English
A A A A A
×

ಕನ್ನಡ ಬೈಬಲ್ (KNCL) 2016

ಆದಿಕಾಂಡ ೪೧
ಎರಡು ವರ್ಷಗಳಾದ ಮೇಲೆ ಫರೋಹನಿಗೆ ಒಂದು ಕನಸುಬಿತ್ತು. ಆ ಕನಸಿನಲ್ಲಿ ಅವನು ನೈಲ್ ನದಿಯ ತೀರದಲ್ಲಿ ನಿಂತಿದ್ದನು.
ಆಗ ಅಚ್ಚುಕಟ್ಟಾದ ಏಳು ಕೊಬ್ಬಿದ ಹಸುಗಳು ಆ ನದಿಯೊಳಗಿಂದ ಬಂದು ಜೊಂಡು ಹುಲ್ಲಿನಲ್ಲಿ ಮೇಯುತ್ತಿದ್ದವು.
ಅವುಗಳ ಹಿಂದೆಯೇ ಒಣಕಲಾದ ಏಳು ಬಡ ಹಸುಗಳು ನದಿಯೊಳಗಿಂದ ಬಂದು ಮೊದಲು ಕಾಣಿಸಿದ ಹಸುಗಳ ಹತ್ತಿರ ನದಿಯ ತೀರದಲ್ಲೇ ನಿಂತವು.
ಒಣಕಲಾದ ಈ ಬಡ ಹಸುಗಳು ಅಚ್ಚುಕಟ್ಟಾದ ಆ ಕೊಬ್ಬಿದ ಹಸುಗಳನ್ನು ತಿಂದುಬಿಟ್ಟವು. ಅಷ್ಟರಲ್ಲಿ ಫರೋಹನಿಗೆ ಎಚ್ಚರವಾಯಿತು.
ಫರೋಹನಿಗೆ ಮತ್ತೆ ನಿದ್ರೆ ಹತ್ತಿದಾಗ ಅವನಿಗೆ ಇನ್ನೊಂದು ಕನಸುಬಿತ್ತು. ಅದರಲ್ಲಿ ಕಾಳುತುಂಬಿದ ಏಳು ಬಲಿತ ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿದವು.
ಅವುಗಳ ಹಿಂದೆಯೇ ಮೂಡಣಗಾಳಿಯಿಂದ ಒಣಗಿ, ಬತ್ತಿಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು.
ಬತ್ತಿಹೋಗಿದ್ದ ಈ ತೆನೆಗಳು, ಕಾಳುತುಂಬಿದ್ದ ಆ ಏಳು ಬಲಿತ ತೆನೆಗಳನ್ನು ನುಂಗಿಬಿಟ್ಟವು. ಅಷ್ಟರೊಳಗೆ ಫರೋಹನು ಎಚ್ಚೆತ್ತು, ತಾನು ಕಂಡದ್ದು ಕನಸೆಂದು ತಿಳಿದುಕೊಂಡ.
ಬೆಳಿಗ್ಗೆ ಅವನ ಮನಸ್ಸು ಕಳವಳಗೊಂಡು ಇತ್ತು. ಈಜಿಪ್ಟ್ ದೇಶದ ಎಲ್ಲ ಜೋಯಿಸರನ್ನೂ ವಿದ್ವಾಂಸರನ್ನೂ ಬರಮಾಡಿದ. ಅವರಿಗೆ ತನ್ನ ಕನಸನ್ನು ವಿವರಿಸಿದ. ಅದರ ಅರ್ಥವನ್ನು ಅವನಿಗೆ ಹೇಳಬಲ್ಲವರು ಯಾರೂ ಸಿಕ್ಕಲಿಲ್ಲ.
ಆಗ ಪಾನಸೇವಕರಲ್ಲಿ ಮುಖ್ಯಸ್ಥನು ಫರೋಹನಿಗೆ, “ಒಡೆಯಾ, ಈ ದಿನತಾನೆ ನನ್ನ ನೆನಪಿಗೆ ಬರುತ್ತಿದೆ.
