English
A A A A A
×

ಕನ್ನಡ ಬೈಬಲ್ (KNCL) 2016

ಆದಿಕಾಂಡ ೫೦
ಆಗ ಜೋಸೆಫನು ತನ್ನ ತಂದೆಯ ಶವದ ಮೇಲೆ ಬಿದ್ದು, ಕಣ್ಣೀರು ಇಡುತ್ತಾ, ಅವರಿಗೆ ಮುದ್ದಿಟ್ಟನು.
ತರುವಾಯ ತನ್ನ ಸೇವಕರಲ್ಲಿ ಶವಲೇಪಕರಾದವರಿಗೆ, “ನನ್ನ ತಂದೆಯ ಶವವನ್ನು ಸುಗಂಧ ದ್ರವ್ಯಗಳಿಂದ ಲೇಪಿಸಿ ಸಿದ್ಧಪಡಿಸಿರಿ,” ಎಂದು ಅಪ್ಪಣೆಕೊಟ್ಟನು. ಅವರು ಹಾಗೆಯೇ ಮಾಡಿದರು.
ಪದ್ಧತಿಯ ಪ್ರಕಾರ ನಲವತ್ತು ದಿನಗಳು ಸುಗಂಧ ದ್ರವ್ಯಗಳನ್ನು ಲೇಪಿಸಬೇಕಾಗಿತ್ತು. ಅಷ್ಟು ದಿನಗಳವರೆಗೂ ಅವನಿಗೋಸ್ಕರ ಈಜಿಪ್ಟಿನವರಿಂದ ಶೋಕಾಚರಣೆ ಇತ್ತು.
ದುಃಖದ ದಿನಗಳು ಕಳೆದ ನಂತರ ಜೋಸೆಫನು ಫರೋಹನ ಪರಿವಾರದವರಿಗೆ, “ದಯವಿಟ್ಟು ನೀವು ಫರೋಹನ ಬಳಿಗೆ ಹೋಗಿ ಈ ವಿಷಯವನ್ನು ಮನಮುಟ್ಟುವಂತೆ ಮಾಡಿ:
ನನ್ನ ತಂದೆಯವರು ತಾವು ಕಾನಾನ್ ನಾಡಿನಲ್ಲಿ ಸಿದ್ಧಮಾಡಿಕೊಂಡಿರುವ ಸ್ಥಳದಲ್ಲಿಯೇ ತಮಗೆ ಸಮಾಧಿಮಾಡಬೇಕೆಂದು ಸಾಯುವುದಕ್ಕೆ ಮೊದಲೇ ನನ್ನಿಂದ ಪ್ರಮಾಣ ಮಾಡಿಸಿದರು. ಆದ್ದರಿಂದ ನಾನು ಹೋಗಿ ತಂದೆಯನ್ನು ಸಮಾಧಿಮಾಡಿ ಬರುವುದಕ್ಕೆ ಅಪ್ಪಣೆಯಾಗಬೇಕೆಂದು ವಿನಂತಿಸುತ್ತಿದ್ದೇನೆ,” ಎಂದನು.
ಫರೋಹನು ಈ ಸಂಗತಿಯನ್ನು ಕೇಳಿ ಜೋಸೆಫನಿಗೆ, “ನಿನ್ನ ತಂದೆ ಪ್ರಮಾಣ ಮಾಡಿಸಿದ ಮೇರೆಗೆ ನೀನು ಹೋಗಿ ಅವನಿಗೆ ಸಮಾಧಿಮಾಡಿ ಬರಬಹುದು,” ಎಂದು ಅಪ್ಪಣೆಕೊಟ್ಟನು.
