English
A A A A A
×

ಕನ್ನಡ ಬೈಬಲ್ (KNCL) 2016

ಸಮುವೇಲನು ೨ ೧
ಸೌಲನು ಸತ್ತನಂತರ ಸಂಭವಿಸಿದ ಘಟನೆಗಳು: ದಾವೀದನು ಅಮಾಲೇಕ್ಯರನ್ನು ಸದೆಬಡಿದು ಬಂದು ಚಿಕ್ಲಗಿನಲ್ಲಿ ಎರಡು ದಿವಸ ತಂಗಿದ್ದನು.
ಮೂರನೆಯ ದಿನ ಸೌಲನ ಪಾಳೆಯದಿಂದ ಒಬ್ಬ ವ್ಯಕ್ತಿ ದಾವೀದನ ಬಳಿಗೆ ಬಂದು ನೆಲದ ಮಟ್ಟಿಗೂ ಬಾಗಿ ನಮಸ್ಕರಿಸಿದನು. ಅವನು ಸಂತಾಪದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ತಲೆಯ ಮೇಲೆ ಮಣ್ಣು ಹಾಕಿಕೊಂಡಿದ್ದನು.
ದಾವೀದನು ಅವನನ್ನು ನೋಡಿ, “ನೀನು ಎಲ್ಲಿಂದ ಬಂದೆ?” ಎಂದು ಕೇಳಿದನು. ಅವನು, “ನಾನು ಇಸ್ರಯೇಲರ ಪಾಳೆಯದಿಂದ ತಪ್ಪಿಸಿಕೊಂಡು ಬಂದೆ,” ಎಂದು ಉತ್ತರಕೊಟ್ಟನು.
ಆಗ ದಾವೀದನು, “ಏನಾಯಿತೆಂದು ತಿಳಿಸು,” ಎನ್ನಲು ಆ ವ್ಯಕ್ತಿ, “ಇಸ್ರಯೇಲರು ರಣರಂಗದಿಂದ ಓಡಿಹೋದರು; ಅನೇಕರು ಮಡಿದರು. ಸೌಲನೂ ಅವನ ಮಗ ಯೋನಾತಾನನೂ ಮರಣಹೊಂದಿದರು,” ಎಂದು ತಿಳಿಸಿದನು.
ದಾವೀದನು ಈ ವರ್ತಮಾನ ತಂದ ಯುವಕನಿಗೆ, “ಸೌಲನೂ ಅವನ ಮಗ ಯೋನಾತಾನನೂ ಸತ್ತಿರುವುದು ನಿನಗೆ ಹೇಗೆ ಗೊತ್ತಾಯಿತು?” ಎಂದು ಪ್ರಶ್ನಿಸಿದನು.
ಅವನು, “ನಾನು ಅಕಸ್ಮಾತ್ತಾಗಿ ಗಿಲ್ಬೋವ ಪರ್ವತಪ್ರದೇಶಕ್ಕೆ ಹೋದಾಗ ಸೌಲ ತಮ್ಮ ಭರ್ಜಿಯನ್ನೂರಿಕೊಂಡು ನಿಂತಿದ್ದರು. ರಥಿಕರೂ ರಾಹುತರೂ ಅವರನ್ನು ಹಿಂದಟ್ಟಿಬರುತ್ತಿರುವುದನ್ನೂ ಕಂಡೆ.
ಸೌಲ ಹಿಂದಿರುಗಿ ನನ್ನನ್ನು ಕರೆದರು.
ನಾನು, “ಇಗೋ ಬಂದೆ,” ಎಂದು ಹೇಳಿ ಹತ್ತಿರಕ್ಕೆ ಹೋದಾಗ ಅವರು, “ನೀನಾರು?” ಎಂದು ಕೇಳಿದ್ದಕ್ಕೆ, ‘ನಾನು ಒಬ್ಬ ಅಮಾಲೇಕ್ಯ’ ಎಂದು ಉತ್ತರಕೊಟ್ಟೆ.
ಆಗ ಅವರು, “ನೀನು ಮನಸ್ಸುಮಾಡಿ ಹತ್ತಿರ ಬಂದು ನನ್ನನ್ನು ಕೊಂದುಹಾಕು; ಏಕೆಂದರೆ, ನನ್ನಲ್ಲಿ ಇನ್ನೂ ಪೂರ್ಣಶಕ್ತಿಯಿದ್ದರೂ ಪ್ರಾಣಸಂಕಟಕ್ಕೆ ಸಿಕ್ಕಿಕೊಂಡಿದ್ದೇನೆ,” ಎಂದು ಹೇಳಿದರು.