೧೦
ತಾವು ತಮ್ಮ ಸೇವಕರ ಮೇಲೆ ಸಿಟ್ಟುಗೊಂಡು, ನನ್ನನ್ನೂ ಆ ಮುಖ್ಯ ಅಡಿಗೆಭಟ್ಟನನ್ನೂ ದಳಪತಿಯ ವಠಾರದಲ್ಲಿ ಇರುವ ಸೆರೆಯಲ್ಲಿ ಇಟ್ಟಿದ್ದಿರಿ. ಅಲ್ಲಿದ್ದಾಗ ನಮ್ಮಿಬ್ಬರಿಗೂ ಒಂದೇ ರಾತ್ರಿಯಲ್ಲಿ ಕನಸುಬಿತ್ತು
೧೧
ಒಬ್ಬೊಬ್ಬನ ಕನಸಿಗೂ ಬೇರೆಬೇರೆ ಅರ್ಥವಿತ್ತು.
೧೨
ಹಿಬ್ರಿಯನಾದ ಒಬ್ಬ ಯುವಕ ನಮ್ಮ ಸಂಗಡ ಅಲ್ಲಿದ್ದ. ಅವನು ದಳಪತಿಯವರ ಸೇವಕ. ನಾವು ನಮ್ಮ ಕನಸನ್ನು ಅವನಿಗೆ ತಿಳಿಸಿದೆವು. ಅವನು ಆ ಕನಸುಗಳಿಗೆ ಸರಿಯಾದ ಅರ್ಥವನ್ನು ಹೇಳಿದ.
೧೩
ಅದು ಮಾತ್ರವಲ್ಲ, ಅವನು ಹೇಳಿದ ಪ್ರಕಾರವೇ ಆಯಿತು. ನನಗೆ ನೌಕರಿ ಮತ್ತೆ ದೊರಕಿತು. ಆ ಮುಖ್ಯ ಅಡಿಗೆಭಟ್ಟನನ್ನೋ ನೇಣುಹಾಕಲಾಯಿತು,’ ಎಂದು ಸನ್ನಿಧಿಯಲ್ಲಿ ಅರಿಕೆಮಾಡಿದ.
೧೪
ಇದನ್ನು ಕೇಳಿದ ಫರೋಹನು ಜೋಸೆಫನನ್ನು ಕರೆತರುವಂತೆ ಆಳುಗಳನ್ನು ಕಳಿಸಿದ. ಅವರು ಬಂದು ಅವನನ್ನು ಸೆರೆಯಿಂದ ತ್ವರೆಯಾಗಿ ಬಿಡುಗಡೆ ಮಾಡಿದರು. ಜೋಸೆಫನು ಕ್ಷೌರಮಾಡಿಕೊಂಡು, ಬಟ್ಟೆ ಬದಲಾಯಿಸಿಕೊಂಡು ಫರೋಹನ ಸನ್ನಿಧಿಯಲ್ಲಿ ಹಾಜರಾದ.
೧೫
ಫರೋಹನು ಅವನಿಗೆ, “ನಾನು ಒಂದು ಕನಸುಕಂಡೆ, ಅದರ ಅರ್ಥ ಹೇಳಬಲ್ಲವರು ಯಾರೂ ಇಲ್ಲ. ಆದರೆ ನೀನು ಕನಸನ್ನು ಕೇಳುತ್ತಲೇ ಅದರ ಅರ್ಥವನ್ನು ಹೇಳಬಲ್ಲೆ ಎಂಬ ಸಮಾಚಾರ ಕೇಳಿದ್ದೇನೆ,” ಎಂದ.
೧೬
ಜೋಸೆಫನು, “ನನ್ನಲ್ಲಿ ಅಂಥ ಸಾಮರ್ಥ್ಯವೇನೂ ಇಲ್ಲ; ಆದರೆ ದೇವರು, ಫರೋಹ ಆದ ನಿಮಗೆ ತೃಪ್ತಿಕರವಾದ ಉತ್ತರಕೊಡಬಲ್ಲರು,” ಎಂದು ಹೇಳಿದ.
