A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಸಮುವೇಲನು ೨ ೧೧ರಾಜರು ಸಾಮಾನ್ಯವಾಗಿ ಯುದ್ಧಕ್ಕೆ ಹೊರಡುವ ವಸಂತಕಾಲ ಅದು. ದಾವೀದನು ಯೋವಾಬನನ್ನು, ತನ್ನ ಸೇವಕರನ್ನು ಹಾಗು ಎಲ್ಲ ಇಸ್ರಯೇಲರನ್ನು ಯುದ್ಧಕ್ಕೆ ಕಳುಹಿಸಿದನು. ಇವರು ಹೋಗಿ ಅಮ್ಮೋನಿಯರ ಪ್ರಾಂತ್ಯಗಳನ್ನು ಹಾಳುಮಾಡಿ ರಬ್ಬಕ್ಕೆ ಮುತ್ತಿಗೆ ಹಾಕಿದರು. ದಾವೀದನು ಜೆರುಸಲೇಮಿನಲ್ಲೇ ಇದ್ದನು.
ಒಂದು ದಿನ ಸಂಜೆ ಹೊತ್ತಿನಲ್ಲಿ ದಾವೀದನು ಮಂಚದಿಂದೆದ್ದು ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದನು. ಆಗ ಅಲ್ಲಿಂದ ಬಹು ಸುಂದರಿಯಾದ ಒಬ್ಬ ಸ್ತ್ರೀ ಸ್ನಾನಮಾಡುವುದನ್ನು ಕಂಡನು.
ಕೂಡಲೆ ದಾವೀದನು ಒಬ್ಬನನ್ನು ಕರೆದು ಆ ಸ್ತ್ರೀ ಯಾರೆಂದು ಕೇಳಿದನು. ಅವನು, “ಆಕೆ ಎಲೀಯಾಮನ ಮಗಳೂ ಹಿತ್ತಿಯನಾದ ಊರೀಯನ ಹೆಂಡತಿಯೂ ಆದ ಬತ್ಷೆಬೆ,” ಎಂದು ಉತ್ತರಕೊಟ್ಟನು.
ಆಕೆ ಆಗ ತಾನೆ ಋತುಸ್ನಾನ ಮಾಡಿಕೊಂಡಿದ್ದಳು. ಆಕೆಯನ್ನು ಕರೆದುತರುವಂತೆ ದಾವೀದನು ದೂತರನ್ನು ಕಳುಹಿಸಿದನು. ಆಕೆ ಬಂದಳು. ದಾವೀದನು ಆಕೆಯನ್ನು ಕೂಡಿದನು. ಅನಂತರ ಆಕೆ ತನ್ನ ಮನೆಗೆ ಹೋದಳು.
ಮುಂದೆ, ತಾನು ಗರ್ಭಧರಿಸಿದ್ದು ಗೊತ್ತಾದಾಗ ಆಕೆ ದಾವೀದನಿಗೆ ಸಮಾಚಾರ ಕಳುಹಿಸಿದಳು.
ಒಡನೆ ದಾವೀದನು ದೂತರ ಮುಖಾಂತರ ಯೋವಾಬನಿಗೆ, “ಹಿತ್ತಿಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು,” ಎಂದು ಆಜ್ಞಾಪಿಸಿದನು. ಅವನು ಅಂತೆಯೇ ಮಾಡಿದನು.
ಊರೀಯನು ಬಂದಾಗ ದಾವೀದನು, “ಯೋವಾಬನೂ ಸೈನ್ಯದವರೂ ಹೇಗಿರುತ್ತಾರೆ? ಯುದ್ಧವು ಹೇಗೆ ನಡೆಯುತ್ತಿದೆ?” ಎಂದು ವಿಚಾರಿಸಿದನು.
ಅನಂತರ ಅವನಿಗೆ, “ನೀನು ಮನೆಗೆ ಹೋಗಿ ಕೈಕಾಲು ತೊಳೆದುಕೋ,” ಎಂದು ಹೇಳಿದನು. ಊರೀಯನು ಅರಮನೆಯಿಂದ ಹೊರಟ ಕೂಡಲೆ ಅವನ ಹಿಂದೆಯೇ ಅರಸನ ಭೋಜನ ಪದಾರ್ಥಗಳೂ ಹೋದವು.
ಆದರೆ ಊರೀಯನು ತನ್ನ ಮನೆಗೆ ಹೋಗದೆ ಅರಸನ ಸೇವಕರೊಡನೆ ಅರಮನೆಯ ಬಾಗಿಲಲ್ಲೇ ಮಲಗಿಕೊಂಡನು.
೧೦
ಊರೀಯನು ತನ್ನ ಮನೆಗೆ ಹೋಗಲಿಲ್ಲ ಎಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಆಗ ದಾವೀದನು ಊರೀಯನಿಗೆ, “ನೀನು ದೀರ್ಘಪ್ರಯಾಣಮಾಡಿ ಬಂದಿರುವೆಯಲ್ಲವೆ? ಏಕೆ ಮನೆಗೆ ಹೋಗಲಿಲ್ಲ?” ಎಂದನು.
