೧ |
ಈಜಿಪ್ಟಿನಲ್ಲಿ ದವಸಧಾನ್ಯ ದೊರಕುತ್ತದೆ ಎಂಬ ಸಮಾಚಾರ ಯಕೋಬನಿಗೆ ಮುಟ್ಟಿತು. ಅವನು ತನ್ನ ಮಕ್ಕಳಿಗೆ, “ನೀವು ಮುಖಮುಖ ನೋಡಿಕೊಂಡು ಸುಮ್ಮನಿರುವುದು ಸರಿಯಲ್ಲ. |
೨ |
ಈಜಿಪ್ಟಿನಲ್ಲಿ ದವಸಧಾನ್ಯ ಉಂಟೆಂದು ನಾನು ಕೇಳಿದ್ದೇನೆ, ನಾವು ಸಾಯದೆ ಬದುಕುವಂತೆ ನೀವು ಅಲ್ಲಿಗೆ ಹೋಗಿ, ಬೇಕಾದ ದವಸವನ್ನು ಕೊಂಡುಕೊಂಡು ಬನ್ನಿ,” ಎಂದು ಹೇಳಿದನು. |
೩ |
ಜೋಸೆಫನ ಹತ್ತುಮಂದಿ ಅಣ್ಣಂದಿರು ಧಾನ್ಯವನ್ನು ತರುವುದಕ್ಕಾಗಿ ಈಜಿಪ್ಟ್ ದೇಶಕ್ಕೆ ಹೊರಟರು. |
೪ |
ಆದರೆ ಜೋಸೆಫನ ಒಡಹುಟ್ಟಿದ ತಮ್ಮನಾದ ಬೆನ್ಯಾಮೀನನನ್ನು ಯಕೋಬನು ಅವರ ಸಂಗಡ ಕಳಿಸಲಿಲ್ಲ. ಏಕೆಂದರೆ, ಅವನಿಗೆ ಏನಾದರೂ ಆಪತ್ತು ಒದಗೀತೆಂಬ ಹೆದರಿಕೆ ಅವನದು. |
೫ |
ಕಾನಾನ್ ನಾಡಿನಲ್ಲೂ ಬರವಿತ್ತು. ಧಾನ್ಯ ಕೊಂಡುಕೊಳ್ಳಲು ಅಲ್ಲಿಂದ ಈಜಿಪ್ಟಿಗೆ ಬಂದವರಲ್ಲಿ ಯಕೋಬನ (ಇಸ್ರಯೇಲನ) ಮಕ್ಕಳೂ ಇದ್ದರು. |
೬ |
ಆಗ ಈಜಿಪ್ಟ್ ದೇಶದಲ್ಲಿ ಅಧಿಕಾರ ನಡೆಸುತ್ತಿದ್ದವನು ಹಾಗೂ ಜನರಿಗೆ ದವಸಧಾನ್ಯ ಮಾರಾಟ ಮಾಡಿಸುತ್ತಿದ್ದವನು ಜೋಸೆಫನೇ. ಇಂತಿರಲು ಅವನ ಅಣ್ಣಂದಿರು ಬಂದು ಅವನ ಮುಂದೆ ನೆಲದವರೆಗೂ ಬಾಗಿ ನಮಸ್ಕರಿಸಿದರು. |
೭ |
ಜೋಸೆಫನು ಅವರನ್ನು ನೋಡಿದಕೂಡಲೆ ಗುರುತುಹಿಡಿದನು. ಆದರೂ ಅವರ ಪರಿಚಯ ಇಲ್ಲದವನಂತೆ ಬಿರುಬುಡಿಯಿಂದ, “ನೀವು ಎಲ್ಲಿಯವರು?” ಎಂದು ಕೇಳಿದನು. ಅವರು, “ನಾವು ಧಾನ್ಯ ಕೊಂಡುಕೊಳ್ಳುವುದಕ್ಕಾಗಿ ಕಾನಾನ್ ನಾಡಿನಿಂದ ಬಂದವರು,” ಎಂದು ಹೇಳಿದರು. |
೮ |
ಅಣ್ಣಂದಿರ ಗುರುತು ಜೋಸೆಫನಿಗೆ ತಿಳಿಯಿತಾದರೂ ಅವನ ಗುರುತು ಅವರಿಗೆ ತಿಳಿಯದೆ ಹೋಯಿತು. |
೯ |
