್ಲೆಹೇಮಿನಲ್ಲಿ ಕಾವಲುದಂಡನ್ನಿಟ್ಟಿದ್ದರು.
೧೫
ಅದೇ ಸಮಯದಲ್ಲಿ ದಾವೀದನು ಲವಲವಿಕೆಯಿಂದ, “ಬೆತ್ಲೆಹೇಮ್ ಊರಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಯಾರಾದರೂ ನನಗೆ ತಂದುಕೊಡುವುದಾದರೆ ಎಷ್ಟೋ ಒಳ್ಳೆಯದು,” ಎಂದನು
೧೬
ಕೂಡಲೆ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿಯರ ದಂಡಿನೊಳಗೆ ನುಗ್ಗಿಹೋಗಿ ಬೆತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತಂದುಕೊಟ್ಟರು. ಆದರೆ ಅವನು ಅದನ್ನು ಕುಡಿಯಲು ಒಪ್ಪಲಿಲ್ಲ.
೧೭
“ಸರ್ವೇಶ್ವರಾ, ಈ ನೀರನ್ನು ಕುಡಿಯುವುದು ನನಗೆ ದೂರವಾಗಿರಲಿ.ಇದು ಜೀವದಾಶೆ ತೊರೆದವರ ರಕ್ತ; ಇದನ್ನು ಕುಡಿಯುವುದೇ ಇಲ್ಲ,” ಎಂದು ಹೇಳಿ ಅದನ್ನು ಸರ್ವೇಶ್ವರನಿಗೆ ಸಮರ್ಪಣೆಯಾಗಿ ಹೊರಗೆ ಹೊಯ್ದುಬಿಟ್ಟನು. ಆ ಮೂರುಮಂದಿ ಪರಾಕ್ರಮಿಗಳ ಕೃತ್ಯಗಳಿವು.
೧೮
ಚೆರೂಯಳ ಮಗನೂ ಯೋವಾಬನ ತಮ್ಮನೂ ಆದ ಅಬೀಷೈಯು ಈ ಮೂರು ಮಂದಿಯಲ್ಲಿ ಮುಖ್ಯಸ್ಥನು. ಅವನು ತನ್ನ ಭರ್ಜಿಯನ್ನು ಬೀಸುತ್ತಾ ಹೋಗಿ ಮುನ್ನೂರು ಮಂದಿಯನ್ನು ಕೊಂದುದರಿಂದ ಈ ಮೂವರಲ್ಲಿ ಕೀರ್ತಿಗೊಂಡನು.
೧೯
ಇವರಲ್ಲಿ ಘನತೆ ಗೌರವ ಪಡೆದ ನಾಯಕ ಇವನೇ. ಆದರೂ ಇವನು ಮೊದಲಿನ ಮೂರು ಮಂದಿಗೆ ಸಮಾನನಾಗಿರಲಿಲ್ಲ.
೨೦
ಯೆಹೋಯಾದಾವನ ಮಗನೂ ಕಬ್ಜಯೇಲಿನ ಪರಾಕ್ರಮಶಾಲಿಯೂ ಆದ ಬೆನಾಯನು ಇನ್ನೊಬ್ಬನು. ಇವನು ಅನೇಕ ಶೂರಕೃತ್ಯಗಳನ್ನು ನಡೆಸಿದ್ದನು. ಉದಾಹರಣೆಗೆ: ಒಮ್ಮೆ ಮೋವಾಬ್ಯನಾದ ಅರೀಯೇಲನ ಇಬ್ಬರು ಮಕ್ಕಳನ್ನು ಕೊಂದನು. ಇನ್ನೊಬ್ಬ ಹಿಮಕಾಲದಲ್ಲಿ ಸಿಂಹವೊಂದು ಗುಂಡಿಯಲ್ಲಿ ಬಿದ್ದಿತ್ತು. ಇವನು ಆ ಗುಂಡಿಗೆ ಇಳಿದುಹೋಗಿ ಅದನ್ನು ಕೊಂದನು.
೨೧
ಮತ್ತೊಮ್ಮೆ ಬಲಿಷ್ಠನಾದ ಒಬ್ಬ ಈಜಿಪ್ಟಿನವನನ್ನು ಕೊಂದನು. ಆ ಈಜಿಪ್ಟಿನವನ ಕೈಯಲ್ಲಿ ಒಂದು ಭರ್ಜಿಯಿತ್ತು. ಇವನು ಕೈಯಲ್ಲಿ ಒಂದು ಕೋಲನ್ನು ಮಾತ್ರ ಹಿಡಿದುಕೊಂಡು ಹೋಗಿ ಅವನ ಕೈಯಲ್ಲಿದ್ದ ಭರ್ಜಿಯನ್ನು ಕಿತ್ತುಕೊಂಡು ಅದರಿಂದ ಅವನನ್ನೇ ಕೊಂದನು.