ಜೋಸೆಫನು ತಂದೆಯನ್ನು ಸಮಾಧಿಮಾಡಲು ಹೊರಟುಹೋದಾಗ, ಅವನ ಜೊತೆಯಲ್ಲಿ ಫರೋಹನ ಪರಿವಾರದವರೆಲ್ಲರು, ಅರಮನೆಯ ಮುಖಂಡರು, ಈಜಿಪ್ಟಿನ ಮುಖ್ಯಸ್ಥರೆಲ್ಲರು,
ಜೋಸೆಫನ ಮನೆಯವರೆಲ್ಲರು, ಅಣ್ಣತಮ್ಮಂದಿರು, ತಂದೆಯ ಮನೆಯವರೆಲ್ಲರು ಹೋದರು. ತಮ್ಮ ಮಡದಿಮಕ್ಕಳನ್ನೂ ಕುರಿದನಗಳನ್ನೂ ಮಾತ್ರ ಗೋಷೆನ್ ಪ್ರಾಂತ್ಯದಲ್ಲಿ ಬಿಟ್ಟುಹೋದರು.
ಅವನ ಸಂಗಡ ರಥಗಳೂ ಕುದುರೆಸವಾರರೂ ಸಹ ಇದ್ದರು. ಹೀಗೆ ದೊಡ್ಡ ಜನಸಮೂಹವೇ ಅವನೊಂದಿಗೆ ಹೋಯಿತು.
೧೦
ಅವರು ಜೋರ್ಡನ್ ನದಿಯಿಂದಾಚೆ ಇರುವ ಆಟಾದ್ ಎಂಬ ಕಣಕ್ಕೆ ಬಂದು ಅಲ್ಲಿ ಅತ್ಯಧಿಕವಾಗಿ ಗೋಳಾಡಿದರು; ಜೋಸೆಫನು ತನ್ನ ತಂದೆಗೋಸ್ಕರ ಏಳು ದಿನದ ಶೋಕಾಚರಣೆಯನ್ನು ಏರ್ಪಡಿಸಿದನು.
೧೧
ಆ ನಾಡಿನ ಜನರಾದ ಕಾನಾನ್ಯರು ಆಟಾದ್ ಕಣದಲ್ಲಿ ನಡೆದ ಶೋಕಾಚರಣೆಯನ್ನು ನೋಡಿ, “ಈಜಿಪ್ಟಿನವರಿಗೆ ಒದಗಿ ಇರುವ ಈ ಶೋಕ ಬಹು ವಿಶೇಷವಾದುದು!” ಎಂದರು. ಈ ಕಾರಣ ಜೋರ್ಡನ್ ನದಿಯಾಚೆ ಇರುವ ಆ ಸ್ಥಳಕ್ಕೆ ‘ಆಬೇಲ್ ಮಿಚ್ರಯೀಮ್’ ಎಂದು ಹೆಸರಾಯಿತು.
೧೨
ಯಕೋಬನ ಮಕ್ಕಳು ತಂದೆಯ ಅಪ್ಪಣೆಯಂತೆ
೧೩
ಅವನ ಶವವನ್ನು ಕಾನಾನ್ ನಾಡಿಗೆ ಹೊತ್ತುಕೊಂಡು ಹೋಗಿ ಮಕ್ಪೇಲ ಎಂಬ ಬಯಲಿನಲ್ಲಿರುವ ಗವಿಯೊಳಗೆ ಸಮಾಧಿಮಾಡಿದರು. ಅಬ್ರಹಾಮನು ಹಿತ್ತಿಯನಾದ ಎಫ್ರೋನನಿಂದ ಮಮ್ರೆಗೆದುರಿನಲ್ಲಿರುವ ಆ ಗವಿಯನ್ನು ಸುತ್ತಲು ಇರುವ ಭೂಮಿ ಸಮೇತ, ಸ್ವಂತ ಸ್ಮಶಾನಭೂಮಿಗಾಗಿ ಕೊಂಡುಕೊಂಡಿದ್ದನು.
