English
A A A A A
×

ಕನ್ನಡ ಬೈಬಲ್ (KNCL) 2016

ಆದಿಕಾಂಡ ೪೯
ಯಕೋಬನು ತನ್ನ ಮಕ್ಕಳನ್ನು ಕರೆಯಿಸಿ ಇಂತೆಂದನು: ಕೂಡಿಬನ್ನಿ ನೀವೆಲ್ಲರು, ನುಡಿವೆನು ನಿಮಗೆ ಮುಂದೆ ಸಂಭವಿಸುವುದನ್ನು;
ಯಕೋಬನ ಮಕ್ಕಳೇ, ಕೂಡಿಬಂದು ಕೇಳಿ ನೀವೆಲ್ಲರು ಆಲಿಸಿ ನಿಮ್ಮ ತಂದೆ ಇಸ್ರಯೇಲನ ಮಾತನ್ನು:
ರೂಬೇನನೇ, ನೀನೆನ್ನ ಜೇಷ್ಠಪುತ್ರನು ನನ್ನ ಚೈತನ್ಯಸ್ವರೂಪನು, ನನ್ನ ವೀರ್ಯದ ಪ್ರಥಮ ಫಲ ನೀನು ಹಿರಿಮೆಯಲು, ಒಲುಮೆಯಲು ಪ್ರಮುಖನೆನಿಸಿಕೊಳ್ಳುವವನು.
ಆದರೆ ದಡಮೀರಿದ ಪ್ರವಾಹ ನೀನು ಹತ್ತಿದೆ, ಹೊಲೆಮಾಡಿದೆ, ತಂದೆಯ ಹಾಸಿಗೆಯನು ಪ್ರಮುಖಸ್ಥಾನದಲ್ಲಿರೆ ನನ್ನ ಮಂಚವನ್ನೇರಿದೆ ನೀನು.
ಅಣ್ಣತಮ್ಮಂದಿರು ಸಿಮೆಯೋನ್ - ಲೇವಿಯರು ಅವರ ಕತ್ತಿಗಳು ಹಿಂಸಾತ್ಮಕ ಆಯುಧಗಳು.
ನನ್ನ ಮನವೇ, ಒಳಗಾಗಬೇಡ ಅವರ ದುರಾಲೋಚನೆಗೆ ನನ್ನ ಪ್ರಾಣವೇ, ಸೇರಬೇಡ ನೀನವರ ಗುಂಪಿಗೆ ಕೊಂದರವರು ನರರನು ಕೋಪೋದ್ರೇಕದಿಂದ ಊನಪಡಿಸಿದರು ಎತ್ತುಗಳನ್ನು ಮದದಿಂದ.
ಅವರ ಕೋಪ ಭೀಕರ, ಅದಕ್ಕಿರಲಿ ಧಿಕ್ಕಾರ! ಅವರ ರೌದ್ರ - ಕ್ರೂರ, ಅದಕ್ಕಿರಲಿ ಧಿಕ್ಕಾರ! ವಿಭಾಗಿಸುವೆನವರನು ಯಕೋಬ ಕುಲದಲಿ ಚದರಿಸುವೆನವರನು ಇಸ್ರಯೇಲರಲಿ.
ಯೆಹೂದನೇ, ವಂದಿಸುವರು ನಿನ್ನನು ಸಹೋದರರು ನಿನ್ನ ಕೈಯಲ್ಲಿರುವುದು ಶತ್ರುಗಳ ಕುತ್ತಿಗೆಯು ಎರಗುವರು ನಿನಗೆ ನಿನ್ನ ಅಣ್ಣತಮ್ಮಂದಿರು.
