English
A A A A A
×

ಕನ್ನಡ ಬೈಬಲ್ (KNCL) 2016

ಆದಿಕಾಂಡ ೪೩
ಬರವು ಕಾನಾನಿನಲ್ಲಿ ಘೋರವಾಗಿತ್ತು.
ಈಜಿಪ್ಟಿನಿಂದ ತಂದ ದವಸಧಾನ್ಯ ಮುಗಿದು ಹೋಗಿತ್ತು. ಯಕೋಬನು ತನ್ನ ಪುತ್ರರಿಗೆ, ” ನೀವು ಪುನಃ ಹೋಗಿ ಸ್ವಲ್ಪ ಧಾನ್ಯವನ್ನು ಕೊಂಡುಕೊಂಡು ಬನ್ನಿ,” ಎಂದನು.
ಅದಕ್ಕೆ ಯೆಹೂದನು ಹೀಗೆಂದನು: “ಆ ಮನುಷ್ಯ ನಮಗೆ, ‘ನಿಮ್ಮ ತಮ್ಮನನ್ನು ಕರೆದುಕೊಂಡು ಬಂದ ಹೊರತು ನನ್ನ ದರ್ಶನಕ್ಕೆ ಬರಕೂಡದು’ ಎಂದು ಕಡುಖಂಡಿತವಾಗಿ ಹೇಳಿಬಿಟ್ಟಿದ್ದಾನೆ.
ನೀವು ನಮ್ಮ ತಮ್ಮನನ್ನು ಜೊತೆಯಲ್ಲಿ ಕಳಿಸಿದರೆ, ಹೋಗಿ ಧಾನ್ಯವನ್ನು ಕೊಂಡುಕೊಂಡು ಬರುತ್ತೇವೆ.
ಕಳಿಸಿಕೊಡದಿದ್ದರೆ, ನಾವು ಹೋಗುವುದಿಲ್ಲ. ಆ ಮನುಷ್ಯ, ‘ನಿಮ್ಮ ತಮ್ಮ ನಿಮ್ಮ ಸಂಗಡ ಇಲ್ಲದಿದ್ದರೆ ಸಮ್ಮುಖಕ್ಕೆ ಬರಲೇ ಕೂಡದು’ ಎಂದಿದ್ದಾನೆ\.
ಅದಕ್ಕೆ ಯಕೋಬನು, “ನಿಮಗೆ ಇನ್ನೊಬ್ಬ ತಮ್ಮನಿದ್ದಾನೆಂದು ಆ ಮನುಷ್ಯನಿಗೆ ಹೇಳಿ ನನ್ನನ್ನೇಕೆ ಈ ಸಂಕಟಕ್ಕೆ ಗುರಿಮಾಡಿದಿರಿ?” ಎಂದನು.
ಆಗ ಅವರು, ”ಆ ಮನುಷ್ಯ ನಿಮ್ಮ ವಿಷಯದಲ್ಲೂ ನಮ್ಮ ಮನೆಯವರ ವಿಷಯದಲ್ಲೂ ಸೂಕ್ಷ್ಮವಾಗಿ ವಿಚಾರಿಸಿದ; ನಿಮ್ಮ ತಂದೆ ಇನ್ನು ಜೀವದಿಂದ ಇದ್ದಾನೋ? ನಿಮಗೆ ತಮ್ಮನಿದ್ದಾನೋ? ಎಂದೆಲ್ಲ ಅವನೇ ಕೇಳಿದ. ಆ ಪ್ರಶ್ನೆಗಳಿಗೆ ನಾವು ತಕ್ಕ ಉತ್ತರ ಕೊಡಬೇಕಾಯಿತು. ಅಲ್ಲದೆ, ಅವನು ‘ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿ', ಎಂದು ಕೇಳುತ್ತಾನೆಂದು ತಿಳಿಯಲು ನಮಗೆ ಹೇಗೆ ಸಾಧ್ಯವಿತ್ತು?” ಎಂದರು.