೨೨
ಈ ಪರಾಕ್ರಮ ಕೃತ್ಯದಿಂದ ಯೆಹೋಯಾದಾವನ ಮಗನಾದ ಬೆನಾಯನು ಈ ಮೂವರಲ್ಲಿ ಹೆಸರುಗೊಂಡನು.
೨೩
ಮೂವತ್ತು ಮಂದಿಯಲ್ಲಿ ಇವನು ವಿಶೇಷ ಕೀರ್ತಿಯನ್ನು ಹೊಂದಿದ್ದರೂ ಮೊದಲಿನ ಮೂವರಿಗೆ ಸಮಾನನಾಗಿರಲಿಲ್ಲ. ದಾವೀದನು ಇವನನ್ನು ತನ್ನ ಕಾವಲುದಂಡಿನ ಮುಖ್ಯಸ್ಥನನ್ನಾಗಿ ನೇಮಿಸಿದ್ದನು.
೨೪
ಆ ಮೂವತ್ತು ಮಂದಿ ರಣವೀರರ ಪಟ್ಟಿ ಇದು: ಯೋವಾಬನ ತಮ್ಮನಾದ ಅಸಾಹೇಲನು, ಬೆತ್ಲೆಹೇಮಿನ ದೋದೋವಿನ ಮಗನಾದ ಎಲ್ಹಾನನು.
೨೫
ಹರೋದಿನವರಾದ ಶಮ್ಮ ಎಲೀಕರು, ಪೆಲೆಟಿನವನಾದ ಹೆಲೆಚ್, ತೆಕೋವದ ಇಕ್ಕೇಷನ ಮಗನಾದ ಈರಾ, ಅಣತೋತಿನವನಾದ ಅಬೀಯೆಜೆರ್,
೨೬
***
೨೭
ಹುಷಾ ಊರಿನವನಾದ ಮೆಬುನ್ನೈ,
೨೮
ಅಹೋಹಿನವನಾದ ಚಲ್ಮೋನ್, ನೆಟೋಫದವನಾದ ಮಹರೈ,
೨೯
ನೆಟೋಪದವನಾದ ಬಾಣನ ಮಗ ಹೇಲೆಬ್, ಬೆನ್ಯಾಮೀನ್ ನಾಡಿನ ಗಿಬೆಯ ಊರಿನ ರೀಬೈ ಎಂಬವನ ಮಗ ಇತ್ತೈ, ಪಿರಾತೋನ್ಯನಾದ ಬೆನಾಯ,
೩೦
ನಹಲೇಗಾಷಿನವನಾದ ಹಿದ್ದೈ,
೩೧
ಅರಾಬಾ ತಗ್ಗಿನವನಾದ ಅಬೀಅಲ್ಬೋನ್,
೩೨
ಬಹುರಿಮ್ಯನಾದ ಅಜ್ಮಾವೇತ್, ಶಾಲ್ಬೋನ್ಯನಾದ ಎಲೆಯಖ್ಬಾ ಯಾಷೇನನ ಮಕ್ಕಳು, ಯೋನಾತಾನನು,
೩೩
ಹರಾರ್ಯನಾದ ಶಮ್ಮ, ಹರಾರ್ಯನಾದ ಶಾರಾರನ ಮಗ ಅಹೀಯಾಮ್,
೩೪
ಮಾಕಾ ಊರಿನ ಅಹಸ್ಬೈ ಎಂಬುವನ ಮಗ ಎಲೀಫೆಲೆಟ್, ಗಿಲೋವಿನ ಅಹೀತೋಫೆಲ್ ಎಂಬವನ ಮಗ ಎಲೀಯಾಮ್,
೩೫
ಕರ್ಮೆಲ್ಯನಾದ ಹೆಚ್ರೋ, ಅರ್ಬೀಯನಾದ ಪಾರೈ,
೩೬
ಚೋಬ ಊರಿನ ನಾತಾನ್ ಎಂಬವನ ಮಗ ಇಗಾಲ್, ಗಾದ್ಯನಾದ ಬಾನೀ,
೩೭
ಅಮ್ಮೋನಿಯನಾದ ಚೆಲೆಕ್, ಬೇರೋತ್ಯನೂ ಚೆರೂಯಳ ಮಗ ಯೋವಾಬನ ಆಯುಧವಾಹಕನೂ ಆಗಿದ್ದ ನಹರೈ,
೩೮
ಇತ್ರೀಯರಾದ ಈರಾ ಗಾರೇಬರು, ಹಿತ್ತಿಯನಾದ ಊರೀಯ,
೩೯
ಹೀಗೆ ಒಟ್ಟಿಗೆ ಮೂವತ್ತೇಳು ಮಂದಿ ರಣಧೀರರಿದ್ದರು.