ನನ್ನ ಪುತ್ರ ಯೆಹೂದ, ನೀ ಪ್ರಾಯದ ಸಿಂಹದಂತೆ ಬೇಟೆಹಿಡಿದು ಬೆಟ್ಟ ಏರಿದ ಕಂಠೀರವನಂತೆ ಕಾಲು ಮಡಿಚಿ ಹೊಂಚು ಕೂತ ಕೇಸರಿಯಂತೆ ಈ ಸಿಂಹಿಣಿಯನ್ನು ಕೆಣಕುವ ಕೆಚ್ಚು ಯಾರಿಗಿದೆ?
೧೦
ರಾಜ್ಯಾಧಿಕಾರ ಪಡೆದವನು ಬರುವ ತನಕ ರಾಷ್ಟ್ರಗಳು ಆತನಿಗೆ ತಲೆಬಾಗುವ ತನಕ ತಪ್ಪದು ರಾಜದಂಡ ಯೆಹೂದನ ಕೈಯಿಂದ ಕದಲದು ಮುದ್ರೆಕೋಲು ಅವನ ವಂಶದಿಂದ.
೧೧
ಕಟ್ಟುವನು ತನ್ನ ವಾಹನಪಶುವನು ದ್ರಾಕ್ಷಾಲತೆಗೆ ಬಿಗಿಯುವನು ತನ್ನ ಹೇಸರಕತ್ತೆಯನು ರಾಜದ್ರಾಕ್ಷೆಗೆ ಒಗೆಯುವನು ತನ್ನ ಬಟ್ಟೆಯನು ದ್ರಾಕ್ಷಾರಸದಲಿ ತೊಳೆವನು ಮೇಲಂಗಿಯನು ಆ ರಕ್ತಗೆಂಪು ರಸದಲಿ.
೧೨
ಅವನ ಕಣ್ಣು ಕೆಂಪಾಗಿರುವುವು ದ್ರಾಕ್ಷಾರಸದ ಸಮೃದ್ಧಿಯಿಂದ ಅವನ ಹಲ್ಲು ಬೆಳ್ಳಗಿರುವುವು ಹಾಲಿನ ಸಮೃದ್ಧಿಯಿಂದ.
೧೩
ಜೆಬುಲೂನನು ವಾಸಿಸುವನು ಸಮುದ್ರದ ಕರಾವಳಿಯಲ್ಲಿ ಹಡಗುಗಳು ಬಂದು ಹೋಗುವ ರೇವಂತೆ ಇರುವನಲ್ಲಿ ಸಿದೋನಿನ ತನಕ ಹರಡಿರುವುದು ಅವನ ಪ್ರಾಂತ್ಯದ ಗಡಿ.
೧೪
ಇಸ್ಸಾಕಾರನು ಕುರಿಹಟ್ಟಿಗಳ ನಡುವೆ ಮಲಗಿರುವ ದೊಡ್ಡ ಕತ್ತೆ.
೧೫
ಸೂಕ್ತವೆಂದುಕೊಂಡು ತನ್ನ ನಾಡು ವಿಶ್ರಾಂತಿಗೆ, ಸುಖಾನುಭವಕೆ ಬಗ್ಗಿಸುವನು ಬೆನ್ನನು ಹೊರೆ ಹೊರುವುದಕ್ಕೆ, ಬಿಟ್ಟಿಯ ಕೆಲಸಕ್ಕೆ.
೧೬
ದಾನನು ತನ್ನ ಜನರನ್ನಾಳುವನು ಇಸ್ರಯೇಲಿನಿತರ ಕುಲಗಳಂತೆ.
೧೭
ಇರುವನವನು ದಾರಿಯಲ್ಲಿರುವ ವಿಷಸರ್ಪದಂತೆ, ಕುದುರೆಯ ಹಿಮ್ಮಡಿಕಚ್ಚಿ ರಾಹುತನನು ಕೆಡವುವ ಹಾವಿನಂತೆ.
೧೮
ಸರ್ವೇಶ್ವರಾ, ಎದುರುನೋಡುತ್ತಿರುವೆನು ನಿನ್ನಿಂದ ಬರುವಾ ಸಂರಕ್ಷಣೆಯನು.