೧೭
ಆಗ ಫರೋಹನು ಜೋಸೆಫನಿಗೆ, “ಕನಸಿನಲ್ಲಿ ನಾನು ನೈಲ್ ನದಿಯ ತೀರದಲ್ಲಿ ನಿಂತಿದ್ದೆ.
೧೮
ನದಿಯೊಳಗಿಂದ ಅಚ್ಚುಕಟ್ಟಾದ ಏಳು ಕೊಬ್ಬಿದ ಹಸುಗಳು ಬಂದು ಜೊಂಡುಹುಲ್ಲಿನಲ್ಲಿ ಮೇಯುತ್ತಿದ್ದವು.
೧೯
ಅವುಗಳ ಹಿಂದೆಯೆ ಬಹಳ ಒಣಕಲಾದ ಹಾಗೂ ಸಣಕಲಾದ, ಬೇರೆ ಏಳು ಬಡಹಸುಗಳು ಬಂದವು. ಅಂಥ ಬಡಹಸುಗಳನ್ನು ನಾನು ಈಜಿಪ್ಟಿನಲ್ಲಿ ಎಲ್ಲೂ ನೋಡಿದ್ದಿಲ್ಲ.
೨೦
ಅದಲ್ಲದೆ, ಸಣಕಲಾಗಿದ್ದ ಆ ಬಡಹಸುಗಳು ಮೊದಲೇ ಕಾಣಿಸಿದ ಆ ಏಳು ಕೊಬ್ಬಿನ ಹಸುಗಳನ್ನು ತಿಂದುಬಿಟ್ಟವು.
೨೧
ತಿಂದರೂ ತಿಂದಂತೆಯೇ ತೋರಲಿಲ್ಲ. ಮೊದಲಿದ್ದಂತೆಯೇ ಬಡಕಲಾಗಿದ್ದವು. ಅಷ್ಟರ ಒಳಗೆ ನನಗೆ ಎಚ್ಚರವಾಯಿತು.
೨೨
ನನಗೆ ಬಿದ್ದ ಇನ್ನೊಂದು ಕನಸಿನೊಳಗೆ ಕಾಳುತುಂಬಿದ್ದ ಏಳು ಬಲಿತ ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿಬಂದವು.
೨೩
ಅವುಗಳ ಹಿಂದೆಯೆ, ಮೂಡಣ ಗಾಳಿಯಿಂದ ಒಣಗಿ, ಬತ್ತಿ, ಕೆಟ್ಟುಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು.
೨೪
ಬತ್ತಿಹೋಗಿದ್ದ ತೆನೆಗಳು ಕಾಳು ತುಂಬಿದ್ದ ಆ ಏಳು ತೆನೆಗಳನ್ನು ನುಂಗಿಬಿಟ್ಟವು. ಈ ಕನಸುಗಳನ್ನು ಜೋಯಿಸರಿಗೆ ತಿಳಿಸಿದೆ; ಅವುಗಳ ಅರ್ಥವನ್ನು ವಿವರಿಸಿ ಹೇಳಲು ಅವರಲ್ಲಿ ಯಾರಿಂದಲೂ ಆಗಲಿಲ್ಲ.”
೨೫
ಜೋಸೆಫನು ಫರೋಹನಿಗೆ, “ತಾವು ಕಂಡ ಎರಡು ಕನಸುಗಳ ವಿಷಯ ಒಂದೇ. ದೇವರು ಮಾಡಬೇಕೆಂದಿರುವುದನ್ನು ಇವುಗಳ ಮೂಲಕ ತಮಗೆ ತಿಳಿಸಿದ್ದಾರೆ.
೨೬
ಆ ಏಳು ಒಳ್ಳೆಯ ಹಸುಗಳೇ ಏಳು ವರ್ಷಗಳು; ಆ ಏಳು ಒಳ್ಳೆಯತೆನೆಗಳೂ ಏಳು ವರ್ಷಗಳು; ಎರಡು ಕನಸುಗಳ ಅರ್ಥ ಒಂದೇ.
