A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಆದಿಕಾಂಡ ೪೪ತರುವಾಯ ಜೋಸೆಫನು ತನ್ನ ಗೃಹನಿರ್ವಾಹಕನನ್ನು ಕರೆದು, “ಆ ಜನರ ಗೋಣಿಚೀಲಗಳಲ್ಲಿ ಹೊರುವಷ್ಟು ಧಾನ್ಯವನ್ನು ತುಂಬಿಸಿ, ಒಬ್ಬೊಬ್ಬನ ಚೀಲದ ಬಾಯಿಯಲ್ಲಿ ಅವನವನ ಹಣದ ಗಂಟನ್ನಿಡು.
ಕಿರಿಯವನ ಚೀಲದ ಬಾಯೊಳಗೆ ಅವನು ದವಸಕ್ಕೆ ತಂದ ಹಣವನ್ನಲ್ಲದೆ ನನ್ನ ಬೆಳ್ಳಿಯ ಪಾನಪಾತ್ರೆಯನ್ನೂ ಇಡು,” ಎಂದು ಅಪ್ಪಣೆಕೊಟ್ಟನು. ಗೃಹನಿರ್ವಾಹಕನು ಅದರಂತೆಯೇ ಮಾಡಿದನು.
ಬೆಳಿಗ್ಗೆ, ಹೊತ್ತು ಮೂಡುವಾಗಲೆ, ಆ ಜನರು ಅಪ್ಪಣೆಪಡೆದು, ಕತ್ತೆಗಳನ್ನು ಹೊಡೆದುಕೊಂಡು ಹೊರಟು ಹೋದರು.
ಅವರು ಪಟ್ಟಣಗಳನ್ನು ಬಿಟ್ಟು ಸ್ವಲ್ಪದೂರ ಹೋಗುವಷ್ಟರಲ್ಲಿ, ಜೋಸೆಫನು ತನ್ನ ಗೃಹನಿರ್ವಾಹಕನಿಗೆ, ‘ನೀನೆದ್ದು ಆ ಜನರನ್ನು ಹಿಂದಟ್ಟಿ ಹೋಗಿ ಹಿಡಿ. ಅವರಿಗೆ, ‘ನೀವು ಉಪಕಾರಕ್ಕೆ ಪ್ರತಿಯಾಗಿ ಏಕೆ ಅಪಕಾರ ಮಾಡಿದಿರಿ?
ಆ ಪಾತ್ರೆಯಿಂದಲೆ ಅಲ್ಲವೆ ನನ್ನ ದಣಿ ಪಾನಮಾಡುವುದು? ಅದರಲ್ಲಿ ನೋಡೇ ಅಲ್ಲವೆ ಶಕುನ ಹೇಳುವುದು? ನೀವು ಮಾಡಿರುವುದು ಮಹಾ ನೀಚತನ, ಎನ್ನಬೇಕು,” ಎಂದು ತಿಳಿಸಿದನು.
ಗೃಹನಿರ್ವಾಹಕನು ಅವರನ್ನು ಹಿಂದಟ್ಟಿ ಹೋಗಿ ಹಿಡಿದು ಆ ಮಾತುಗಳನ್ನೇ ಹೇಳಿದನು.
ಅದಕ್ಕೆ ಅವರು, “ಅಯ್ಯಾ, ನೀವು ಇಂಥಾ ಮಾತುಗಳನ್ನು ಆಡಬಹುದೆ! ನಿಮ್ಮ ಸೇವಕರಾದ ನಾವು ಇಂಥ ಕೃತ್ಯವನ್ನು ಎಂದಿಗೂ ಮಾಡುವವರಲ್ಲ.
ಮೊದಲು ನಮ್ಮ ಚೀಲಗಳ ಬಾಯಲ್ಲಿ ಸಿಕ್ಕಿದ ಹಣವನ್ನು ನಾವು ಕಾನಾನ್ ನಾಡಿನಿಂದ ವಾಪಸ್ಸು ತಂದು ನಿಮಗೆ ಕೊಟ್ಟೆವಲ್ಲವೆ? ಹೀಗಿರುವಾಗ ನಾವು ನಿಮ್ಮ ದಣಿಯ ಮನೆಯೊಳಗಿಂದ ಬೆಳ್ಳಿಬಂಗಾರ ಕದಿಯುವುದುಂಟೆ?