ಅವರ ವಿಷಯವಾಗಿ ತಾನು ಕಂಡಿದ್ದ ಕನಸುಗಳನ್ನು ಜೋಸೆಫನು ನೆನಪಿಗೆ ತಂದುಕೊಂಡನು. ಅವರನ್ನು ನೋಡಿ, “ನೀವು ಗೂಢಚಾರರು; ನಮ್ಮ ದೇಶದ ದುರ್ಬಲ ಸ್ಥಳಗಳನ್ನು ಪತ್ತೆಹಚ್ಚುವುದಕ್ಕಾಗಿ ಬಂದವರು,” ಎಂದನು. |
೧೦ |
ಅದಕ್ಕೆ ಅವರು, \ಇಲ್ಲ, ಒಡೆಯಾ, ತಮ್ಮ ಸೇವಕರಾದ ನಾವು ಆಹಾರಪದಾರ್ಥಗಳನ್ನು ಕೊಂಡುಕೊಳ್ಳುವುದಕ್ಕೆ ಬಂದಿದ್ದೇವೆ. |
೧೧ |
ನಾವೆಲ್ಲರು ಒಬ್ಬ ತಂದೆಯ ಮಕ್ಕಳು; ನಾವು ಸತ್ಯವಂತರೇ ಹೊರತು ಗೂಢಚಾರರಲ್ಲ,” ಎಂದರು. |
೧೨ |
ಜೋಸೆಫನು ಅವರಿಗೆ, “ಸುಳ್ಳು, ನಮ್ಮ ದೇಶದ ದುರ್ಬಲ ಸ್ಥಳಗಳನ್ನು ತಿಳಿದುಕೊಳ್ಳುವುದಕ್ಕೆ ಬಂದಿದ್ದೀರಿ,” ಎಂದನು. |
೧೩ |
ಅದಕ್ಕೆ ಅವರು, “ತಮ್ಮ ಸೇವಕರಾದ ನಾವು ಹನ್ನೆರಡು ಮಂದಿ ಅಣ್ಣತಮ್ಮಂದಿರು; ಕಾನಾನ್ ನಾಡಿನವರು, ಒಬ್ಬ ತಂದೆಯ ಮಕ್ಕಳು; ನಮ್ಮಲ್ಲಿ ಚಿಕ್ಕವನು ತಂದೆಯ ಬಳಿಯಲ್ಲೇ ಇದ್ದಾನೆ; ಒಬ್ಬನು ಇಲ್ಲವಾದನು,” ಎಂದರು. |
೧೪ |
ಜೋಸೆಫನು ಅವರಿಗೆ, “ನಾನು ಈಗಾಗಲೆ ಹೇಳಿದಂತೆ ನೀವು ಗೂಢಚಾರರೇ, |
೧೫ |
ಇದು ನಿಜವೋ ಸುಳ್ಳೋ ಎಂದು ಗೊತ್ತಾಗಬೇಕಾದರೆ ನೀವು ನಿಮ್ಮ ತಮ್ಮನನ್ನು ಬರಮಾಡಬೇಕು. ಅವನು ಬಂದ ಹೊರತು, ಫರೋಹನ ಜೀವದಾಣೆ, ನೀವು ಇಲ್ಲಿಂದ ಹೊರಟುಹೋಗಕೂಡದು. |
೧೬ |
ಅವನನ್ನು ಕರೆದುಕೊಂಡು ಬರುವುದಕ್ಕೆ ನಿಮ್ಮಲ್ಲಿ ಒಬ್ಬನನ್ನು ಕಳಿಸಿರಿ. ಅವನು ಬರುವವರೆಗೂ ನಿಮ್ಮನ್ನು ಸೆರೆಯಲ್ಲಿ ಇರಿಸುತ್ತೇನೆ. ಹೀಗೆ ನಿಮ್ಮ ಮಾತುಗಳನ್ನು ಪರೀಕ್ಷಿಸಿ ನೀವು ಸತ್ಯವಂತರೋ ಇಲ್ಲವೋ ಎಂದು ತಿಳಿದುಕೊಳ್ಳುತ್ತೇನೆ. ನಿಮ್ಮ ತಮ್ಮನು ಬಾರದೆ ಹೋದರೆ, ಫರೋಹನ ಜೀವದಾಣೆ, ನೀವು ಗೂಢಚಾರರೇ,” ಎಂದು ಹೇಳಿ, |
೧೭ |
ಅವರೆಲ್ಲರನ್ನು ಮೂರು ದಿನಗಳವರೆಗೆ ಕಾವಲಲ್ಲಿ ಇರಿಸಿದನು. |
೧೮ |
ಮೂರನೆಯ ದಿನ ಜೋಸೆಫನು ಅವರನ್ನು ಕರೆಸಿ, “ನಾನು ದೇವರಲ್ಲಿ ಭಯಭಕ್ತಿಯುಳ್ಳವನು; ನಿಮಗೆ ಜೀವದ ಮೇಲೆ ಆಶೆ ಇದ್ದರೆ ನಾನು ಹೇಳಿದಂತೆ ಮಾಡಿ; |