೧೪
ತಂದೆಯನ್ನು ಸಮಾಧಿಮಾಡಿದ ಮೇಲೆ ಜೋಸೆಫನೂ ಅವನ ಅಣ್ಣತಮ್ಮಂದಿರೂ ಆ ಶವಸಂಸ್ಕಾರಕ್ಕಾಗಿ ಅವನ ಜೊತೆಯಲ್ಲಿ ಹೋಗಿದ್ದ ಎಲ್ಲರೂ ಈಜಿಪ್ಟಿಗೆ ಹಿಂದಿರುಗಿದರು.
೧೫
ತಂದೆ ಸತ್ತ ಬಳಿಕ ಜೋಸೆಫನ ಅಣ್ಣತಮ್ಮಂದಿರು, “ಜೋಸೆಫನು ಬಹುಶಃ ನಮ್ಮನ್ನು ದ್ವೇಷಿಸಿಯಾನು! ನಾವು ಅವನಿಗೆ ಮಾಡಿದ ಎಲ್ಲ ಹಾನಿಗೆ ಪ್ರತಿಯಾಗಿ ಶಿಕ್ಷಿಸಿಯಾನು,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
೧೬
ಆದುದರಿಂದ ಜೋಸೆಫನಿಗೆ ಹೀಗೆಂದು ಹೇಳಿಕಳಿಸಿದರು: “ನಿನ್ನ ತಂದೆ ಸಾಯುವುದಕ್ಕೆ ಮುಂಚೆ ನಮಗೆ ಅಪ್ಪಣೆಮಾಡಿದ್ದೇನೆಂದರೆ -
೧೭
‘ನೀವು ಜೋಸೆಫನಿಗೆ - ನಿನ್ನ ಅಣ್ಣಂದಿರಾದ ನಾವು ನಿನಗೆ ಹಾನಿಮಾಡಿದ್ದೇನೋ ನಿಜ; ಆದರೂ ನಮ್ಮ ಅಪರಾಧವನ್ನು, ಪಾಪವನ್ನು ಕ್ಷಮಿಸು - ಎಂದು ಕೇಳಿಕೊಳ್ಳಬೇಕು, ಅವರು ಹೀಗೆ ವಿಧಿಸಿದ್ದರಿಂದ ನಾವು ಮಾಡಿದ ಅಪರಾಧವನ್ನು ಈಗ ನೀನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತಿದ್ದೇವೆ.” ಈ ಮಾತುಗಳನ್ನು ಕೇಳಿ ಜೋಸೆಫನು ಕಣ್ಣೀರು ಸುರಿಸಿದನು.
೧೮
ಇದೂ ಅಲ್ಲದೆ, ಅಣ್ಣಂದಿರು ತಾವೇ ಬಂದು ಅವನಿಗೆ ಅಡ್ಡಬಿದ್ದರು. “ಇಗೋ, ನಾವು ನಿನಗೆ ಗುಲಾಮರು,” ಎಂದು ಹೇಳಿದರು.
೧೯
ಆದರೆ ಜೋಸೆಪನು ಅವರಿಗೆ, “ಹೆದರಬೇಡಿ; ನಾನು ದೇವರ ಸ್ಥಾನದಲ್ಲಿ ಇಲ್ಲ;
೨೦
ನೀವೇನೋ ನನಗೆ ಹಾನಿಮಾಡಬೇಕೆಂದು ಎಣಿಸಿದರು. ಆದರೆ ದೇವರು ಒಳಿತಾಗಬೇಕೆಂದು ಸಂಕಲ್ಪಿಸಿದರು; ಇದರಿಂದ ಅನೇಕ ಜನರ ಪ್ರಾಣ ಉಳಿಯುವಂತೆ ಮಾಡಿದರು. ಇಂದಿಗೂ ಈ ಕಾರ್ಯ ನಡೆಯುತ್ತಿದೆ.