೧೧
ಅದಕ್ಕೆ ಊರೀಯನು, “ಒಡಂಬಡಿಕೆಯ ಮಂಜೂಷ, ಇಸ್ರಯೇಲರು ಹಾಗು ಯೆಹೂದ್ಯರು ಗುಡಾರಗಳಲ್ಲೇ ವಾಸವಾಗಿದ್ದಾರೆ. ನನ್ನ ಒಡೆಯನಾದ ಯೋವಾಬನೂ ಅವನ ಸೇವಕರೂ ಬಯಲಿನಲ್ಲೇ ಪಾಳೆಯಮಾಡಿಕೊಂಡಿದ್ದಾರೆ. ಹೀಗಿರುವಲ್ಲಿ, ನಾನು ನನ್ನ ಮನೆಗೆ ಹೋಗಿ ಉಂಡು, ಕುಡಿದು, ಹೆಂಡತಿಯೊಡನೆ ಮಲಗಿಕೊಳ್ಳುವುದು ಹೇಗೆ? ನಿಮ್ಮಾಣೆ, ನಿಮ್ಮ ಜೀವದ ಆಣೆ, ನಾನು ಇಂಥದನ್ನು ಎಂದಿಗೂ ಮಾಡಲಾರೆ,” ಎಂದು ಉತ್ತರಕೊಟ್ಟನು.
೧೨
ಆಗ ದಾವೀದನು, “ಹಾಗಾದರೆ ನೀನು ಈ ಹೊತ್ತು ಇಲ್ಲೇ ಇರು; ನಾಳೆ ನಿನ್ನನ್ನು ಕಳುಹಿಸುತ್ತೇನೆ,” ಎಂದು ಆಜ್ಞಾಪಿಸಿದನು. ಅಂತೆಯೇ ಊರೀಯನು ಆ ದಿನ ಜೆರುಸಲೇಮಿನಲ್ಲೇ ಇದ್ದನು.
೧೩
ಮರುದಿನ ದಾವೀದನು ಅವನನ್ನು ಅನ್ನಪಾನ ತೆಗೆದುಕೊಳ್ಳಬೇಕೆಂದು ತನ್ನ ಮನೆಗೆ ಕರೆದುಕೊಂಡು ಹೋಗಿ ಕುಡಿಸಿ ಮತ್ತನನ್ನಾಗಿ ಮಾಡಿದನು. ಆದರೆ ಆ ರಾತ್ರಿಯೂ ಅವನು ಹೋಗಿ ತನ್ನ ಯಜಮಾನನ ಸೇವಕರ ಹತ್ತಿರ ಹಾಸಿಗೆ ಹಾಸಿ ಮಲಗಿಕೊಂಡನೇ ಹೊರತು ತನ್ನ ಮನೆಗೆ ಹೋಗಲಿಲ್ಲ.
೧೪
ಮರುದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದು ಅದನ್ನು ಊರೀಯನ ಕೈಯಲ್ಲಿ ಕೊಟ್ಟುಕಳುಹಿಸಿದನು.
೧೫
ಅದರಲ್ಲಿ ಹೀಗೆ ಬರೆಯಲಾಗಿತ್ತು: “ಊರೀಯನು ಗಾಯಗೊಂಡು ಸಾಯುವಂತೆ ಅವನನ್ನು ಘೋರಯುದ್ಧ ನಡೆಯುತ್ತಿರುವ ಕಡೆ, ಮುಂಭಾಗದಲ್ಲೇ ನಿಲ್ಲಿಸಿ, ನೀವು ಹಿಂದಕ್ಕೆ ಸರಿದುಕೊಳ್ಳಿ.”
೧೬
ಯೋವಾಬನು ಪಟ್ಟಣಕ್ಕೆ ಮುತ್ತಿಗೆ ಹಾಕುವಾಗ ಶತ್ರುಸೈನಿಕರು ಎಲ್ಲಿ ಪ್ರಬಲರಾಗಿರುತ್ತಾರೆಂದು ಗೊತ್ತುಮಾಡಿಕೊಂಡು ಊರೀಯನನ್ನು ಅಲ್ಲಿಗೆ ಕಳುಹಿಸಿದನು.
೧೭
ಆ ಊರಿನ ಜನರು ಹೊರಗೆ ಬಂದು ಯೋವಾಬನ ಸೈನ್ಯದೊಡನೆ ಹೋರಾಡಿದರು. ದಾವೀದನ ಸೇವಕರಲ್ಲಿ ಕೆಲವರು ಸತ್ತರು; ಹಿತ್ತಿಯನಾದ ಊರೀಯನೂ ಮಡಿದನು.
೧೮
ಅನಂತರ ಯೋವಾಬನು ಒಬ್ಬ ದೂತನನ್ನು ಕರೆದು, “ನೀನು ಹೋಗಿ ದಾವೀದನಿಗೆ ಯುದ್ಧದ ವರದಿಯನ್ನು ಸಲ್ಲಿಸು.