೨೭
ಒಳ್ಳೆಯ ಹಸುಗಳ ಹಿಂದೆ ಬಂದ ಒಣಕಲಾಗಿದ್ದ ಆ ಏಳು ಬಡಹಸುಗಳು ಮತ್ತು ಮೂಡಣ ಗಾಳಿಯಿಂದ ಕೆಟ್ಟುಹೋಗಿದ್ದ ಆ ಏಳು ಕಾಳಿಲ್ಲದ ತೆನೆಗಳು ಬರವುಂಟಾಗುವ ಏಳು ವರ್ಷಗಳನ್ನು ಸೂಚಿಸುತ್ತವೆ.
೨೮
ನಾನು ತಮಗೆ ಅರಿಕೆಮಾಡಿದಂತೆ ದೇವರು ಮಾಡಬೇಕೆಂದು ಇರುವುದನ್ನು ತಮಗೆ ತಿಳಿಸಿದ್ದಾರೆ.
೨೯
ಈಜಿಪ್ಟ್ ದೇಶದಲ್ಲೆಲ್ಲ ಬಹುವಿಶೇಷವಾದ ಏಳು ಸುಭಿಕ್ಷ ವರ್ಷಗಳೂ
೩೦
ತರುವಾಯ ಏಳು ದುರ್ಭಿಕ್ಷ ವರ್ಷಗಳೂ ಬರುವುವು. ಆಗ ಈಜಿಪ್ಟ್ ದೇಶದ ಅವರು ಮೊದಲಿದ್ದ ಆ ಸುಭಿಕ್ಷವನ್ನು ಮರೆತುಬಿಡುವರು; ಆ ಬರದಿಂದ ದೇಶವು ಹಾಳಾಗಿಹೋಗುವುದು.
೩೧
ಮುಂದೆ ಬರಲಿರುವ ಕ್ಷಾಮವು ಅತ್ಯಂತ ಘೋರಾವಾಗಿರುವುದು; ಮೊದಲಿದ್ದ ಸಮೃದ್ಧಿಯ ಗುರುತೇ ಇಲ್ಲದೆ ಹೋಗುವುದು.
೩೨
ದೇವರು ಈ ಕಾರ್ಯವನ್ನು ನಿರ್ಧರಿಸಿದ್ದಾರೆ; ಇದು ಬೇಗ ಬರಲಿದೆಯೆಂದು ತಿಳಿದುಕೊಳ್ಳಬೇಕು. ಏಕೆಂದರೆ ನಿಮಗೆ ಇಮ್ಮಡಿ ಕನಸುಬಿದ್ದಿದೆ.
೩೩
“ಆದುದರಿಂದ ತಾವು ವಿವೇಕಿಯೂ ಬುದ್ಧಿವಂತನೂ ಆದ ಒಬ್ಬನನ್ನು ಆರಿಸಿಕೊಂಡು ಅವನನ್ನು ಈಜಿಪ್ಟ್ ದೇಶದ ಮೇಲೆ ಆಧಿಕಾರಿಯನ್ನಾಗಿ ನೇಮಿಸಬೇಕು.
೩೪
ಅದೂ ಅಲ್ಲದೆ, ದೇಶದ ಎಲ್ಲ ಭಾಗಗಳಲ್ಲೂ ಗುಮಾಸ್ತರನ್ನು ನೇಮಿಸಿ ಅವರ ಮೂಲಕ ಸುಭಿಕ್ಷವಾದ ಏಳು ವರ್ಷಗಳಲ್ಲಿ ದೇಶದ ಬೆಳೆಯಲ್ಲಿ ಐದನೆಯ ಒಂದು ಪಾಲನ್ನು ಕಂದಾಯವಾಗಿ ಎತ್ತಬೇಕು.
೩೫
ಮುಂದಣ ಒಳ್ಳೆಯ ವರ್ಷಗಳಲ್ಲಿ ಆಹಾರ ಪದಾರ್ಥಗಳನ್ನೂ ದವಸಧಾನ್ಯಗಳನ್ನೂ ಶೇಖರಿಸಿ ಪಟ್ಟಣಗಳಲ್ಲಿ ಜೋಪಾನವಾಗಿಡುವಂತೆ ತಾವು ಆಜ್ಞಾಪಿಸಬೇಕು.