ಆಗ ಯೆಹೂದನು ತನ್ನ ತಂದೆ ಯಕೋಬನಿಗೆ, “ನೀವು, ನಾವು ಮತ್ತು ನಮ್ಮ ಮಕ್ಕಳು, ಎಲ್ಲರೂ ಸಾಯದೆ ಉಳಿಯಬೇಕಾದರೆ ಆ ಹುಡುಗನನ್ನು ನನ್ನ ಜೊತೆ ಕಳಿಸಿಕೊಡಿ, ನಾವು ಇದೀಗಲೆ ಹೊರಡುತ್ತೇವೆ.
ಅವನಿಗೆ ನಾನೇ ಹೊಣೆ; ಅವನ ವಿಷಯ ನನಗೆ ಬಿಡಿ. ನಾನು ಅವನನ್ನು ಮತ್ತೆ ಕರೆದುಕೊಂಡು ಬಂದು ನಿಮ್ಮ ಎದುರಿನಲ್ಲಿ ನಿಲ್ಲಿಸದೆಹೋದರೆ ಆ ದೋಷ ಸದಾಕಾಲ ನನ್ನ ಮೇಲೆ ಇರಲಿ.
೧೦
ನಾವು ತಡಮಾಡದೆ ಇದ್ದಿದ್ದರೆ, ಇಷ್ಟರೊಳಗೆ ಎರಡು ಸಾರಿ ಹೋಗಿ ಬರುತ್ತಿದ್ದೆವು,” ಎಂದು ಹೇಳಿದನು.
೧೧
ಇಷ್ಟಾದ ಮೇಲೆ ಅವರ ತಂದೆ ಯಕೋಬನು, “ನೀವು ಹೋಗಲೇಬೇಕಾದರೆ, ಒಂದು ಕೆಲಸಮಾಡಿ; ಈ ನಾಡಿನಲ್ಲಿ ದೊರಕುವ ಶ್ರೇಷ್ಠವಾದ ವಸ್ತುಗಳಲ್ಲಿ ಕೆಲವನ್ನು ನಿಮ್ಮ ಚೀಲದಲ್ಲಿ ಹಾಕಿಕೊಂಡು ಹೋಗಿ, ಆ ಮನುಷ್ಯನಿಗೆ ಕಾಣಿಕೆಯಾಗಿ ಕೊಡಿ.
೧೨
ಅದೂ ಅಲ್ಲದೆ ಎರಡರಷ್ಟು ಹಣವನ್ನು ಕೈಯಲ್ಲಿ ತೆಗೆದುಕೊಂಡು ಹೋಗಿ; ಅವರು ನಿಮ್ಮ ಚೀಲಗಳ ಬಾಯಲ್ಲಿ ಹಾಕಿ ಹಿಂದಕ್ಕೆ ಕಳಿಸಿದ ಹಣವನ್ನು ತೆಗೆದುಕೊಂಡು ಹೋಗಿ; ಬಹುಶಃ ಅವರಿಗೆ ತಿಳಿಯದೆ ಅದು ನಿಮ್ಮ ಕೈಗೆ ಬಂದಿರಬಹುದು.
೧೩
ನಿಮ್ಮ ತಮ್ಮನನ್ನೂ ಕರೆದುಕೊಂಡು ಮರಳಿ ಆ ಮನುಷ್ಯನ ಬಳಿಗೆ ಹೋಗಿ.
೧೪
ಅವನು ನಿಮ್ಮ ಮೇಲೆ ಕನಿಕರವಿಟ್ಟು ನಿಮ್ಮ ಅಣ್ಣನನ್ನೂ ಬೆನ್ಯಾಮೀನನನ್ನೂ ನಿಮ್ಮೊಂದಿಗೆ ಕಳುಹಿಸಿಬಿಡುವಂತೆ ಸರ್ವವಲ್ಲಭರಾದ ದೇವರು ಅನುಗ್ರಹಿಸಲಿ; ನಾನಂತೂ ಮಕ್ಕಳನ್ನು ಕಳೆದುಕೊಂಡವನಾಗಬೇಕಾದರೆ ಹಾಗೆಯೇ ಆಗಲಿ!” ಎಂದನು.