೧೦
ಅವರು ಕೆಳಕ್ಕೆ ಬಿದ್ದುಬಿಟ್ಟರೆ ಬದುಕಲಾರರೆಂದು ನೆನೆಸಿ ನಾನು ಅವರನ್ನು ಸಮೀಪಿಸಿ ಕೊಂದುಹಾಕಿದೆ. ಅವರ ತಲೆಯ ಮೇಲಿನ ಕಿರೀಟವನ್ನೂ ತೋಳಿನಲ್ಲಿದ್ದ ಬಳೆಯನ್ನೂ ತೆಗೆದುಕೊಂಡು ನನ್ನ ಒಡೆಯರಾದ ತಮ್ಮ ಬಳಿಗೆ ತಂದಿದ್ದೇನೆ,” ಎಂದನು.
೧೧
ಸೌಲನು, ಅವನ ಮಗ ಯೋನಾತಾನನು ಹಾಗೂ ಸರ್ವೇಶ್ವರನ ಪ್ರಜೆಗಳಾದ ಇಸ್ರಯೇಲರು ಕತ್ತಿಯಿಂದ ಮೃತರಾದದ್ದಕ್ಕಾಗಿ
೧೨
ದಾವೀದನೂ ಅವನ ಜನರೂ ದುಃಖದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಗೋಳಾಡಿದರು. ಸಾಯಂಕಾಲದವರೆಗೆ ಉಪವಾಸಮಾಡಿದರು.
೧೩
ದಾವೀದನು ವರ್ತಮಾನ ತಂದ ಆ ಯುವಕನನ್ನು, “ನೀನೆಲ್ಲಿಯವನು?” ಎಂದು ಕೇಳಿದ್ದಕ್ಕೆ ಅವನು, “ನಾನು ಇಸ್ರಯೇಲರಲ್ಲಿ ಪ್ರವಾಸಿಯಾಗಿರುವ ಒಬ್ಬ ಅಮಾಲೇಕ್ಯನು,” ಎಂದು ಉತ್ತರಕೊಟ್ಟನು.
೧೪
ದಾವೀದನು, “ಕೈಯೆತ್ತಿ ಸರ್ವೇಶ್ವರನ ಅಭಿಷಿಕ್ತನನ್ನು ಕೊಲ್ಲುವುದಕ್ಕೆ ನೀನು ಹಿಂಜರಿಯಲಿಲ್ಲ ಏಕೆ?” ಎಂದು ಹೇಳಿ
೧೫
ತನ್ನ ಆಳುಗಳಲ್ಲಿ ಒಬ್ಬನನ್ನು ಕರೆದು, “ಇವನನ್ನು ಕೊಲ್ಲು,” ಎಂದು ಆಜ್ಞಾಪಿಸಿದನು. ಅವನು ಇವನನ್ನು ಹೊಡೆದು ಕೊಂದನು.
೧೬
ದಾವೀದನು, “ಈ ರಕ್ತಾಪರಾಧ ನಿನ್ನ ತಲೆಯ ಮೇಲೆಯೇ ಇರಲಿ; ‘ಸರ್ವೇಶ್ವರನ ಅಭಿಷಿಕ್ತನನ್ನು ಕೊಂದುಹಾಕಿದೆ’ ಎಂದು ನಿನ್ನ ಬಾಯೇ ನಿನಗೆ ವಿರೋಧವಾಗಿ ಸಾಕ್ಷಿಹೇಳಿತು,” ಎಂದನು.
೧೭
ದಾವೀದನು ಸೌಲ-ಯೋನಾತಾನರ ಮೇಲೆ ಒಂದು ಶೋಕಗೀತೆಯನ್ನು ರಚಿಸಿದನು.
೧೮
‘ಬಿಲ್ಲೆ’ ಎಂಬ ಈ ಗೀತೆಯನ್ನು ಯೆಹೂದ್ಯರಿಗೆ ಕಲಿಸಬೇಕೆಂದು ಆಜ್ಞಾಪಿಸಿದನು. ಇದರ ಉಲ್ಲೇಖ ‘ಯಾಷಾರ್’ ಎಂಬ ಗ್ರಂಥದಲ್ಲಿದೆ:
೧೯
ಮಣ್ಣುಪಾಲಾಗಿದೆ, ಓ ಇಸ್ರಯೇಲರೇ, ನಿಮ್ಮ ವೈಭವ ಆ ಗುಡ್ಡಗಳ ಮೇಲೆ ನೀವು ಮಡಿದದ್ದು ಹೇಗೆ, ಓ ಯುದ್ಧವೀರರೇ?