೩೬
ಹೀಗೆ ಆಹಾರ ಪದಾರ್ಥಗಳನ್ನು ಶೇಖರಿಸುವುದರಿಂದ ಈಜಿಪ್ಟ್ ದೇಶದಲ್ಲಿ ದುರ್ಭಿಕ್ಷವುಂಟಾಗುವ ಏಳು ವರ್ಷಗಳಲ್ಲಿ ಜನರು ಕ್ಷಾಮದಿಂದ ಸಾಯುವುದಿಲ್ಲ,” ಎಂದು ಹೇಳಿದನು.
೩೭
ಜೋಸೆಫನು ಸೂಚಿಸಿದ ಯೋಜನೆ ಫರೋಹನಿಗೂ ಅವನ ಪರಿವಾರದವರಿಗೂ ಒಳ್ಳೆಯದೆಂದು ತೋರಿತು.
೩೮
ಫರೋಹನು ತನ್ನ ಪರಿವಾರದವರಿಗೆ, “ಈತ ದೇವರಾತ್ಮ ಪಡೆದವನು,
೩೯
ಈತನಿಗಿಂತ ಯೋಗ್ಯವಾದ ವ್ಯಕ್ತಿ ನಮಗೆ ಸಿಕ್ಕುವುದು ಸಾಧ್ಯವೆ?” ಎಂದು ಹೇಳಿ ಜೋಸೆಫನಿಗೆ, “ದೇವರೇ ನಿನಗೆ ಇದನ್ನೆಲ್ಲ ತಿಳಿಸಿರುವುದರಿಂದ ನಿನಗೆ ಸಮಾನವಾದ ಬುದ್ಧಿವಿವೇಕಗಳುಳ್ಳ ವ್ಯಕ್ತಿ ಯಾವನೂ ಇಲ್ಲ.
೪೦
ನೀನೇ ಅರಮನೆಯಲ್ಲಿ ಮುಖ್ಯಾಧಿಕಾರಿಯಾಗಿರಬೇಕು; ನಿನ್ನ ಅಪ್ಪಣೆಯ ಮೇರೆಗೆ ಪ್ರಜೆಗಳೆಲ್ಲರು ನಡೆದುಕೊಳ್ಳಬೇಕು; ಸಿಂಹಾಸನದ ವಿಷಯದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು,” ಎಂದು ಹೇಳಿದನು.
೪೧
ಬಳಿಕ ಫರೋಹನು ಜೋಸೆಫನಿಗೆ, “ಇದೀಗಲೆ ಈಜಿಪ್ಟ್ ದೇಶದ ಮೇಲೆಲ್ಲ ನಿನ್ನನ್ನು ಅಧಿಕಾರಿಯನ್ನಾಗಿ ನೇಮಿಸುತ್ತಿದ್ದೇನೆ,” ಎಂದು ಹೇಳಿ
೪೨
ತನ್ನ ಬೆರಳಿನಿಂದ ಮುದ್ರಿಕೆಯನ್ನು ತೆಗೆದು ಜೋಸೆಫನ ಬೆರಳಿಗೆ ಇಟ್ಟನು. ಅವನಿಗೆ ಮೌಲ್ಯವಾದ ವಸ್ತ್ರಗಳನ್ನು ಹೊದಿಸಿದನು. ಕೊರಳಿಗೆ ಚಿನ್ನದ ಸರವನ್ನು ಹಾಕಿಸಿದನು.
೪೩
ತನಗಿದ್ದ ಎರಡನೆಯ ರಥದಲ್ಲಿ ಕುಳ್ಳಿರಿಸಿ ಅವನ ಮುಂದೆ, “ಈತನಿಗೆ ಅಡ್ಡಬೀಳಿ,” ಎಂದು ಪ್ರಕಟನೆ ಮಾಡಿಸಿದನು. ಹೀಗೆ ಅವನನ್ನು ಈಜಿಪ್ಟ್ ದೇಶಕ್ಕೆ ಮುಖ್ಯಮಂತ್ರಿಯನ್ನಾಗಿ ನೇಮಿಸಿದನು.