೧೫
ಅವರು ಆ ಕಾಣಿಕೆ ವಸ್ತುಗಳನ್ನು ಸಿದ್ಧಮಾಡಿಕೊಂಡು, ಎರಡರಷ್ಟು ಹಣವನ್ನು ತೆಗೆದುಕೊಂಡು ಹಾಗೂ ಬೆನ್ಯಾಮೀನನನ್ನು ಜೊತೆಯಲ್ಲಿ ಕರೆದುಕೊಂಡು ಹೊರಟರು. ಈಜಿಪ್ಟನ್ನು ಸೇರಿ, ಜೋಸೆಫನ ಸಮ್ಮುಖದಲ್ಲಿ ನಿಂತುಕೊಂಡರು.
೧೬
ಬೆನ್ಯಾಮೀನನು ಅವರ ಸಂಗಡ ಇರುವುದನ್ನು ಜೋಸೆಫನು ನೋಡಿದನು. ಕೂಡಲೆ ಗೃಹನಿರ್ವಾಹಕನನ್ನು ಕರೆದು, “ಈ ಜನರು ನನ್ನ ಸಂಗಡ ಈ ಮಧ್ಯಾಹ್ನ ಊಟಮಾಡಬೇಕಾಗಿ ಇದೆ; ಇವರನ್ನು ಮನೆಯೊಳಗೆ ಕರೆದುಕೊಂಡು ಹೋಗು. ಮಾಂಸದ ಅಡುಗೆ ಮಾಡಿ, ಎಲ್ಲವನ್ನು ಸಿದ್ಧಪಡಿಸು,” ಎಂದು ಅಪ್ಪಣೆಮಾಡಿದನು.
೧೭
ಅದೇ ಮೇರೆಗೆ ಗೃಹನಿರ್ವಾಹಕನು ಅವರನ್ನು ಜೋಸೆಫನ ಮನೆಗೆ ಕರೆದುಕೊಂಡು ಹೋದನು.
೧೮
ಅಲ್ಲಿಗೆ ಹೋಗುತ್ತಿದ್ದ ಅವರಿಗೆ ಭಯವಾಯಿತು. “ಹಿಂದೆ ನಾವು ಚೀಲಗಳಲ್ಲಿ ವಾಪಸ್ಸು ತೆಗೆದುಕೊಂಡು ಹೋದ ಹಣದ ಪ್ರಯುಕ್ತವೇ ಅವನು ನಮ್ಮನ್ನು ತನ್ನ ಮನೆಯೊಳಗೆ ಕರೆಸಿದ್ದಾನೆ; ದಿಢೀರನೆ ನಮ್ಮ ಮೇಲೆ ಬಿದ್ದು ನಮ್ಮನ್ನು ಗುಲಾಮರನ್ನಾಗಿಸಿಕೊಳ್ಳಬಹುದು. ನಮ್ಮ ಕತ್ತೆಗಳನ್ನು ಹಿಡಿದುಕೊಳ್ಳಬಹುದು,” ಎಂಬುದಾಗಿ ತಮ್ಮ ತಮ್ಮೊಳಗೆ ಮಾತನಾಡಿಕೊಂಡರು.
೧೯
ಮನೆಯ ಬಾಗಿಲ ಬಳಿ ಗೃಹನಿರ್ವಾಹಕನಿಗೆ,
೨೦
“ಅಯ್ಯಾ, ಮೊದಲೊಂದು ಸಾರಿ ಆಹಾರಪದಾರ್ಥಗಳನ್ನು ಕೊಂಡುಕೊಳ್ಳುವುದಕ್ಕೆ ಬಂದಿದ್ದೆವು.
೨೧
ನಾವು ಹೊರಟುಹೋದ ನಂತರ ಚಾವಡಿಯೊಂದರಲ್ಲಿ ಇಳಿದುಕೊಂಡೆವು. ಅಲ್ಲಿ ನಮ್ಮ ಚೀಲಗಳನ್ನು ಬಿಚ್ಚಿನೋಡಿದಾಗ ಪ್ರತಿ ಒಬ್ಬನ ಹಣ, ತೂಕ ಕಿಂಚಿತ್ತೂ ಕಡಿಮೆಯಿಲ್ಲದೆ, ಅವನವನ ಚೀಲದಲ್ಲೇ ಇತ್ತು. ಅದನ್ನು ವಾಪಸ್ಸು ತಂದಿದ್ದೇವೆ.