೨೧
ಆದುದರಿಂದ ನೀವು ಸ್ವಲ್ಪವೂ ಸಂಕೋಚಪಡಬೇಕಾಗಿಲ್ಲ. ನಾನು ನಿಮ್ಮನ್ನೂ ನಿಮಗೆ ಸೇರಿದ ಎಲ್ಲರನ್ನೂ ಪೋಷಿಸುತ್ತೇನೆ,” ಎಂದು ಹೇಳಿ ಅವರನ್ನು ಸಂತೈಸಿ, ಅವರ ಸಂಗಡ ಪ್ರೀತಿಯಿಂದ ಮಾತಾಡಿದನು.
೨೨
ಜೋಸೆಫನೂ ಅವನ ತಂದೆಯ ಕುಟುಂಬದವರೂ ಈಜಿಪ್ಟಿನಲ್ಲಿ ವಾಸಮಾಡುತ್ತಾ ಬಂದರು. ಜೋಸೆಫನು ನೂರಹತ್ತು ವರ್ಷ ಬದುಕಿದ್ದನು;
೨೩
ಎಫ್ರಯಿಮನ ಮಕ್ಕಳ ಮೊಮ್ಮಕ್ಕಳನ್ನೂ ನೋಡಿದನು. ಮನಸ್ಸೆಯ ಮಗನಾದ ಮಾಕೀರನಿಗೂ ಮಕ್ಕಳು ಹುಟ್ಟಿದಾಗ ಜೋಸೆಫನು ಅವರನ್ನೂ ತನ್ನ ಮಡಲಿಗೆ ಬರಮಾಡಿಕೊಂಡನು.
೨೪
ಜೋಸೆಫನು ತನ್ನ ಅಣ್ಣತಮ್ಮಂದಿರಿಗೆ, “ನನ್ನ ಮರಣಕಾಲವು ಸಮೀಪಿಸಿತು. ಆದರೆ ದೇವರು ನಿಶ್ಚಯವಾಗಿ ನಿಮ್ಮನ್ನು ಕಾಪಾಡಲು ಬರುವರು; ತಾವು ಅಬ್ರಹಾಮ್, ಇಸಾಕ್, ಯಕೋಬರಿಗೆ ಕೊಡುವುದಾಗಿ ವಾಗ್ದಾನಮಾಡಿರುವ ನಾಡಿಗೆ ನೀವು ಹೋಗಿ ಸೇರುವಂತೆ ಮಾಡುವರು,” ಎಂದು ಹೇಳಿದನು.
೨೫
ಇದೂ ಅಲ್ಲದೆ ಜೋಸೆಫನು ಆ ಇಸ್ರಯೇಲನ ಮಕ್ಕಳಿಗೆ, “ದೇವರು ನಿಸ್ಸಂದೇಹವಾಗಿ ನಿಮ್ಮನ್ನು ಕಾಪಾಡಲು ಬರುವರು; ಆಗ ನೀವು ನನ್ನ ಶವವನ್ನು ನಿಮ್ಮ ಸಂಗಡ ಹೊತ್ತುಕೊಂಡು ಹೋಗಬೇಕು,” ಎಂದು ಹೇಳಿ, “ಹಾಗೆಯೇ ಮಾಡುತ್ತೇನೆ,” ಎಂಬುದಾಗಿ ಅವರಿಂದ ಪ್ರಮಾಣ ಮಾಡಿಸಿದನು.
೨೬
ಜೋಸೆಫನು ಈಜಿಪ್ಟ್ ದೇಶದಲ್ಲಿ ತನ್ನ ನೂರಹತ್ತನೇ ವರ್ಷದಲ್ಲಿ ಸತ್ತನು. ಅವನ ಶವಕ್ಕೆ ಸುಗಂಧದ್ರವ್ಯಗಳನ್ನು ಲೇಪಿಸಿ, ಅದನ್ನು ಒಂದು ಪೆಟ್ಟಿಗೆಯಲ್ಲಿ ಇರಿಸಿದರು.