೧೯
ಗಾದನು ಗುರಿಯಾಗುವನು ಸುಲಿಗೆಗಾರರಾಕ್ರಮಣಕೆ ಓಡುವನಾ ದರೋಡೆಗಾರರನ್ನು ಹಿಮ್ಮೆಟ್ಟಿಕೊಂಡೇ.
೨೦
ಆಶೇರನಗಿರುವುದು ಸಮೃದ್ಧಿಯಾಗಿ ಧಾನ್ಯ ದೊರಕುವುದವನಲಿ ರಾಜನಿಗೂ ತಕ್ಕ ಭಕ್ಷ್ಯ.
೨೧
ನಫ್ತಾಲಿ ಸ್ವಚ್ಛಂದ ಜಿಂಕೆಮರಿಯಂತೆ ಸಿಗುವುದವನಲಿ ಸುಮಧುರವಾದ ಮಾತುಕತೆ.
೨೨
ಜೋಸೆಫನು ಫಲಭರಿತ ವೃಕ್ಷದಂತೆ ಒರತೆ ಬಳಿಯಲೆ ಬೆಳೆದ ದ್ರಾಕ್ಷಿಯಂತೆ ಚಾಚಿದೆ ಅದರ ರೆಂಬೆ ಬೇಲಿಯಿಂದಾಚೆ.
೨೩
ಬಿಲ್ಲುಗಾರರೆಸಗಿದರು ಅವನ ಮೇಲೆ ಆಕ್ರಮಣ ಸುತ್ತುವರೆದರವನನು ಎಸೆದು ಬಿರುಸುಬಾಣ.
೨೪
ಆದರೂ ಯಕೋಬಕುಲದ ಸರ್ವ ಬಲಾಢ್ಯನ ಶಕ್ತಿಯಿಂದ ಇಸ್ರಯೇಲನ ಪೊರೆಬಂಡೆ - ಪರಿಪಾಲಕನ ನಾಮದಿಂದ ನಿಂತಿತು ಸ್ಥಿರವಾಗಿ ಅವನ ಬಿಲ್ಲು ಚುರುಕುಗೊಂಡಿತು ಅವನ ಕೈಗಳ ಬಲ್ಬು.
೨೫
ಹೀಗಾಯಿತು ನಿನ್ನ ತ0ದೆಯ‍‍ ದೇವರಿ0ದ ಸಿಗಲಿ ನಿನಗಾತನ ಸಹಾಯ ಹೀಗಾಯಿತು ಸರ್ವವಲ್ಲಭ ದೇವರಿ0ದ. ದೊರಕಲಿ ನಿನಗಾತನ ಆಶೀರ್ವಾದ. ಮೇಲಣ ಆಕಾಶದಿ0ದ, ಕೆಳಗಣ ಸಾಗರ ಸೆಲೆಗಳಿ0ದ ಸ್ತನ್ಯದಿ0ದ, ಗರ್ಭದಿ0ದ, ಆತ ನೀಡುವ ವರದಾನ.
೨೬
ಪ್ರಾಚೀನ ಪರ್ವತಗಳಿಗಿ0ತ, ಚಿರಸ್ಥಾಯಿ ಗುಡ್ಡಗಳಿಗಿಂತ ಉತ್ತಮೋತ್ತಮ ನಿನ್ನ ತಂದೆಯಿಂದ ಬರುವ ಆಶೀರ್ವಾದ. ಇಳಿದು ಬರಲೀ ವರದಾನಗಳು ಜೋಸೆಫನ ಮೇಲೆ ಸೋದರರಿಂದ ಬೇರ್ಪಟ್ಟವನ ಶಿರಸ್ಸಿನ ಮೇಲೆ.