೪೪
ಅಷ್ಟು ಮಾತ್ರವಲ್ಲ, ಫರೋಹನು ಅವನಿಗೆ, “ಫರೋಹನಾದ ನಾನು ಹೇಳುತ್ತಿದ್ದೇನೆ: ನಿನ್ನ ಅಪ್ಪಣೆಯಿಲ್ಲದೆ ಇಡೀ ಈಜಿಪ್ಟ್ ದೇಶದಲ್ಲಿ ಯಾರೂ ಏನನ್ನೂ ಮಾಡಕೂಡದು,” ಎಂದು ಹೇಳಿದನು.
೪೫
ಬಳಿಕ ಫರೋಹನು ಜೋಸೆಫನಿಗೆ ‘ಸಾಪ್ನತ್ಪನ್ನೇಹ’ ಎಂಬ ಹೊಸ ಹೆಸರಿಟ್ಟನು; ಓನ್ ಎಂಬ ಗುರುಪೀಠದ ಆಚಾರ್ಯನಾಗಿದ್ದ ಪೋಟೀಫೆರನ ಮಗಳು ಆಸನತ್ ಎಂಬಾಕೆಯನ್ನು ಅವನಿಗೆ ಮದುವೆಮಾಡಿಸಿದನು. ತರುವಾಯ ಜೋಸೆಫನು ಈಜಿಪ್ಟ್ ದೇಶಸಂಚಾರ ಹೊರಟನು.
೪೬
ಈಜಿಪ್ಟ್ ದೇಶದ ಅರಸನಾದ ಫರೋಹನ ಆಸ್ಥಾನವನ್ನು ಸೇರಿದಾಗ ಜೋಸೆಫನಿಗೆ ಮೂವತ್ತು ವರ್ಷ ವಯಸ್ಸು. ಜೋಸೆಫನು ಫರೋಹನ ಸನ್ನಿಧಿಯಿಂದ ಹೊರಟು ಈಜಿಪ್ಟ್ ದೇಶದಲ್ಲೆಲ್ಲ ಸಂಚಾರ ಮಾಡಿದನು.
೪೭
ಆ ದೇಶದಲ್ಲಿ ಸುಭಿಕ್ಷದ ಏಳು ವರ್ಷಗಳಲ್ಲಿ ಭೂಮಿ ಹೇರಳವಾದ ಬೆಳೆಕೊಟ್ಟಿತು.
೪೮
ಆ ಏಳು ವರ್ಷದ ಬೆಳೆಯನ್ನು ಜೋಸೆಫನು ಶೇಖರಿಸಿ ಪಟ್ಟಣಗಳಲ್ಲಿ ಇಟ್ಟನು. ಆಯಾ ಪಟ್ಟಣದ ಸುತ್ತಲಿದ್ದ ಹೊಲಗಳ ಬೆಳೆಯನ್ನು ಆಯಾ ಪಟ್ಟಣದಲ್ಲೇ ಶೇಖರಿಸಿದನು.
೪೯
ಹೀಗೆ ಕೂಡಿಸಿದ ದವಸಧಾನ್ಯ ಸಮುದ್ರದ ಮರಳಿನಂತೆ ರಾಶಿರಾಶಿಯಾಗಿತ್ತು. ಲೆಕ್ಕಮಾಡುವುದಕ್ಕೂ ಆಗದೆ ಲೆಕ್ಕ ಇಡುವುದನ್ನೇ ಬಿಟ್ಟುಬಿಡಬೇಕಾಯಿತು.
೫೦
ಬರಗಾಲ ಬರುವುದಕ್ಕೆ ಮುಂಚೆ ಜೋಸೆಫನಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಅವರ ತಾಯಿ ಓನ್ ಪಟ್ಟಣದ ಆಚಾರ್ಯನಾಗಿದ್ದ ಪೋಟೀಫೆರನ ಮಗಳಾದ ಆಸನತ್.