೨೨
ದವಸವನ್ನು ಕೊಂಡುಕೊಳ್ಳುವುದಕ್ಕೆ ಬೇರೆ ಹಣ ತಂದಿದ್ದೇವೆ. ಆ ಹಣವನ್ನು ನಮ್ಮ ಚೀಲಗಳಲ್ಲಿ ಯಾರು ಇಟ್ಟರೋ ತಿಳಿಯದು,” ಎಂದು ಹೇಳಿದರು.
೨೩
ಅದಕ್ಕೆ ಆ ಗೃಹನಿರ್ವಾಹಕ, “ಸಮಾಧಾನದಿಂದಿರಿ, ಹೆದರಬೇಡಿ. ನಿಮ್ಮ ತಂದೆಗೂ ನಿಮಗೂ ದೇವರಾದವರು ನಿಮ್ಮ ಚೀಲಗಳಲ್ಲಿಯೇ ನಿಧಿ ನಿಕ್ಷೇಪ ದೊರಕುವಂತೆ ಅನುಗ್ರಹಿಸಿದ್ದಾರೆ; ನೀವು ಕೊಟ್ಟ ಹಣ ನನಗೆ ಮುಟ್ಟಿದೆ,” ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ಕರೆದುಕೊಂಡು ಬಂದನು.
೨೪
ಆಮೇಲೆ ಗೃಹನಿರ್ವಾಹಕನು ಅವರೆಲ್ಲರನ್ನು ಜೋಸೆಫನ ಮನೆಯೊಳಗೆ ಕರೆತಂದು ಕಾಲು ತೊಳೆದುಕೊಳ್ಳುವುದಕ್ಕೆ ನೀರನ್ನು ಕೊಡಿಸಿದನು. ಅವರ ಕತ್ತೆಗಳಿಗೆ ಮೇವು ಹಾಕಿಸಿದನು.
೨೫
ತಾವು ಅಲ್ಲೇ ಊಟಮಾಡಬೇಕೆಂಬ ಸಂಗತಿ ಅವರಿಗೆ ತಿಳಿಯಿತು. ಆದ್ದರಿಂದ ತಾವು ತಂದಿದ್ದ ಕಾಣಿಕೆಯನ್ನು ಸಿದ್ಧವಾಗಿ ಇಟ್ಟುಕೊಂಡರು. ಜೋಸೆಫನು ಬರುವ ತನಕ, ಮಧ್ಯಾಹ್ನದವರೆಗೆ ಕಾದುಕೊಂಡಿದ್ದರು.
೨೬
ಜೋಸೆಫನು ಮನೆಗೆ ಬಂದಾಗ ಅವರು ಅವನಿಗೆ ಕಾಣಿಕೆಯನ್ನು ತಂದುಕೊಟ್ಟು, ಅವನ ಮುಂದೆ ನೆಲದವರೆಗೂ ಬಾಗಿ ನಮಸ್ಕರಿಸಿದರು.
೨೭
ಅವನು ಅವರ ಯೋಗಕ್ಷೇಮವನ್ನು ವಿಚಾರಿಸಿದನು. ಬಳಿಕ, “ನೀವು ಹೇಳಿದ ಮುಪ್ಪುವಯಸ್ಸಿನ ನಿಮ್ಮ ತಂದೆ ಕ್ಷೇಮವೋ? ಇನ್ನು ಬದುಕಿದ್ದಾನೋ?\ ಎಂದು ಕೇಳಲು
೨೮
ಅವರು ಮತ್ತೆ ನೆಲದವರೆಗೆ ಬಾಗಿ ನಮಸ್ಕಾರ ಮಾಡಿ, “ನಿಮ್ಮ ಸೇವಕರಾದ ನಮ್ಮ ತಂದೆ ಇಂದಿಗೂ ಕ್ಷೇಮದಿಂದ ಇದ್ದಾರೆ,” ಎಂದರು.