೧೯ |
ನೀವು ಸತ್ಯವಂತರಾದರೆ ನಿಮ್ಮಲ್ಲಿ ಒಬ್ಬನನ್ನು ಮಾತ್ರ ಸೆರೆಯಲ್ಲಿಡುತ್ತೇನೆ. ಮಿಕ್ಕವರು ಕ್ಷಾಮದಿಂದ ಬಳಲುತ್ತಿರುವ ನಿಮ್ಮ ನಿಮ್ಮ ಕುಟುಂಬಗಳಿಗೆ ಅಗತ್ಯವಾದ ಧಾನ್ಯವನ್ನು ತೆಗೆದುಕೊಂಡು ಹೋಗಿ. |
೨೦ |
ಆದರೆ ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬರಬೇಕು, ಕರೆದುಕೊಂಡು ಬಂದರೆ, ನಿಮ್ಮ ಮಾತು ಸತ್ಯವೆಂದು ತಿಳಿದುಕೊಳ್ಳುತ್ತೇನೆ, ಆಗ ನೀವು ಸಾಯದೆ ಉಳಿಯುವಿರಿ,” ಎಂದನು. ಅವರು ಹಾಗೆಯೇ ಮಾಡಲು ಒಪ್ಪಿಕೊಂಡರು. |
೨೧ |
ಆಗ ಅವರು ತಮ್ಮತಮ್ಮೊಳಗೆ, “ನಾವು ನಮ್ಮ ತಮ್ಮನಿಗೆ ಮಾಡಿದ ದ್ರೋಹಕ್ಕೆ ತಕ್ಕ ದಂಡನೆಯನ್ನು ಅನುಭವಿಸುತ್ತಿದ್ದೇವೆ. ಅವನು ನಮ್ಮನ್ನು ಕಳಕಳಿ ಬೇಡಿಕೊಂಡ. ಅವನ ಪ್ರಾಣಸಂಕಟವನ್ನು ತಿಳಿದೂ ನಾವು ಅವನ ಮೊರೆಗೆ ಕಿವಿಗೊಡಲಿಲ್ಲ. ಆದ್ದರಿಂದಲೆ ಈ ಸಂಕಟದಲ್ಲಿ ಸಿಕ್ಕಿಹಾಕಿಕೊಂಡು ಇದ್ದೇವೆ,” ಎಂದು ಮಾತಾಡಿಕೊಂಡರು. |
೨೨ |
ಅಂತೆಯೇ ರೂಬೇನನು, “ಆ ಹುಡುಗನಿಗೆ ಯಾವ ಕೇಡೂ ಮಾಡಬೇಡಿ’ ಎಂದು ನಾನು ಹೇಳಲಿಲ್ಲವೆ? ನೀವು ಕೇಳದೆಹೋದಿರಿ. ಅವನ ರಕ್ತ ಈಗ ನಮ್ಮಿಂದ ಪ್ರಾಯಶ್ಚಿತ್ತ ಕೇಳುತ್ತಿದೆ,” ಎಂದ. |
೨೩ |
ಜೋಸೆಫನು ಒಬ್ಬ ಅನುವಾದಕನ ಮುಖಾಂತರ ಅವರ ಸಂಗಡ ಮಾತಾಡುತ್ತಿದ್ದುದರಿಂದ ಅವನಿಗೆ ತಮ್ಮ ಮಾತು ಗೊತ್ತಾಗುತ್ತಿದೆ ಎಂದು ಅವರು ನೆನೆಸಲಿಲ್ಲ. |
೨೪ |
ಜೋಸೆಫನಾದರೋ ಅವರ ಬಳಿಯಿಂದ ಮರೆಯಾಗಿ ಹೋಗಿ ಕಣ್ಣೀರು ಸುರಿಸಿದ. ತರುವಾಯ ಅವರ ಬಳಿಗೆ ಬಂದು, ಸಂಭಾಷಣೆ ಮುಂದುವರೆಸಿ, ಸಿಮೆಯೋನನನ್ನು ಆರಿಸಿ, ಅವರ ಕಣ್ಣೆದುರಿನಲ್ಲೇ ಅವನಿಗೆ ಬೇಡಿಹಾಕಿಸಿದ. |
೨೫ |