೫೧
ಜೇಷ್ಠಮಗ ಹುಟ್ಟಿದಾಗ ಜೋಸೆಫನು, “ನಾನು ನನ್ನ ಕಷ್ಟದುಃಖವನ್ನೂ ತಂದೆಯ ಮನೆಯವರನ್ನೂ ಮರೆಯುವಂತೆ ದೇವರು ಮಾಡಿದ್ದಾರಲ್ಲಾ!” ಎಂದುಕೊಂಡು ಆ ಮಗುವಿಗೆ, ‘ಮನಸ್ಸೆ’ ಎಂದು ಹೆಸರಿಟ್ಟನು.
೫೨
ಎರಡನೆಯ ಮಗನು ಹುಟ್ಟಿದಾಗ, ಯಾವ ದೇಶದಲ್ಲಿ ನನಗೆ ಸಂಕಷ್ಟವಿತ್ತೋ ಆ ದೇಶದಲ್ಲಿ ದೇವರು ನನಗೆ ಸಮೃದ್ಧಿಯನ್ನು ದಯಪಾಲಿಸಿದ್ದಾರೆ!” ಎಂದು ಆ ಮಗನಿಗೆ ‘ಎಫ್ರಾಯೀಮ್’ ಎಂದು ನಾಮಕರಣ ಮಾಡಿದನು.
೫೩
ಈಜಿಪ್ಟ್ ದೇಶದಲ್ಲಿ ಸುಭಿಕ್ಷದ ಏಳು ವರ್ಷಗಳು ಮುಗಿದವು.
೫೪
ಜೋಸೆಫನು ಹೇಳಿದ್ದ ಪ್ರಕಾರವೇ ಕ್ಷಾಮದ ಏಳು ವರ್ಷಗಳು ಪ್ರಾರಂಭವಾದವು. ಬರವು ಸುತ್ತಮುತ್ತಲಿನ ಎಲ್ಲ ದೇಶಗಳಿಗೂ ಹಬ್ಬಿತು. ಈಜಿಪ್ಟಿನಲ್ಲಿ ಮಾತ್ರ ಆಹಾರ ದೊರಕುತ್ತಿತ್ತು.
೫೫
ಕ್ರಮೇಣ ಈಜಿಪ್ಟಿಗೂ ಬರ ಬಂದಾಗ ಪ್ರಜೆಗಳು ಆಹಾರಬೇಕೆಂದು ಫರೋಹನಿಗೆ ಮೊರೆಯಿಟ್ಟರು. ಆಗ ಅವನು ಅವರಿಗೆ, “ಹೋಗಿ, ಜೋಸೆಫನ ಬಳಿಗೆ, ಅವನು ಹೇಳಿದಂತೆ ಮಾಡಿ,” ಎಂದು ಉತ್ತರಕೊಟ್ಟನು.
೫೬
ಬರವು ದೇಶದಲ್ಲೆಲ್ಲ ಹರಡಿಕೊಂಡಾಗ ಜೋಸೆಫನು ಕಣಜಗಳನ್ನೆಲ್ಲ ತೆಗೆಸಿ, ಈಜಿಪ್ಟರಿಗೆ ಧಾನ್ಯವನ್ನು ಮಾರಿಸಿದನು. ಈಜಿಪ್ಟ್ ದೇಶದಲ್ಲಿ ಬರವು ಬಹು ಘೋರವಾಗಿತ್ತು.
೫೭
ಅಂತೆಯೇ ಲೋಕದಲ್ಲೆಲ್ಲಾ ಬರವು ಭಯಂಕರವಾಗಿತ್ತು. ಎಲ್ಲ ದೇಶದವರು ಜೋಸೆಫನಿಂದ ಧಾನ್ಯ ಕೊಂಡುಕೊಳ್ಳಲು ಈಜಿಪ್ಟಿಗೆ ಬರುತ್ತಿದ್ದರು.