ಆ ಪಾತ್ರೆ ನಿಮ್ಮ ಸೇವಕರಾದ ನಮ್ಮಲ್ಲಿ ಯಾರಾದರ ಬಳಿ ಸಿಕ್ಕಿದ್ದಾದರೆ ಅವನಿಗೆ ಮರಣದಂಡನೆ ಆಗಲಿ! ಅದುಮಾತ್ರವಲ್ಲ, ನಾವೆಲ್ಲರೂ ನಮ್ಮೊಡೆಯರಿಗೆ ಊಳಿಗದವರಾಗುತ್ತೇವೆ,” ಎಂದರು.
೧೦
ಅದಕ್ಕೆ ಆ ಗೃಹನಿರ್ವಾಹಕ, “ಸರಿ, ನೀವು ಹೇಳಿದಂತೆಯೇ ಆಗಲಿ; ಆ ಪಾತ್ರೆ ಯಾವನ ಬಳಿ ಸಿಕ್ಕುತ್ತದೋ ಅವನು ನನಗೆ ಊಳಿಗದವನಾಗಬೇಕು; ಉಳಿದವರು ತಪ್ಪಿಲ್ಲದವರು,’ ಎಂದು ಹೇಳಿದ್ದೇ
೧೧
ಅವರಲ್ಲಿ ಪ್ರತಿಯೊಬ್ಬನೂ ತನ್ನತನ್ನ ಚೀಲವನ್ನು ನೆಲಕ್ಕಿಳಿಸಿ ಬಿಚ್ಚಿದರು.
೧೨
ಅವನು ಹಿರಿಯವನಿಂದ ಮೊದಲ್ಗೊಂಡು ಕಿರಿಯವನ ತನಕ ಪರೀಕ್ಷಿಸಿ ನೋಡಿದನು. ಆ ಪಾತ್ರೆ ಬೆನ್ಯಾಮೀನನ ಚೀಲದಲ್ಲಿ ಸಿಕ್ಕಿತು.
೧೩
ಆಗ ಅವರು ತಮ್ಮ ಬಟ್ಟೆಗಳನ್ನು ಹರಿದುಕೊಂಡು ತಮ್ಮ ದುಃಖವನ್ನು ವ್ಯಕ್ತಪಡಿಸಿದರು; ಕತ್ತೆಗಳ ಮೇಲೆ ಚೀಲಗಳನ್ನು ಹೇರಿ ಪಟ್ಟಣಕ್ಕೆ ಹಿಂದಿರುಗಿ ಬಂದರು.
೧೪
ಯೆಹೂದನು ಮತ್ತು ಅವನ ಅಣ್ಣತಮ್ಮಂದಿರು ಜೋಸೆಫನ ಮನೆಗೆ ಹಿಂದಿರುಗಿದಾಗ ಜೋಸೆಫನು ಇನ್ನೂ ಮನೆಯಲ್ಲೇ ಇದ್ದನು. ಅವರು ಅವನಿಗೆ ಅಡ್ಡಬಿದ್ದರು.
೧೫
ಅವನು ಅವರನ್ನು, “ನೀವು ಮಾಡಿರುವ ಕೃತ್ಯ ಎಂಥದ್ದು! ನನ್ನಂಥವನು ಕಣಿ ನೋಡಿ ಗುಟ್ಟನ್ನು ರಟ್ಟು ಮಾಡಬಲ್ಲವನೆಂಬುದು ನಿಮಗೆ ತಿಳಿಯಲಿಲ್ಲವೋ?” ಎಂದು ಕೇಳಿದನು.
೧೬
ಅದಕ್ಕೆ ಯೆಹೂದನು, “ನಮ್ಮೊಡೆಯರಿಗೆ ನಾವು ಏನು ಹೇಳೋಣ? ಯಾವ ಉತ್ತರ ಕೊಡೋಣ? ನಾವು ನಿರ್ದೋಷಿಗಳೆಂದು ತೋರಿಸಲು, ಏನುತಾನೆ ಮಾಡುವುದು? ನಿಮ್ಮ ಸೇವಕರಾದ ನಮ್ಮ ಪಾಪಕೃತ್ಯವನ್ನು ದೇವರೇ ಹೊರಪಡಿಸಿದ್ದಾರೆ. ಆ ಪಾತ್ರೆ ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರವಲ್ಲ, ನಾವೆಲ್ಲರೂ ನಮ್ಮೊಡೆಯರಿಗೆ ಗುಲಾಮರಾದೆವಲ್ಲವೆ?\ ಎಂದನು.