೨೯
ಅನಂತರ ಕಣ್ಣೆತ್ತಿ, ತನ್ನ ಒಡಹುಟ್ಟಿದ ತಮ್ಮನಾದ ಬೆನ್ಯಾಮೀನನನ್ನು ನೋಡಿದನು. “ನೀವು ಹೇಳಿದ ನಿಮ್ಮ ಕಿರಿಯ ತಮ್ಮ ಇವನೇನೋ?” ಎಂದು ಕೇಳಿ ಅವನಿಗೆ, “ಮಗು, ದೇವರ ಪ್ರೀತಿ ನಿನ್ನ ಮೇಲಿರಲಿ!” ಎಂದು ಹೇಳಿದನು.
೩೦
ಜೋಸೆಫನಿಗೆ ತಮ್ಮನನ್ನು ನೋಡಿದ ಮೇಲೆ ಕರುಳು ಕರಗಿತು. ಕಣ್ಣೀರನ್ನು ತಡೆಯಲಾಗದೆ ಒಳ ಅರಮನೆಗೆ ತ್ವರೆಯಾಗಿ ಹೋಗಿ ಅಲ್ಲಿ ಅತ್ತನು.
೩೧
ಆಮೇಲೆ ಮುಖವನ್ನು ತೊಳೆದುಕೊಂಡು, ಹೊರಗೆ ಬಂದು, ಮನಸ್ಸನ್ನು ಬಿಗಿಹಿಡಿದು, “ಊಟಕ್ಕೆ ಬಡಿಸಿರಿ”, ಎಂದು ಅಪ್ಪಣೆ ಕೊಟ್ಟನು.
೩೨
ಪರಿಚಾರಕರು ಅವನಿಗೆ ಬೇರೆ, ಅವನ ಅಣ್ಣತಮ್ಮಂದಿರಿಗೇ ಬೇರೆ, ಅವನ ಸಂಗಡವಿದ್ದ ಈಜಿಪ್ಟಿನವರಿಗೇ ಬೇರೆ, ಹೀಗೆ ಬೇರೆಬೇರೆಯಾಗಿ ಊಟಕ್ಕೆ ಬಡಿಸಿದರು. ಈಜಿಪ್ಟಿನವರು ಹಿಬ್ರಿಯರ ಸಹಪಂಕ್ತಿಯಲ್ಲಿ ಊಟಮಾಡುವುದಿಲ್ಲ; ಅದು ಅವರಿಗೆ ಅಸಹ್ಯ.
೩೩
ಜೋಸೆಫನು ತನ್ನ ಅಣ್ಣತಮ್ಮಂದಿರನ್ನು, ಹಿರಿಯವನು ಮೊದಲ್ಗೊಂಡು ಕಿರಿಯವನವರೆಗೂ, ಅವರವರ ಮಯಸ್ಸಿನ ಪ್ರಕಾರ ಕುಳ್ಳಿರಿಸಿದ್ದನು. ಇದನ್ನು ಗಮನಿಸಿದ ಅವರು ಒಬ್ಬರನ್ನೊಬ್ಬರು ನೋಡುತ್ತಾ ಆಶ್ಚರ್ಯಪಟ್ಟರು.
೩೪
ಜೋಸೆಫನು ತನ್ನ ಮುಂದೆ ಬಡಿಸಿದ್ದ ಪದಾರ್ಥಗಳಲ್ಲಿ ಅವರಿಗೆ ಭಾಗಗಳನ್ನು ಕಳಿಸಿದನು. ಬೆನ್ಯಾಮೀನನಿಗೆ ಬಂದ ಭಾಗವಾದರೋ ಮಿಕ್ಕವರ ಭಾಗಗಳಿಗಿಂತ ಐದರಷ್ಟು ಹೆಚ್ಚಾಗಿತ್ತು. ಅವರು ಯಥೇಚ್ಛವಾಗಿ ಪಾನಮಾಡಿ ಜೋಸೆಫನ ಸಂಗಡ ಸಂಭ್ರಮದಿಂದಿದ್ದರು.