೧೯
ಯುದ್ಧ ವಿವರವನ್ನು ಹೇಳಿ ಮುಗಿಸಿದನಂತರ
೨೦
ಅರಸರು ಸಿಟ್ಟುಗೊಂಡು ನಿನ್ನನ್ನು, ‘ನೀವು ಯುದ್ಧಮಾಡುವುದಕ್ಕಾಗಿ ಪಟ್ಟಣದ ತೀರ ಸಮೀಪಕ್ಕೆ ಹೋದದ್ದೇಕೆ? ಶತ್ರುಗಳು ಊರುಗೋಡೆಯ ಮೇಲಿನಿಂದ ಏನನ್ನಾದರೂ ಬಿಸಾಡಬಹುದಿತ್ತಲ್ಲವೇ?
೨೧
ಯೆರುಬ್ಬೆಷೆತನ ಮಗನಾದ ಅಬೀಮೆಲೆಕನನ್ನು ಕೊಂದವರಾರೆಂದು ನಿಮಗೆ ಗೊತ್ತಿಲ್ಲವೇ? ತೇಬೇಚಿನಲ್ಲಿ ಒಬ್ಬ ಹೆಂಗಸು ಗೋಡೆಯ ಮೇಲಿನಿಂದ ಒಂದು ಬೀಸುವ ಕಲ್ಲನ್ನು ಅವನ ಮೇಲೆ ಎತ್ತಿಹಾಕಿ ಅವನನ್ನು ಕೊಂದಳಲ್ಲವೇ? ಹೀಗಿರುವುದರಿಂದ ನೀವು ಗೋಡೆಯ ಸಮೀಪಕ್ಕೆ ಹೋದದ್ದೇಕೆ?’ ಎಂದು ಕೇಳಿದರೆ ನೀನು, ‘ಹಿತ್ತಿಯನಾದ ನಿಮ್ಮ ಸೇವಕ ಊರೀಯನೂ ಮೃತನಾದನೆಂದು ಹೇಳು,’ ಎಂಬುದಾಗಿ ಆಜ್ಞಾಪಿಸಿ ಕಳುಹಿಸಿದನು.
೨೨
ಆ ದೂತನು ಹೋಗಿ ಯೋವಾಬನ ಆಜ್ಞೆಯಂತೆಯೇ ದಾವೀದನಿಗೆ ಹೀಗೆ ತಿಳಿಸಿದನು: “ಆ ಊರಿನವರು ಮಹಾಬಲದೊಡನೆ ಯುದ್ಧಮಾಡುವುದಕ್ಕೆ ಬೈಲಿಗೆ ಬಂದರು. ನಾವು ಅವರನ್ನು ಊರುಬಾಗಿಲಿನವರೆಗೂ ಹಿಂದಟ್ಟಿದೆವು.
೨೩
***
೨೪
ಆಗ ಬಿಲ್ಲುಗಾರರು ಗೋಡೆಯ ಮೇಲಿನಿಂದ ನಿಮ್ಮ ಸೇವಕರ ಮೇಲೆ ಬಾಣಗಳನ್ನು ಎಸೆದುದರಿಂದ ಅವರಲ್ಲಿ ಕೆಲವರು ಸತ್ತರು. ಹಿತ್ತಿಯನಾದ ನಿಮ್ಮ ಸೇವಕ ಊರೀಯನೂ ಮಡಿದನು.”
೨೫
ಆಗ ದಾವೀದನು ಆ ದೂತನಿಗೆ, “ನೀನು ಹೋಗಿ ಯೋವಾಬನಿಗೆ, ‘ವ್ಯಸನಪಡಬೇಕಾಗಿಲ್ಲ; ಕತ್ತಿ ಈ ದಿನ ಒಬ್ಬನನ್ನು ನುಂಗಿದರೆ ನಾಳೆ ಇನ್ನೊಬ್ಬನನ್ನು ನುಂಗುತ್ತದೆ. ಮತ್ತಷ್ಟು ಶೂರತನದಿಂದ ಯುದ್ಧಮಾಡಿ ಪಟ್ಟಣವನ್ನು ಕೆಡವಿಬಿಡಿ, ಎಂಬುದಾಗಿ ಅರಸರು ಆಜ್ಞಾಪಿಸುತ್ತಾರೆ’ ಎಂದು ಹೇಳಿ ಅವನನ್ನು ಧೈರ್ಯಪಡಿಸು,” ಎಂದನು.
೨೬
ಊರೀಯನ ಮರಣವಾರ್ತೆಯನ್ನು ಅವನ ಹೆಂಡತಿ ಕೇಳಿ ಗಂಡನಿಗಾಗಿ ಅತ್ತು ಗೋಳಾಡಿದಳು.
೨೭
ದುಃಖಕಾಲ ತೀರಿದನಂತರ ದಾವೀದನು ಆಕೆಯನ್ನು ತನ್ನ ಮನೆಗೆ ಕರೆಯಿಸಿ ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು. ಆಕೆ ಅವನಿಂದ ಒಬ್ಬ ಮಗನನ್ನು ಹೆತ್ತಳು. ದಾವೀದನ ಈ ಕೃತ್ಯ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದಾಗಿತ್ತು.