೧೭
ಜೋಸೆಫನು, “ಹಾಗೆ ಎಂದಿಗೂ ಆಗಬಾರದು; ಆ ಪಾತ್ರೆ ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರ ನನಗೆ ಗುಲಾಮನಾಗಬೇಕು; ನೀವಾದರೋ ಅಡ್ಡಿಯಿಲ್ಲದೆ ನಿಮ್ಮ ತಂದೆಯ ಬಳಿಗೆ ಹೋಗಬಹುದು,” ಎಂದನು.
೧೮
ಆಗ ಯೆಹೂದನು ಹತ್ತಿರಕ್ಕೆ ಬಂದು, “ನನ್ನೊಡೆಯಾ, ತಮ್ಮ ಸೇವಕನಾದ ನಾನು ಒಂದು ಮಾತನ್ನು ಅರಿಕೆಮಾಡಿಕೊಳ್ಳುತ್ತೇನೆ; ನನ್ನ ಮೇಲೆ ಸಿಟ್ಟುಮಾಡಬೇಡಿ; ತಾವು ಫರೋಹನಿಗೆ ಸಮಾನರು.
೧೯
ಒಡೆಯರಾದ ತಾವು ಸೇವಕರಾದ ನಮ್ಮನ್ನು, ‘ನಿಮಗೆ ತಂದೆಯಾಗಲಿ, ತಮ್ಮನಾಗಲಿ ಇದ್ದಾರೋ’ ಎಂದು ಕೇಳಿದಿರಿ.
೨೦
ನಾವು ‘ತಂದೆ ಇದ್ದಾರೆ, ಅವರು ಮುದುಕ; ಮುಪ್ಪಿನಲ್ಲಿ ಅವರಿಗೆ ಹುಟ್ಟಿದ ಒಬ್ಬ ಚಿಕ್ಕ ಹುಡುಗ ಇದ್ದಾನೆ. ಅವನ ಒಡಹುಟ್ಟಿದವನು ಸತ್ತುಹೋದ. ಅವನ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರಲ್ಲಿ ಅವನೊಬ್ಬನೇ ಉಳಿದಿದ್ದಾನೆ. ಅವನ ಮೇಲೆ ತಂದೆಗೆ ಅಪಾರ ಪ್ರೀತಿ,’ ಎಂದು ಹೇಳಿದೆವು.
೨೧
ಅದಕ್ಕೆ ತಾವು ಸೇವಕರಾದ ನಮಗೆ, “ನಾನು ಆ ಹುಡುಗನನ್ನು ನೋಡಬೇಕು, ಅವನನ್ನು ನನ್ನ ಬಳಿಗೆ ಕರೆದು ತನ್ನಿ,’ ಎಂದು ಅಪ್ಪಣೆಕೊಟ್ಟಿರಿ.
೨೨
ನಾವು, ‘ಆ ಹುಡುಗನು ತಂದೆಯನ್ನು ಬಿಟ್ಟು ಅಗಲುವುದಕ್ಕಾಗುವುದಿಲ್ಲ; ಅಗಲಿದರೆ ತಂದೆ ಸತ್ತುಹೋದಾರು,’ ಎಂದು ಒಡೆಯರಾದ ತಮಗೆ ತಿಳಿಸಿದೆವು.
೨೩
ಅದಕ್ಕೆ ತಾವು, 'ನಿಮ್ಮ ತಮ್ಮನು ಬಾರದಿದ್ದರೆ ನೀವು ಮತ್ತೊಮ್ಮೆ ನನ್ನ ಮುಖವನ್ನು ನೋಡಕೂಡದು,’ ಎಂದು ಆಜ್ಞೆಕೊಟ್ಟಿರಿ.
೨೪
“ತಮ್ಮ ಸೇವಕರಾದ ನಾವು ನಮ್ಮ ತಂದೆಯ ಬಳಿಗೆ ಹೋದಾಗ ಒಡೆಯರ ಮಾತನ್ನು ತಿಳಿಸಿದೆವು.
೨೫
ನಮ್ಮ ತಂದೆ, ‘ನೀವು ಇನ್ನೊಮ್ಮೆ ಹೋಗಿ ಧಾನ್ಯ ಕೊಂಡುಕೊಂಡು ಬನ್ನಿ’ ಎಂದಾಗ,
೨೬
ನಾವು, ‘ಹೋಗಲಾಗದು, ತಮ್ಮನು ನಮ್ಮ ಜೊತೆಯಲ್ಲಿ ಇಲ್ಲವಾದರೆ ಆ ಮನುಷ್ಯನ ಮುಖವನ್ನು ನೋಡಲಾಗದು. ತಮ್ಮನು ನಮ್ಮ ಸಂಗಡ ಬಂದರೆ ಮತ್ತೆ ಹೋಗುತ್ತೇವೆ’ ಎಂದು ಹೇಳಿದೆವು.