೨೦
ಸಾರಬೇಡಿ ಈ ಸುದ್ದಿಯನು ‘ಗತ್’ ಊರಿನಲಿ ಘೋಷಿಸಬೇಡಿ ಅಷ್ಕೆಲೋನಿನ ಬೀದಿಗಳಲಿ. ಏಕೆನೆ, ಉಲ್ಲಾಸಿಸಿಯಾರು ಆ ಫಿಲಿಷ್ಟಿಯ ಮಹಿಳೆಯರು; ಜಯಘೋಷ ಮಾಡಿಯಾರು ಸುನ್ನತಿಯಿಲ್ಲದವರಾ ಸ್ತ್ರೀಯರು!
೨೧
ಮಳೆಯಾಗಲಿ, ಮಂಜಾಗಲಿ ಬೀಳದಿರಲಿ ಆ ಗಿಲ್ಬೋವ ಗುಡ್ಡಗಳ ಮೇಲೆ ಅದರ ಮೇಲಿನ ಹೊಲಗಳು ಬೆಳೆಕೊಡದಿರಲಿ ನೈವೇದ್ಯಕೆ. ಏಕೆನೆ ಅಲ್ಲಿ ಬಿದ್ದಿವೆ ಯುದ್ಧವೀರರ ಕತ್ತಿಗುರಾಣಿ ಅಭಿಷಿಕ್ತನಲ್ಲದವನ ಗುರಾಣಿಯಂತೆ ಆ ಸೌಲನ ಗುರಾಣಿ!
೨೨
ಹಿಂದಿರುಗುತ್ತಿರಲಿಲ್ಲ ಸೌಲನಾಕತ್ತಿ ವ್ಯರ್ಥವಾಗಿ, ಬರುತ್ತಿರಲಿಲ್ಲ ಯೋನಾತಾನನಾ ಬಿಲ್ಲು ಬರಿದಾಗಿ, ಹತರಾದವರ ರಕುತವನು ಹೀರದೆ ಪರಾಕ್ರಮಿಗಳ ಕೊಬ್ಬನು ರುಚಿಸದೆ.
೨೩
ಸೌಮ್ಯರು, ಅತಿಪ್ರಿಯರು, ಆ ಸೌಲ-ಯೋನಾತಾನರು ಬಾಳಿನಲು, ಸಾವಿನಲು ಬಿಟ್ಟಗಲದವರು. ಹದ್ದಿಗಿಂತ ಅಧಿಕ ವೇಗ ಅವರದು ಸಿಂಹಕ್ಕಿಂತ ಹೆಚ್ಚಿನ ಶಕ್ತಿ ಅವರದು!
೨೪
ಸೌಲನಿಗಾಗಿ ಅತ್ತು ಪ್ರಲಾಪಿಸಿರಿ ಇಸ್ರಯೇಲಿನ ಮಹಿಳೆಯರೇ, ಉಲ್ಲಾಸಕರ ರಕ್ತಾಂಬರಗಳ ಉಡಿಸಿದವನು ಅವನೇ ಅಲ್ಲವೆ ನಿಮಗೆ? ಅವುಗಳ ಮೇಲೆ ಸುವರ್ಣಾಂಬರಗಳ ತೊಡಿಸಿದವನು ಆತನೇ ಅಲ್ಲವೆ ನಿಮಗೆ?
೨೫
ಯುದ್ಧವೀರರೇ, ಹೇಗೆ ಮಡಿದುಹೋದಿರಿ ರಣರಂಗದಲಿ? ಯೋನಾತಾನನು ಹತನಾಗಿ ಬಿದ್ದಿಹನಲ್ಲಾ ಬೆಟ್ಟಗುಡ್ಡದಲಿ!
೨೬
ಯೋನಾತಾನನೇ, ಸಹೋದರನೇ, ಮನೋಹರನೇ, ನಿನ್ನ ಮರಣ ತಂದಿದೆ ಅತೀವ ಸಂಕಟ ನನಗೆ, ನನ್ನ ಮೇಲೆ ನಿನಗಿದ್ದ ಪ್ರೀತಿ ಅದೆಷ್ಟು ಆಶ್ಚರ್ಯಕರ! ಸತಿಪ್ರೇಮಕ್ಕಿಂತಲೂ ಅದು ಅಮೋಘಕರ!
೨೭
ಅಯ್ಯೋ, ಆ ಪರಾಕ್ರಮಶಾಲಿಗಳು ಹೇಗೆ ಹತರಾದರು! ಯುದ್ಧಾಯುಧಗಳು ಹೇಗೆ ಹಾಳಾದವು!