ಇದಾದ ಬಳಿಕ ಜೋಸೆಫನು ತನ್ನ ಆಳುಗಳಿಗೆ, “ಆ ಜನರ ಚೀಲಗಳಲ್ಲಿ ಧಾನ್ಯವನ್ನು ತುಂಬಿಸಿ ಒಬ್ಬೊಬ್ಬನ ಚೀಲದಲ್ಲಿ ಅವನವನ ಹಣವನ್ನು ಅದರಲ್ಲಿ ಇಟ್ಟುಬಿಡಿ. ಅವರ ಪ್ರಯಾಣಕ್ಕೆ ಬೇಕಾದ ಅಹಾರವನ್ನು ಕೊಟ್ಟು ಕಳಿಸಿರಿ,” ಎಂದು ಅಪ್ಪಣೆ ಮಾಡಿದ. ಆಳುಗಳು ಅದರಂತೆಯೆ ಮಾಡಿದರು. |
೨೬ |
ಅಣ್ಣಂದಿರು ತಾವು ಕೊಂಡುಕೊಂಡ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು ಹೊರಟರು. |
೨೭ |
ರಾತ್ರಿಗೆ ಒಂದು ಚಾವಡಿಯಲ್ಲಿ ಇಳಿದುಕೊಂಡರು. ಅವರಲ್ಲಿ ಒಬ್ಬನು ತನ್ನ ಕತ್ತೆಗೆ ಧಾನ್ಯಕೊಡಬೇಕೆಂದು ತನ್ನ ಚೀಲವನ್ನು ಬಿಚ್ಚಿದನು. ತಾನು ತಂದಿದ್ದ ಹಣ ಅದರ ಬಾಯಲ್ಲೇ ಇತ್ತು. |
೨೮ |
“ನಾನು ಕೊಟ್ಟ ಹಣ ನನಗೆ ವಾಪಸ್ಸಾಗಿದೆ; ಇಗೋ, ನನ್ನ ಚೀಲದಲ್ಲಿದೆ,” ಎಂದು ತನ್ನ ಅಣ್ಣತಮ್ಮಂದಿರಿಗೆ ಹೇಳಿದ. ಅವರು ಕಕ್ಕಾಬಿಕ್ಕಿಯಾಗಿ, ಒಬ್ಬರನ್ನೊಬ್ಬರು ಬೆರಗಿನಿಂದ ನೋಡುತ್ತಾ, “ನಮಗೇಕೆ ದೇವರು ಹೀಗೆ ಮಾಡಿದ್ದಾರೆ?” ಎಂದುಕೊಂಡರು. |
೨೯ |
ಕಾನಾನ್ ನಾಡನ್ನು ಅವರು ತಲುಪಿದರು. ತಮ್ಮ ತಂದೆಯ ಬಳಿಗೆ ಬಂದು ನಡೆದುದೆಲ್ಲವನ್ನು ವರದಿಮಾಡಿದರು. |
೩೦ |
“ಆ ದೇಶಾಧಿಪತಿ ನಮ್ಮೊಡನೆ ಗಡುಸಾಗಿ ಮಾತಾಡಿದ; ನಮ್ಮನ್ನು ಗೂಢಚಾರರೆಂದು ಕರೆದ. |
೩೧ |
ನಾವು ಅವನಿಗೆ, ‘ನಾವು ಸತ್ಯವಂತರೇ ಹೊರತು ಗೂಢಚಾರರೇನು ಅಲ್ಲ, |
೩೨ |
ನಾವು ಒಬ್ಬ ತಂದೆಗೆ ಹುಟ್ಟಿದ ಹನ್ನೆರಡು ಮಂದಿ ಅಣ್ಣತಮ್ಮಂದಿರು; ನಮ್ಮಲ್ಲಿ ಒಬ್ಬನು ಇಲ್ಲವಾದ. ಚಿಕ್ಕವನೋ ಈಗ ಕಾನಾನ್ ನಾಡಿನಲ್ಲಿ ನಮ್ಮ ತಂದೆಯ ಬಳಿಯಲ್ಲಿದ್ದಾನೆ’ ಎಂದು ಹೇಳಿದೆವು. |
೩೩ |
ಅದಕ್ಕೆ ಆ ದೇಶಾಧಿಪತಿ, “ನೀವು ಸತ್ಯವಂತರೋ ಇಲ್ಲವೋ ಎಂಬುದು ಗೊತ್ತಾಗುವುದಕ್ಕಾಗಿ ನಿಮ್ಮಲ್ಲಿ ಒಬ್ಬನನ್ನು ನನ್ನ ಬಳಿಯಲ್ಲೆ ಬಿಟ್ಟುಹೋಗಿ; ನಿಮ್ಮ ಕುಟುಂಬದವರ ಕ್ಷಾಮನಿವಾರಣೆಗೆ ಬೇಕಾದುದನ್ನು ತೆಗೆದುಕೊಂಡು ಹೋಗಬಹುದು. |