೨೭
ಕಿತ್ತು ತಿನ್ನುವ ತೋಳ ಬೆನ್ಯಾಮೀನನು ಬೆಳಿಗ್ಗೆ ತಿನ್ನುವನು ಹಿಡಿದುಕೊಂಡದುದನು ಸಂಜೆ ಹಂಚಿಕೊಳ್ಳುವನು ಕೊಳ್ಳೆಹೊಡೆದುದನು.
೨೮
ಇವೇ ಇಸ್ರಯೇಲಿನ ಹನ್ನೆರಡು ಕುಲಗೋತ್ರಗಳು; ಇದೇ ಅವರ ತಂದೆ ಕೊಟ್ಟ ಆಶೀರ್ವಾದ: ಒಂದೊಂದು ಕುಲಕ್ಕೆ ಅವನು ನುಡಿದ ಒಂದೊಂದು ಆಶೀರ್ವಚನ.
೨೯
ಯಕೋಬನು ತನ್ನ ಮಕ್ಕಳಿಗೆ ಕೊಟ್ಟ ಆಜ್ಞೆ ಇದು: “ನಾನು ನನ್ನ ದಿವಂಗತ ಪೂರ್ವಜರನ್ನು ಸೇರುವ ಕಾಲ ಸಮೀಪಿಸಿತು. ಹಿತ್ತಿಯನಾದ ಎಫ್ರೋನನ ಭೂಮಿಯಲ್ಲಿರುವ ಗವಿಯೊಳಗೆ, ಪಿತೃಗಳ ಬಳಿಯಲ್ಲಿ ನನ್ನನ್ನು ಸಮಾಧಿಮಾಡಬೇಕು.
೩೦
ಆ ಗವಿ ಕಾನಾನ್ ನಾಡಿನ ಮಮ್ರೆಗೆದುರಾಗಿರುವ ಮಕ್ಪೇಲ ಎಂಬ ಬಯಲಿನಲ್ಲಿದೆ. ಅದನ್ನು ಅಬ್ರಹಾಮನು ಅದರ ಸುತ್ತಲಿರುವ ಭೂಮಿಸಹಿತ ಹಿತ್ತಿಯನಾದ ಎಫ್ರೋನನಿಂದ ಸ್ವಂತ ಸ್ಮಶಾನ ಭೂಮಿಗಾಗಿ ಕೊಂಡುಕೊಂಡನು.
೩೧
ಅಲ್ಲೇ ಅಬ್ರಹಾಮನಿಗೂ ಅವನ ಪತ್ನಿ ಸಾರಳಿಗೂ ಸಮಾಧಿಯಾಯಿತು. ಅಲ್ಲೇ ಇಸಾಕನಿಗೂ ಅವನ ಮಡದಿ ರೆಬೆಕ್ಕಳಿಗೂ ಸಮಾಧಿ ಆಯಿತು. ಲೇಯಳನ್ನೂ ನಾನು ಅಲ್ಲಿ ಸಮಾಧಿಮಾಡಿದ್ದೇನೆ.
೩೨
ಹೊಲದ ಸಮೇತ ಹಿತ್ತಿಯರಿಂದ ಕ್ರಯಕ್ಕೆ ಕೊಂಡುಕೊಂಡ ಆ ಗವಿಯೊಳಗೆ ನನಗೂ ಸಮಾಧಿಯಾಗಲಿ,” ಎಂದನು.
೩೩
ಮಕ್ಕಳಿಗೆ ಈ ಆಜ್ಞೆಯನ್ನು ಕೊಟ್ಟು ಮುಗಿಸಿದ ನಂತರ ಯಕೋಬನು ಹಾಸಿಗೆಯಲ್ಲಿ ತನ್ನ ಕಾಲುಗಳನ್ನು ಮಡಚಿಕೊಂಡು ಪ್ರಾಣಬಿಟ್ಟು, ಮೃತರಾದ ಪಿತೃಗಳ ಬಳಿಗೆ ಸೇರಿದನು.