೨೭
ಅದಕ್ಕೆ ತಮ್ಮ ಸೇವಕರಾದ ನಮ್ಮ ತಂದೆ, ‘ನನ್ನ ಪತ್ನಿಯಲ್ಲಿ ನನಗೆ ಇಬ್ಬರೇ ಗಂಡು ಮಕ್ಕಳು ಹುಟ್ಟಿದರೆಂಬುದು ನಿಮಗೆ ತಿಳಿದ ವಿಷಯ.
೨೮
ಅವರಲ್ಲಿ ಒಬ್ಬನು ನನ್ನನ್ನು ಬಿಟ್ಟು ಹೊರಟುಹೋದ; ಅವನು ನಿಸ್ಸಂದೇಹವಾಗಿ ಕಾಡುಮೃಗದಿಂದ ಸೀಳಿಹಾಕಲ್ಪಟ್ಟಿರಬೇಕು ಎಂದು ತಿಳಿದುಕೊಂಡೆ; ಅಂದಿನಿಂದ ಅವನನ್ನು ನಾನು ಕಂಡಿಲ್ಲ.
೨೯
ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಇವನಿಗೂ ಏನಾದರು ಆಪತ್ತು ಒದಗಿದರೆ, ಈ ನರೆಕೂದಲಿನ ಮುದುಕ ಸಂಕಟದಿಂದ ಸಮಾಧಿ ಸೇರಲು ನೀವೇ ಕಾರಣರಾಗುತ್ತೀರಿ’ ಎಂದರು.
೩೦
\ತಮ್ಮ ಸೇವಕರಾದ ನನ್ನ ತಂದೆಯ ಬಳಿಗೆ ನಾನು ಸೇರಿದಾಗ, ಅವರ ಪ್ರಾಣದ ಪ್ರಾಣವಾಗಿರುವ ಈ ಹುಡುಗ ನನ್ನ ಸಂಗಡ ಇಲ್ಲದೆ ಹೋದರೆ, ಹುಡುಗ ಬರಲಿಲ್ಲವೆಂದು ಅವರು ಕೂಡಲೆ ಸಾಯುವರು.
೩೧
ಆಗ ತಮ್ಮ ಸೇವಕರಾದ ನಾವು, ತಮ್ಮ ಸೇವಕ ಹಾಗು ನರೆಕೂದಲಿನ ಮುದುಕ ಆದ ನಮ್ಮ ತಂದೆ ಸಂಕಟದಿಂದಲೆ ಸಮಾಧಿ ಸೇರಲು ಕಾರಣರಾಗುತ್ತೇವೆ.
೩೨
ಸೇವಕನಾದ ನಾನು ನನ್ನ ತಂದೆಯ ಬಳಿಯಲ್ಲಿ ಈ ಹುಡುಗನಿಗೆ ಹೊಣೆಯಾಗಿದ್ದೇನೆ. ‘ನಾನು ಇವನನ್ನು ನಿಮ್ಮ ಬಳಿಗೆ ಕರೆದುಕೊಂಡು ಬಾರದಿದ್ದರೆ, ತಂದೆಗೆ ತಪ್ಪಿದವನ ದೋಷ ಸದಾಕಾಲ ನನ್ನದಾಗಲಿ’ ಎಂದು ಮಾತುಕೊಟ್ಟೆ.
೩೩
ಆದುದರಿಂದ ತಮ್ಮಲ್ಲಿ ನಾನು ಮಾಡುವ ಪ್ರಾರ್ಥನೆ ಇದು; ಈ ಹುಡುಗನಿಗೆ ಬದಲಾಗಿ, ತಮ್ಮ ಸೇವಕನಾದ ನನ್ನನ್ನು ತಮ್ಮ ಗುಲಾಮನನ್ನಾಗಿ ಇರಿಸಿಕೊಳ್ಳಿ; ಇವನು ತನ್ನ ಅಣ್ಣಂದಿರ ಸಂಗಡ ಹೋಗುವಂತೆ ಅನುಗ್ರಹಿಸಿ.
೩೪
ಈ ಹುಡುಗನನ್ನು ಬಿಟ್ಟು ನಾನು ನನ್ನ ತಂದೆಯ ಬಳಿಗೆ ಹೇಗೆ ತಾನೆ ಹೋಗಲಾದೀತು? ತಂದೆಗೆ ಉಂಟಾಗುವ ಮನೋಯಾತನೆಯನ್ನು ನನ್ನಿಂದ ನೋಡಲಾಗದು.”