೩೪ |
ಆದರೆ ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬರಬೇಕು. ಕರೆದುಕೊಂಡು ಬಂದರೆ, ನೀವು ಗೂಢಚಾರರಲ್ಲ. ಸತ್ಯವಂತರೇ ಎಂದು ತಿಳಿದುಕೊಳ್ಳುತ್ತೇನೆ; ನಿಮ್ಮ ಅಣ್ಣನನ್ನು ಬಿಡುಗಡೆ ಮಾಡುತ್ತೇನೆ ಮತ್ತು ನೀವು ಈ ದೇಶದಲ್ಲಿ ವ್ಯಾಪಾರ ನಡೆಸಬಹುದು,” ಎಂದು ಹೇಳಿದ. |
೩೫ |
ಅವರು ತಮ್ಮ ತಮ್ಮ ಚೀಲವನ್ನು ಬಿಚ್ಚಿನೋಡಿದಾಗ ಪ್ರತಿಯೊಬ್ಬನ ಚೀಲದಲ್ಲೂ ಅವನವನ ಹಣದ ಗಂಟು ಸಿಕ್ಕಿತು. ಆ ಗಂಟುಗಳನ್ನು ಕಂಡಾಗ ಅವರೂ ಅವರ ತಂದೆಯೂ ಚಕಿತರಾದರು. |
೩೬ |
ಆಗ ಅವರ ತಂದೆ ಯಕೋಬನು ಅವರಿಗೆ, “ನನ್ನನ್ನು ಮಕ್ಕಳಿಲ್ಲದವನಂತೆ ಮಾಡಿದ್ದೀರಿ; ಜೋಸೆಫನು ಇಲ್ಲ, ಸಿಮೆಯೋನನೂ ಇಲ್ಲ, ಬೆನ್ಯಾಮೀನನನ್ನೂ ಕರೆದುಕೊಂಡು ಹೋಗಬೇಕೆಂದಿದ್ದೀರಿ. ಈ ಕಷ್ಟದುಃಖವೆಲ್ಲ ನನ್ನ ತಲೆಯ ಮೇಲೆ ಬಂದೆರಗಿದೆ!” ಎಂದನು. |
೩೭ |
ಅದಕ್ಕೆ ರೂಬೇನನು, “ನಾನು ಈ ಹುಡುಗನನ್ನು ನಿಮಗೆ ಪುನಃ ತಂದೊಪ್ಪಿಸುತ್ತೇನೆ; ಇಲ್ಲದೆಹೋದರೆ ನನ್ನಿಬ್ಬರು ಗಂಡುಮಕ್ಕಳನ್ನು ಕೊಂದುಹಾಕಬಹುದು. ಇವನನ್ನು ನನ್ನ ವಶಕ್ಕೆ ಕೊಡಿ, ನಾನು ತಪ್ಪದೆ ಇವನನ್ನು ನಿಮ್ಮ ಬಳಿಗೆ ಕರೆದುಕೊಂಡು ಬರುತ್ತೇನೆ,” ಎಂದು ಹೇಳಿದ. |
೩೮ |
ಯಕೋಬನು ಅವರಿಗೆ, “ನನ್ನ ಮಗ ನಿಮ್ಮ ಸಂಗಡ ಹೋಗಬಾರದು. ಇವನ ಒಡಹುಟ್ಟಿದ ಅವನು ಸತ್ತುಹೋದ, ಇವನೊಬ್ಬನೇ ಉಳಿದು ಇದ್ದಾನೆ, ದಾರಿಯಲ್ಲಿ ಇವನಿಗೇನಾದರೂ ಆಪತ್ತು ಸಂಭವಿಸಬಹುದು. ಆಗ, ನರೆಕೂದಲಿನ ಈ ಮುದುಕ ದುಃಖದಿಂದಲೆ ಸಮಾಧಿ ಸೇರಲು ನೀವೇ ಕಾರಣರಾಗುತ್ತೀರಿ,” ಎಂದು ಹೇಳಿದ.
|
Kannada Bible (KNCL) 2016 |
No Data |